ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನವೆಂಬರ್ 17ರಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಯ ಮೊತ್ತ ಬಹಳ ದೊಡ್ಡದು ಎಂದು ನೆಪ ಹೇಳುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ (AIUTUC ಸಂಯೋಜಿತ) ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಕೇಂದ್ರ ಬಿಜೆಪಿ ಸರ್ಕಾರವೂ ತನ್ನ ಪಾಲಿನ ಪ್ರೋತ್ಸಾಹಧನವನ್ನು ತಕ್ಷಣವೇ ಹೆಚ್ಚಿಸುವಂತೆ ಸಂಘವು ಆಗ್ರಹಿಸಿದೆ.
ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿದರೆ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರು ಮತ್ತು ಅತಿಥಿ ಶಿಕ್ಷಕರೂ ಸೇರಿದಂತೆ ಇತರೂ ಬೇಡಿಕೆ ಇಡುತ್ತಾರೆ ಎಂದು ಸರ್ಕಾರ ಸಬೂಬು ನೀಡುತ್ತಿದೆ. ಇದು ಕಾರ್ಮಿಕ ವಿರೋಧಿಯಾಗಿದ್ದು, ದುಡಿಯುವ ವರ್ಗವನ್ನು ಪರಸ್ಪರ ಎತ್ತಿಕಟ್ಟುವ ಹುನ್ನಾರವಾಗಿದೆ ಎಂದು ಆಶಾ ಕಾರ್ಯಕರ್ತೆಯರ ಸಂಘ ದೂರಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿ
“ಒಂದೇ ದಿನದಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಸತ್ಯಕ್ಕೆ ದೂರವಾದುದು. ಕಳೆದ ಹಲವು ವರ್ಷಗಳಿಂದ ಆಶಾಗಳು ರೂ. 1500 ಬೇಡಿಕೆ ಇಡುತ್ತಾ ಬಂದಿದ್ದಾರೆ. ಜನವರಿ 2025ರಲ್ಲಿ ಈ ಹಿಂದೆ ಕೂಡ, ಇಂತಹ ಭರವಸೆಗಳನ‍್ನು ನೀಡಿ ಆಶಾ ಕಾರ್ಯಕಾರ್ತೆಯರನ‍್ನು ರಾಜ್ಯ ಸರ್ಕಾರ ವಂಚಿಸಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ರೂ. 1000 ಗ್ಯಾರಂಟಿ ಭರವಸೆಯನ್ನೂ ಈವರೆಗೆ ಈಡೇರಿಸಿಲ್ಲ. ಕಳೆದ 9 ವರ್ಷಗಳಲ್ಲಿ ರಾಜ್ಯ ಸರ್ಕಾರ ಹೆಚ್ಚಿಸಿರುವುದು ಕೇವಲ ರೂ. 1,500 ಮಾತ್ರ” ಎಂದು ಸಂಘ ಹೇಳಿದೆ.
“ಕೇರಳ, ಮಾಹಾರಾಷ್ಟ್ರ, ಪಶ‍್ಚಿಮ ಬಂಗಾಳ ಸೇರಿದಂತೆ ಅಲ‍್ಲಿನ ರಾಜ್ಯ ಸರ್ಕಾರಗಳು ಆಶಾ ಕಾರ್ಯಕರ್ತೆಯರಿಗೆ ಸುಮಾರು ರೂ. 1200 ನಿಗದಿತ ಗೌರವಧನ ನೀಡುತ್ತಿವೆ. ದೇಶದಲ‍್ಲೇ ಅತಿ ಹೆಚ‍್ಚು ಜಿಎಸ್‍ಟಿ ಕಟ‍್ಟುತ್ತಿರುವ ಎರಡನೇ ರಾಜ್ಯವಾದ ಕಾರ್ನಾಟಕದಲ‍್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ‍್ಚಿಸಲು ಸಾಧ್ಯವಿಲ್ಲವೇ” ಎಂದು ಪ್ರಶ್ನಿಸಿದೆ.
“ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಗಳು ಪರಿಹಾರ ನೀಡದೆ ಒಬ್ಬರ ಮೇಲೊಬ್ಬರು ಜವಾಬ್ದಾರಿ ವರ್ಗಾಯಿಸುತ್ತಿವೆ. ಆಶಾಗಳ ಬಗ್ಗೆ ಸಹಾನುಭೂತಿ ತೋರುವ ಬಿಜೆಪಿ ನಾಯಕರು, ಒಂದೂವರೆ ವರ್ಷದ ಹಿಂದೆ ಕೇಂದ್ರ ಸರ್ಕಾರ ಘೋಷಿಸಿದ್ದ ರೂ. 1,500 ಪ್ರೋತ್ಸಾಹ ಧನ ಹೆಚ್ಚಳವನ್ನು ಇನ್ನೂ ಜಾರಿಗೊಳಿಸದಿರುವ ಬಗ್ಗೆ ಚಕಾರವೆತ್ತುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಆಶಾಗಳಿಗೆ ಒಂದು ರೂಪಾಯಿ ಪ್ರೋತ್ಸಾಹಧನವನ್ನೂ ಹೆಚ್ಚಿಸಿಲ್ಲ” ಎಂದು ಆಶಾ ಕಾರ್ಯಕರ್ತೆಯರ ಸಂಘ ತಿಳಿಸಿದೆ.
“ಸರ್ಕಾರದ ಖರ್ಚು-ವೆಚ್ಚಗಳ ವಾಸ್ತವ ಹಣದ ಕೊರತೆಯ ನೆಪ ಹೇಳುವ ರಾಜ್ಯ ಸರ್ಕಾರ, ದುಡಿಯುವ ಜನರಿಗೆ ನ್ಯಾಯುತ ಗೌರವಧನ ನೀಡಲು ಮಾತ್ರ ಹಿಂದೇಟು ಹಾಕುತ್ತಿದೆ. ಕಳೆದ 3 ವರ್ಷಗಳಲ್ಲಿ ಬೆರಳೆಣಿಕೆಯ ಕಾರ್ಪೊರೇಟ್ ಕಂಪನಿಗಳಿಗೆ ಪ್ರೋತ್ಸಾಹದ ಹೆಸರಲ್ಲಿ ಬೊಕ್ಕಸದಿಂದ ರೂ. 10,000 ಕೋಟಿ ನೀಡಲಾಗಿದೆ. ಇದರಲ್ಲಿ ಕೇವಲ ಶೇ. 5 ರಷ್ಟು ಕಡಿತಗೊಳಿಸಿದರೆ, ರಾಜ್ಯದ ಎಲ್ಲಾ 41,000 ಆಶಾ ಕಾರ್ಯಕರ್ತೆಯರ ಘನತೆಯ ಬದುಕಿಗೆ ಬೇಕಾದ ₹492 ಕೋಟಿ ಸುಲಭವಾಗಿ ಸಿಗುತ್ತದೆ” ಎಂದು ಸಂಘ ಹೇಳಿದೆ.
“ಕಳೆದ 3 ವರ್ಷಗಳಲ್ಲಿ ಜಾಹೀರಾತಿಗಾಗಿ ₹500 ಕೋಟಿ ಖರ್ಚು ಮಾಡಲಾಗಿದೆ. ಅಗತ್ಯವಿಲ್ಲದಿದ್ದರೂ ಎಲ್ಲಾ ಪಕ್ಷಗಳ ಪ್ರತಿ ಸಂಸದರಿಗೆ ₹30 ಲಕ್ಷ ಬೆಲೆಬಾಳುವ ಕಾರುಗಳನ್ನು ನೀಡಲಾಗಿದೆ. ಸುರಂಗ ಮಾರ್ಗ ಯೋಜನೆಗೆ ಸಾವಿರಾರು ಕೋಟಿ ವ್ಯಯಿಸಲು ಹೊರಟಿರುವ ಸರ್ಕಾರ, ಇತ್ತೀಚಿನ ಕ್ಯಾಬಿನೆಟ್ ಸಭೆಯಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ₹20,000 ಕೋಟಿ ನಿಗದಿಪಡಿಸಿದೆ” ಎಂದಿದೆ.
ಇದನ್ನೂ ಓದಿ: ಆಶಾ ಕಾರ್ಯಕರ್ತೆಯರಿಗೆ ₹264.14 ಕೋಟಿ ಬಾಕಿ ಪ್ರೋತ್ಸಾಹ ಧನ ಬಿಡುಗಡೆ: ಬಗೆಹರಿಯದ ʼಆಶಾ ಸಾಫ್ಟ್ʼ ತಾಂತ್ರಿಕ ದೋಷ
ಸ್ಕೀಮ್ ನೌಕರು ಕಾರ್ಮಿಕರೇ ಹೊರತು ಪ್ರತಿಸ್ಪರ್ಧಿಗಳಲ್ಲ
“ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ನೌಕರರು, ಅತಿಥಿ ಶಿಕ್ಷಕರು, ಆಶಾ ಕಾರ್ಯಕರ್ತೆಯರು ರಾಜ್ಯದ ಸಾರ್ವಜನಿಕ ಆರೋಗ್ಯ, ಪೌಷ್ಟಿಕತೆ ಮತ್ತು ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಅತ್ಯಂತ ಕಡಿಮೆ ಗೌರವಧನಕ್ಕೆ ಸೇವೆ ಸಲ್ಲಿಸುತ್ತಿರುವ ನ್ಯಾಯಯುತ ಕಾರ್ಮಿಕರು. ಒಂದು ವಿಭಾಗದ ನೌಕರ ಸಂಕಷ್ಟವನ್ನು ಮುಂದಿಟ್ಟುಕೊಂಡು ಇನ್ನೊಂದು ವಿಭಾಗದ ಕಾರ್ಮಿಕರ ಹಕ್ಕನ್ನು ನಿರಾಕರಿಸುವುದು ಸಂವಿಧಾನಬಾಹಿರ. ಇತರ ಸ್ಕೀಮ್ ನೌಕರರೂ ಸಂಕಷ್ಟದಲ್ಲಿದ್ದು ನ್ಯಾಯಯುತ ವೇತನ ಕೇಳಿದರೆ, ಸರ್ಕಾರ ಅವರಿಗೂ ನೀಡಲೇಬೇಕೇ ಹೊರತು ಒಬ್ಬರ ಬದುಕಿನ ಹಕ್ಕನ್ನು ಮತ್ತೊಬ್ಬರ ವಿರುದ್ಧ ಎತ್ತಿಕಟ್ಟುವುದು ಸಲ್ಲದು” ಎಂದು ಟೀಕಿಸಿದೆ.
“ಕೊರೊನಾ ಸಂದರ್ಭದಲ್ಲಿ ಫ್ರಂಟ್‌ಲೈನ್ ವಾರಿಯರ್ಸ್‌ಗಳಾಗಿ ದುಡಿದ ಆಶಾ ಕಾರ್ಯಕರ್ತೆಯರ ಈ ನ್ಯಾಯಯುತ ಹೋರಾಟಕ್ಕೆ ನಾಡಿನ ಸಮಸ್ತ ನಾಗರಿಕರು, ಸಾಹಿತಿಗಳು, ಬುದ್ಧಿಜೀವಿಗಳು, ರೈತರು, ವಿದ್ಯಾರ್ಥಿಗಳು ಮತ್ತು ವಿವಿಧ ಕಾರ್ಮಿಕ ಸಂಘಟನೆಗಳು ಹೋರಾಟದ ಸ್ಥಳಕ್ಕೆ ಆಗಮಿಸಿ ನೈತಿಕ ಬೆಂಬಲ ನೀಡುವುದರ ಜೊತೆಗೆ, ಹೋರಾಟಗಾರಿಗೆ ಊಟ, ನೀರು ಸೇರಿದಂತೆ ಅಗತ್ಯ ವಸ್ತುಗಳ ಹಾಗೂ ಆರ್ಥಿಕ ನೆರವನ್ನು ಸ್ವಯಂಪ್ರೇರಿತವಾಗಿ ಒದಗಿಸುತ್ತಿದ್ದಾರೆ” ಎಂದೂ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
“ಆಶಾ ಕಾರ್ಯಕರ್ತೆಯರ ಈ ಹೋರಾಟವು ಸಂಪೂರ್ಣವಾಗಿ ಸ್ವತಂತ್ರ ಮತ್ತು ನ್ಯಾಯಯುತ ಕಾರ್ಮಿಕ ಹೋರಾಟವಾಗಿದ್ದು, ಯಾವುದೇ ರಾಜಕೀಯ ಪಕ್ಷಗಳಿಂದ ಯಾವುದೇ ರೀತಿಯ ವಸ್ತುರೂಪದ ಅಥವಾ ಆರ್ಥಿಕ ನೆರವನ್ನು (Material/Financial support) ಸಂಘವು ಸ್ಪಷ್ಟವಾಗಿ ನಿರಾಕರಿಸಿದೆ. ರಾಜಕೀಯ ಪಕ್ಷಗಳು ಹೋರಾಟಕ್ಕೆ ನೆರವು ನೀಡುವ ಬದಲು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ತಮ್ಮ ರಾಜಕೀಯ ಒತ್ತಡ ಹೇರಿ ಆಶಾ ಕಾರ್ಯಕರ್ತೆಯರ ದೀರ್ಘಕಾಲೀನ ಬೇಡಿಕೆಗಳನ್ನು ತಕ್ಷಣವೇ ಬಗೆಹರಿಸುವಂತೆ ಮಾಡಬೇಕು” ಎಂದು ಸಂಘವು ಒತ್ತಾಯಿಸಿದೆ.
ಹಾಗೆಯೇ, “ನ್ಯಾಯಯುತ ಬೇಡಿಕೆಗಳು ಈಡೇರುವರೆಗೆ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಹೋರಾಟವನ್ನು ಮುಂದುವರೆಸಲಾಗುವುದು” ಎಂದು ಸಂಘವು ಸ್ಪಷ್ಟಪಡಿಸಿದೆ.



