ದಲಿತ ದೌರ್ಜನ್ಯ ಪ್ರಕರಣಗಳ ತನಿಖೆಗೆ ರಚನೆಯಾಗಿರುವ ಜಿಲ್ಲಾ ಮಟ್ಟದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್ಇ) ಠಾಣೆಯ ಡಿವೈಎಸ್ಪಿ ಎಸ್.ಟಿ. ವಡೆಯಾರ್ ಅವರನ್ನು ತಕ್ಷಣ ಅಮಾನತುಗೊಳಿಸುವಂತೆ ದಲಿತ ಚಿಂತಕ, ಜನಪರ ಹೋರಾಟಗಾರ ಹಾಗೂ ದಸಂಸ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.
ಸುಮಾರು ಮೂರು ವರ್ಷಗಳ ಹಿಂದೆ ನಾಗೇಶ್ ಎಂಬವರ ಮದುವೆಗೆ ಸಾಲ ನೀಡುವುದಾಗಿ ನಂಬಿಸಿ, ಅವರ ಕುಟುಂಬದ ಸುಮಾರು 66 ಸೆಂಟ್ಸ್ ಜಾಗದ ಮೂಲ ದಾಖಲೆಗಳನ್ನು ಪಡೆದುಕೊಂಡು ₹20 ಲಕ್ಷ ಸಾಲ ಮಂಜೂರು ಮಾಡಲಾಗಿತ್ತು. ಆದರೆ ನಾಗೇಶ್ ಅವರಿಗೆ ಕೇವಲ ₹5 ಲಕ್ಷ ನೀಡಲಾಗಿದ್ದು, ಉಳಿದ ಹಣವನ್ನು ಅವರ ಗಮನಕ್ಕೆ ತರದೆ ಪಡುಬಿದ್ರಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರು, ನಿರ್ದೇಶಕರು, ಮ್ಯಾನೇಜರ್ ಸೇರಿದಂತೆ ಸುಮಾರು ಏಳು ಮಂದಿ ವಂಚಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಡುಬಿದ್ರಿ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಉಡುಪಿ ಡಿಸಿಆರ್ಇ ಠಾಣೆಗೆ ವರ್ಗಾಯಿಸಲಾಗಿತ್ತು. ಆದರೆ ತನಿಖಾಧಿಕಾರಿಯಾಗಿದ್ದ ಡಿವೈಎಸ್ಪಿ ಎಸ್.ಟಿ. ವಡೆಯಾರ್ ಅವರು ಪ್ರಕರಣದಲ್ಲಿ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜಯನ್ ಮಲ್ಪೆ ಆರೋಪಿಸಿದ್ದಾರೆ.
ಸುಮಾರು 12 ದಿನಗಳ ಬಳಿಕ ಕಾಪು ಅಂಬೇಡ್ಕರ್ ಯುವಸೇನೆಯ ನಾಯಕರು ಉಡುಪಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಭೇಟಿ ನೀಡಿ ವಿಚಾರಿಸಿದ ನಂತರ ಡಿವೈಎಸ್ಪಿ ವಡೆಯಾರ್ ಅವರು ಪಡುಬಿದ್ರಿಯ ಪ್ರಿಯದರ್ಶಿನಿ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಕಾಟಾಚಾರಕ್ಕೆ ತನಿಖೆ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ.
ವಾಸ್ತವವಾಗಿ ನ್ಯಾಯಾಲಯದ ಮೂಲಕ ಸಹಕಾರಿ ಸಂಘದ ವಿರುದ್ಧ ಸರ್ಚ್ ವಾರಂಟ್ ಪಡೆದು ಸಾಲದ ದಾಖಲೆಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಬೇಕಾಗಿತ್ತು. ಆದರೆ ಡಿವೈಎಸ್ಪಿ ವಡೆಯಾರ್ ಅವರು ಆರೋಪಿಗಳಿಗೆ ಪ್ರಕರಣದ ವಿರುದ್ಧ ಹೈಕೋರ್ಟ್ನಲ್ಲಿ ತಡೆಯಾಜ್ಞೆ ತರಲು ಹಿಂದಿನಿಂದ ಸಹಕರಿಸಿದ್ದಾರೆ ಎಂದು ಜಯನ್ ಮಲ್ಪೆ ಗಂಭೀರ ಆರೋಪ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿರುವ ಜಯನ್ ಮಲ್ಪೆ, ಡಿವೈಎಸ್ಪಿ ಎಸ್.ಟಿ. ವಡೆಯಾರ್ ಅವರನ್ನು ತಕ್ಷಣ ಅಮಾನತುಗೊಳಿಸಿ ಪ್ರಕರಣದ ತನಿಖೆಯನ್ನು ಎಸ್ಪಿ ಅಥವಾ ಸಿಐಡಿಗೆ ವಹಿಸುವಂತೆ ಒತ್ತಾಯಿಸಿದ್ದಾರೆ.
ಬಡ ದಲಿತರಿಗೆ ವಂಚಿಸಿರುವ ಪ್ರಿಯದರ್ಶಿನಿ ಸಹಕಾರಿ ಸಂಘದ ಪ್ರಕರಣವನ್ನು ರಾಜ್ಯ ಸರ್ಕಾರ ಕೂಡಲೇ ಎಸ್ಐಟಿ ಅಥವಾ ಸಿಐಡಿಗೆ ವಹಿಸಬೇಕು ಎಂದು ದಲಿತ ಮುಖಂಡರಾದ ಗಣೇಶ್ ನೆರ್ಗಿ, ಕೃಷ್ಣ ಪಡುಬಿದ್ರಿ, ಹರೀಶ್ ಸಲ್ಯಾನ್, ವಸಂತ ಪಾದೆಬೆಟ್ಟು, ಸುಜಿತ್ ಕಂಚಿನಡ್ಕ, ರವಿ ಲಕ್ಷ್ಮೀನಗರ, ಭಗವಾನ್ ಮಲ್ಪೆ, ಪ್ರಸಾದ್, ಅರುಣ್ ಸಾಲ್ಯಾನ್, ದಯಾಕರ್ ಮಲ್ಪೆ, ಬಿ.ಎನ್. ಪ್ರಶಾಂತ್, ಸುಶೀಲ್ ಕುಮಾರ್ ಮತ್ತಿತರರು ಆಗ್ರಹಿಸಿದ್ದಾರೆ.





