ದೇಶಕ್ಕೆ ಬಾಬಾಸಾಹೇಬರು ನೀಡಿದ ಸಂವಿಧಾನದ ಕಾರಣದಿಂದಲೇ ಭಾರತ ಇಂದಿಗೂ ಅಖಂಡವಾಗಿ ಉಳಿದಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಹೇಳಿದರು.
ಅವರು ಆರೂರಿನಲ್ಲಿ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಬ್ರಹ್ಮಾವರ ತಾಲೂಕು ಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನೂರಾರು ಭಾಷೆಗಳು, ಜಾತಿಗಳು, ಸಂಸ್ಕೃತಿಗಳು, ಆಹಾರ ಪದ್ಧತಿಗಳು ಹಾಗೂ ವೈವಿಧ್ಯಮಯ ಭೌಗೋಳಿಕ ಪ್ರದೇಶಗಳಿದ್ದರೂ ಅರುಣಾಚಲ ಪ್ರದೇಶದಿಂದ ಗುಜರಾತ್ ವರೆಗೆ, ಜಮ್ಮು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಭಾರತ ಒಂದು ರಾಷ್ಟ್ರವಾಗಿ ಉಳಿದಿರುವುದಕ್ಕೆ ಅಂಬೇಡ್ಕರ್ ರಚಿಸಿದ ಸಂವಿಧಾನವೇ ಪ್ರಮುಖ ಕಾರಣವಾಗಿದೆ ಎಂದರು.
ಸಂವಿಧಾನವನ್ನು ಬದಲಾಯಿಸಿದರೆ ಭಾರತವು ಇನ್ನೊಂದು ಸೋವಿಯತ್ ಯೂನಿಯನ್ ಆಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.

ಅಂಬೇಡ್ಕರ್ ಜನಿಸದೇ ಇದ್ದರೆ ದಲಿತರು ಇಂದಿಗೂ ಹೀನಾಯ ಜೀವನ ನಡೆಸಬೇಕಾಗುತ್ತಿತ್ತು. ದಲಿತರಿಗೆ ಸ್ವಾಭಿಮಾನ ಮತ್ತು ಶಿಕ್ಷಣದ ಮಹತ್ವವನ್ನು ಅರಿವು ಮೂಡಿಸಿದವರು ಬಾಬಾಸಾಹೇಬರು ಎಂದು ಹೇಳಿದರು.
ಬ್ರಿಟಿಷರ ವಿರುದ್ಧ ದೇಶದ ಜನರು ಹೋರಾಟ ನಡೆಸಿದಾಗ, ಅಂಬೇಡ್ಕರ್ ಅವರು ದೇಶದೊಳಗಿನ ಅಸಮಾನತೆ, ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದರು. ಬ್ರಿಟಿಷರು ದೇಶವನ್ನು ಬಿಟ್ಟರೂ ಮೇಲ್ವರ್ಗದವರಿಂದ ಅಸ್ಪೃಶ್ಯರಿಗೆ ಸ್ವಾತಂತ್ರ್ಯ ಸಿಗುವುದಿಲ್ಲ ಎಂಬ ಅರಿವು ಅವರಿಗೆ ಇದ್ದಿತು ಎಂದು ಹೇಳಿದರು.
ಅಂಬೇಡ್ಕರ್ ಘೋಷಿಸಿದ “ಶಿಕ್ಷಣ, ಸಂಘಟನೆ, ಹೋರಾಟ” ಎಂಬ ತತ್ವಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮಸುಂದರ ತೆಕ್ಕಟ್ಟೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂತೋಷ್ ಕುಮಾರ್ ಹೆಗ್ಡೆ, ಮಂಜುನಾಥ ಗಿಳಿಯಾರು ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.





