ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡುವಂತೆ ಹಾಗೂ ದೆಹಲಿಯಲ್ಲಿ ಪ್ರತಿಭಟನೆ ವೇಳೆ ವಶಕ್ಕೆ ಪಡೆದಿರುವ ಪ್ರತಿಭಟನಾಕಾರರನ್ನು ಕೂಡಲೇ ಬಿಡುಗಡೆ ಗೊಳಿಸುವಂತೆ ಆಗ್ರಹಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ ಇದರ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಶನಿವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಧರಣಿ ಹಮ್ಮಿಕೊಳ್ಳ ಲಾಗಿತ್ತು.
ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮಾತನಾಡಿ, ಚುನಾವಣಾ ಆಯೋಗ ಸಂಪೂರ್ಣ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಆದರೆ ಇಂದು ಅಕ್ರಮವೆಸಗುವ ಮೂಲಕ ಅದು ಅಸಂವಿಧಾನಿಕವಾಗಿ ವರ್ತಿಸುತ್ತಿದೆ. ಈ ನಿಟ್ಟಿನಲ್ಲಿ ಇಂತಹ ಸಂವಿಧಾನ ವಿರೋಧಿ ಕ್ರಮಗಳ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಪ್ರತಿಯೊಬ್ಬರೂ ನಿಜವಾದ ದೇಶಪ್ರೇಮಿಗಳಾಗಿದ್ದಾರೆ ಎಂದು ತಿಳಿಸಿದರು.

ಸಾಲಿಡಾರಿಟಿ ಯೂತ್‌ಮೂವ್ಮೆಂಟ್ ಮುಖಂಡ ನಿಹಾಲ್ ಕಿದಿಯೂರು ಮಾತನಾಡಿ, ಇದು ಕೇವಲ ಒಂದು ಪ್ರತಿಭಟನೆಯಲ್ಲ, ಪ್ರಜಾಪ್ರಭುತ್ವದ ಆತ್ಮವನ್ನು ರಕ್ಷಿಸುವ ಹೋರಾಟ. ಇದು ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದ್ದು, ಒಂದು ಗೋಡ್ಸೆಯ ಸಿದ್ಧಾಂತವಾದರೆ ಮತ್ತೊಂದು ಗಾಂಧಿಯ ಸಿದ್ಧಾಂತವಾಗಿದೆ. ನಮ್ಮ ಮಾರ್ಗ ಸದಾ ಗಾಂಧಿಯ ಮಾರ್ಗವಾಗಿದೆ, ಆದರೆ ಬಿಜೆಪಿ ಸರ್ಕಾರ ಗಾಂಧಿಯನ್ನು ಗೋಡ್ಸೆ ಹೊಡೆದ ರೀತಿಯಲ್ಲಿ ನಮ್ಮ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಹಿಂದೂ-ಮುಸ್ಲಿಮ್ ಹೆಸರಿನಲ್ಲಿ ರಾಜಕೀಯ ಮಾಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತದ ಕೇಂದ್ರ ಸರಕಾರ ಇಂದು ಪ್ರಜಾಪ್ರಭುತ್ವವನ್ನು ತಲೆಗೆಳಗೆ ಮಾಡಲು ಹೊರಟಿದೆ. ಜ್ಞಾನೇಶ್ ಕುಮಾರ್ ಈ ದೇಶದ ಪಾರದರ್ಶಕ ಚುನಾವಣಾ ವ್ಯವಸ್ಥೆಗೆ ದ್ರೋಹ ಎಸಗಿರುವುದು ಸಾಬೀತಾಗಿದೆ. ಅವರು ಕೂಡಲೇ ರಾಜೀನಾಮೆ ಕೊಟ್ಟು ತೊಲಗಬೇಕೆಂದು ಆಗ್ರಹಿಸಿದರು.

ಧರಣಿಯಲ್ಲಿ ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು, ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ಚಾರ್ಲ್ಸ್ ಅಂಬ್ಲರ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಕಾರ್ಯದರ್ಶಿ ಸಯೀದ್ ಫರೀದ್, ಎಪಿಸಿಆರ್ ರಾಜ್ಯ ಕಾರ್ಯದರ್ಶಿ ಹುಸೇನ್ ಕೊಡಿಬೆಂಗ್ರೆ, ಮುಖಂಡರಾದ ಇದ್ರೀಸ್ ಹೂಡೆ, ಕುಲ್ಸುಮ್ ಅಬೂಬಕ್ಕರ್, ನಿಸಾರ್ ಉಡುಪಿ, ಯಾಸೀನ್ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು.






