ತುಮಕೂರು ನಗರ ಪ್ರದೇಶದ ಮಕ್ಕಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಧೈರ್ಯಶಾಲಿಗಳು ಮತ್ತು ಆತ್ಮವಿಶ್ವಾಸ ಹೊಂದಿದವರಾಗಿದ್ದಾರೆ. ಇಂಗ್ಲಿಷ್ ಭಾಷೆಯ ಜ್ಞಾನವಿಲ್ಲ ಎಂಬ ಕೀಳರಿಮೆ ಸೇರಿದಂತೆ ಇತರ ಅಡೆತಡೆಗಳನ್ನು ಮೆಟ್ಟಿ ನಿಂತರೆ ಸಾಧನೆಯ ಶಿಖರ ತಲುಪಲು ಸಾಧ್ಯ ಎಂದು ಕೌಶಲ್ಯಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಹೇಳಿದರು.
ತುಮಕೂರು ನಗರದ ತುಮಕೂರು ವಿಶ್ವವಿದ್ಯಾನಿಲಯದ ಸರ್. ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತುಮಕೂರು ವಿವಿಯ ಐಕ್ಯೂಎಸಿ ಘಟಕ ಹಾಗೂ ಎಲ್ಲಾ ಪದವಿ ಕಾಲೇಜುಗಳ ಸಹಕಾರದೊಂದಿಗೆ ಹಾಲಪ್ಪ ಪ್ರತಿಷ್ಠಾನ ಆಯೋಜಿಸಿರುವ ಎರಡು ದಿನಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇಂದು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಅಧಿಕಾರಿಗಳು ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿದ್ದು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರೂ ಇದ್ದಾರೆ. ಇದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಭಾಷೆಯ ಹಿಂಜರಿಕೆ ಹಾಗೂ ಇತರ ಅಡೆತಡೆಗಳನ್ನು ಮೆಟ್ಟಿ ನಿಂತು ಪೋಷಕರ ಮಹದಾಸೆಯನ್ನು ಈಡೇರಿಸುವತ್ತ ಮುನ್ನಡೆಯಬೇಕು ಎಂದರು.
ಕೌಶಲ್ಯಾಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಆಯೋಜಿಸಿದ್ದ ಬಹುತೇಕ ಉದ್ಯೋಗ ಮೇಳಗಳಿಗೆ ಸಾವಿರಾರು ಪದವೀಧರರು ಆಗಮಿಸುತ್ತಿದ್ದರು. ಆದರೆ ಆಯ್ಕೆಯಾಗುತ್ತಿದ್ದವರ ಸಂಖ್ಯೆ ಮಾತ್ರ ಕಡಿಮೆ ಇರುತ್ತಿತ್ತು. ಇದಕ್ಕೆ ಪ್ರಮುಖ ಕಾರಣ ಸಂವಹನ ಕೌಶಲ ಮತ್ತು ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವ ಸಾಮರ್ಥ್ಯದ ಕೊರತೆ. ವಿಷಯದ ಬಗ್ಗೆ ಜ್ಞಾನವಿದ್ದರೂ ನಾಲ್ಕು ಜನರ ಮುಂದೆ ಧೈರ್ಯವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಭಾಷೆಯ ಹಿಂಜರಿಕೆ ಅಡ್ಡಿಯಾಗುತ್ತಿತ್ತು. ಈ ಕೊರತೆಯನ್ನು ನೀಗಿಸುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ, ಪರೀಕ್ಷಾ ವಿಧಾನಗಳ ಕುರಿತು ಅನುಭವಿ ಮಾರ್ಗದರ್ಶಕರಿಂದ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆ ಹತ್ತು ತಾಲೂಕುಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾದರೂ, ಇತರ ಜಿಲ್ಲೆಗಳಿಗೆ ಹೋಲಿಸಿದರೆ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳ ಸಂಖ್ಯೆ ಕಡಿಮೆಯಿದೆ. ಪ್ರಸ್ತುತ ಜಿಲ್ಲೆಯ 18 ಮಂದಿ ಐಎಎಸ್ ಹಾಗೂ 40ಕ್ಕೂ ಹೆಚ್ಚು ಮಂದಿ ಕೆಎಎಸ್ ಅಧಿಕಾರಿಗಳು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬೇಕು ಎಂಬ ಆಶಯದಿಂದ ಕಾರ್ಯಾಗಾರ ಆಯೋಜಿಸಲಾಗಿದೆ.
ಯುಪಿಎಸ್‌ಸಿ ಮುಖ್ಯ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಹಾಲಪ್ಪ ಪ್ರತಿಷ್ಠಾನ ಒದಗಿಸಲಿದೆ. ಇದಕ್ಕಾಗಿ ದೆಹಲಿಯಲ್ಲಿ ಪ್ರತ್ಯೇಕ ತಂಡವೂ ಕಾರ್ಯನಿರ್ವಹಿಸುತ್ತಿದೆ. ಕಾರ್ಯಾಗಾರದಲ್ಲಿ ಭಾಗವಹಿಸಿರುವ 600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ಒಬ್ಬರಾದರೂ ಐಎಎಸ್, ಐಪಿಎಸ್ ಅಥವಾ ಕೆಎಎಸ್ ಅಧಿಕಾರಿಯಾದರೆ ನಮ್ಮ ಪ್ರಯತ್ನ ಸಾರ್ಥಕವಾದಂತೆ. ಆದ್ದರಿಂದ ಎರಡು ದಿನಗಳ ಕಾಲ ಮೊಬೈಲ್, ರೀಲ್ಸ್ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ನಿಮ್ಮ ಭವಿಷ್ಯದ ಗುರಿಯತ್ತ ಗಮನಹರಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಐಕ್ಯೂಎಸಿ ನಿರ್ದೇಶಕ, ಕಲಾ ನಿಕಾಯದ ಮುಖ್ಯಸ್ಥ ಹಾಗೂ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ಕೆ.ಜಿ. ಪರಶುರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ವಿಶ್ವವಿದ್ಯಾನಿಲಯದ ವ್ಯಾಪ್ತಿಯ 95 ಪದವಿ ಕಾಲೇಜುಗಳಿಂದ ಪ್ರತಿವರ್ಷ ಸುಮಾರು 11 ಸಾವಿರ ವಿದ್ಯಾರ್ಥಿಗಳು ಪದವಿ ಪಡೆದು ಹೊರಬರುತ್ತಾರೆ. ಇವರಲ್ಲಿ ಕೇವಲ ಎರಡು ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶಾವಕಾಶ ದೊರೆಯುತ್ತದೆ. ದೇಶದಲ್ಲಿ ಪ್ರತಿವರ್ಷ ಸುಮಾರು 4.50 ಕೋಟಿ ಪದವೀಧರರು ಹೊರಬರುತ್ತಿದ್ದು, ಇವರಲ್ಲಿ ಉದ್ಯೋಗ ಪಡೆಯುವವರ ಪ್ರಮಾಣ ಶೇ.20ಕ್ಕಿಂತಲೂ ಕಡಿಮೆಯಿದೆ. ಸರ್ಕಾರಿ ಉದ್ಯೋಗ ಪಡೆಯುವವರ ಸಂಖ್ಯೆ ಇನ್ನೂ ಕಡಿಮೆ. ಉಳಿದವರ ಬದುಕು ಮತ್ತು ಭವಿಷ್ಯ ಹೇಗಿರುತ್ತದೆ ಎಂಬುದು ಗಂಭೀರವಾಗಿ ಚಿಂತಿಸಬೇಕಾದ ವಿಚಾರವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಹಾಲಪ್ಪ ಪ್ರತಿಷ್ಠಾನ ವಿಶ್ವವಿದ್ಯಾನಿಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕ್ಯಾಂಪಸ್ ಆಯ್ಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ನೀಡುತ್ತಿದೆ. ಪ್ರಸ್ತುತ ಕಾರ್ಯಾಗಾರಕ್ಕಾಗಿ ಕಳೆದ ಮೂರು ತಿಂಗಳಿನಿಂದ ಸಿದ್ಧತೆ ನಡೆಸಲಾಗಿದೆ. ನಾಡಿನ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಹಾಗೂ ಈಗಾಗಲೇ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವವರ ಮೂಲಕ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆ. ಈ ಪ್ರಯತ್ನದ ಫಲವಾಗಿ ನಿಮ್ಮಲ್ಲಿ ಒಬ್ಬರಾದರೂ ಉನ್ನತ ಅಧಿಕಾರಿಯಾದರೆ ಅದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಇನ್ಸ್‌ಪೈರನ್‌ನ ಆರ್. ಉಪೇಂದ್ರ ಶೆಟ್ಟಿ, ಕೃಷಿಕ ಸರ್ವೋದಯ ಫೌಂಡೇಶನ್‌ನ ಗೋಪಾಲಕೃಷ್ಣ ಮೂರ್ತಿ, ಇನ್‌ಸೈಟ್ಸ್‌ನ ತೇಜಸ್, ಭಾರತೀಯ ಇತಿಹಾಸ ಕುರಿತು ಶರಣ್ಯ ಬಂಡಾರಿ ಮಠ್ ಹಾಗೂ ನೆಲ್ನುಡಿ ಪತ್ರಿಕೆಯ ಸಂಪಾದಕ ಪ್ರಸನ್ನ ಅವರು ಮಾರ್ಗದರ್ಶನ ನೀಡಿದರು.
ಯುಪಿಎಸ್‌ಸಿ, ಕೆಎಎಸ್, ಎಫ್‌ಡಿಎ, ಎಸ್‌ಡಿಎ, ಕೆಇಎ, ಎಸ್‌ಎಸ್‌ಸಿ ಮತ್ತು ಆರ್‌ಆರ್‌ಬಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಪಠ್ಯಕ್ರಮ, ಪರೀಕ್ಷಾ ಮಾದರಿ ಹಾಗೂ ಸಂದರ್ಶನ ಎದುರಿಸುವ ಕುರಿತು ಮಾಹಿತಿ ನೀಡಿದರು. ಸಂವಾದದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸ್ಪರ್ಧಾಕಾಂಕ್ಷಿಗಳನ್ನು ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಕಾರ್ಯಾಗಾರಕ್ಕೆ ಸಹಕಾರ ನೀಡಿದ ರುಡ್‌ಸೆಟ್, ಜಿಟಿಟಿಸಿ, ನಬಾರ್ಡ್, ಎಸ್‌ಬಿಐ, ಯುಪಿಎಸ್‌ಸಿ ಡಿಫೆನ್ಸ್, ಕರ್ನಾಟಕ ಬೀಜ ನಿಗಮದ ಪ್ರತಿನಿಧಿಗಳು, ತುಮಕೂರು ವಿಶ್ವವಿದ್ಯಾನಿಲಯದ ಅಧ್ಯಾಪಕರು, ಹಾಲಪ್ಪ ಪ್ರತಿಷ್ಠಾನದ ಸಂಯೋಜಕರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಡಾ. ಲೀಲಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



