ನಗರದ ಅಂಬೇಡ್ಕರ್ ವಸತಿ ನಿಲಯದಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಗುರುವಾರ ತಡರಾತ್ರಿ ಸಂಭವಿಸಿದ ಈ ಘಟನೆ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಹಾಸ್ಟೆಲ್ ಆಡಳಿತದ ಹೊಣೆಗಾರಿಕೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೃತ ವಿದ್ಯಾರ್ಥಿಯನ್ನು ಚಿತ್ತಾಪುರ ತಾಲೂಕಿನ ಕುಂದನೂರು ಗ್ರಾಮದ 25 ವರ್ಷದ ಮುಜಾಹೀದ್ ಪಟೇಲ್ ಎಂದು ಗುರುತಿಸಲಾಗಿದೆ. ಕಲಬುರಗಿಯ ಪ್ರತಿಷ್ಠಿತ ಕಾಲೇಜಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಹಾಸ್ಟೆಲ್ನ ನಾಲ್ಕನೇ ಮಹಡಿಯಿಂದ ಬಿದ್ದ ಪರಿಣಾಮ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಗನ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ತೀವ್ರ ದುಃಖದಲ್ಲಿ ಮುಳುಗಿದ್ದಾರೆ.
ಹಿಂದಿನ ಹಲ್ಲೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ದುರಂತ
ಅಂಬೇಡ್ಕರ್ ವಸತಿ ನಿಲಯದಲ್ಲಿ ಕೆಲ ದಿನಗಳ ಹಿಂದಷ್ಟೇ ವಿದ್ಯಾರ್ಥಿಯೊಬ್ಬನನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಘಟನೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಪ್ರಕರಣದ ಆತಂಕ ಮಾಸುವ ಮುನ್ನವೇ ಮತ್ತೊಬ್ಬ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಹಾಸ್ಟೆಲ್ನ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಚರ್ಚೆ ತೀವ್ರಗೊಳಿಸಿದೆ.
ವಿದ್ಯಾರ್ಥಿ ನಾಲ್ಕನೇ ಮಹಡಿಯಿಂದ ಬಿದ್ದಿದ್ದರ ಹಿಂದಿನ ಕಾರಣವೇನು? ಘಟನೆ ನಡೆದ ಸಂದರ್ಭದಲ್ಲಿ ಹಾಸ್ಟೆಲ್ನಲ್ಲಿ ಏನು ಸಂಭವಿಸಿತ್ತು? ಇದು ಆಕಸ್ಮಿಕವೋ, ಆತ್ಮಹತ್ಯೆಯೋ ಅಥವಾ ಬೇರೆ ಯಾವುದಾದರೂ ಕಾರಣದಿಂದ ಸಂಭವಿಸಿದ ಸಾವೋ ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ದೊರೆಯಬೇಕಿದೆ.
ನಿಷ್ಪಕ್ಷಪಾತ ತನಿಖೆಗೆ ಕೆವಿಎಸ್ ವಿದ್ಯಾರ್ಥಿ ಸಂಘಟನೆಗಳ ಆಗ್ರಹ
ವಿದ್ಯಾರ್ಥಿಯ ಸಾವಿನ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ಲಕ್ಷ್ಮಣ ಮಂಡಲಗೇರಾ, ವೈಭವ ಬಬಲಾದ ಮತ್ತು ಭೂತಾಳಿ ನಡಗಟ್ಟಿ ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಗಾಂಜಾ ಸೇವನೆ ಆರೋಪ: ಯುವಕನ ಬಂಧನ
ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹಾಸ್ಟೆಲ್ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು. ಘಟನೆ ನಡೆದ ಸಮಯದ ಸಂಪೂರ್ಣ ಮಾಹಿತಿ ಹಾಗೂ ಲಭ್ಯವಿರುವ ಸಾಕ್ಷ್ಯಗಳನ್ನು ಸಂಗ್ರಹಿಸಿ ಸಾವಿನ ನೈಜ ಕಾರಣವನ್ನು ಪತ್ತೆಹಚ್ಚಬೇಕು ಎಂದು ಅವರು ಒತ್ತಾಯಿಸಿದರು.
ವಿದ್ಯಾರ್ಥಿಗಳ ಶಿಕ್ಷಣ ಮತ್ತು ವಸತಿಗಾಗಿ ಇರುವ ಹಾಸ್ಟೆಲ್ಗಳಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ. ಹಿಂದಿನ ಹಲ್ಲೆ ಪ್ರಕರಣ ಸೇರಿದಂತೆ ಎಲ್ಲ ಆಯಾಮಗಳನ್ನು ಪರಿಶೀಲಿಸಿ, ಯಾವುದೇ ಅನುಮಾನಗಳಿಗೆ ಅವಕಾಶ ನೀಡದಂತೆ ತನಿಖೆ ನಡೆಸಬೇಕು. ವಿದ್ಯಾರ್ಥಿಗಳ ಸುರಕ್ಷತೆ ಖಚಿತಪಡಿಸುವುದು ಹಾಸ್ಟೆಲ್ ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣದ ತನಿಖೆ ಮುಂದುವರಿದಿದೆ.






