ವಿಜಯಪುರ | ಮಹಿಳೆಯರ ದುಡಿಮೆಯನ್ನು ದುಡಿಮೆಯಾಗಿ ಪರಿಗಣಿಸುತ್ತಿಲ್ಲ: ಪ್ರೊ. ಎನ್. ಮಣಿಮೇಕ

ನಮ್ಮ ಸಮಾಜದಲ್ಲಿ ಪಿತೃ ಪ್ರಧಾನ ವ್ಯವಸ್ಥೆ ಎಲ್ಲಾ ರಂಗಗಳಲ್ಲಿಯೂ ಇದ್ದು, ಮಹಿಳೆಯರ ದುಡಿಮೆಯನ್ನು ದುಡಿಮೆಯಾಗಿ ಪರಿಗಣಿಸುತ್ತಿಲ್ಲ. ಕೇವಲ ಕೆಲವೇ ಕೆಲವು ಪಟ್ಟಭದ್ರ ಶಕ್ತಿಗಳು ನೀತಿ ನಿರ್ಧಾರಗಳನ್ನು ಕೈಕೊಳ್ಳುವ ವ್ಯವಸ್ಥೆ ಇದ್ದು, ಇದು ಪ್ರಜಾಪ್ರಭುತ್ವದ ಅಣಕ ಎಂದು ನವದೆಹಲಿಯ ಮಹಿಳಾ ಅಧ್ಯಯನ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಎನ್. ಮಣಿಮೇಕ ವಿಷಾದ ವ್ಯಕ್ತಪಡಿಸಿದರು.

ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರ ಸಮಾಜ ಶಾಸ್ತ್ರ ವಿಭಾಗ, ಅರ್ಥಶಾಸ್ತ್ರ ಮತ್ತು ಸಾಮಾಜ ಕಾರ್ಯ ವಿಭಾಗಗಳ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ʼಉದಾರಿಕರಣದ ಸಂದರ್ಭದಲ್ಲಿ ಮಹಿಳಾ ಅಭಿವೃದ್ಧಿ.ʼ ಎಂಬ ವಿಷಯದ ಕುರಿತು ವಿಚಾರ ಸಂಕೀರ್ಣದಲ್ಲಿ, ದಿಕ್ಸೂಚಿ ಭಾಷಣ ಮಾಡಿದ ಅವರು, ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಿರಾಕರಿಸಲಾಗುತ್ತಿದ್ದು, ಲಿಂಗ ಅಸಮಾನತೆಯ ದೊಡ್ಡ ಕಂದರ ಹಾಗೇ ಒಡೆದುಕೊಂಡು ಬರುತ್ತಿದೆ ಎಂದರು.

ಈ ಲಿಂಗ ಅಸಮಾನತೆ ಮತ್ತು ಮಹಿಳೆಯರ ವಿಷಯಗಳನ್ನು ಮುನ್ನಳಿಗೆ ತಂದ ಶ್ರೇಯಸ್ಸು ಮರಿಯಾ ಮೈಸ್ ಅವರಿಗೆ ಸಲ್ಲುತ್ತದೆ. ಜಾಗತೀಕರಣದ ಇತ್ತೀಚಿನ ಸಂದರ್ಭದಲ್ಲಿ ಆರ್ಥಿಕ ಬದಲಾವಣೆಯ ಮಹಿಳೆಯರ ಜೀವನದಲ್ಲಿ ಹೆಚ್ಚು ಹೆಚ್ಚು ಪ್ರಭಾವ ಬೀರುತ್ತದೆ. ಸಮಾಜದಲ್ಲಿ ಬಹುತೇಕ ಮಹಿಳೆಯರು ಮನೆ ಕೆಲಸ, ವ್ಯಾಪಾರ ಮತ್ತು ಕೃಷಿಗಳಂತಹ ಅಸಂಘಟಿತ ವಲಯಗಳಲ್ಲಿ ಕೆಲಸ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರವರ ಈ ದುಡಿಮೆಗೆ ಸಾಮಾಜಿಕ ಮಾನ್ಯತೆ ಇಲ್ಲ ಮಹಿಳೆಯರ ಕೆಲಸಗಳನ್ನು ದುಡಿಮೆಯೆಂದು ಇವತ್ತಿಗೂ ಪರಿಗಣಿಸದೆ ಇರುವುದು ಅತ್ಯಂತ ಕೇದಕರ ಸಂಗತಿ ಎಂದು ಅವರು ಹೇಳಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮಹಿಳೆಯರು ಇತ್ತೀಚಿನ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸುವುದರ ಮೂಲಕ ಉದಾರಿಕರಣದತ್ತ ಮುಖ ಮಾಡುವಂತಾಗಿದೆ. ಶಿಕ್ಷಣ, ಉದ್ಯೋಗಗಳಿಗೆ ಸಂಬಂಧಪಟ್ಟ ಎದುರಿಸುವುದು ಸಾಮಾನ್ಯ. ಆದರೆ, ಅಂತಹ ಕಷ್ಟಗಳತ್ತ ಗಮನಿಸದೇ ಬದಲಾವಣೆಯ ದಾರಿಯತ್ತ ಸಾಗಬೇಕಿದೆ ಎಂದರು.

ಉನ್ನತ ಶಿಕ್ಷಣ ಕ್ಷೇತ್ರದ ಸಂಸ್ಥೆಗಳಲ್ಲಿ ಮಹಿಳೆಯರು ಕೇವಲ ಶೇ.30ರಷ್ಟು ಸಂಖ್ಯೆಯಲ್ಲಿದ್ದಾರೆ. ಉಳಿದ ಶೇ.70ರಷ್ಟು ಮಹಿಳೆಯರು, ಅರೆಕಾಲಿಕ ಇಲ್ಲವೇ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಮಹಿಳೆಯರ ಸ್ಥಿತಿಗತಿ ಅರ್ಥವಾಗುತ್ತದೆ ಎಂದರು.

ಮಹಿಳಾ ವಿವಿಯ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಮಹಿಳಾ ಅಧ್ಯಯನವನ್ನು ಒಂದು ವಿಷಯ ಕಡ್ಡಾಯವಾಗಿ ಓದುವಂತೆ ಕ್ರಮ ಕೈಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ ತುಳಸಿಮಾಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲಿನ ಎಲ್ಲಾ ಗಣ್ಯರು ಮರಿಯಾ ಮೈಸ್ ಅವರ ʼಉದಾರೀಕರಣದ ಸಂದರ್ಭದಲ್ಲಿ ಮಹಿಳಾ ಅಭಿವೃದ್ಧಿʼ ಪುಸ್ತಕ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಧಾರವಾಡದ ಅದಿತ್ಯ ಫೌಂಡೇಶನ್ ಅಧ್ಯಕ್ಷೆ ಶಾರದಾ ಪಾಟೀಲ, ಬೆಂಗಳೂರಿನ ಚಲನಚಿತ್ರ ನಿರ್ಮಾಪಕಿ ಡಾ. ಸಂಜೋತಿ ವಿ.ಕೆ, ವಿವಿಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಆರ್.ವಿ. ಗಂಗಶೆಟ್ಟಿ, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ಶಾಂತಾದೇವಿ ವಿ.ಟಿ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ ಪಿ ಬಳಿಗಾರ, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ರಮೇಶ ಸೋನಾ ಕಾಂಬಳೆ, ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷೆ ಸುಮನ್ ಕೋಲಾರ, ವಿವಿಧ ವಿಭಾಗದ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿನಿಯರು, ಬೋಧಕ ಹಾಗೂ ಬೋಧಕೆತರ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆ ಹಾಗೂ ಪ್ರಾರ್ಥನಾ ಗೀತೆ ಹಾಡಿದರು. ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಲಕ್ಷ್ಮೀದೇವಿ.ವೈ ಪ್ರಾಸ್ತಾವಿಕ  ನುಡಿಗಳನ್ನಾಡಿದರು. ಮಹಿಳಾ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಭಾಗ್ಯಶ್ರೀ ದೊಡ್ಡಮನಿ ಅತಿಥಿಗಳನ್ನು ಪರಿಚಯಿಸಿದರು. ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುರೇಶ ಕೆ.ಪಿ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಅತಿಥಿ ಪ್ರಾಧ್ಯಾಪಕಿ ಡಾ. ಕೀರ್ತಿ ಹೊನವಾಡ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಗಿರಿಜಾ ನಾವಳ್ಳಿಮಠ ನಿರೂಪಿಸಿದರು.

LEAVE A REPLY

Please enter your comment!
Please enter your name here