ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಲವು ಹೆಣ್ಣುಮಕ್ಕಳ ಜೊತೆ ನಡೆಸಿದ್ದ ಲೈಂಗಿಕ ಕ್ರಿಯೆಯ ವಿಡಿಯೊಗಳು ಬಹಿರಂಗಗೊಂಡು ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಬಿಜೆಪಿಯ ಹಿರಿಯ ಮುಖಂಡ, ಶಿವಮೊಗ್ಗದ ಬಂಡಾಯ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಏಪ್ರಿಲ್ 27ರಂದು ತಮ್ಮ ಬಗ್ಗೆ ಮಾನಹಾನಿಕರ ಸುದ್ದಿ, ಫೋಟೋ ಪ್ರಕಟಿಸದಂತೆ ಕೋರ್ಟಿನಿಂದ ತಡೆಯಾಜ್ಞೆ ತಂದಿರುವ ಸುದ್ದಿ ಬಂದಿದೆ. ಅಲ್ಲಿಗೆ ಬಿಜೆಪಿಯಲ್ಲಿ ತಡೆಯಾಜ್ಞೆ ತಂದವರ ಸಂಖ್ಯೆ ಡಜನ್ ದಾಟಿದೆ.
ರಾಜಕೀಯ ಮುಖಂಡರ ಅಶ್ಲೀಲ ವಿಡಿಯೋಗಳು ಬಹಿರಂಗಗೊಳ್ಳುವುದು ಮತ್ತು ಬಹಿರಂಗಗೊಳ್ಳುವ ಸೂಚನೆ ಸಿಗುತ್ತಿದ್ದಂತೆ ಕೋರ್ಟಿನಿಂದ ತಡೆಯಾಜ್ಞೆ ತರುವುದು ಹೊಸ ಬೆಳವಣಿಗೆಯೇನಲ್ಲ. ಅದರಲ್ಲೂ ಬಿಜೆಪಿಯಲ್ಲಿ ಇಂತಹ ಬೆಳವಣಿಗೆಗಳು ಹೆಚ್ಚು ಎಂಬುದನ್ನೆ ಸಾಕಷ್ಟು ಪುರಾವೆ ಸಿಗುತ್ತದೆ. ಹಾಗೆಯೇ, ರಾಜಕೀಯದಲ್ಲಿ ಅಶ್ಲೀಲ ವಿಡಿಯೋ, ಆಡಿಯೊ, ಫೋಟೊಗಳನ್ನು ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುವುದು ಸಹಜ.
2019ರಲ್ಲಿ ಆಪರೇಷನ್ ಕಮಲ ಮಾಡಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ರಚನೆಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಶಾಸಕರನ್ನು ಆಮಿಷವೊಡ್ಡಿ ಮುಂಬೈಗೆ ಕರೆದೊಯ್ದು ವಾರಗಳ ಕಾಲ ಅಲ್ಲಿನ ಹೋಟೆಲಿನಲ್ಲಿ ಕೂಡಿ ಹಾಕಿ ನಂತರ ಬೆಂಗಳೂರಿಗೆ ಕರೆತಂದು ರಾಜೀನಾಮೆ ಕೊಡಿಸಿದ್ದರು.
2019ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಶಾಸಕ ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ವಿಡಿಯೊ ಸಿಡಿಯೊಂದು ಬಹಿರಂಗಗೊಂಡು ದೊಡ್ಡ ವಿವಾದವಾಗಿತ್ತು. ಯಾವುದೋ ಸಹಾಯ ಕೇಳಿ ಬಂದ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ ಜಾರಕಿಹೊಳಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. ಆ ಯುವತಿಯೇ ಅದರ ವಿಡಿಯೊ ಮಾಡಿಕೊಂಡಿದ್ದು ಅದನ್ನು ಆಕೆಯೇ ಬೇರೆಯವರಿಗೆ ಕೊಟ್ಟು ಬಹಿರಂಗಪಡಿಸಿದ್ದಳು ಎಂಬ ಆರೋಪ ಬಂದಿತ್ತು. ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಿಸಿಕೊಂಡು ನಂತರ ಕೆಲಸ ಕೊಟ್ಟಿರಲಿಲ್ಲ. ಸಿ ಡಿ ಬಹಿರಂಗಗೊಂಡ ನಂತರ ಆಕೆ ಅತ್ಯಾಚಾರದ ದೂರು ನೀಡಿದ್ದಳು.
ಈ ಬೆಳವಣಿಗೆಗೆ ಅಂಜಿದ್ದ ಆಪರೇಷನ್ ಕಮಲಕ್ಕೆ ಒಳಗಾಗಿದ್ದ ಕೆಲ ಶಾಸಕರು ಒಟ್ಟಾಗಿ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ, ಚಿತ್ರ, ವಿಡಿಯೊ ಪ್ರಕಟಿಸದಂತೆ ಮಾಧ್ಯಮಗಳಿಗೆ ತಡೆಯಾಜ್ಞೆ ತಂದಿದ್ದರು. ಶಿವರಾಮ ಹೆಬ್ಬಾರ್, ಎಸ್ ಟಿ ಸೋಮಶೇಖರ, ಬೈರತಿ ಬಸವರಾಜ್, ಡಾ. ಸುಧಾಕರ್, ರೇಣುಕಾಚಾರ್ಯ, ಕೆ ಸಿ ನಾರಾಯಣ ಗೌಡ ಅವರು ತಡೆಯಾಜ್ಞೆ ತಂದಿದ್ದರು. ಹಾಗಿದ್ದರೆ ಅವರೆಲ್ಲ ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಭಾಗಿಯಾಗಿರೋದು ಎಲ್ಲಿ? ಎಲ್ಲರೂ ಒಂದೇ ಸಲ ತಡೆಯಾಜ್ಞೆ ಯಾಕೆ ತಂದರು ಎಂದು ನೋಡಿದಾಗ ಹುಟ್ಟಿಕೊಂಡ ಬಿರುದು “ಬಾಂಬೆ ಬಾಯ್ಸ್”!
ಆಪರೇಷನ್ ಕಮಲದ ಭಾಗವಾಗಿ ಬಿಜೆಪಿ ನಾಯಕರ ಜೊತೆ ಮುಂಬೈಯಲ್ಲಿ ಠಿಕಾಣಿ ಹೂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಅಲ್ಲಿನ ಐಷಾರಾಮಿ ಹೋಟೇಲಿನಲ್ಲಿ ಹೆಣ್ಣು -ಹೆಂಡದ ಪೂರೈಕೆ ಮಾಡಿ, ಖಾಸಗಿ ಕ್ಷಣಗಳ ವಿಡಿಯೋ ಚಿತ್ರೀಕರಿಸಿ ಅದನ್ನು ಇಟ್ಟುಕೊಂಡು ಬಿಜೆಪಿ ನಾಯಕರು ಬ್ಲ್ಯಾಕ್‌ಮೇಲ್ ಮಾಡಿರುವ ಆರೋಪ ಕೇಳಿ ಬಂದಿತ್ತು. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅದರ ಕಿಂಗ್‌ಪಿನ್ ಎಂಬ ಚರ್ಚೆ ನಡೆದಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪಕ್ಷಾಂತರಗೊಂಡ ಶಾಸಕರು ತಡೆಯಾಜ್ಞೆ ತಂದಿದ್ದರು.
ಬಿಜೆಪಿ ಸೇರಿ ಅಸಮಾಧಾನಗೊಂಡಿದ್ದ ಎಂಎಲ್‌ಸಿ ಎಚ್ ಎಸ್ ವಿಶ್ವನಾಥ್ ಹಲವು ಬಾರಿ ಮುಂಬೈ ಡೈರಿ ಪುಸ್ತಕ ಬರೆಯುವುದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.