ತುಮಕೂರು | ಬದುಕಿನ ತಾತ್ವಿಕ ಶೋಧದ ಕಾದಂಬರಿ ‘ಕಾಡುದೇವರಬೆಟ್ಟ’ : ಬರಗೂರು ರಾಮಚಂದ್ರಪ್ಪ

Date:

ಸಾಹಿತಿ ಡಾ. ಸುಚೇತನಾ ಸ್ವರೂಪ್ ರಚಿಸಿರುವ ‘ಕಾಡುದೇವರಬೆಟ್ಟ’ ಕಾದಂಬರಿ ವಿವಿಧ ಆಯಾಮಗಳು ಹಾಗೂ ಪಾತ್ರಗಳ ಮೂಲಕ ಬದುಕಿನ ತಾತ್ವಿಕ ಶೋಧವನ್ನು ಅನಾವರಣಗೊಳಿಸುವ ಮಹತ್ವದ ಕೃತಿಯಾಗಿದೆ ಎಂದು ಸಂಸ್ಕೃತಿ ಚಿಂತಕ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

- Advertisement -

ತುಮಕೂರಿನ ಐಎಂಎ ಹಾಲ್‌ನಲ್ಲಿ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಹಿಳಾ ಅಧ್ಯಯನ ಕೇಂದ್ರ ಹಾಗೂ ಸಾಮಾಜಿಕ ನ್ಯಾಯಪರ ವಿದ್ಯಾರ್ಥಿ ಒಕ್ಕೂಟ, ತುಮಕೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐದು ಸಂಪುಟಗಳ ‘ಕಾಡುದೇವರಬೆಟ್ಟ’ ಲೋಕಕಥನ ಕಾದಂಬರಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಯಾವುದೇ ಕಾದಂಬರಿ ಬೃಹತ್ ಗಾತ್ರದಲ್ಲಿರುವುದು ಮುಖ್ಯವಲ್ಲ. ಅದರಲ್ಲಿರುವ ಮೌಲಿಕತೆಯೇ ಅಂತಿಮವಾಗಿ ಮುಖ್ಯವಾಗುತ್ತದೆ. ‘ಕಾಡುದೇವರಬೆಟ್ಟ’ ವಿವಿಧ ಪಾತ್ರಗಳ ಮೂಲಕ ಆತ್ಮಸಂವಾದ ನಡೆಸುವ ಕೃತಿಯಾಗಿದೆ. ದ್ವೇಷ ಮತ್ತು ಅಸಹನೆಯೇ ಯುದ್ಧ ಹಾಗೂ ಸಂಘರ್ಷಕ್ಕೆ ನಾಂದಿ ಎಂಬುದನ್ನು ಕಾದಂಬರಿಯ ಆರಂಭದಲ್ಲೇ ಹೇಳಲಾಗಿದ್ದು, ಸಾಮರಸ್ಯದ ಸಂದೇಶವನ್ನು ‘ಮಾತಿನ ಮಂಟಪ’ದ ಮೂಲಕ ‘ಅನುಭವ ಮಂಟಪ’ದ ಕಡೆಗೆ ಕೊಂಡೊಯ್ಯುವ ವಿಶೇಷ ಪ್ರಯತ್ನ ಇದಾಗಿದೆ ಎಂದರು.

ಕಾದಂಬರಿಯಲ್ಲಿ ವಿವಿಧ ಜನವರ್ಗಗಳನ್ನು ಪ್ರತಿನಿಧಿಸುವ ಪಾತ್ರಗಳ ಮೂಲಕ ಸೈದ್ಧಾಂತಿಕ ಸಂಘರ್ಷ, ಸಮಯಸಾಧಕತನ, ರಾಜಕೀಯ ತಂತ್ರಗಾರಿಕೆ, ವಿಶ್ವವಿದ್ಯಾಲಯಗಳಲ್ಲಿನ ಲಂಪಟತೆ ಹಾಗೂ ಪ್ರೇಮ ಸಂಬಂಧಗಳನ್ನು ಅನಾವರಣಗೊಳಿಸಲಾಗಿದೆ. ಫ್ಯೂಡಲ್ ಆಡಳಿತದಿಂದ ಉಂಟಾಗುವ ಸಾಮಾಜಿಕ ವಿಘಟನೆಗಳು, ಜಾತಿ-ಧರ್ಮಾಧಾರಿತ ಸಂಘರ್ಷಗಳು ಮತ್ತು ಕೋಮುವಾದದ ವಿವಿಧ ಆಯಾಮಗಳನ್ನು ಕೃತಿ ಚಿತ್ರಿಸುತ್ತದೆ ಎಂದು ಹೇಳಿದರು.

ಕನ್ನಡದಲ್ಲಿ ಇಷ್ಟು ಬೃಹತ್ ಪ್ರಮಾಣದ ಕಾದಂಬರಿ ರಚಿಸಿರುವ ಡಾ. ಸುಚೇತನಾ ಸ್ವರೂಪ್ ಹಾಗೂ ಪ್ರಕಾಶಕರನ್ನು ಅಭಿನಂದಿಸಿದ ಅವರು, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮಾಡುವುದು ಆಯೋಜಕರ ಪ್ರಮುಖ ಜವಾಬ್ದಾರಿಯಾಗಬೇಕು ಎಂದರು.

ನವತರುಣ ತಲೆಮಾರಾಗಿ ಗುರುತಿಸಿಕೊಂಡಿರುವ ಜೆನ್‌ಜಿಗಳ ಹೋರಾಟ ತಾತ್ವಿಕ ಹಾದಿಯಲ್ಲಿ ಸಾಗದಿದ್ದರೆ ಶಾಶ್ವತ ಪರಿಹಾರ ಹಾಗೂ ದೀರ್ಘಾವಧಿಯ ಚಳವಳಿ ಕಟ್ಟಲು ಸಾಧ್ಯವಿಲ್ಲ ಎಂದು ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಸಂಘಟನೆಗಳು ಕೇವಲ ಸಾಂಕೇತಿಕ ಪ್ರಾತಿನಿಧ್ಯ ಹಾಗೂ ಅಲ್ಪಾವಧಿಯ ಪ್ರಯೋಜನಗಳಿಗೆ ಸೀಮಿತವಾಗಬಾರದು. ರಾಷ್ಟ್ರದ ಕೇಂದ್ರಬಿಂದುವಾಗಿರುವ ಜೆನ್‌ಜಿಗಳ ಹೋರಾಟ ಮತ್ತು ಅಭಿವ್ಯಕ್ತಿಗಳ ಬಗ್ಗೆಯೂ ನಿಷ್ಕರ್ಷೆ ಅಗತ್ಯವಿದೆ. ಜಯಪ್ರಕಾಶ್ ನಾರಾಯಣ್ ಪ್ರತಿಪಾದಿಸಿದ ‘ಸಂಪೂರ್ಣ ಕ್ರಾಂತಿ’ ಇಂದಿಗೂ ಸಾಧ್ಯವಾಗಿಲ್ಲ. ಅಸಮಾನತೆ, ಜಾತಿ, ಧರ್ಮ, ವರ್ಣಸಂಕರ ಹಾಗೂ ಕೋಮುವಾದದಂತಹ ಸಮಸ್ಯೆಗಳು ಇಂದಿಗೂ ಭಾರತೀಯರನ್ನು ಕಾಡುತ್ತಿವೆ ಎಂದು ಹೇಳಿದರು.

ಕಾದಂಬರಿ ಕುರಿತು ಮಾತನಾಡಿದ ಲೇಖಕ ಡಾ. ಸಿದ್ಧಗಂಗಯ್ಯ ಹೊಲತಾಳ್, ಐದು ಸಂಪುಟಗಳಲ್ಲಿ ಒಟ್ಟು 2,397 ಪುಟಗಳಲ್ಲಿ ಹೊರಬಂದಿರುವ ‘ಕಾಡುದೇವರಬೆಟ್ಟ’ ಸಮಕಾಲೀನ ವಿಚಾರಧಾರೆ ಮತ್ತು ಲೋಕಾಭಿವ್ಯಕ್ತಿಯನ್ನು ಸುಮಾರು 300 ಪಾತ್ರಗಳ ಮೂಲಕ ಕಟ್ಟಿಕೊಡುವ ಪ್ರಯೋಗವಾಗಿದೆ ಎಂದರು.

ಬೊಂಬೆರಾಮಯ್ಯ, ಹಿಂಗಾರಯ್ಯ, ಶಕುನೇಗೌಡ, ಅಹಮದ್, ಅಮ್ಮಣ್ಣಮ್ಮ ಸೇರಿದಂತೆ ಹಲವು ಪಾತ್ರಗಳ ಮೂಲಕ ಕಾದಂಬರಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಗ್ರಾಮೀಣ ಬದುಕಿನ ಚಿತ್ರಣವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಪಾತ್ರಗಳ ವೈಯಕ್ತಿಕ ಸಂಬಂಧಗಳ ಸಂವಾದದಲ್ಲಿ ಭಾಷೆಯನ್ನು ಹಸಿ-ಬಿಸಿಯಾಗಿ ಬಳಸಿರುವುದು ಸಮಂಜಸವೇ ಎಂಬ ಪ್ರಶ್ನೆಯನ್ನೂ ಕೃತಿ ಹುಟ್ಟುಹಾಕುತ್ತದೆ. ಇದರ ಜೊತೆಗೆ ಪರಿಸರ ಸಂರಕ್ಷಣೆ, ಸಾಮರಸ್ಯದ ಸಂದೇಶ ಹಾಗೂ ತಾತ್ವಿಕ ನೆಲೆಗಟ್ಟನ್ನು ಕಾದಂಬರಿ ಸಾರುತ್ತದೆ ಎಂದು ವಿಶ್ಲೇಷಿಸಿದರು.

ಹಿರಿಯ ಚಿಂತಕ ಕೆ. ದೊರೈರಾಜ್ ಮಾತನಾಡಿ, ‘ಕಾಡುದೇವರಬೆಟ್ಟ’ ವನ್ನು ಲೋಕಕಥನವಾಗಿ ಕಟ್ಟಿಕೊಟ್ಟಿರುವ ಡಾ. ಸುಚೇತನಾ ಸ್ವರೂಪ್ ಅವರು ಪ್ರಸಕ್ತ ಸಮಾಜದ ಪಿಡುಗುಗಳಾದ ಜಾತಿವಾದ, ಕೋಮುವಾದ ಹಾಗೂ ಅಸಮಾನತೆಯನ್ನು ಪಾತ್ರಗಳ ಮೂಲಕ ಸಹಜವಾಗಿ ಹೇಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು.

ಅಸ್ಪೃಶ್ಯ ಸಮುದಾಯದವರು ವಿದ್ಯಾವಂತರಾದರೂ ಜಾತಿಯ ಸಂಕೋಲೆಯಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗದಿರುವುದು, ಸಮಾನತೆ ಇನ್ನೂ ದೊರೆಯದಿರುವಂತಹ ಸಾಮಾಜಿಕ ವಾಸ್ತವಗಳನ್ನು ಕೃತಿ ಸಹಜ ಪಾತ್ರಾಭಿವ್ಯಕ್ತಿಯ ಮೂಲಕ ಬಿಂಬಿಸಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ವಹಿಸಿದ್ದರು. ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಆಶಾ ಬಗ್ಗನಡು, ವಿವಿ ಕಲಾ ಕಾಲೇಜಿನ ಪ್ರಾಂಶುಪಾಲೆ ಪ್ರೊ. ದ್ರಾಕ್ಷಾಯಿಣಿ, ಖಜಾಂಚಿ ರಾಣಿ ಚಂದ್ರಶೇಖರ್ ವೇದಿಕೆಯಲ್ಲಿದ್ದರು.

ಮರಿಯಂಬಿ ನಿರೂಪಿಸಿದರು. ಚಿಂತನ ಚಿತ್ತಾರದ ಪ್ರಕಾಶಕ ನಿಂಗರಾಜು ಚಿತ್ತಣ್ಣವರ್, ಲೇಖಕರಾದ ಶೈಲಾ ನಾಗರಾಜ್, ಇಂದಿರಮ್ಮ, ಡಾ. ಟಿ.ಆರ್. ಲೀಲಾವತಿ, ಡಾ. ಲಕ್ಷ್ಮಣದಾಸ್, ಡಾ. ಓ. ನಾಗರಾಜು, ರಘು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾದಂಬರಿಕಾರ್ತಿ ಡಾ. ಸುಚೇತನಾ ಸ್ವರೂಪ್ ಮಾತನಾಡಿ, ಸುಮಾರು 12 ವರ್ಷಗಳ ಹಿಂದೆ ‘ಕಾಡುದೇವರಬೆಟ್ಟ’ ಕಾದಂಬರಿ ರಚನೆ ಆರಂಭಿಸಿದ್ದು, ಸುಮಾರು ಮೂರು ವರ್ಷಗಳ ಕಾಲ ಕೃತಿ ರಚನೆಯಲ್ಲಿ ತೊಡಗಿಸಿಕೊಂಡಿದ್ದೆ. ಆರಂಭದಲ್ಲಿ ಮೂರು ಸಾವಿರ ಪುಟಗಳನ್ನು ದಾಟಿದ್ದ ಕಾದಂಬರಿಯನ್ನು ಕೋವಿಡ್ ನಂತರ ಪರಿಷ್ಕರಿಸಿ 2,397 ಪುಟಗಳಿಗೆ ಇಳಿಸಲಾಗಿದೆ ಎಂದರು.

ತುಮಕೂರಿನಲ್ಲಿದ್ದಾಗ ರಚಿಸಿದ ಕೃತಿಯಾಗಿರುವುದರಿಂದ ಇಲ್ಲಿಯೇ ಬಿಡುಗಡೆಯಾಗಬೇಕು ಎಂಬುದು ತಮ್ಮ ಆಶಯವಾಗಿತ್ತು. ಬರಗೂರು ರಾಮಚಂದ್ರಪ್ಪ, ಕೆ. ದೊರೈರಾಜ್, ಸಿದ್ಧಗಂಗಯ್ಯ ಹೊಲತಾಳ್ ಅವರಂತಹ ಚಿಂತಕರನ್ನು ಆಹ್ವಾನಿಸಿ ಲೇಖಕಿಯರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕೃತಿ ಬಿಡುಗಡೆ ಮಾಡಿರುವುದು ಅರ್ಥಪೂರ್ಣವಾಗಿದೆ ಎಂದರು.

ಇಂದು ಜಗತ್ತನ್ನು ಬಾಹ್ಯ ಯುದ್ಧಗಳಷ್ಟೇ ಅಲ್ಲದೆ ಆಂತರಿಕ ನಾಗರಿಕ ಸಂಘರ್ಷಗಳೂ ಕಾಡುತ್ತಿವೆ. ಶಸ್ತ್ರಾಸ್ತ್ರಗಳಿಲ್ಲದೆ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿ ಜಯ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟ ಮಹಾತ್ಮ ಗಾಂಧಿಯವರನ್ನು ಮೂಲೆಗುಂಪು ಮಾಡುತ್ತಿರುವ ಸನ್ನಿವೇಶದಲ್ಲಿ ‘ಕಾಡುದೇವರಬೆಟ್ಟ’ ಕಾದಂಬರಿ ವಿವಿಧ ಪಾತ್ರಗಳ ಮೂಲಕ ಗಾಂಧಿ ಪ್ರಣೀತ ವಿಚಾರಧಾರೆಗಳನ್ನು ಎತ್ತಿಹಿಡಿಯುತ್ತದೆ ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಜಿಪಂ – ತಾಪಂ ಮೀಸಲು ಅಂತಿಮ: ಮಹಿಳೆಯರಿಗೆ ಸಿಂಹಪಾಲು

ತುಮಕೂರು ಜಿಲ್ಲೆಯ ಗ್ರಾಮೀಣ ರಾಜಕೀಯದ ಮುಂದಿನ ಚಿತ್ರಣಕ್ಕೆ ಮುನ್ನುಡಿ ಬರೆಯುವಂತೆ ಜಿಲ್ಲಾ...

ತುಮಕೂರು | ಬೆಳೆ ಕಟಾವು ಪ್ರಯೋಗ ಶೇ.100ರಷ್ಟು ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

ತುಮಕೂರು ಜಿಲ್ಲೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನಡಿ ಹಂಚಿಕೆಯಾಗಿರುವ ಎಲ್ಲಾ 5,120...

ತುಮಕೂರು | ಎಸ್‌ಐಆರ್ ವಿರುದ್ಧ ಅ. 8ರಂದು ಇಂಡಿಯಾ ಮೈತ್ರಿಕೂಟದ ಪ್ರತಿಭಟನೆ

 ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...

ತುಮಕೂರು | ಮಿನಿ ಒಲಂಪಿಕ್ಸ್‌ಗೆ ಮಕ್ಕಳು ಸಜ್ಜು : ಕಯಾಕಿಂಗ್, ಕನೋಯಿಂಗ್, ಶೂಟಿಂಗ್ ತರಬೇತಿ

 ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಮಿನಿ ಒಲಂಪಿಕ್ಸ್‌ನಲ್ಲಿ ಭಾಗವಹಿಸಲು ಅನುವಾಗುವಂತೆ ಜಿಲ್ಲೆಯ...