ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಪ್ರಕ್ರಿಯೆಗೆ ಪೂರಕವಾಗಿ ಟೊಪೋಗ್ರಾಫಿಕಲ್ ಡ್ರೋನ್ ಸರ್ವೆ ಕಾರ್ಯ ಆರಂಭವಾಗಿದೆ. ಜಲ ಸಂಪನ್ಮೂಲ ಇಲಾಖೆಯ ಮೇಲುಸ್ತುವಾರಿಯಲ್ಲಿ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರವು ಸರ್ವೆ ಕಾರ್ಯ ಕೈಗೊಂಡಿದ್ದು, ಮುಂದಿನ ಮೂರು ತಿಂಗಳ ಕಾಲಾವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
“ಡ್ರೋನ್ ಸರ್ವೆ ಕಾರ್ಯಕ್ಕೆ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ಮುಂದಾಗಿದ್ದು, ಯೋಜನೆಯ ಡಿಪಿಆರ್ ಸಿದ್ಧಪಡಿಸುವ ನಿಟ್ಟಿನಲ್ಲಿ ಇದು ಪ್ರಮುಖ ಪ್ರಕ್ರಿಯೆಯಾಗಿದೆ. ಕೇಂದ್ರ ಸರ್ಕಾರಕ್ಕೆ ಯೋಜನೆಯ ಡಿಪಿಆರ್ ಕಾರ್ಯ ಆರಂಭಿಸುವ ಸಂಬಂಧ ರಾಜ್ಯ ಸರ್ಕಾರ ಕಳೆದ ವರ್ಷ ಡಿಸೆಂಬರ್ 23ರಂದು ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿದ ಹಿನ್ನೆಲೆಯಲ್ಲಿ ಯೋಜನೆಯ ವರದಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಪ್ರಗತಿ ಕಂಡುಬರುತ್ತಿದೆ” ಎಂದು ಹೇಳಿದ್ದಾರೆ.
ಟೊಪೋಗ್ರಾಫಿಕಲ್ ಡ್ರೋನ್ ಸರ್ವೆ ಮೂಲಕ ಭೂಮಿಯ ಎತ್ತರ, ತಗ್ಗು, ಬೆಟ್ಟಗುಡ್ಡಗಳು, ಕಣಿವೆಗಳು ಸೇರಿದಂತೆ ನೈಸರ್ಗಿಕ ಲಕ್ಷಣಗಳನ್ನು ನಿಖರವಾಗಿ ಅಳೆಯಲಾಗುತ್ತದೆ. ಮರಗಳು, ನೀರಿನ ಹರಿವಿನ ದಿಕ್ಕು ಹಾಗೂ ಭೂಮಿಯ ಇಳಿಜಾರಿನ ವಿವರಗಳನ್ನೂ ದಾಖಲಿಸಲಾಗುತ್ತದೆ. ಇದರೊಂದಿಗೆ ಹಳೆಯ ಕಟ್ಟಡಗಳು, ರಸ್ತೆಗಳು, ಬೇಲಿಗಳು, ವಿದ್ಯುತ್ ಕಂಬಗಳು ಮತ್ತು ಒಳಚರಂಡಿ ಮಾರ್ಗಗಳಂತಹ ಮಾನವ ನಿರ್ಮಿತ ರಚನೆಗಳ ನಿಖರ ಸ್ಥಳ ಹಾಗೂ ಅಳತೆಗಳನ್ನು ಗುರುತಿಸಲಾಗುತ್ತದೆ.
“ಆಧುನಿಕ ಡ್ರೋನ್ ತಂತ್ರಜ್ಞಾನದ ಮೂಲಕ ಆಕಾಶದಿಂದಲೇ ಈ ಸಮೀಕ್ಷೆ ನಡೆಸುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ನಿಖರತೆಯ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿದೆ. ಮಾನವ ಶ್ರಮ ಮತ್ತು ನೇರ ಹಸ್ತಕ್ಷೇಪ ಕಡಿಮೆಯಾಗುವುದರ ಜತೆಗೆ ಸರ್ವೆ ಕಾರ್ಯದ ವೆಚ್ಚವೂ ತಗ್ಗಲಿದೆ” ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಮೂರು ತಿಂಗಳಲ್ಲಿ ಸಮಗ್ರ ಮಾಹಿತಿ ಸಂಗ್ರಹ
ಡ್ರೋನ್ ಸರ್ವೆ ಮೂಲಕ ಯೋಜನೆಯಡಿ ನೀರು ಹರಿಯುವ ಮಾರ್ಗ, ಸುರಂಗ ಮತ್ತು ಪೈಪ್‌ಲೈನ್‌ಗಳ ನಕ್ಷೆ, ಬ್ಯಾರೇಜ್‌ಗಳ ಸ್ಥಳ ಹಾಗೂ ಯೋಜನೆಯ ಕಾಮಗಾರಿ ಅನುಷ್ಠಾನಗೊಳ್ಳಲಿರುವ ಪ್ರದೇಶಗಳ ಸ್ಪಷ್ಟ ಚಿತ್ರಣವನ್ನು ಸಂಗ್ರಹಿಸಲಾಗುತ್ತದೆ. ಮುಂದಿನ ಮೂರು ತಿಂಗಳಲ್ಲಿ ಈ ಎಲ್ಲ ವಿವರಗಳನ್ನು ದಾಖಲಿಸಿ ಡಿಪಿಆರ್ ಸಿದ್ಧಪಡಿಸುವ ಪ್ರಕ್ರಿಯೆಗೆ ಅಗತ್ಯವಾದ ಸಮಗ್ರ ಮಾಹಿತಿಯನ್ನು ಪಡೆಯಲಾಗುವುದು ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.



