ಭವ್ಯ ನರಸಿಂಹಮೂರ್ತಿಗಿಲ್ಲ ಟಿಕೆಟ್: ಕರ್ನಾಟಕಕ್ಕೆ ಸಿಗಬಹುದಾಗಿದ್ದ ಮೊಹುವಾ ಮೊಯಿತ್ರಾರನ್ನು ಕಳೆದುಕೊಂಡ ಕಾಂಗ್ರೆಸ್

Date:

ಕಾಂಗ್ರೆಸ್ ನ ಮೊದಲ ಪಟ್ಟಿಯಲ್ಲೇ ಸ್ಥಾನ ಗಿಟ್ಟಿಸಿಕೊಂಡ ಬಿಜೆಪಿ ಎಂಎಲ್ಸಿ ಪುಟ್ಟಣ್ಣ, ಅಲ್ಲಿ ಸ್ಥಾನಪಲ್ಲಟ ಮಾಡಿದ್ದು ಭವ್ಯ ನರಸಿಂಹಮೂರ್ತಿಯವರನ್ನು. ಭವ್ಯ ನರಸಿಂಹಮೂರ್ತಿ ಕರ್ನಾಟಕದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪೈಕಿ ಎದ್ದು ಕಾಣುವ ವಿಶಿಷ್ಟತೆಗಳನ್ನು ಹೊಂದಿದ್ದವರಲ್ಲಿ ಒಬ್ಬರು. ಅವರನ್ನು ಕರ್ನಾಟಕದ ಮೊಹುವಾ ಮೊಯಿತ್ರಾ ಆಗುವ ಸಾಧ್ಯತೆ ಇರುವವರು ಎನ್ನಲು ಕಾರಣಗಳಿವೆ.

ಅವರೂ ಸಹಾ ಮೊಹುವಾ ಅವರಂತೆ ಭಾರತದಲ್ಲೂ, ವಿದೇಶದಲ್ಲೂ ವ್ಯಾಸಂಗ ಮಾಡಿದವರು. ಇಬ್ಬರೂ ವಿಶ್ವಸಂಸ್ಥೆಯಂತಹ ಅಂತರ್ ರಾಷ್ಟ್ರೀಯ ಸಂಸ್ಥೆಗಳಿಗೆ ಕೆಲಸ ಮಾಡಿದವರು. ಇಬ್ಬರೂ ಬಿಜೆಪಿ ಪಕ್ಷ, ಆರೆಸ್ಸೆಸ್ ಸಿದ್ಧಾಂತದ ಕಟು ಟೀಕಾಕಾರರು ಮತ್ತು ಅದನ್ನು ಅತ್ಯಂತ ಸಮರ್ಥವಾಗಿ ಮಾತಾಡಬಲ್ಲವರು. ಎಲ್ಲಕ್ಕಿಂತ ಹೆಚ್ಚು ಈ ಎಲ್ಲಾ ಗುಣಗಳನ್ನು ಹೊಂದಿರುವ ಮಹಿಳೆಯರು.

ಈಗ ರಾಷ್ಟ್ರಮಟ್ಟದಲ್ಲಿ ದೊಡ್ಡ ಖ್ಯಾತಿ ಹೊಂದಿರುವ ಮೊಹುವಾ ಅವರಿಗೆ ಭವ್ಯ ಅವರನ್ನು ಹೋಲಿಸುವುದು ಕೆಲವರಿಗೆ ಅತಿರೇಕ ಅನ್ನಿಸಬಹುದು. ಆದರೆ, ತೃಣಮೂಲ ಕಾಂಗ್ರೆಸ್ ಅವಕಾಶ ನೀಡಿರದಿದ್ದರೆ ಮೊಹುವಾ ಸಹಾ ಇಂದು ಏನಾಗಿದ್ದಾರೋ ಅದು ಆಗುವುದು ಸಾಧ್ಯವಿರಲಿಲ್ಲ. ಅಂತಹ ಅವಕಾಶ ಇನ್ನೂ ಸಿಗದೇ ಭವ್ಯ ಕರ್ನಾಟಕದಲ್ಲಿ ಒಂದಷ್ಟು ಮಟ್ಟಿಗೆ ಗುರುತು ಪಡೆದುಕೊಂಡಿದ್ದರೆ ಅದಕ್ಕೆ ಕಾರಣ ಸಿಎಎ –ಎನ್ ಆರ್ ಸಿ ವಿರೋಧಿ ಹೋರಾಟದಲ್ಲಿ ಅವರು ಭಾಗವಹಿಸಿದ ರೀತಿ.

2019ರ ಕೊನೆಯ ತಿಂಗಳಲ್ಲಿ ಸಿಎಎ ಕಾನೂನನ್ನು ಸಂಸತ್ತಿನಲ್ಲಿ ಬಿಜೆಪಿಯು ಅಂಗೀಕಾರ ಪಡೆದುಕೊಂಡ ನಂತರ, ದೇಶದಲ್ಲಿ ಮೊದಲು ಬೀದಿಗಿಳಿದಿದ್ದು ಅಸ್ಸಾಂನ ವಿದ್ಯಾರ್ಥಿಗಳು. ಅದರ ಮರುದಿನ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳು. ಅದರ ಸಂದೇಶವನ್ನು ಗ್ರಹಿಸಿ ದೇಶಾದ್ಯಂತ ಹೋರಾಟವು ಭುಗಿಲೆದ್ದಿತು. ಬೆಂಗಳೂರಿನಲ್ಲೂ ಡಿಸೆಂಬರ್ 19ರಂದು ಟೌನ್ ಹಾಲ್ ಮುಂದೆ ಸಾವಿರಾರು ಜನರ ಪ್ರತಿಭಟನಾ ಪ್ರದರ್ಶನ ನಡೆಯಿತು. ಅದನ್ನು ಸಂಘಟಿಸಿ ಕರೆ ಕೊಟ್ಟಿದ್ದು ಬಹುತೇಕ ಹಿಂದೂಗಳೇ ಇದ್ದ ಒಂದು ಪ್ರಜಾತಂತ್ರವಾದಿ ಗುಂಪಾದರೂ, ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆಯಲಾರಂಭಿಸಿದ್ದರು. ಅದು ಆರಂಭವಾಗುತ್ತಿದ್ದ ಹಾಗೆಯೇ ಪೊಲೀಸರು ಬಂಧಿಸಿ ಕರೆದೊಯ್ಯಲು ಶುರು ಮಾಡಿದ್ದರು.

ಬಂಧನಕ್ಕೊಳಗಾದವರನ್ನು ಬಿಡುಗಡೆ ಮಾಡಿ ಎಂದು ಆಗ್ರಹಿಸಿ ಮತ್ತೆ ಸಾವಿರಾರು ಜನರು ಸೇರಿದರು. ಅವರಲ್ಲಿ ಹೆಚ್ಚಿನವರು ಮುಸ್ಲಿಮರಿದ್ದರು. ಅವರೂ ಚದುರಿದರೂ ಅಲ್ಲಿಂದ ಚದುರದೇ ನಿಂತು ಇಂಗ್ಲಿಷಿನಲ್ಲಿ ಪೊಲೀಸರನ್ನು ದಬಾಯಿಸಿ ನಿಂತಿದ್ದು ಭವ್ಯ ನರಸಿಂಹಮೂರ್ತಿ. ಅವರು ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡ ವಿಡಿಯೋ ಒಂದೇ ದಿನದಲ್ಲಿ ವೈರಲ್ ಆಯಿತು. ಅಲ್ಲಿಂದಾಚೆಗೆ ಭವ್ಯ ರಾಜ್ಯದ ಹತ್ತಾರು ಸಿಎಎ ವಿರೋಧಿ ಸಮಾವೇಶಗಳಲ್ಲಿ ಭಾಷಣಕಾರ್ತಿಯಾಗಿ ಎಲ್ಲೆಡೆ ಸುತ್ತಾಡಿದರು.

ಆದರೆ, ಅವರು ಅಷ್ಟರಲ್ಲಾಗಲೇ ಕಾಂಗ್ರೆಸ್ಸಿನಲ್ಲಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಆ ನಂತರ ತನ್ನದೇ ಒಂದು ಕ್ಷೇತ್ರವನ್ನಾಗಿ ರಾಜಾಜಿನಗರವನ್ನು ಆಯ್ಕೆ ಮಾಡಿಕೊಂಡ ಭವ್ಯ ನಿರಂತರವಾಗಿ ಅಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಿದರು ಮತ್ತು ಎಲ್ಲರೂ ಗುರುತಿಸುವ ರೀತಿಯಲ್ಲಿ ತಂತ್ರಗಾರಿಕೆ ಬಳಸಿ ಗಮನ ಸೆಳೆದರು. ಆ ಕ್ಷೇತ್ರದಲ್ಲಿ ಹಾಲಿ ಶಾಸಕ ಸುರೇಶ್ ಕುಮಾರ್ ವಿರುದ್ಧ ಅಲೆ ಇರುವುದೂ, ಅದೇ ಸಂದರ್ಭದಲ್ಲಿ ಕಾಂಗ್ರೆಸ್ಸಿನಲ್ಲಿ ಪ್ರಬಲ ಸ್ಪರ್ಧಿ ಇಲ್ಲದೇ ಇರುವುದೂ ಭವ್ಯ ಅವರಿಗೆ ಅನುಕೂಲಕರವಾಗಿತ್ತು. ಹಾಗಾಗಿ ಅವರೇ ಸಹಜ ಆಯ್ಕೆ ಎಂಬಂತೆ ಆಗಿತ್ತು.

ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ರಾಜಾಜಿನಗರ ಕ್ಷೇತ್ರದ ಕೆಳಮಧ್ಯಮ ವರ್ಗದ ಹಾಗೂ ಬಡವರಿರುವ ಭಾಗಗಳಲ್ಲಿ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಷ್ಟೇ ಅವರ ಹೆಚ್ಚುಗಾರಿಕೆಯಾಗಿರಲಿಲ್ಲ. ಪಿ ಎಸ್ ಐ ನೇಮಕಾತಿ ಅಕ್ರಮವನ್ನು ಹೊರತರುವ ವಿಚಾರದಲ್ಲೂ ಅಭ್ಯರ್ಥಿಗಳಿಗೆ ನೆರವಾಗಿದ್ದರು. ಆ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳ ಸಂಘ ಕಟ್ಟಿಕೊಂಡು ನಿರಂತರವಾಗಿ ಅದನ್ನು ಜೀವಂತವಾಗಿಡಲು ಭವ್ಯ ಕೆಲಸ ಮಾಡಿದ್ದರು. ಕಾಂಗ್ರೆಸ್ ಸಂಘಟನೆಯೊಳಗೂ ನಿರಂತರವಾಗಿ ಸಕ್ರಿಯವಾಗಿದ್ದ ಭವ್ಯ ರಾಜಾಜಿನಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಎಲ್ಲ ರೀತಿಯಲ್ಲೂ ಅರ್ಹ ವ್ಯಕ್ತಿಯಾಗಿದ್ದರು.

ಆದರೆ, ಆ ಜಾಗದಲ್ಲಿ ಕಾಂಗ್ರೆಸ್ ಪಕ್ಷ ಆಯ್ದುಕೊಂಡಿರುವುದು ಪುಟ್ಟಣ್ಣನವರನ್ನು. ದೀರ್ಘ ಕಾಲ ಜೆಡಿಎಸ್ ಪಕ್ಷದಲ್ಲಿದ್ದ ಪುಟ್ಟಣ್ಣ, ಆ ಪಕ್ಷಕ್ಕೂ ನಿಷ್ಠರಾಗಿರಲಿಲ್ಲ. ಅವರನ್ನು ವಿಧಾನಪರಿಷತ್ತಿನಲ್ಲಿ ಉಪಸಭಾಪತಿಯನ್ನಾಗಿಸಿದ ಪಕ್ಷವನ್ನು ತೊರೆದು ಕಳೆದ ಎಂ ಎಲ್ ಸಿ ಚುನಾವಣೆಗೆ ಮುಂಚೆ ಬಿಜೆಪಿಗೆ ಹೋಗಿ ಅಲ್ಲಿಂದ ಆಯ್ಕೆಯಾಗಿದ್ದವರು. ಈಗ ಅದನ್ನೂ ಬಿಟ್ಟು ಕಾಂಗ್ರೆಸ್ಸಿಗೆ ಬಂದಿದ್ದಾರೆ. ಬಿಜೆಪಿಗೆ ಸಂಖ್ಯೆಗಳ ಕೊರತೆ ಆದರೆ ಮತ್ತೆ ಆಪರೇಷನ್ ಗೆ ಒಳಗಾಗುವುದಿಲ್ಲ ಎಂಬ ಯಾವ ಗ್ಯಾರಂಟಿಯೂ ಇಲ್ಲ. ಹಾಗೆ ನೋಡಿದರೆ ಅಭ್ಯರ್ಥಿಯ ಕೊರತೆ ಇರುವ ಅವರದ್ದೇ ಜಿಲ್ಲೆಯ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಎಚ್.ಡಿ ಕುಮಾರಸ್ವಾಮಿಯವರನ್ನು ಎದುರಿಸಬಹುದಿತ್ತು. ಅಂತಹ ಯಾವ ರಿಸ್ಕಿಗೂ ಒಡ್ಡಿಕೊಳ್ಳದೇ ಸುಲಭದಲ್ಲಿ ಗೆಲ್ಲುವ ಆಲೋಚನೆ ಇಟ್ಟುಕೊಂಡು ರಾಜಾಜಿನಗರಕ್ಕೆ ಅಭ್ಯರ್ಥಿಯಾಗಿ ಪುಟ್ಟಣ್ಣ ಬಂದಿದ್ದಾರೆ. ಆ ಮೂಲಕ ಕರ್ನಾಟಕದಲ್ಲಿ ಹೊಸ ರೀತಿಯ ರಾಜಕಾರಣ ಮಾಡಬಹುದಾಗಿದ್ದ ವ್ಯಕ್ತಿಗಳಲ್ಲಿ ಒಬ್ಬರಾದ ಭವ್ಯ ನರಸಿಂಹಮೂರ್ತಿಗೆ ಅವಕಾಶ ತಪ್ಪಿದೆ. ಅಥವಾ ಕಾಂಗ್ರೆಸ್ ಪಕ್ಷವೇ ಅದನ್ನು ಕೈಯ್ಯಾರೆ ಕಳೆದುಕೊಂಡಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರು ಅಪಘಾತವನ್ನೇ ಮಾರಣಾಂತಿಕ ಹಲ್ಲೆ ಎಂದ ಬಿಜೆಪಿ ಮುಖಂಡ; ಮಣಿಕಂಠ ರಾಠೋಡ್ ಕಟ್ಟು ಕಥೆ ಬಯಲು

ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದನ್ನೇ...

ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ಕೂಡ ಗುಂಡಿ ಮುಚ್ಚಲಾಗಲಿಲ್ಲ: ಸಿಎಂ ಸಿದ್ದರಾಮಯ್ಯ

"ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ಕೂಡ ಅವರಿಗೆ ಗುಂಡಿ ಮುಚ್ಚಲಾಗಲಿಲ್ಲ" ಎಂದು...

ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ: ಸಿದ್ದರಾಮಯ್ಯ

ಎಲ್ಲರೂ ಸಂವಿಧಾನದ ಧ್ಯೇಯೋದ್ದೇಶಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು...

ಎಂ.ಎಂ.ಕಲಬುರ್ಗಿ- ಗೌರಿ ಲಂಕೇಶ್ ಹತ್ಯೆ ಪ್ರಕರಣ: ವಿಚಾರಣೆಗೆ ವಿಶೇಷ ನ್ಯಾಯಾಲಯ ರಚನೆಗೆ ಸಿಎಂ ಆದೇಶ

ಬಲಪಂಥೀಯ ಕೋಮುವಾದಿಗಳ ಗುಂಡೇಟಿಗೆ ಬಲಿಯಾಗಿದ್ದ ಖ್ಯಾತ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಗೌರಿ...