‘ಕೈಯಲ್ಲಿ ಬೆಣ್ಣೆ – ಬಗಲಲ್ಲಿ ದೊಣ್ಣೆ’ – ಇದು ಮಹಿಳೆಯರು ಮತ್ತು ಮಹಿಳಾ ಕಾರ್ಮಿಕರ ವಿಚಾರದಲ್ಲಿ ಪ್ರಸ್ತುತ ರಾಜ್ಯ ಸರ್ಕಾರದ ಹೊಂದಿರುವ ಧೋರಣೆ. ಒಂದು ಕೈಯಲ್ಲಿ ಉಚಿತ ಬಸ್ ಪ್ರಯಾಣದ 'ಶಕ್ತಿ' ಯೋಜನೆ, ಇನ್ನೊಂದು ಕೈಯಲ್ಲಿ ಮಾಸಿಕ ಆರ್ಥಿಕ ನೆರವಿನ 'ಗೃಹಲಕ್ಷ್ಮಿ' ಯೋಜನೆ ಹಿಡಿದು, ತಾವು ಮಹಿಳಾ ಸಬಲೀಕರಣದ ರುವಾರಿಗಳೆಂದು ಬೀಗುತ್ತಿರುವ ರಾಜ್ಯ ಸರ್ಕಾರದ ಅಸಲಿ ಮುಖ ಕಾರ್ಮಿಕ ಕ್ಷೇತ್ರದಲ್ಲಿ ಈಗ ಅನಾವರಣಗೊಂಡಿದೆ. ಸರ್ಕಾರದ ಲಿಂಗ ತಾರತಮ್ಯದ ಧೋರಣೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇತ್ತೀಚೆಗೆ ಸರ್ಕಾರವು ರಾಜ್ಯದ 81 ಉದ್ಯಮಗಳಲ್ಲಿನ ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಿಸಿ, ಸುಮಾರು 60%ರಷ್ಟು ವೇತನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಸರ್ಕಾರದ ಅಧಿಸೂಚನೆಯ ಮೊದಲ ಪುಟವನ್ನು ನೋಡಿದರೆ, ಶ್ರಮಿಕ ವರ್ಗದ ಪರವಾಗಿರುವಂತೆ ಕಾಣುತ್ತದೆ. ಸರ್ಕಾರವೂ ಅದನ್ನೇ ಹೇಳಿಕೊಂಡಿದೆ, ಬರೆದುಕೊಂಡಿದೆ. ಆದರೆ, ಒಳಹೋಗುತ್ತಿದ್ದಂತೆ ವೇತನ ಪರಿಷ್ಕರಣೆಯಿಂದ ಮಹಿಳಾ ಶಕ್ತಿಯನ್ನು ಹೊರಗಿಟ್ಟಿರುವ ಆಘಾತಕಾರಿ ಸತ್ಯ ಬಹಿರಂಗವಾಗುತ್ತದೆ. ಸುಮಾರು 90%ಗೂ ಹೆಚ್ಚು ಮಹಿಳೆಯರೇ ತುಂಬಿರುವ, ಅತಿ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವ ಗಾರ್ಮೆಂಟ್ಸ್ (ಸಿದ್ಧ ಉಡುಪು) ಕ್ಷೇತ್ರ ಸೇರಿದಂತೆ 19 ಪ್ರಮುಖ ವಲಯಗಳನ್ನು ಈ ಅಧಿಸೂಚನೆಯಿಂದ ಹೊರಗಿಡಲಾಗಿದೆ.
ಇಲ್ಲಿ ಕೇವಲ ಆರ್ಥಿಕ ಅನ್ಯಾಯ ಮಾತ್ರವೇ ಇಲ್ಲ. ಬದಲಿಗೆ, ಅತ್ಯಂತ ವ್ಯವಸ್ಥಿತವಾದ ಲಿಂಗ ತಾರತಮ್ಯವೂ ಅಡಕವಾಗಿದೆ. ಪುರುಷರು ಹೆಚ್ಚಾಗಿ ದುಡಿಯುವ ವಲಯಗಳಲ್ಲಿ ಕನಿಷ್ಠ ವೇತನವನ್ನು ಹೆಚ್ಚಿಸಿ, ಮಹಿಳೆಯರೇ ಬಹುಸಂಖ್ಯಾತರಾಗಿರುವ ಗಾರ್ಮೆಂಟ್ಸ್‌ನಂತಹ ವಲಯವನ್ನು ಕೈಬಿಟ್ಟಿರುವುದರ ಹಿಂದೆ ಪಿತೃಪ್ರಧಾನ ಮತ್ತು ಉದ್ಯಮಿಗಳ ಧಾರ್ಷ್ಟ್ಯದ ಮನಸ್ಥಿತಿ ಕೆಲಸ ಮಾಡಿದೆ. ಮಹಿಳೆಯರ ಶ್ರಮವನ್ನು ಸಮಾಜ ಮತ್ತು ಸರ್ಕಾರ ಎರಡೂ ಕೀಳಾಗಿ ಕಾಣುತ್ತಿವೆ ಎನ್ನುವುದಕ್ಕೆ ಇಂದೊಂದು ನಿದರ್ಶನ.
ಕಾಂಗ್ರೆಸ್ ಸರ್ಕಾರವು ತಾನು ಅಧಿಕಾರಕ್ಕೆ ಬಂದ ದಿನದಿಂದಲೂ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರ ಬದುಕನ್ನು ಹಸನು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಮಹಿಳಾ ಸಬಲೀಕರಣಕ್ಕೆ ಗ್ಯಾರಂಟಿ ಯೋಜನೆಗಳು ನೆರವಾಗುತ್ತಿದ್ದರೂ, ಇವು ಕಾಂಗ್ರೆಸ್ ಸರ್ಕಾರ ಇರುವವರೆಗಷ್ಟೇ ಗಟ್ಟಿ. ಹೀಗಿರುವ, ಈ ಯೋಜನೆಗಳು ಮಹಿಳೆಯರ ನಿಜವಾದ ಸಬಲೀಕರಣಕ್ಕೆ ಶಾಶ್ವತ ಅಡಿಗಲ್ಲಾಗಲು ಸಾಧ್ಯವಿಲ್ಲ. ಆದರೆ, ಕನಿಷ್ಠ ವೇತನದ ಹೆಚ್ಚಳವು ಒಬ್ಬ ಶ್ರಮಿಕ ಮಹಿಳೆಗೆ ಗೌರವಯುತ ಬದುಕು, ಆರ್ಥಿಕ ಸ್ವಾತಂತ್ರ್ಯ ಹಾಗೂ ಉದ್ಯೋಗದ ಭದ್ರತೆಯನ್ನು ನೀಡುತ್ತದೆ. ಇದೆಲ್ಲವೂ ಆಕೆಯ ಹಕ್ಕು, ಸರ್ಕಾರದ ಭಿಕ್ಷೆಯಲ್ಲ. ಇಂತಹ ಹಕ್ಕಿನಿಂದಲೇ ಲಕ್ಷಾಂತರ ಮಹಿಳೆಯರನ್ನು ವಂಚಿಸಿರುವ ಸರ್ಕಾರ, ಮಹಿಳೆಯರ ಶ್ರಮವನ್ನು ಅತ್ಯಂತ ಅಗ್ಗದ ಬೆಲೆಗೆ ಉದ್ಯಮಿಗಳು ಕಿತ್ತುಕೊಳ್ಳಲು ಬಿಟ್ಟಿದೆ. ಮಹಿಳಾ ಕಾರ್ಮಿಕರನ್ನು ವಂಚಿಸಿದೆ.
81 ಅನುಸೂಚಿತ ಉದ್ದಿಮೆಗಳಲ್ಲಿ ಗಾರ್ಮೆಂಟ್ ಉದ್ಯಮವೂ ಇದೆ. ದೇಶದಲ್ಲಿಯೇ ಕೃಷಿ ನಂತರ ಹೆಚ್ಚು ಉದ್ಯೋಗಗಳನ್ನು ಒದಗಿಸುವ ಉದ್ಯಮ ಕೂಡ ಗಾರ್ಮೆಂಟ್ಸ್. ಭಾರತಕ್ಕೆ ಅತಿದೊಡ್ಡ ವಿದೇಶಿ ವಿನಿಮಯವನ್ನು ತಂದುಕೊಡುವ ಉದ್ಯಮವೂ ಗಾರ್ಮೆಂಟ್ಸ್ ಉದ್ದಿಮೆಯೇ ಆಗಿದೆ. ಈ ಉದ್ದಿಮೆಯು ತೀವ್ರವಾಗಿ ಬೆಳೆಯುತ್ತಿದೆ. ಸರ್ಕಾರ ಕೂಡ ಈ ಉದ್ದಿಮೆಗಳಿಗಾಗಿ ಟೆಕ್ಸ್ಟ್‌ಟೈಲ್ ಪಾರ್ಕ್, ಎಸ್‌ಇಝಡ್, ಉಚಿತ ಭೂಮಿ, ಸಬ್ಸಿಡಿಯಲ್ಲಿ ವಿದ್ಯುತ್, ನೀರು, ಯಂತ್ರೋಪಕರಣ ಖರೀದಿಯಲ್ಲಿ ವಿನಾಯತಿಗಳಂತಹ ಹಲವಾರು ಸೌಲಭ್ಯಗಳನ್ನೂ ನೀಡುತ್ತಿದೆ. ಈ ಉದ್ದಿಮೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಿದ್ದು, ಮಹಿಳೆಯರ ಶ್ರಮವನ್ನು ಲೂಟಿ ಮಾಡುತ್ತಲೇ, ಕೋಟ್ಯಂತರ ಡಾಲರ್‌ಗಳಲ್ಲಿ ಲಾಭ ಮಾಡಿಕೊಳ್ಳುತ್ತಿವೆ. ಮೆರೆಯುತ್ತಿವೆ.
ಈ ಉದ್ದಿಮೆಯಲ್ಲಿ ದುಡಿಯುವವರಲ್ಲಿ ಸುಮಾರು 90% ಕಾರ್ಮಿಕರು ಮಹಿಳೆಯರು. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ 12ರಿಂದ 15 ಲಕ್ಷ ಮಹಿಳಾ ಕಾರ್ಮಿಕರು ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಹಗಲಿರುಳು ಬೆವರು ಹರಿಸುತ್ತಿದ್ದಾರೆ. ಹೊಲಿಗೆ ಯಂತ್ರಗಳ ಸದ್ದಿನ ಮಧ್ಯೆ ಮಹಿಳಾ ಕಾರ್ಮಿಕರ ಬದುಕಿನ ಕನಸುಗಳು ನುಚ್ಚುನೂರಾಗುತ್ತಿವೆ. ಗಂಟೆಗಟ್ಟಲೆ ನಿಂತು ಅಥವಾ ಕುಳಿತು ಕೆಲಸ ಮಾಡುವುದರಿಂದ ಬೆನ್ನುನೋವು, ಕಣ್ಣಿನ ಸಮಸ್ಯೆ, ಉಸಿರಾಟದ ತೊಂದರೆಗಳಂತಹ ಹತ್ತಾರು ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ.
ಆದರೆ, ಜವಳಿ ಉದ್ಯಮದಲ್ಲಿ ದುಡಿಯುವ ಕಾರ್ಮಿಕರಿಗೆ ಇತರ ಉದ್ದಿಮೆಗಳಲ್ಲಿರುವಂತೆ ಚೌಕಾಸಿ ಹಕ್ಕು, ಸಂಘಟನೆ ಕಟ್ಟಿಕೊಳ್ಳುವ ಹಕ್ಕು, ಪ್ರತಿಭಟಿಸುವ ಹಕ್ಕುಗಳಿಲ್ಲ. ವೇತನಕ್ಕಾಗಿ ಮಾಲೀಕರೊಂದಿಗೆ ಚೌಕಾಸಿ ನಡೆಸಲು ಇಲ್ಲಿನ ಕಾರ್ಮಿಕರಿಗೇ ಅವಕಾಶವೇ ಇಲ್ಲ. ಇಲ್ಲಿನ ಕಾರ್ಮಿಕರು ‘ಕನಿಷ್ಠ ವೇತನ’ದ ಮೇಲೆಯೇ ಅವಲಂಬಿತರಾಗಿದ್ದಾರೆ.
ಗಾರ್ಮೆಂಟ್‌ಗಳಲ್ಲಿ ದುಡಿಯುತ್ತಿರುವ ಹೆಚ್ಚಿನ ಮಹಿಳಾ ಕಾರ್ಮಿಕರು ತಮ್ಮ ಕುಟುಂಬಗಳ ಜವಾಬ್ದಾರಿ ಹೊರುತ್ತಿದ್ದಾರೆ. ತಮ್ಮ ಇಡೀ ಕುಟುಂಬದ ಆಧಾರಸ್ತಂಭಗಳಾಗಿದ್ದಾರೆ. ಕುಟುಂಬಗಳನ್ನು ಸಲಹುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚಗಳು ದುಬಾರಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಹಳೆಯ ಕನಿಷ್ಠ ವೇತನದಲ್ಲೇ ಇಡೀ ಸಂಸಾರವನ್ನು ತೂಗಿಸುವುದು ಈ ಮಹಿಳೆಯರಿಗೆ ಅಸಾಧ್ಯವಾಗಿದೆ. ಆದ್ದರಿಂದ, ಈ ಮಹಿಳೆಯರು ಕೇಳುತ್ತಿರುವುದು ಕೇವಲ ಜೀವನ್ಮರಣದ ಪ್ರಶ್ನೆಯಾಗಿರುವ ನ್ಯಾಯಯುತ ವೇತನವನ್ನು ಮಾತ್ರ.
ವೇತನದ ಕುರಿತು ಗಮನ ಹರಿಸಿರುವ ಸುಪ್ರೀಂ ಕೋರ್ಟ್ ಕೂಡ, “ಸಮಾಜದಲ್ಲಿ ಗೌರವಯುತವಾದ ಮತ್ತು ಸುಭದ್ರವಾದ ಬದುಕು ಬಾಳಬೇಕೆಂದರೆ ಕನಿಷ್ಠ 31 ಸಾವಿರ ವೇತನ ಇರಬೇಕು” ಎಂದು ಹೇಳಿದೆ.
ಆದರೂ, ಮಹಿಳಾ ಕಾರ್ಮಿಕರ ಕುರಿತು ಸರ್ಕಾರ ಯೋಚಿಸಿಲ್ಲ. ಬದಲಾಗಿ, ಗಾರ್ಮೆಂಟ್ ಮಾಲೀಕರ ಲಾಭಿಗೆ ಮಣಿದು, ಸರ್ಕಾರ ಈ ಉದ್ಯಮವನ್ನು ಹೊರಗಿಟ್ಟಿದೆ. ಯಾಕೆಂದರೆ, ಅಲ್ಲಿನ ಮಹಿಳೆಯರಿಗೆ ಸಂಘಟನೆ ಕಟ್ಟಿಕೊಳ್ಳುವ ಹಕ್ಕಿಲ್ಲ, ಅವರು ಕೇಳುವುದಿಲ್ಲ. ಮಹಿಳೆಯರು ದುಡಿಯುವ ಕ್ಷೇತ್ರಗಳಲ್ಲಿ ವೇತನ ಕಡಿಮೆ ಇದ್ದರೂ ನಡೆಯುತ್ತದೆ, ಅವರು ಕೇವಲ ಪೂರಕ ಆದಾಯ ತರುವವರು ಎಂಬ ಪುರಾತನ ಭ್ರಮೆಯಲ್ಲಿ ಸರ್ಕಾರ ಇರುವಂತಿದೆ.
ಸರ್ಕಾರದ ಈ ಧೋರಣೆಯು ಕಲ್ಯಾಣ ರಾಜ್ಯದ ಪರಿಕಲ್ಪನೆಗೇ ವಿರುದ್ಧವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ದುರ್ಬಲರ, ಶೋಷಿತರ ಪರವಾಗಿ ಧ್ವನಿಯಾಗಬೇಕು. ಆದರೆ, ಇಲ್ಲಿ ಸರ್ಕಾರ ಉದ್ಯಮಪತಿಗಳ ಲಾಭದ ಹಿತಾಸಕ್ತಿಗೆ ಮಣಿದು, ಬಡ ಕಾರ್ಮಿಕ ಮಹಿಳೆಯರ ಹಿತಾಸಕ್ತಿಯನ್ನು ಬಲಿ ಕೊಟ್ಟಿದೆ. ಕನಿಷ್ಠ ವೇತನ ಹೆಚ್ಚಿಸಿದರೆ ಗಾರ್ಮೆಂಟ್ಸ್ ಉದ್ಯಮಗಳಿಗೆ ನಷ್ಟವಾಗುತ್ತದೆ, ಉದ್ಯಮಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತವೆ ಎಂಬ ಮಾಲೀಕ ಒಕ್ಕೂಟಗಳ ಬಂಡವಾಳಶಾಹಿ ವಾದಕ್ಕೆ ಸರ್ಕಾರ ಸಂಪೂರ್ಣವಾಗಿ ಶರಣಾಗಿದೆ. ಕಾರ್ಖಾನೆಗಳ ಲಾಭದ ಲೆಕ್ಕಾಚಾರದಲ್ಲಿ ಮಹಿಳೆಯರ ರಕ್ತ, ಬೆವರಿನ ಬೆಲೆ ಶೂನ್ಯವಾಗಿ ಹೋಗಿದೆ. ಹಸಿವು ಮತ್ತು ಬಡತನದ ರೇಖೆಯ ಕೆಳಗಿರುವ ಮಹಿಳೆಯರ ಶ್ರಮವನ್ನು ಸುಲಿಗೆ ಮಾಡಲು ಮಾಲೀಕರಿಗೆ ಸರ್ಕಾರವೇ ಕಾನೂನಾತ್ಮಕ ಪರವಾನಗಿ ನೀಡಿದಂತಾಗಿದೆ.
ಕನಿಷ್ಠ ವೇತನವು ಕಾರ್ಮಿಕರ ಹಕ್ಕು. ಸರ್ಕಾರಕ್ಕೆ ಮಹಿಳೆಯರ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ, ಮೊದಲು ಮಾಡಬೇಕಾಗಿದ್ದು ಕಾರ್ಮಿಕ ಕ್ಷೇತ್ರದಲ್ಲಿರುವ ಇಂತಹ ಲಿಂಗಾಧಾರಿತ ಅಸಮಾನತೆಯನ್ನು ತೊಡೆದುಹಾಕುವುದು. ಆದರೆ, ಸರ್ಕಾರ ಕಣ್ಣೊರೆಸುವ ತಂತ್ರಗಳನ್ನು ಮಾಡುತ್ತಾ, ಮಹಿಳೆಯರ ಶಾಶ್ವತ ಪ್ರಗತಿಯ ಹಾದಿಯನ್ನು ಮುಚ್ಚುತ್ತಿದೆ.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ: ಒಳಮೀಸಲಾತಿಯ ಮೂರು ವರ್ಷಗಳ ಹಿನ್ನೋಟ!
ಗಾರ್ಮೆಂಟ್ಸ್ ಕಾರ್ಮಿಕರ ವೇತನ ಪರಿಷ್ಕರಣೆಯನ್ನು ‘ವೇತನ ಸಂಹಿತೆ-2019’ರ ‘8(1)(ಎ)’ ಅಡಿಯಲ್ಲಿ ಮಾಡುತ್ತೇವೆಂದು ಸರ್ಕಾರ ಹಿಂದಿನಿಂದಲೂ ಹೇಳುತ್ತಿದೆ. ಇದರಡಿ, ಸರ್ಕಾರಿ ಅಧಿಕಾರಿಗಳು, ಗಾರ್ಮೆಂಟ್ ಮಾಲೀಕರು ಹಾಗೂ ಮಹಿಳಾ ಕಾರ್ಮಿಕರ ಪ್ರತಿನಿಧಿಯನ್ನೊಳಗೊಂಡ ಸಮಿತಿಯ ಮೂಲಕ ಪರಿಷ್ಕರಿಸಲಾಗುತ್ತದೆ. ಆದರೆ, ಗಾರ್ಮೆಂಟ್ ಮಾಲೀಕರು ಸರ್ಕಾರಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ, ವೇತನ ಹೆಚ್ಚಳದ ಶೇಕಡಾವಾರು ಪ್ರಮಾಣವನ್ನು ಕಡಿಮೆ ಮಾಡಿಬಿಡುವ ಸಾಧ್ಯತೆಗಳೇ ಹೆಚ್ಚು ಎಂದು ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಗಳು ಹಿಂದಿನಿಂದಲೂ ಆರೋಪಿಸಿವೆ.
ಸರ್ಕಾರದ ಈ ತಾರತಮ್ಯದ ಧೋರಣೆಯನ್ನು ಕಾರ್ಮಿಕ ಸಂಘಟನೆಗಳು ಮತ್ತು ಮಹಿಳಾ ಪರ ಹೋರಾಟಗಾರರು ತೀವ್ರವಾಗಿ ಖಂಡಿಸಿದ್ದಾರೆ. ಯಾವ ದೇಶದಲ್ಲಿ ಅಥವಾ ರಾಜ್ಯದಲ್ಲಿ ದುಡಿಯುವ ಮಹಿಳೆಗೆ ಆಕೆಯ ಶ್ರಮಕ್ಕೆ ತಕ್ಕ ಗೌರವ ಮತ್ತು ವೇತನ ಸಿಗುವುದಿಲ್ಲವೋ, ಅಲ್ಲಿ ಸಬಲೀಕರಣದ ಮಾತುಗಳು ಕೇವಲ ಬೂಟಾಟಿಕೆಯಾಗುತ್ತವೆ ಎಂದು ಕಾರ್ಮಿಕ ಸಂಘಟನೆಗಳು ಕಿಡಿಕಾರಿವೆ.
ಸರ್ಕಾರ ತಕ್ಷಣವೇ ತನ್ನ ತಪ್ಪು ನಿರ್ಧಾರವನ್ನು ತಿದ್ದಿಕೊಳ್ಳಬೇಕು. ಗ್ಯಾರಂಟಿ ಯೋಜನೆಗಳ ಜೊತೆಗೆ, ಕಾರ್ಮಿಕರ ಬದುಕನ್ನು ಹಸನುಗೊಳಿಸುವ ‘ನ್ಯಾಯಯುತ ವೇತನದ ಗ್ಯಾರಂಟಿ’ಯನ್ನು ಸರ್ಕಾರ ಖಾತ್ರಿಗೊಳಿಸಬೇಕು. ತಾರತಮ್ಯಕ್ಕೆ ಬಲಿಯಾಗಿರುವ 19 ವಲಯಗಳನ್ನು, ವಿಶೇಷವಾಗಿ ಗಾರ್ಮೆಂಟ್ಸ್ ಕ್ಷೇತ್ರವನ್ನು ತಕ್ಷಣವೇ ಕನಿಷ್ಠ ವೇತನ ಪರಿಷ್ಕರಣೆಯ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿವೆ.
ಸರ್ಕಾರದ ವೇತನ ತಾರತಮ್ಯವನ್ನು ಖಂಡಿಸಿ, ಈ ದಿನ.ಕಾಮ್ ಜೊತೆ ಮಾತನಾಡಿದ ಗಾರ್ಮೆಂಟ್ ಮತ್ತು ಟೆಕ್ಸ್ಟ್‌ಟೈಲ್ ಕಾರ್ಮಿಕರ ಸಂಘದ (GATWU) ಮುಖಂಡೆ ಪ್ರತಿಭಾ, “ಕನಿಷ್ಠ ವೇತನ ಪರಿಷ್ಕರಣೆಯ ಕರಡು ಬಂದಾಗಲೇ ನಾವು ಸರ್ಕಾರಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದೆವು. ಗಾರ್ಮೆಂಟ್‌ಗಳಲ್ಲಿ, ಬೀಡಿ ಕಾರ್ಖಾನೆಗಳಲ್ಲಿ ಹೆಚ್ಚಾಗಿ ಮಹಿಳೆಯರು ದುಡಿಯುತ್ತಿದ್ದಾರೆ. ಯಾವ ಉದ್ದಿಮೆಗಳಲ್ಲಿ ಮಹಿಳೆಯರು ಹೆಚ್ಚಾಗಿ ದುಡಿಯುತ್ತಿದ್ದಾರೆಯೋ, ಆ ಉದ್ಯಮಗಳನ್ನೇ ಸರ್ಕಾರವು ಪರಿಷ್ಕರಣೆಯಿಂದ ಹೊರಗಿಟ್ಟಿದೆ. ತನ್ನ ನಿರ್ಧಾರಕ್ಕೆ ಯಾವುದೇ ಸಕಾರಣ ನೀಡಿದೆ, ‘ಈ ಕೆಲಸಗಳು ತುಂಡು ಕೆಲಸ ಮತ್ತು ದಿನಗೂಲಿ ಆಧಾರಿತ’ವೆಂದು ಕ್ಷುಲ್ಲಕ ಕಾರಣ ನೀಡಿದೆ. ಲಿಂಗ ತಾರತಮ್ಯ ಎಸಗಿ, ಮಹಿಳೆಯರಿಗೆ ಅನ್ಯಾಯ ಮಾಡಿದೆ. ಮಹಿಳಾ ಸಬಲೀಕರಣದ ಮಾತನಾಡುವ ಸರ್ಕಾರವು, ಗಾರ್ಮೆಂಟ್ಸ್ ಉದ್ದಿಮೆಯನ್ನೂ ಪರಿಷ್ಕರಣೆಯಡಿ ತಂದಿದ್ದರೆ, ಸುಮಾರು 15 ಲಕ್ಷ ಮಹಿಳೆಯರ ಶಾಶ್ವತ ಸಬಲೀಕರಣವಾಗುತ್ತಿತ್ತು. ಆದರೆ, ಸರ್ಕಾರಕ್ಕೆ ಇಚ್ಛಾಶಕ್ತಿಯಿಲ್ಲ. ಬದಲಾಗಿ, ಕಾರ್ಪೊರೇಟ್‌ಗಳ ಒತ್ತಡಕ್ಕೆ ಮಣಿದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ಹಿಂದೆ ಎಲ್ಲ ಕ್ಷೇತ್ರಗಳಲ್ಲಿಯೂ ಕನಿಷ್ಠ ವೇತನ 17,000 ರೂ. ಇದ್ದಾಗಲೂ, ಗಾರ್ಮೆಂಟ್‌ಗಳಲ್ಲಿ 13,000 ರೂ. ಮಾತ್ರವೇ ಇತ್ತು. ಈಗ, ಹಲವು ಉದ್ದಿಮೆಗಳಲ್ಲಿ ಕನಿಷ್ಠ ವೇತನ 23,000 ರೂ.ಗೆ ಏರಿಕೆಯಾಗಿದೆ. ಆದರೆ, ಗಾರ್ಮೆಂಟ್ಸ್ ಕಾರ್ಮಿಕರ ವೇತನ 13,000 ರೂ.ಗಳಲ್ಲಿಯೇ ಉಳಿದಿದೆ. ಗಾರ್ಮೆಂಟ್ಸ್ ಕಾರ್ಮಿಕರ ವೇತನ ಪರಿಷ್ಕರಣೆಯನ್ನು ‘81(ಎ)’ ಅಡಿಯಲ್ಲಿ ಮಾಡುತ್ತೇವೆಂಬ ಭರವಸೆಗಳು ಕೇವಲ ಬೂಟಾಟಿಕೆಯಷ್ಟೇ. ಸರ್ಕಾರವು ಇತ್ತೀಚೆಗೆ ಹೊರಡಿಸಿರುವ ಕನಿಷ್ಠ ವೇತನ ಪರಿಷ್ಕರಣೆ ಅಧಿಸೂಚನೆ ಅಡಿಯಲ್ಲಿಯೇ ಗಾರ್ಮೆಂಟ್ಸ್ ಸೇರಿದಂತೆ 19 ಕ್ಷೇತ್ರಗಳನ್ನು ತರಬೇಕು” ಎಂದು ಆಗ್ರಹಿಸಿದ್ದಾರೆ.
ಸರ್ಕಾರದ ಧೋರಣೆಯನ್ನು ಖಂಡಿಸಿ, ಈ ದಿನ.ಕಾಮ್ ಜೊತೆ ಮಾತನಾಡಿದ ‘ಕರ್ನಾಟಕ ಸ್ಟೇಟ್ ಗಾರ್ಮೆಂಟ್ ಅಂಡ್ ಟೆಕ್ಸ್ಟ್‌ಟೈಲ್ ವರ್ಕಸ್ ಯೂನಿಯನ್’ನ ರಾಜು, “ಸರ್ಕಾರವು ನಾವು ಮಹಿಳಾ ಸಬಲೀಕರಣ ಮಾಡುತ್ತೇವೆಂದು ಹೇಳಿಕೊಳ್ಳುತ್ತಿದೆ. ಆದರೆ, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗಾರ್ಮೆಂಟ್ ಉದ್ದಿಮೆಯನ್ನು ಹೊರಗಿಟ್ಟಿದೆ. ಗಾರ್ಮೆಂಟ್ ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು, ಕುಟುಂಬವನ್ನು ಸಲಹಲು, ಜೀನ ದೂಡಲು ಬಹಳಷ್ಟು ಕಷ್ಟಪಡುತ್ತಿದ್ದಾರೆ. ಸಾಮಾಜಿಕ, ಮಾನಸಿಕ ಹಾಗೂ ಕೆಲಸದ ಒತ್ತಡವನ್ನು ಗಾರ್ಮೆಂಟ್ ನೌಕರರು ಹೊರುತ್ತಿದ್ದಾರೆ. ಮಹಿಳೆಯರನ್ನು ಓಟ್ ಬ್ಯಾಂಕ್ ಮಾಡಿಕೊಂಡಿರುವ ಸರ್ಕಾರ, ಅವರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ. ಅವರ ಜೀವನ ಮತ್ತು ವೇತನವನ್ನು ಸುಧಾರಿಸುವ ಬದಲು, ಅವರನ್ನು ವಂಚಿಸುತ್ತಿದೆ. ಸರ್ಕಾರ ಕೂಡಲೇ ಗಾರ್ಮೆಂಟ್ ಸೇರಿದಂತೆ 19 ವಲಯಗಳನ್ನು ಕನಿಷ್ಠ ವೇತನ ಪರಿಷ್ಕರಣೆಯ ಅಡಿಯಲ್ಲಿ ತರಬೇಕು. ಸಲಹಾ ಮಂಡಳಿ, ಟ್ರೈ-ಪಾರ್ಟೆಡ್ ಕಮಿಟಿ ಮಾಡಿ ವೇತನ ಹೆಚ್ಚಿಸುತ್ತೇವೆಂಬ ನೆಪಗಳನ್ನು ನೀಡಬಾರದು” ಎಂದು ಆಗ್ರಹಿಸಿದ್ದಾರೆ.
“ಗಾರ್ಮೆಂಟ್ ಮಹಿಳೆಯರಿಗೆ ಬಾಲವಾಡಿ ವ್ಯವಸ್ಥೆ ದೊರೆಯುತ್ತಿಲ್ಲ, ಕ್ಯಾಂಟಿನ್‌ಗಳಲ್ಲಿ ಪೌಷ್ಟಿಕ ಆಹಾರ ನೀಡುತ್ತಿಲ್ಲ, ಸೇವಾ ಭದ್ರತೆ ಇಲ್ಲ. ತಮ್ಮ ಮೇಲಿನ ಷೋಷಣೆಗಳು, ಒತ್ತಡದ ವಿರುದ್ಧ ಅಥವಾ ವೇತನಕ್ಕಾಗಿ ದನಿ ಎತ್ತಿದ್ದರೆ, ಅಂತಹ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತದೆ. ಕೆಲಸದಿಂದ ವಜಾಗೊಳಿಸಲಾಗುತ್ತದೆ. ಇದೆಲ್ಲವನ್ನೂ ಸರ್ಕಾರ ಗಮನಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇಲ್ಲದಿದ್ದರೆ, ವಿಧಾನಸೌಧದ ಗೋಡೆಗಳ ಮೇಲೆ ಬರೆದಿರುವ “ಸರ್ಕಾರದ ಕೆಲಸ ದೇವರ ಕೆಲಸ” ಎಂಬ ವಾಕ್ಯವು, “ಸರ್ಕಾರದ ಕೆಲಸ ಬಂಡವಾಳಶಾಹಿಗಳ ಕೆಲಸ” ಎಂದು ಬದಲಾಗಬೇಕಾಗುತ್ತದೆ. ಈ ಅನ್ಯಾಯದ ವಿರುದ್ಧ ಲಕ್ಷಾಂತರ ಗಾರ್ಮೆಂಟ್ಸ್ ಮಹಿಳೆಯರ ಮೌನ ಆಕ್ರೋಶ ಮುಂದೊಂದು ದಿನ ದೊಡ್ಡ ಪ್ರತಿಭಟನೆಯಾಗಿ ಸಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ.



