ಬಕ್ರೀದ್‌ಗೂ ಮುನ್ನ ಜಾನುವಾರು ಸಾಗಾಣೆ ಮತ್ತು ವಧೆ ತಡೆಗೆ ವಿಜಯಪುರ ಜಿಲ್ಲಾಡಳಿತ ಕಟ್ಟೆಚ್ಚರಿಕೆ ಹೊರಡಿಸಿದೆ. ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಹಾಗೂ ಜಿಲ್ಲಾಧಿಕಾರದ ಸಹಯೋಗದಲ್ಲಿ ತೆಗೆದುಕೊಂಡ ಈ ನಿರ್ಣಯ ಅಲ್ಪಸಂಖ್ಯಾತರ ಆಹಾರದ ಹಕ್ಕನ್ನು ಕಸಿಯುವ ಹುನ್ನಾರವೆಂದು ಮೇಲ್ನೋಟಕ್ಕೇ ಕಾಣುತ್ತಿದೆ. ಆಹಾರದ ಮೇಲೆ ನಿರ್ಬಂಧ ಹೇರುವ ಈ ಕಟ್ಟೆಚ್ಚರ ಪಾಲನೆಯಾದರೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಕೋಮುವಾದಿ ಬಿಜೆಪಿ ಸರ್ಕಾರದ ನಿಲುವಿಗೂ, ಜಾತ್ಯಾತೀತವೆಂದು ಕರೆದುಕೊಂಡು ಅಲ್ಪ ಸಂಖ್ಯಾತರ ಅಸ್ಮಿತೆಯ ಕುರಿತು ಕಾಳಜಿ ವ್ಯಕ್ತಪಡಿಸುವ ರಾಜ್ಯ ಕಾಂಗ್ರೆಸ್‌ಗೂ ಯಾವ ವ್ಯತ್ಯಾಸವೂ ಇರದು.
ಇಸ್ಲಾಮ್ ಧರ್ಮದ ಪ್ರತಿ ಹಬ್ಬದಲ್ಲೂ ಬಹುಸಂಖ್ಯಾತವಾದಿಗಳ ಚರ್ಚೆಯ ಗುರಿ ಅಲ್ಪಸಂಖ್ಯಾತರ ಆಹಾರ ಪದ್ದತಿಯೇ ಆಗಿರುತ್ತದೆ. ರಾಜ್ಯದಲ್ಲೂ ಆಹಾರ ಸ್ವಾತಂತ್ರವನ್ನು ಎಷ್ಟರ ಮಟ್ಟಿಗೆ ಹತ್ತಿಕ್ಕಲಾಗಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ವಿಜಯಪುರದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿ ಒಂದು ಸಮುದಾಯದ ಆಹಾರ ಕ್ರಮದ ಮೇಲೆ ಕಟ್ಟಳೆ ವಿಧಿಸಿ, ಜಾನುವಾರು ಸಾಗಾಣೆಯಾಗದಂತೆ ನಿಗಾ ವಹಿಸಲು ಪೊಲೀಸ್ ತಂಡಗಳನ್ನು ರಚಿಸಿ ಚೆಕ್ ಪೋಸ್ಟ್‌ಗಳಲ್ಲಿ ಕಾವಲು ಬಿಡುವ ತೀರ್ಮಾನ ನ್ಯಾಯವೆಂದು ಹೇಳಲಾಗದು.
“ದಾಖಲೆಗಳಿಲ್ಲದೆ ಜಾನುವಾರುಗಳ ಸಾಗಣೆ ಮಾಡುವುದು ಕಾನೂನಿನ ವಿರುದ್ಧ. ಹಾಗಾಗಿ ಅಕ್ರಮವಾಗಿ ಜಾನುವಾರುಗಳ ಸಾಗಣೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು . ಜಾನುವಾರು ಖರೀದಿ ಹಾಗೂ ಮಾರಾಟ ಮಾಡುವ ವೇಳೆ ಜಾನುವಾರುಗಳಿಗೆ ಕಿವಿಯೋಲೆ ಇರುವುದು ಕಡ್ಡಾಯ. ಸಾಗಾಣಿಕೆ ಸಂಬಂಧಪಟ್ಟಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಧೃಡೀಕರಣ ಪತ್ರ ಕಡ್ಡಾಯ. ಮಾಹಿತಿ ಕಲೆ ಹಾಕುವ ಪ್ರಕ್ರಿಯೆ ಜಾರಿಯಲ್ಲಿದ್ದು, ಮೇ 28ರಂದು ಜಾನುವಾರುಗಳ ಅಕ್ರಮ ವಧೆ ಪಾಲನಾ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ರಚಿಸಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಕೈಕೊಳ್ಳಬೇಕು. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಯುಕ್ತರು ತಂಡಗಳನ್ನು ಮೇಲುಸ್ತುವಾರಿ ವಹಿಸಿಕೊಳ್ಳಬೇಕು” ಎಂದು ಸಭೆಗೆ ಸೂಚಿಸಿದ್ದಾರೆ.
ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಮಾತನಾಡಿ, “ಕರ್ನಾಟಕ ಜಾನುವಾರು ಹತ್ಯೆ ಪ್ರಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ವಯ ಯಾವುದೇ ರೀತಿಯ ಜಾನುವಾರುಗಳು ಎಲ್ಲ ವಯಸ್ಸಿನ ಆಕಳು, ಆಕಳು ಕರು, ಹೋರಿ, ಎತ್ತು ಅಲ್ಲದೆ 13 ವರ್ಷದೊಳಗಿನ ಎಮ್ಮೆ ಕೋಣಗಳನ್ನು ಹತ್ಯೆ ಮಾಡುವಂತಿಲ್ಲ. ಉಚ್ಚ ನ್ಯಾಯಾಲಯದ ಆದೇಶದನ್ವಯ ಒಂಟಿಗಳನ್ನು ಕೂಡ ಬಕ್ರೀದ ಸಂದರ್ಭದಲ್ಲಿ ಹತ್ಯೆ ಮಾಡುವಂತಿಲ್ಲ. ಬಕ್ರೀದ್ ಹಿನ್ನೆಲೆಯಲ್ಲಿ ಜಾನುವಾರುಗಳ ಅಕ್ರಮ ಸಾಗಣೆ ಹಾಗೂ ವಧೆಗಳ ಬಗ್ಗೆ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಇಲ್ಲವೇ ಹತ್ತಿರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಬೇಕು” ಎಂದಿದ್ದಾರೆ.
“ತಮಾಷೆಯ ವಿಷಯವೆಂದರೆ ಗೋ ಮಾಂಸ ಸೇವಿಸುವ ಕುರಿತು ಇಷ್ಟೆಲ್ಲಾ ನಿರ್ಬಂಧ ಹೇರುವ ದೇಶ, ವಿಶ್ವದಲ್ಲೇ ಗೋ ಮಾಂಸ ರಫ್ತಿನಲ್ಲಿ ಮಂಚೂಣಿಯಲ್ಲಿದೆ. ದೇಶಕ್ಕೆ ಗೋ ಮಾಂಸ ರಫ್ತಿನಿಂದ ಬರುವ ವಾರ್ಷಿಕ ಆದಾಯ 31.500 ರಿಂದ 35,000 ಕೋಟಿ. ಆದಾಯದ ಭಾಗವಾಗಿ ಗೋ ಹತ್ಯೆಗೆ, ಗೋ ಮಾಂಸ ರಫ್ತಿಗೆ ಯಾವ ನಿರ್ಭಂದವೂ ಇಲ್ಲ. ಆದರೆ, ಬಕ್ರೀದ್, ರಂಜಾನ್ ಹಬ್ಬಗಳಲ್ಲಿ ದೇಶದ ಜಾನುವಾರುಗಳ ಬಗ್ಗೆ ನಮ್ಮ ಸರ್ಕಾರಕ್ಕೆ, ಆಡಳಿತ ಇಲಾಖೆಗೆ ಎಲ್ಲಿಲ್ಲದ ಕಾಳಜಿ ಹುಟ್ಟುತ್ತದೆ” ಎಂಬುದು ನೆಟ್ಟಿಗರ ಟೀಕೆ.




