ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ತುಮಕೂರು ನಗರದ ಸ್ವತಂತ್ರ ಚೌಕದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ರಾಜ್ಯದ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಮೇ 22ರಂದು ಹೊರಡಿಸಿದ ಏಕರೂಪದ ಕನಿಷ್ಠ ವೇತನ ಅಧಿಸೂಚನೆಯನ್ನು ಸಿಐಟಿಯು ಸ್ವಾಗತಿಸುತ್ತಲೇ, ಅದರಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಬೇಕೆಂದು ಆಗ್ರಹಿಸಿತು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಅಧ್ಯಕ್ಷ ಕಾಂ. ಸೈಯದ್ ಮುಜೀಬ್ ಮಾತನಾಡಿ, “ಸುಪ್ರೀಂ ಕೋರ್ಟ್ ನ ‘ರೆಪ್ತಕೋಸ್ ಬ್ರೆಟ್’ ಮಾನದಂಡದಂತೆ ಕನಿಷ್ಠ ವೇತನ ಪರಿಷ್ಕರಿಸಬೇಕೆಂಬ ಕರ್ನಾಟಕ ಹೈಕೋರ್ಟ್ ನಿರ್ದೇಶನದ ಅನುಸಾರವೇ ಈ ಅಧಿಸೂಚನೆ ಹೊರಬಂದಿದೆ. ಆದರೆ ವೈಜ್ಞಾನಿಕ ಲೆಕ್ಕಾಚಾರಕ್ಕಿಂತ ಕಡಿಮೆ ದರ ನಿಗದಿಯಾಗಿದೆ” ಎಂದರು.
ಪ್ರಾಸ್ತಾವಿಕ ನುಡಿಗಳನಾಡಿದ ಸಿಐಟಿಯು ತುಮಕೂರು ಜಿಲ್ಲಾ ಪ್ರಧಾನಕಾರ್ಯಾದರ್ಶಿ ಜಿ.ಕಮಲ್ ಅವರು ಪ್ರಸ್ತುತ ಜೀವನ ವೆಚ್ಚವನ್ನು ಗಮನಿಸಿ ಸರಾಸರಿ ರೂ. 36,000 ಕನಿಷ್ಠ ವೇತನ ನಿಗದಿಪಡಿಸಬೇಕೆಂದು ಒತ್ತಾಯಿಸಿದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ದಾರ್ ಬಾನು ಮಾತನಾಡಿ ಎಲ್ಲಾ ಸ್ಕಿಂ ನೌಕರರಾದ ಅಂಗನವಾಡಿ, ಬಿಸಿಯೂಟ,ಆಶಾ,ನೌಕರರನ್ನು ಕಾರ್ಮಿಕರು ಎಂದು ಪ್ರರಿಗಣಿಸಲು ಒತ್ತಾಯಿಸಿದರು.
ಗ್ರಾಮಪಂಚಾಯಿತಿ ನೌಕರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ಎನ್.ಕೆ ಮಾತನಾಡಿ , “ಕರಡು ಅಧಿಸೂಚನೆ ಹೊರಡಿಸಿದ ದಿನಾಂಕ 11-04-2025 ರಿಂದಲೇ ಪೂರ್ವಾನ್ವಯಗೊಳಿಸದೆ, ಮೇ 22ರಿಂದ ಜಾರಿಗೆ ತಂದಿರುವುದು ಕಾರ್ಮಿಕರಿಗೆ ಅನ್ಯಾಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಖಜಾಂಚಿ ಎ. ಲೋಕೇಶ್ ಮಾತನಾಡಿ, “ಗಾರ್ಮೆಂಟ್ಸ್, ಪ್ಲಾಂಟೇಷನ್, ಬೀಡಿ, ಅಗರಬತ್ತಿ, ಕೈಮಗ್ಗ ಸೇರಿದಂತೆ 19 ಉದ್ದಿಮೆಗಳನ್ನು ಹೊರಗಿಟ್ಟಿರುವುದರಿಂದ ಬಹುಸಂಖ್ಯಾತ ಮಹಿಳಾ ಕಾರ್ಮಿಕರು ವಂಚಿತರಾಗಿದ್ದಾರೆ. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಮಿಕರನ್ನೂ ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕು” ಎಂದರು.
ತುಮಕೂರು ಮಹಾನಗರ ಪಾಲಿಕೆ ಕಸದ ಆಟೋಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಮತ್ತು ಕ್ರಮವಾಗಿ ಅನುಷ್ಠಾನದ ಕಟ್ಟುನಿಟ್ಟು ಹಾಗೂ ಕೇಂದ್ರದ ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಕರ್ನಾಟಕದಲ್ಲಿ ಕಾರ್ಮಿಕಪರ ತಿದ್ದುಪಡಿಗಳ ಆಗ್ರಹ ವ್ಯಕ್ತಪಡಿಸಿದರು.
ಕೈಗಾರಿಕಾ ಕಾರ್ಮಿಕ ಸುಜಿತ್ ನಾಯಕ ಮಾತನಾಡಿ ಗುತ್ತಿಗೆ ಪದ್ಧತಿ ರದ್ದುಪಡಿಸಿ, ಖಾಯಂಯೇತರ ಕಾರ್ಮಿಕರ ಖಾಯಂಗೆ ಪ್ರತ್ಯೇಕ ಶಾಸನ ರೂಪಿಸಬೇಕೆಂದು ಒತ್ತಾಯಿಸಿದರು.
ಮೆರವಣಿಗೆಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷರುಗಳಾದ ರಂಗಧಮಯ್ಯ, ಅನುಸೂಯ, ತುಮಕೂರು ಜಿಲ್ಲಾ ಬೀಡಿ ಕಾರ್ಮಿಕ ಸಂಘದ ಅಬ್ದುಲ್ ಮುನ್ನಫ್, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪುಷ್ಪ, ಶಿವಗಂಗಮ್ಮ, ಗ್ರಾಮಪಂಚಾಯಿತಿ ನೌಕರರ ಸಂಘದ ನಾಗೇಶ್, ಕಟ್ಟಡ ಕಾರ್ಮಿಕ ಸಂಘಟನೆಯ ಶಂಕ್ರಣ್ಣ, ಹಮಾಲಿ ಕಾರ್ಮಿಕ ಸಂಘಟನೆಯ ನಾಗರಾಜು, ಡಿಸಾ ಇಂಡಿಯಾ ಪೈ.ಲಿ ಕಾರ್ಮಿಕ ಸಂಘದ ಷಣುಖಪ್ಪ, ಕರ್ನ ಅಬರ್ಸ್ ಕಾರ್ಮಿಕ ಸಂಘದ ಮಂಜುನಾಥ್, ಚೇತನ್, ಅನಂದ್, ನಿಖಿತ, ಬಿಲ್ಡ್ ಟೇಕ್ ಕಾರ್ಮಿಕ ಸಂಘದ ಮಧುಸೂಧನ್, ಎಂ.ಹೆಚ್.ಐ.ಎನ್ ಕಾರ್ಮಿಕ ಸಂಘದ ಉಮೇಶ್, ಫೀಟ್ ವೇಲ್ ಕಾರ್ಮಿಕ ಸಂಘದ ರಾಮಕೃಷ್ಣಯ್ಯ, ಸಂಪತ್ ಕುಮಾರ್, ಟಿ.ಎಸ್. ಭೀಮರಾಜು, ತುಮಕೂರು ಪೌರ ಕಾರ್ಮಿಕ ಸಂಘದ ಮಂಜುನಾಥ್, ನರಸಿಂಹಮೂರ್ತಿ, ಕೆಂಪುರಾಜು, ನೀರು ಸರಬರಾಜು ಸಂಘದ ಕುಮಾರ್, ಸಿಂಧೂರ್ ಫೋರ್ಜಿಂಗ್ ಕಾರ್ಮಿಕ ಸಂಘದ ಉಮೇಶ್, ಆಸ್ಪತ್ರೆ ನೌಕರರ ಸಂಘದ ನೇತ್ರಾವತಿ, ತಾಂತ್ರಿಕೇತರರ ಸಂಘದ ಶಿವಲಿಂಗಯ್ಯ, ಮೀನಾಕ್ಷಿ ಮೀನ, ಸಿಕಾಮೋ ಇಂಡಿಯಾ ಕಾರ್ಮಿಕ ಸಂಘದ ಗಣಪತಿ, ಕುತ್ತಿಗೆ ಕಾರ್ಮಿಕ ಚಿದಾನಂದ್, ಕಸದ ವಾಹನ ಚಾಲಕರ ಸಂಘದ ಮಾರುತಿ, ಮುನಿಸಿಪಲ್ ಕಾರ್ಮಿಕ ಸಂಘದ ಪ್ರಕಾಶ್, ಅಕ್ಷರದಾಸೋಹ ನೌಕರರ ಸಂಘದ ಕೆಂಪಮ್ಮ, ಹಾಗೂ ನಾಗೇಶ್, ಅನುಸೂಯ ದವರು ಭಾಗವಹಿಸಿದ್ದರು.
ಸಿಐಟಿಯು ರಾಜ್ಯ ಸರ್ಕಾರವು ಮೇಲಿನ ಎಲ್ಲ ಬೇಡಿಕೆಗಳನ್ನು ತ್ವರಿತವಾಗಿ ಪೂರೈಸಬೇಕೆಂದು ಆಗ್ರಹಿಸಿದೆ.




