ಕರ್ನಾಟಕದಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಹೈಕಮಾಂಡ್ ಅತ್ಯಂತ ಚಾಣಾಕ್ಷತನದಿಂದ ನಾಯಕತ್ವ ಬದಲಾವಣೆಯನ್ನು ಯಶಸ್ವಿಗೊಳಿಸಿದೆ. ರಾಹುಲ್ ಗಾಂಧಿಯವರ ಪ್ರತಿಯೊಂದು ನಿರ್ಧಾರಗಳ ಹಿಂದೆ ಮುಂದಿನ 2029ರ ಲೋಕಸಭಾ ಚುನಾವಣೆ ಹಾಗೂ ಅದಕ್ಕೂ ಮುನ್ನ ನಡೆಯಲಿರುವ 16 ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಎದುರಿಸಬೇಕಾದ ಹೊಸ ಕಾರ್ಯತಂತ್ರಗಳು ಗೋಚರಿಸುತ್ತಿವೆ.
ರಾಜ್ಯ ರಾಜಕಾರಣದಲ್ಲಿ ಕಳೆದ ಆರೇಳು ತಿಂಗಳುಗಳಿಂದ ನಾಯಕತ್ವ (ಮುಖ್ಯಮಂತ್ರಿ) ಬದಲಾವಣೆ ವಿಚಾರ ಪದೇ-ಪದೇ ಚರ್ಚೆಯಲ್ಲಿತ್ತು. ಕಾಂಗ್ರೆಸ್ ನಾಯಕರು ಅಂತಹ ಯಾವುದೇ ಚರ್ಚೆಗಳು ಇಲ್ಲವೆಂದು ಬಹಿರಂಗವಾಗಿ ಹೇಳುತ್ತ ಬಂದಿದ್ದರೂ, ಆಂತರಿಕವಾಗಿ ಅಧಿಕಾರ ಹಸ್ತಾಂತರದ ಕಸರತ್ತುಗಳು ನಡೆದಿದ್ದವು. ಅಂತಿಮವಾಗಿ, ಮೇ 28ರಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಆ ಕಸರತ್ತುಗಳಿಗೆ ಕಡಿವಾಣ ಹಾಕಿದಂತಾಗಿದೆ. ಶನಿವಾರ (ಮೇ 30) ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ, ಇರಲಿ.
ಸದ್ಯ, ಈ ಅಧಿಕಾರ ಹಸ್ತಾಂತರದಲ್ಲಿ ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದೇ ಹೇಳಲಾಗುತ್ತಿದೆ. ಪೂರಕವಾಗಿ, ಸೋಮವಾರ ಮತ್ತು ಮಂಗಳವಾರ, ರಾಹುಲ್ ಗಾಂಧಿ ಅವರು ಪ್ರಿಯಾಂಕಾ ಗಾಂಧಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದರು. ಈ ಸಭೆಗಳ ಫಲವಾಗಿ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಅವರ ನಡುವೆ ನಡೆದ ಸುಮಾರು 35 ನಿಮಿಷಗಳ ವೈಯಕ್ತಿಕ ಒನ್-ಟು-ಒನ್ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ರಾಜೀನಾಮೆ ನೀಡುವಂತೆ ಒಪ್ಪಿಸುವಲ್ಲಿ ರಾಹುಲ್ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಿ ಹಿಂದುಳಿದ ವರ್ಗಗಳ (OBC) ನಾಯಕರಲ್ಲಿ ಒಬ್ಬರಾಗಿರುವ ಸಿದ್ದರಾಮಯ್ಯ ಅವರು ಕೇವಲ ರಾಜ್ಯ ರಾಜಕಾರಣಕ್ಕೆ ಸೀಮಿತವಾಗದೆ, ರಾಷ್ಟ್ರ ರಾಜಕಾರಣದ ವಿಶಾಲ ಚಿತ್ರಣವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಸಲಹೆಯನ್ನೂ ನೀಡಿದ್ದರು. ಅವರ ‘ವಿಶಾಲ ಚಿತ್ರಣ’ದಲ್ಲಿ 2029ರ ಲೋಕಸಭಾ ಚುನಾವಣೆ ಪ್ರಧಾನವಾದದ್ದು.
ಆದಾಗ್ಯೂ, ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗಲು ನಿರಾಕರಿಸಿದ್ದಾರೆ. ಗಮನಾರ್ಹ ಸಂಗತಿ ಎಂದರೆ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ತಮ್ಮ ನೇತೃತ್ವದಲ್ಲೇ ಸರ್ಕಾರ ಮುಂದುವರಿಯುವುದು ಸೂಕ್ತ ಎಂದು ಸಿದ್ದರಾಮಯ್ಯ ವಾದಿಸಿದ್ದರು. ಡಿ.ಕೆ. ಶಿವಕುಮಾರ್ ಅವರು 2028ರಲ್ಲಿ ರಚನೆಯಾಗಲಿರುವ ಹೊಸ ಸರ್ಕಾರದ ನೇತೃತ್ವ ವಹಿಸಿಕೊಳ್ಳಿ ಎಂಬ ಸಲಹೆಯನ್ನೂ ನೀಡಿದ್ದರು. ಆದರೂ, ಅಂತಿಮವಾಗಿ ಸಿದ್ದರಾಮಯ್ಯ ಅವರ ಮನವೊಲಿಸುವಲ್ಲಿ ರಾಹುಲ್ ಗಾಂಧಿ ಯಶಸ್ವಿಯಾಗಿದ್ದಾರೆ ಎಂದು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ರಾಹುಲ್ ಗಾಂಧಿ, ಕಳೆದ ವಾರವಷ್ಟೇ, ಕೇರಳದ ಮುಖ್ಯಮಂತ್ರಿ ರೇಸ್‌ನಲ್ಲಿ ಉಂಟಾಗಿದ್ದ ಬಿಕ್ಕಟ್ಟನ್ನು ಅತ್ಯಂತ ಚಾಣಾಕ್ಷತನದಿಂದ ಬಗೆಹರಿಸಿದ್ದರು. ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್ ಬೃಹತ್ ಗೆಲುವು ದಾಖಲಿಸಿದ ನಂತರ, ಮುಖ್ಯಮಂತ್ರಿ ಸ್ಥಾನಕ್ಕಾಗಿ ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಹಾಗೂ ರಮೇಶ್ ಚೆನ್ನಿತ್ತಲ ಅವರ ಹೆಸರುಗಳ ನಡುವೆ ಎರಡು ವಾರಗಳ ಕಾಲ ಭಾರಿ ಹಗ್ಗಜಗ್ಗಾಟ ನಡೆದಿತ್ತು. ಆ ಸಂದರ್ಭದಲ್ಲಿ, ರಾಹುಲ್ ಗಾಂಧಿ ಆರಂಭದಲ್ಲಿ ವೇಣುಗೋಪಾಲ್ ಅವರ ಬೆನ್ನಿಗೆ ನಿಂತಿದ್ದರು. ಗಾಂಧಿ ಕುಟುಂಬದ ಜೊತೆಗಿನ ನಿಕಟ ಸಂಬಂಧ ಮತ್ತು ಬಹುತೇಕ ಶಾಸಕರ ಬೆಂಬಲದ ಕಾರಣದಿಂದಾಗಿ ವೇಣುಗೋಪಾಲ್ ಅವರ ನೇಮಕ ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಮತದಾರರು ಮತ್ತು ಪಕ್ಷದ ಪ್ರಮುಖ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಒಲವು ವಿ.ಡಿ. ಸತೀಶನ್ ಅವರ ಕಡೆಗಿರುವುದು ಸ್ಪಷ್ಟವಾಗುತ್ತಿದ್ದಂತೆ, ರಾಹುಲ್ ಗಾಂಧಿ ತಕ್ಷಣವೇ ವಾಸ್ತವವನ್ನು ಒಪ್ಪಿಕೊಂಡು ತಮ್ಮ ಯೋಜನೆಯನ್ನು ಬದಲಾಯಿಸಿದರು. ರಾಹುಲ್ ಮತ್ತು ಪ್ರಿಯಾಂಕಾ- ಇಬ್ಬರೂ ವೇಣುಗೋಪಾಲ್ ಅವರೊಂದಿಗೆ ಸುದೀರ್ಘ ಸಭೆ ನಡೆಸಿ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರು. ಕರ್ನಾಟಕದಂತೆಯೇ ಅಲ್ಲೂ ಸಹ ಸಂಬಂಧಪಟ್ಟ ಎಲ್ಲ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಒಮ್ಮತ ಮೂಡಿಸಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ಪ್ರಿಯಾಂಕಾ ಗಾಂಧಿ ಅವರ ಸದ್ದಿಲ್ಲದ ಪ್ರಭಾವ ಮತ್ತು ಸಂಧಾನದ ಶಕ್ತಿ ಪ್ರಮುಖವಾಗಿ ಕೆಲಸ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನ ಆಂತರಿಕ ಮೂಲಗಳ ಪ್ರಕಾರ, ಕರ್ನಾಟಕ ಮತ್ತು ಕೇರಳದ ಈ ಉದಾಹರಣೆಗಳು ಪಕ್ಷದ ಹೈಕಮಾಂಡ್- ಖರ್ಗೆ, ಗಾಂಧಿ ಕುಟುಂಬ ಹಾಗೂ ವೇಣುಗೋಪಾಲ್- ನಾಯಕರು ಈಗ ಹಳೆಯ ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟು, ಪರಿಸ್ಥಿತಿಗಳು ತಮಗೆ ಆಪ್ತರಾದ ನಾಯಕರ ವಿರುದ್ಧವಾಗಿದ್ದಾಗಲೂ ಧೈರ್ಯದಿಂದ ಯೋಜನೆಗಳನ್ನು ಬದಲಾಯಿಸಲು ಸಿದ್ಧರಾಗಿದ್ದಾರೆ ಎಂಬುದನ್ನು ತೋರಿಸಿಕೊಡುತ್ತದೆ.
ಇದೇ ಸಂದರ್ಭದಲ್ಲಿ ರಾಜಸ್ಥಾನದಲ್ಲಿ 2022ರಲ್ಲಿ ಆದದ್ದನ್ನೂ ನಾವು ಗಮನಿಸಬಹುದು. 2022ರಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಯುವ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಭಾರಿ ಪೈಪೋಟಿ ನಡೆದಿತ್ತು. ಅಂದಿನ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರು ಪೈಲಟ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಲು ಬಯಸಿದ್ದರು. ಏಕೆಂದರೆ ಪೈಲಟ್ ಅವರು ಹೆಚ್ಚು ಕ್ರಿಯಾಶೀಲ ನಾಯಕರಾಗಿದ್ದು, 2023ರ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯನ್ನು ತಡೆಯುವ ಹಾಗೂ ಗುಜ್ಜರ್ ಸಮುದಾಯದ ಮತದಾರರನ್ನು ಸೆಳೆಯುವ ಶಕ್ತಿ ಹೊಂದಿದ್ದಾರೆ ಎಂದು ಪಕ್ಷ ಗುರುತಿಸಿತ್ತು. ಆದರೆ, ಅಂದು ಕಾಂಗ್ರೆಸ್ ಹೈಕಮಾಂಡ್ ಸಕಾಲದಲ್ಲಿ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳದೆ ಹಿಂಜರಿದ ಕಾರಣದಿಂದ, ಇಬ್ಬರು ನಾಯಕರ ನಡುವೆ ಸರಿಪಡಿಸಲಾಗದ ಕಂದಕ ಸೃಷ್ಟಿಯಾಯಿತು. ಅದು 2023ರ ಚುನಾವಣೆಯಲ್ಲಿ ಪಕ್ಷದ ಸೋಲಿಗೂ ಕಾರಣವಾಯಿತು. ಒಂದು ವೇಳೆ, ಅಂದೇ ಹೈಕಮಾಂಡ್ ಈಗಿನಂತೆ ದೃಢ ನಿರ್ಧಾರ ಕೈಗೊಂಡಿದ್ದರೆ ರಾಜಸ್ಥಾನದಲ್ಲಿ ಇಂದಿಗೂ ಕಾಂಗ್ರೆಸ್ ಆಡಳಿತ ಇರುತ್ತಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಇದೇ ರೀತಿ, ಛತ್ತೀಸ್‌ಗಢದಲ್ಲೂ ನಡೆದಿತ್ತು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಭೂಪೇಶ್ ಬಾಘೇಲ್ ಮತ್ತು ಅವರ ರಾಜಕೀಯ ಎದುರಾಳಿ ಟಿ.ಎಸ್. ಸಿಂಗ್ ದೇವ್ ನಡುವೆ ‘ಸರದಿಯಲ್ಲಿ ಮುಖ್ಯಮಂತ್ರಿ’ (ಅಧಿಕಾರ ಹಂಚಿಕೆ) ಒಪ್ಪಂದದ ವಿಚಾರವಾಗಿ ಭಿನ್ನಾಭಿಪ್ರಾಯ ತಲೆದೋರಿತ್ತು. ಆದರೆ, ಪ್ರತಿ ಬಾರಿಯೂ ಪಕ್ಷದ ಕೇಂದ್ರ ಕಚೇರಿಯು ನಾಯಕತ್ವ ಬದಲಾವಣೆಗೆ ಮುಂದಾದಾಗ, ಬಾಘೇಲ್ ಕಡೆಯಿಂದ ಭಾರಿ ರಾಜಕೀಯ ಒತ್ತಡ ಸೃಷ್ಟಿಯಾಗುತ್ತಿತ್ತು. ಇದು ಇಬ್ಬರು ನಾಯಕರ ನಡುವಿನ ಭಿನ್ನಮತವನ್ನು ಮತ್ತಷ್ಟು ಹೆಚ್ಚಿಸಿತು. ಬಾಘೇಲ್ ಅವರು ಅಧಿಕಾರ ಹಂಚಿಕೆಯ ಒಪ್ಪಂದವನ್ನೇ ನಿರಾಕರಿಸಿದ್ದಲ್ಲದೆ, ಅದು ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚು ಎಂದು ಕರೆದಿದ್ದರು. ಈ ಆಂತರಿಕ ಕಲಹವು ಮುಂದಿನ ಚುನಾವಣೆಯವರೆಗೂ ಮುಂದುವರಿದು, 2023ರಲ್ಲಿ ಆ ರಾಜ್ಯವನ್ನೂ ಕಾಂಗ್ರೆಸ್ ಕಳೆದುಕೊಂಡಿತು.
2022ರ ರಾಜಸ್ಥಾನ, 2018ರ ಛತ್ತೀಸ್‌ಗಢ ಹಾಗೂ ಪ್ರಸ್ತುತದ ಕರ್ನಾಟಕದ ಸನ್ನಿವೇಶಗಳಿಗೆ ಹಲವಾರು ಸಾಮ್ಯತೆಗಳಿವೆ. ಕರ್ನಾಟಕದಲ್ಲಿ ‘ಮುಖ್ಯಮಂತ್ರಿ ಹುದ್ದೆ’ಗಾಗಿನ ಜಗ್ಗಾಟ 2023ರಲ್ಲಿ ಪಕ್ಷ ಗೆದ್ದಾಗಲೇ ಆರಂಭವಾಗಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದವಾಗಿದ್ದರೂ ಅದನ್ನು ಇಬ್ಬರೂ ನಾಯಕರು ಅಥವಾ ಪಕ್ಷ ಎಲ್ಲೂ ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಇಬ್ಬರು ನಾಯಕರು ಮತ್ತು ಅವರ ಬೆಂಬಲಿಗರು ಪರಸ್ಪರ ಸಾಕಷ್ಟು ಟೀಕೆ-ಟಿಪ್ಪಣಿಗಳನ್ನು ಮಾಡಿಕೊಂಡಿದ್ದರು. ಸರ್ಕಾರವು 2025ರ ನವೆಂಬರ್‌ನಲ್ಲಿ ಎರಡೂವರೆ ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಹೊತ್ತಿಗೆ ಡಿ.ಕೆ. ಶಿವಕುಮಾರ್ ಅವರ ಬಣವು ಹೈಕಮಾಂಡ್ ಮೇಲೆ ಸಾರ್ವಜನಿಕವಾಗಿ ಭಾರಿ ಒತ್ತಡ ಹೇರಲು ತೊಡಗಿತು. ಇದು ಈ ಹಿಂದೆ ರಾಜಸ್ಥಾನದಲ್ಲಿ ಪೈಲಟ್ ಮತ್ತು ಛತ್ತೀಸ್‌ಗಢದಲ್ಲಿ ಸಿಂಗ್ ದೇವ್ ಮಾಡಿದ್ದ ಪ್ರಯತ್ನಗಳಂತೆಯೇ ಇತ್ತು. ಆದರೆ, ಈ ಬಾರಿ ವ್ಯತ್ಯಾಸವೆಂದರೆ, ಆ ಎರಡೂ ರಾಜ್ಯಗಳಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದ್ದ ಹೈಕಮಾಂಡ್, ಈ ಬಾರಿ ಗಟ್ಟಿಯಾಗಿ ನಿಂತಿತು. ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಎಲ್ಲರ ಮನವಿಗಳನ್ನೂ ಆಲಿಸಿತು. ನಿರ್ಧಾರ ತೆಗೆದುಕೊಂಡಿತು. ಮುಖ್ಯಮಂತ್ರಿಯನ್ನು ಬದಲಿಸಿತು.
ಈ ಲೇಖನ ಓದಿದ್ದೀರಾ?: ಅಹಿಂದ ರಾಜಕಾರಣ: ‘ಹಳೇ ಹುಲಿ ಸಿದ್ದರಾಮಯ್ಯ’ನವರ ‘ಅಸಲಿ ಆಟ’ ಈಗ ಶುರು!?
ಆದರೆ, ಈ ಪ್ರಕ್ರಿಯೆ ಸುಲಭವಾಗಿರಲಿಲ್ಲ. ಏಕೆಂದರೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರಿಗೂ ಮುಖ್ಯಮಂತ್ರಿಯಾಗಲು ತಮ್ಮದೇ ಆದ ಪ್ರಬಲ ಕಾರಣಗಳಿವೆ. ಇಬ್ಬರ ಹಿಂದೆಯೂ ದೊಡ್ಡ ಮಟ್ಟದ ಮತಬ್ಯಾಂಕ್ ಇದೆ. ಶಾಸಕರ ಬೆಂಬಲವೂ ಇದೆ. ಆದರೂ ಈಗ ಕಾಂಗ್ರೆಸ್‌ನಲ್ಲಿ ದೊಡ್ಡ ಬದಲಾವಣೆಯಾಗಿದೆ. ಇಂದಿನ ಕಾಂಗ್ರೆಸ್ ನಾಯಕತ್ವವು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹೊಸ ರೂಪ ಪಡೆದಿದೆ. ಖರ್ಗೆ ಅವರ ದೀರ್ಘಾವಧಿಯ ರಾಜಕೀಯ ಅನುಭವ ಮತ್ತು ವೇಣುಗೋಪಾಲ್ ಅವರು ಸಿದ್ಧಪಡಿಸಿರುವ ಆಂತರಿಕ ಪ್ರತಿಕ್ರಿಯೆ ಮತ್ತು ಮಾಹಿತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಫಲಿತಾಂಶವನ್ನು ಬಲಪಡಿಸಿದೆ.
ರಾಹುಲ್ ಗಾಂಧಿ ಅವರು ಈಗ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಖರ್ಗೆ ಅವರೊಂದಿಗೆ ಸಮಾಲೋಚಿಸುವುದರ ಜೊತೆಗೆ, ತಮ್ಮದೇ ಆದ ಆಂತರಿಕ ಮೂಲಗಳಾದ ಪ್ರಿಯಾಂಕಾ ಗಾಂಧಿ ಮತ್ತು ವೇಣುಗೋಪಾಲ್ ಅವರಿಂದ ಬರುವ ಮಾಹಿತಿಗಳ ಮೇಲೂ ಸಮಾನವಾಗಿ ಅವಲಂಬಿತರಾಗಿದ್ದಾರೆ.
ಅವರು ಪ್ರತಿಯೊಂದು ನಿರ್ಧಾರದಲ್ಲಿಯೂ ಮುಂದಿನ 2029ರ ಲೋಕಸಭಾ ಚುನಾವಣೆ ಗಮನದಲ್ಲಿರುತ್ತದೆ. ಆ ಚುನಾವಣೆಗೂ ಮುನ್ನ ನಡೆಯಲಿರುವ 16 ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನೂ ಎದುರಿಸಬೇಕಾದ ಸವಾಲು ಪಕ್ಷದ ಮುಂದಿದೆ. ಈ ಹಿಂದೆ ಅಶೋಕ್ ಗೆಹ್ಲೋಟ್ ಅವರು ಪಕ್ಷದ ಹಿರಿಯ ನಾಯಕರಾಗಿದ್ದ ಕಾರಣ ಹೈಕಮಾಂಡ್ ಆದೇಶಕ್ಕೆ ಮಣಿಯಲು ನಿರಾಕರಿಸಿದ್ದರು, ಇದು ಸಚಿನ್ ಪೈಲಟ್ ಅವರು ತಮ್ಮ ಬೆಂಬಲಿಗ ಶಾಸಕರೊಂದಿಗೆ ನೆರೆಯ ಬಿಜೆಪಿಯಾಡಳಿತದ ಹರಿಯಾಣಕ್ಕೆ ವಲಸೆ ಹೋಗುವ ಹಂತಕ್ಕೆ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಆದರೆ, ಕರ್ನಾಟಕದಲ್ಲಿ ಅಂತಹ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಹೈಕಮಾಂಡ್ ಅತ್ಯಂತ ಚಾಣಾಕ್ಷತನದಿಂದ ನಾಯಕತ್ವ ಬದಲಾವಣೆಯನ್ನು ಯಶಸ್ವಿಗೊಳಿಸಿದೆ. ಸಿದ್ದರಾಮಯ್ಯ ಅವರೂ ಹೈಕಮಾಂಡ್ ಮಾತಿಗೆ ಮನ್ನಣೆ ಕೊಟ್ಟು, ಯಾವುದೇ ರಗಳೆ-ರಾದ್ಧಾಂತಗಳಿಲ್ಲದೆ ನಾಜೂಕಾಗಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಭವಿಷ್ಯದ ಕುರಿತು ಚರ್ಚೆಗಾಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ.



