ಶಹಾಬಾದ್ ತಾಲೂಕಿನ ಎಸ್.ಎಸ್. ಮರಗೋಳ ಕಾಲೇಜಿನಿಂದ ತೋನಸನಹಳ್ಳಿ (ಎಸ್) ಗ್ರಾಮದವರೆಗಿನ ರಾಜ್ಯ ಹೆದ್ದಾರಿ ಸಂಖ್ಯೆ 125ರ ರಸ್ತೆ ದುರಸ್ತಿ ಹಾಗೂ ನೂತನ ರಸ್ತೆ ನಿರ್ಮಾಣಕ್ಕೆ ಮಂಜೂರಾತಿ ನೀಡಿ ತಕ್ಷಣ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಶಹಾಬಾದ್ ಘಟಕದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಳೆದ 15ರಿಂದ 20 ವರ್ಷಗಳಿಂದ ರಸ್ತೆ ಅಭಿವೃದ್ಧಿಪಡಿಸುವುದಾಗಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಭರವಸೆ ನೀಡುತ್ತ ಬಂದಿದ್ದಾರೆ. ಆದರೆ, ಈವರೆಗೆ ಯಾವುದೇ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ರಸ್ತೆ ಹದಗೆಟ್ಟಿರುವುದರಿಂದ ಗ್ರಾಮಸ್ಥರು, ರೈತರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದು ಕರವೇ ಕಾರ್ಯಕರ್ತರು ಆರೋಪಿಸಿದರು.
ರಸ್ತೆ ನಿರ್ಮಾಣಕ್ಕಾಗಿ ಹಲವು ಸಂಘಟನೆಗಳು, ರೈತರು ಹಾಗೂ ಸಾರ್ವಜನಿಕರು ಅನೇಕ ಬಾರಿ ಧರಣಿ, ಸತ್ಯಾಗ್ರಹ ಮತ್ತು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, 48ರಿಂದ 72 ಗಂಟೆಗಳ ಕಾಲ ಹಗಲು-ರಾತ್ರಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಹೋರಾಟ ನಡೆಸಿದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮನವಿ ಸಲ್ಲಿಸಿದ ಮೂರರಿಂದ ನಾಲ್ಕು ದಿನಗಳೊಳಗೆ ರಸ್ತೆ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ಬೀದರ್-ಶ್ರೀರಂಗಪಟ್ಟಣ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಫಿರೋಜಾಬಾದ್ (ಜೇವರ್ಗಿ) ಕ್ರಾಸ್‌ನಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಅಹೋರಾತ್ರಿ ರಸ್ತೆ ತಡೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆ ಜನ್ಮದಿನದ ನಿಮಿತ್ತ ಬಡ ಮಹಿಳೆಯರಿಗೆ 1,000 ಸೀರೆ ವಿತರಣೆ
ಈ ಸಂದರ್ಭದಲ್ಲಿ ಕರವೇ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ್ ಬಾಲಾಜಿ, ಪ್ರಧಾನ ಕಾರ್ಯದರ್ಶಿ ಗೋಪಾಲ ನಾಟೀಕಾರ, ಶಹಾಬಾದ್ ತಾಲೂಕು ಅಧ್ಯಕ್ಷ ವಿಶ್ವರಾಜ ಪೀರೋಜಾಬಾದ್, ಗ್ರಾಮದ ಮುಖಂಡರಾದ ಪ್ರಭು ರಾಮಣ್ಣ ಮಂಗಳೂರು, ಶರಣು ಅಣವೀರಪ್ಪ ಭಂಡಾರಿ, ಪ್ರಶಾಂತ ಹುಗ್ಗಿ, ಕಾಶೀಮ ರಹೀಮ ಸಾಬ್, ಬೆಳ್ಳಪ್ಪ ಜೂಪ್ಲಿ, ಖಲೀಲ್ ಖಾಜಾಸಾಬ್ ಸೇರಿದಂತೆ ಗ್ರಾಮಸ್ಥರು, ರೈತರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.




