ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಸಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ ಕೆ ತಾಂಡಾದಲ್ಲಿ ತೀವ್ರ ನೀರಿನ ಅಭಾವ ಉಂಟಾಗಿದೆ. ಕೆರೆಯಲ್ಲಿದ್ದ ನೀರು ಸಂಪೂರ್ಣ ಬತ್ತಿಹೋಗಿರುವ ಪರಿಣಾಮ ನೂರಾರು ಜಾನುವಾರುಗಳು ಹಾಗೂ ಕುರಿ-ಮೇಕೆಗಳಿಗೂ ಕುಡಿಯುವ ನೀರಿಲ್ಲದಂತಾಗಿದ್ದು, ಪ್ರಾಣಿ-ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿವೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ರೈತ ಸಂಘದ ಮುಖಂಡರು, “ಮೂಕ ಪ್ರಾಣಿಗಳ ಜೀವ ಉಳಿಸಲು ಗ್ರಾಮಸ್ಥರು ತಮ್ಮ ಸ್ವಂತ ವೆಚ್ಚದಲ್ಲಿ ಬೋರ್ವೆಲ್ ಕೊರೆಸಿದರೂ ನೀರು ದೊರೆತಿಲ್ಲ. ಇದರಿಂದಾಗಿ ರೈತರಿಗೂ ಆರ್ಥಿಕ ನಷ್ಟ ಉಂಟಾಗಿದ್ದು, ಆತಂಕ ಎದುರಾಗಿದೆ” ಎಂದು ಕರ್ನಾಟಕ ರಾಜ್ಯ ರೈತ ಸಂಘ ಸಂಕಷ್ಟ ತೋಡಿಕೊಂಡಿದೆ.
“ಜಾನುವಾರುಗಳು ರೈತರ ಜೀವನಾಧಾರವಾಗಿರುವುದರಿಂದ ಅವುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಮಸಲವಾಡ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ಪಂಚಾಯತ್ ರಾಜ್ ನಿಧಿ ಅಥವಾ ವಿಪತ್ತು ನಿರ್ವಹಣಾ ಯೋಜನೆಯಡಿ ತುರ್ತಾಗಿ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಬೇಕು” ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.
ಈ ಸುದ್ದಿ ಓದಿದ್ದೀರಾ? “ಮಳೆಯಿದೆ… ಆದರೆ ಅದು ಕೊಡಗಿನ ಮಳೆಯಲ್ಲ!”
ರೈತ ಸಂಘದ ಮನವಿಗೆ ಸ್ಪಂದಿಸಿ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಅಗತ್ಯ ಕ್ರಮ ಕೈಗೊಂಡು ಜಾನುವಾರುಗಳ ಜೀವ ಉಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ, ತಾಲೂಕು ಸಂಘಟನಾ ಕಾರ್ಯದರ್ಶಿ ಗಿರೀಶ್ ಡಿ, ಗ್ರಾಮ ಘಟಕದ ಅಧ್ಯಕ್ಷ ಚಂದ್ರಶೇಖರ್, ಖಜಾಂಜಿ ಚಂದರ್ ನಾಯ್ಕ, ದರ್ಗಾ ನಾಯ್ಕ, ಕುಬ್ಯ ನಾಯ್ಕ, ಜಯ ಬಾಯಿ, ಕುಬೇರ ನಾಯ್ಕ, ಡೆನ್ಯ ನಾಯ್ಕ, ಶೇಖ್ ನಾಯ್ಕ, ಜ್ಯೋತಿ ನಾಯ್ಕ, ಗ್ರಾಮದ ಹಿರಿಯರು ಹಾಗೂ ರೈತರು ಮತ್ತು ಕುರಿಗಾಹಿಗಳು ಉಪಸ್ಥಿತರಿದ್ದರು.




