ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವಿರೋಧಿಸಿ ಹಾಗೂ ಮತದಾರರ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ‘ಮತ ಉಳಿಸಿ, ದೇಶ ಉಳಿಸಿ’ ಅಭಿಯಾನದಡಿ ಗುರುವಾರ ಯಾದಗಿರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ನೇತಾಜಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಹಾಗೂ ‘ಇಂಡಿಯಾ’ ಮೈತ್ರಿಕೂಟದ ಮುಖಂಡರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ‘ಮತ ಕಳ್ಳತನ ನಿಲ್ಲಿಸಿ, ದೇಶ ಉಳಿಸಿ’, ‘ಪ್ರಜಾಪ್ರಭುತ್ವ ಉಳಿಸಿ’, ‘ಚುನಾವಣಾ ಆಯೋಗ ಒನ್ ಮ್ಯಾನ್ ಕಂಪನಿಯಲ್ಲ’ ಹಾಗೂ ‘ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲಿ’ ಎಂಬ ಘೋಷಣೆಗಳ ಫಲಕಗಳನ್ನು ಪ್ರದರ್ಶಿಸಿ, ಮತದಾನದ ಹಕ್ಕುಗಳ ರಕ್ಷಣೆಗೆ ಧ್ವನಿ ಎತ್ತಿದರು.
ಎಸ್‌ಐಆರ್ ಪ್ರಕ್ರಿಯೆಯ ನೆಪದಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಸಾಧ್ಯತೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ತಂದೊಡ್ಡುತ್ತಿವೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ಕ್ರಮವು ನಾಗರಿಕರ ಮತದಾನದ ಹಕ್ಕಿಗೆ ಧಕ್ಕೆ ಉಂಟುಮಾಡುತ್ತದೆ. ಹೀಗಾಗಿ ಈ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
ಚುನಾವಣಾ ಆಯೋಗವು ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಸಂಸ್ಥೆಯಾಗಿದ್ದು, ಕೇಂದ್ರ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುತ್ತಿದೆ ಎಂಬ ಆರೋಪವನ್ನು ಪ್ರತಿಭಟನಾಕಾರರು ಮಾಡಿದರು. ಕೋಟ್ಯಂತರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿ, ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಕಾಪಾಡುವಂತೆ ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೀತಿಗಳನ್ನು ಟೀಕಿಸಿದ ಮುಖಂಡರು, ದೇಶದ ಪ್ರಜಾಪ್ರಭುತ್ವ ಹಾಗೂ ಮತದಾರರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ನರ್ಸಿಂಗ್ ವಿದ್ಯಾರ್ಥಿ ಅನುಮಾನಾಸ್ಪದ ಸಾವು!
ಪ್ರತಿಭಟನೆಯಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಯುಡಾ ಅಧ್ಯಕ್ಷ ಕಾಡೂರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೇಣಿಕ್ ಕುಮಾರ್ ದೋಖಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ, ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಭೀಮಣ್ಣ ಮೇಟಿ, ಜಿಲ್ಲಾ ವಕ್ತಾರ ಶ್ಯಾಮಸನ್ ಮಾಳಿಕೇರಿ, ಮಹಿಳಾ ಘಟಕದ ಅಧ್ಯಕ್ಷೆ ನಿಲೋಫರ್ ಬಾದಲ್, ನಗರ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಈಟೆ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಲಕ್ಷಾರೆಡ್ಡಿ, ಮರೆಪ್ಪ ಬಿಲ್ಲಾರ, ನೀಲಕಂಠ ಬಡಿಗೇರ, ಬಸುಗೌಡ ಬಿಳ್ಳಾರ, ರಾಘವೇಂದ್ರ ಮಾನಸಗಲ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.






