ಜಾಗತೀಕರಣದ ಪ್ರಭಾವದಿಂದ ಪ್ರಾದೇಶಿಕ ಭಾಷೆ, ಸಂಸ್ಕೃತಿ ಮತ್ತು ಅಸ್ಮಿತೆಗಳು ಅಳಿಸಿಹೋಗುವ ಆತಂಕ ಎದುರಾಗಿರುವ ಸಂದರ್ಭದಲ್ಲಿ, ರಂಗಭೂಮಿ ನಮ್ಮ ಮೂಲ ಬೇರುಗಳನ್ನು ಉಳಿಸುವುದರ ಜೊತೆಗೆ ತುಳಿತಕ್ಕೊಳಗಾದ ಸಮುದಾಯಗಳ ಧ್ವನಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ ಎಂದು ರಂಗನಿರ್ದೇಶಕ ಲಕ್ಷ್ಮಣ್ ಕೆ.ಪಿ. ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ರಂಗಭೂಮಿ ಮತ್ತು ಅಸ್ಮಿತೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿ ಕೇವಲ ಮನರಂಜನೆಯ ಮಾಧ್ಯಮವಲ್ಲ; ಅದು ನಮ್ಮನ್ನು ನಾವು ಗುರುತಿಸಿಕೊಳ್ಳಲು, ನಮ್ಮ ಸಾಂಸ್ಕೃತಿಕ ಬೇರುಗಳನ್ನು ಅರಿಯಲು ಮತ್ತು ಸಮಾಜವನ್ನು ವಿಮರ್ಶಾತ್ಮಕವಾಗಿ ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳಲು ನೆರವಾಗುವ ಪ್ರಬಲ ಕಲಾ ಮಾಧ್ಯಮವಾಗಿದೆ. ಯಕ್ಷಗಾನ, ಬಯಲಾಟ ಸೇರಿದಂತೆ ವಿವಿಧ ಪ್ರಾದೇಶಿಕ ರಂಗರೂಪಗಳು ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಜನಜೀವನದ ವೈವಿಧ್ಯತೆಯನ್ನು ತಲೆಮಾರಿನಿಂದ ತಲೆಮಾರಿಗೆ ಜೀವಂತವಾಗಿರಿಸಿವೆ ಎಂದು ತಿಳಿಸಿದರು.
ಆಧುನಿಕ ರಂಗಭೂಮಿ ದಲಿತ, ಬಂಡಾಯ ಮತ್ತು ಸ್ತ್ರೀವಾದಿ ಚಳವಳಿಗಳ ಮೂಲಕ ಹೊಸ ಅಭಿವ್ಯಕ್ತಿಯ ಅಲೆಯನ್ನು ಸೃಷ್ಟಿಸಿದೆ. ಪಿತೃಪ್ರಧಾನ ವ್ಯವಸ್ಥೆ, ವರ್ಗ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆಗಳ ವಿರುದ್ಧ ರಂಗಭೂಮಿ ನಿರಂತರವಾಗಿ ಧ್ವನಿ ಎತ್ತುತ್ತ ಬಂದಿದೆ. ಸಮಾಜದ ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ತಮ್ಮ ಅಸ್ಮಿತೆ, ನೋವು ಮತ್ತು ಹಕ್ಕುಗಳನ್ನು ಅಭಿವ್ಯಕ್ತಿಪಡಿಸಲು ರಂಗಭೂಮಿ ಪ್ರಬಲ ವೇದಿಕೆಯಾಗಿದೆ. ರಂಗದ ಮೇಲಿನ ಕಲಾತ್ಮಕ ಅಭಿವ್ಯಕ್ತಿ ಸಮಾಜ ತನ್ನನ್ನು ತಾನು ವಿಮರ್ಶಿಸಿಕೊಳ್ಳಲು ಮತ್ತು ಬದಲಾವಣೆಯ ದಾರಿಯನ್ನು ಕಂಡುಕೊಳ್ಳಲು ನೆರವಾಗುತ್ತದೆ ಎಂದರು.
ಸಾಮಾಜಿಕ ಜಾಲತಾಣಗಳು ಮತ್ತು ದೃಶ್ಯ ಮಾಧ್ಯಮಗಳ ಪ್ರಭಾವ ಹೆಚ್ಚುತ್ತಿರುವ ಇಂದಿನ ಕಾಲದಲ್ಲಿಯೂ ರಂಗಭೂಮಿಯ ಜೀವಂತಿಕೆ ಕುಂದಿಲ್ಲ. ಪ್ರೇಕ್ಷಕರೊಂದಿಗೆ ನೇರ ಸಂವಾದ ನಡೆಸುವ, ಸಾಮಾಜಿಕ ವಾಸ್ತವಗಳನ್ನು ಕಣ್ಣೆದುರು ತೆರೆದಿಡುವ ಮತ್ತು ಭಾವನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ವಿಶಿಷ್ಟ ಶಕ್ತಿ ರಂಗಭೂಮಿಗಿದೆ. ಯುವಜನರು ಸಾಹಿತ್ಯದ ಅಧ್ಯಯನದೊಂದಿಗೆ ಸ್ಥಳೀಯ ಕಲೆ, ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ರಂಗಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಶ್ರೀನಿವಾಸ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ, ಐಕ್ಯೂಎಸಿ ಸಂಚಾಲಕ ಡಾ. ವಿಜಯ್ಕುಮಾರ್ ಜಿ.ಆರ್., ಸಹಾಯಕ ಪ್ರಾಧ್ಯಾಪಕ ಡಾ. ಭರತ್ ಶಿಲ್ಪಿ, ಉಪನ್ಯಾಸಕರಾದ ರಾಮಾಂಜಿನಪ್ಪ ಎಸ್.ಬಿ., ಸೀಮಾ ಕೆ., ಅಜಿತ್ ಟಿ.ಆರ್. ಮತ್ತು ಸಾಗರ್ ಬಿ. ಉಪಸ್ಥಿತರಿದ್ದರು.




