ಗುತ್ತಿಗೆದಾರರಾಗಿ ವೃತ್ತಿ ಜೀವನ ಆರಂಭಿಸಿ, ಮಂಡಲ ಪಂಚಾಯಿತಿ ಸದಸ್ಯರಿಂದ ಮಂತ್ರಿ ಸ್ಥಾನದ ಅಧಿಕಾರ ಹಿಡಿದ ಪಾವಗಡ ಮಾಜಿ ಶಾಸಕ ವೆಂಕರಮಣಪ್ಪ ಜನಸೇವೆ ಮತ್ತು ಹೋರಾಟದ ಮೂಲಕವೇ ಅಧಿಕಾರವನ್ನು ಹಿಡಿದವರು. ಪಕ್ಷೇತರವಾಗಿ ಗೆಲ್ಲುವ ಮೂಲಕ ಸ್ವಯಂ ಪರೀಕ್ಷೆಗೆ ಒಡ್ಡಿಕೊಂಡು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಲು ಬೆಂಬಲ ನೀಡಿದವರು. ರಾಜಕೀಯ ಜೀವನಕ್ಕೆ ವಿದಾಯ ಹೇಳಿ ವಿಶ್ರಾಂತಿಯಲ್ಲಿದ್ದ ಮಾಜಿ ಸಚಿವ ವೆಂಕಟರಮಣಪ್ಪ ಇದೀಗ ಬದುಕಿನ ಪಯಣ ಮುಗಿಸಿದ್ದಾರೆ.
1984ಯಲ್ಲಿ ಮಂಡಲ ಪಂಚಾಯಿತಿಯಿಂದ ರಾಜಕೀಯ ಜೀವನ ಆರಂಭಿಸಿ, ಪಾವಗಡ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ, ಎರಡು ಬಾರಿ ಸಚಿವರಾಗಿದ್ದ ವೆಂಕಟರಮಣಪ್ಪ(84) ಶುಕ್ರವಾರ ಬೆಳಗಿನಜಾವ ಚಿರನಿದ್ರೆಗೆ ಜಾರಿದ್ದಾರೆ. ವೆಂಕಟರಮಣಪ್ಪನವರ ನಿಧನದಿಂದ ಪಾವಗದಲ್ಲಿ ನೀರವ ಮೌನ ಅವರಿಸಿದೆ. ಅಭಿಮಾನಿಗಳು ದುಃಖದ ಮಡುವಿನಲ್ಲಿದ್ದಾರೆ.
ಪಾವಗಡ ತಾಲೂಕಿನ ಆಧುನಿಕ ಅಭಿವೃದಿಯ ಹರಿಕಾರ, ಗಡಿನಾಡಿನ ಬಂಡೆ’, ‘ಗಡಿನಾಡಿನ ಭೀಷ್ಮ’, ‘ಪೆದ್ದಯ್ಯ’ ಎಂದು ಅಭಿಮಾನಿಗಳು ಕರೆಯುತ್ತಿದ್ದ ಪರಿ. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ವೆಂಕಟರಮಣಪ್ಪ ರಾಜಕೀಯ ಮತ್ತು ಕೃಷಿಯನ್ನು ಜೊತೆಜೊತೆಯಾಗೆ ಮಾಡುತ್ತಿದ್ದರು. ಅಧಿಕಾರ ದೊರಕಿದೆ ಎಂದು ಕೃಷಿಯನ್ನು ಮರೆತವರಲ್ಲ. ರಾಜಕೀಯ ನನ್ನ ಪ್ರವೃತ್ತಿ, ಕೃಷಿ ನನ್ನ ವೃತ್ತಿ ಎಂದು ಕೃಷಿಯಲ್ಲಿ ಹೆಚ್ಚು ಮಗ್ನವಾಗುತ್ತಿದ್ದರು. ರಾಜಕಾರಣದಷ್ಚೆ, ಕೃಷಿ ಅವರ ಬದುಕಿನ ಭಾಗವಾಗಿತ್ತು ಎಂದು ಅವರ ಅಪ್ತರು ನೆನಪಿಸಿಕೊಳ್ಳುತ್ತಾರೆ.
ಗುತ್ತಿಗೆದಾರರಾಗಿ ವೃತ್ತಿ ಜೀವನ ಆರಂಭಿಸಿದ ವೆಂಕಟರಮಣಪ್ಪ, ಸಾರವಾಟಪುರ ಗೋವಿಂದರೆಡ್ಡಿ, ನಾರಾಯಣ ರೆಡ್ಡಿಯವರ ಜತೆ ರಾಜಕೀಯಕ್ಕೆ ಧುಮುಕಿ 1984ರಲ್ಲಿ ಪೊನ್ನ ಸಮುದ್ರ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. 1989ರಲ್ಲಿ ಎತ್ತಿನಹಳ್ಳಿ ನರಸಿಂಹರೆಡ್ಡಿಯವರ ಸಹಕಾರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಪಾವಗಡದಿಂದ ಮೊದಲ ಬಾರಿಗೆ ಶಾಸಕರಾಗಿ ಸದಸ್ಯರಾಗಿ ಆಯ್ಕೆಯಾದರು. 1994ರಲ್ಲಿ ಸೋಮ್ಲಾನಾಯ್ಕ ವಿರುದ್ಧ ಸೋಲು ಕಂಡರು, ನಿರಂತರ ಜನ ಸಂಪರ್ಕದಿಂದ ಮತ್ತೆ 1999ರಲ್ಲಿ ವೆಂಕಟರಮಣಪ್ಪ ಎರಡನೇ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು.
ಎಸ್ ಎಂ ಕೃಷ್ಣರವರಿಗೆ ಅಪ್ತರಾಗಿದ್ದ ವೆಂಕಟರಮಣಪ್ಪನವರು ಪಾವಗಡ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗೆ ಉತ್ತರ ಪಿನಾಕಿನಿ ನದಿಗೆ ಅಡ್ಡವಾಗಿ ಚೆಕ್ ಡ್ಯಾಮ್ ಕಟ್ಟಿಸಿ ಪಾವಗಡದ ಜನರ ಕುಡಿಯುವ ನೀರಿನ ಸಮಸ್ಯೆಗೆ ಪೂರ್ಣವಿರಾಮ ಹಾಕಿದ್ದನ್ನು ಇಲ್ಲಿನ ಜನ ಇಂದಿಗೂ ನೆನೆಯುತ್ತಾರೆ.
2004ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಜೆಡಿಎಸ್ ಅಭ್ಯರ್ಥಿ ತಿಮ್ಮರಾಯಪ್ಪ ಎದುರು ಸೋಲು ಕಂಡು 2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನಿರಾಕರಿಸಿದಾಗ ವಿವಿಧ ಜನಾಂಗಗಳ ನಾಯಕರನ್ನು ಸಂಘಟಿಸಿ ರೈಲು ಎಂಜಿನ್ ಗುರುತಿನಡಿ ಪಕ್ಷೇತರವಾಗಿ ಸ್ಪರ್ಧೆಸಿ ಗೆಲುವು ಸಾಧಿಸಿದರು. ಆಗ ಸರಳ ಬಹುಮತವಿಲ್ಲದ ಬಿಜೆಪಿಗೆ ಬೆಂಬಲ ನೀಡಿ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಲು ವೆಂಕಟರಮಣಪ್ಪ ಕಾರಣರಾಗಿದ್ದರು. ಆದೇ ಯಡ್ಡಿಯೂರಪ್ಪ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡರು. ಈ ವೇಳೆ ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪಾವಗಡ ಪಟ್ಟಣ ಸಮೀಪ ಕೈಗಾರಿಕಾ ಪಾರ್ಕ್ ನಿರ್ಮಾಣ ಮಾಡಲು ಕಾರಣರಾದರು.
2013ರಲ್ಲಿ ವೆಂಕಟರಮಣಪ್ಪ ಅವರ ಪುತ್ರ ವೆಂಕಟೇಶರವರಿಗೆ ಕಾಂಗ್ರೆಸ್ನಿಂದ ಟಿಕೆಟ್ ಕೊಡಿಸಿದ್ದರು. ವೆಂಕಟೇಶ್ ಅವರು ಚುನಾವಣೆಯಲ್ಲಿ ಸೋಲುಕಂಡರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರಿಂದ ಪಾವಗಡ ಅಭಿವೃದ್ಧಿಗೆ ಒತ್ತುಕೊಟ್ಟು ಕೆಲಸ ಮಾಡಿದರು. ಇದೇ ಸಂದರ್ಭದಲ್ಲಿ ಪಾವಗಡಕ್ಕೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ತುಂಗಭದ್ರಾ ಹಿನ್ನೀರು ಯೋಜನೆ ಮಂಜೂರು ಮಾಡಿಸಲು ಪ್ರಮುಖ ಪಾತ್ರ ವಹಿಸಿದರು.
2018ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ತಿಮ್ಮರಾಯಪ್ಪ ವಿರುದ್ಧ ಗೆದ್ದ ವೆಂಕಟರಮಣಪ್ಪ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕಾರ್ಮಿಕ ಮತ್ತು ರೇಷ್ಮೆ ಸಚಿವರಾಗಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. 2023ರಲ್ಲಿ ಪುತ್ರ ವೆಂಕಟೇಶ್ಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿ ತನ್ನ ಅಧಿಕಾರದ ಗದ್ದುಗೆ ಬೇರೆಯವರ ಪಾಲಗದಂತೆ ನೋಡಿಕೊಂಡರು. ಪ್ರಸ್ತುತ ಪಾವಗಡ ಶಾಸಕರಾಗಿರುವ ವೆಂಕಟೇಶ್, ತುಮುಲ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿದ್ದೀರಾ? ಕರ್ನಾಟಕ ರಾಜಕಾರಣ | ಲೋಕಸಭೆ ಸಮರಕ್ಕೆ ರಾಹುಲ್ ಗಾಂಧಿ ಹೊಸ ಕಾರ್ಯತಂತ್ರ ಸಿದ್ಧಗೊಳಿಸುತ್ತಿದ್ದಾರೆಯೇ?
“ವೆಂಕಟರಮಣಪ್ಪ ಅವರು ತುಮಕೂರು ಜಿಲ್ಲೆಯಲ್ಲಿ ಹೋರಾಟ ಮಾಡಿ ಜನಪ್ರಿಯತೆ ಗಳಿಸಿದ್ದ ಶೋಷಿತ ವರ್ಗದ ನಾಯಕ. ಸಚಿವರಾಗಿದ್ದ ವೇಳೆ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ವೆಂಕಟರಮಣಪ್ಪ ಅವರ ಪುತ್ರ ವೆಂಕಟೇಶ್ ಪಾವಗಡ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೂ ಕೂಡ ವೆಂಕಟರಮಣಪ್ಪಅವರನ್ನೇ ಜನರು ಎಂಎಲ್ಎ ಅಂತ ಕರೆಯುತ್ತಿದ್ದರು. ಪಾವಗಡದಲ್ಲಿ ಅಷ್ಟೊಂದು ಜನಪ್ರಿಯ ವ್ಯಕ್ತಿ. ನನಗೂ ಕೂಡ ಆತ್ಮೀಯರಾಗಿದ್ದರು. ಅವರ ಅಗಲಿಕೆಯು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾಗದ ನಷ್ಟವಾಗಿದೆ” ಎಂದು ಮಾಜಿ ಸಚಿವ ಡಾ. ಜಿ ಪರಮೇಶ್ವರ ಅವರು ಹೇಳಿದ್ದಾರೆ.




