ರಾಜ್ಯದಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ನವೆಂಬರ್ 26ರಂದು ರಾಜ್ಯಾದ್ಯಂತ ಕರಾಳ ಸಂವಿಧಾನ ದಿನಾಚರಣೆ ಆಚರಿಸಲು ಗ್ರಾಮ ಸ್ವರಾಜ್ಯ ಕರ್ನಾಟಕ ನಿರ್ಧರಿಸಿದೆ ಎಂದು ರಾಜ್ಯ ಉಪಾಧ್ಯಕ್ಷ ಪ್ರದೀಪ್ ಪಾಟೀಲ್ ನಾಗರದಿನ್ನಿ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರ ಐದು ವರ್ಷದ ಅವಧಿ 2025ರ ಡಿಸೆಂಬರ್‌ನಲ್ಲಿ ಮುಕ್ತಾಯಗೊಂಡಿದ್ದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು 2021ರಿಂದ ಬಾಕಿ ಉಳಿದಿವೆ. ಚುನಾವಣೆಗಳನ್ನು ಮುಂದೂಡುವ ಮೂಲಕ ಗ್ರಾಮೀಣ ಜನರ ಪ್ರಜಾಪ್ರಭುತ್ವದ ಹಕ್ಕಿಗೆ ಅನ್ಯಾಯ ಮಾಡಲಾಗುತ್ತಿದೆ. ಸಂವಿಧಾನದ 73ನೇ ತಿದ್ದುಪಡಿಯ ಆಶಯದಂತೆ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ವರ್ಗವಾರು ಮೀಸಲಾತಿಯನ್ನು ಕೂಡಲೇ ಅಂತಿಮಗೊಳಿಸಿ ಚುನಾವಣೆ ನಡೆಸಬೇಕು. ಕಬ್ಬಿಗೆ ಎಂಎಸ್‌ಪಿ ₹60 ನಿಗದಿಪಡಿಸಬೇಕು ಹಾಗೂ ಆಶಾ ಕಾರ್ಯಕರ್ತರ ಗೌರವಧನವನ್ನು ₹15 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ನವೆಂಬರ್ 26ರಂದು ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಂವಿಧಾನದ ಪ್ರಸ್ತಾವನೆ ಓದಿ ಮನವಿ ಸಲ್ಲಿಸಲಾಗುವುದು. ಗ್ರಾಮಮಟ್ಟದಲ್ಲಿ ಜಾಗೃತಿ ಸಭೆಗಳನ್ನು ನಡೆಸಲಾಗುವುದು. ಮಾಜಿ ಪಂಚಾಯಿತಿ ಸದಸ್ಯರು, ಮತದಾರರು, ರೈತರು ಹಾಗೂ ಆಶಾ ಕಾರ್ಯಕರ್ತರು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇದು ಸಂವಿಧಾನದ ವಿರುದ್ಧದ ಹೋರಾಟವಲ್ಲ; ಸಂವಿಧಾನದ ಆಶಯ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣಕ್ಕಾಗಿ ನಡೆಯುವ ಹೋರಾಟ ಎಂದು ಪ್ರದೀಪ್ ಪಾಟೀಲ್ ತಿಳಿಸಿದ್ದಾರೆ.



