NEET ಪ್ರಶ್ನೆಪತ್ರಿಕೆ ಸೋರಿಕೆ ಕುರಿತಾದ ವಿದ್ಯಾರ್ಥಿ ಪ್ರತಿಭಟನೆಗಳ ಸಂದರ್ಭದಲ್ಲಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ‘ನಾನೊಬ್ಬ ಕಲಾವಿದ, ರಾಜಕಾರಣಿಯಲ್ಲ’ ಎಂಬ ಹೇಳಿಕೆಯನ್ನು ಗೇಲಿ ಮಾಡಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಈಗ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ದೆಹಲಿಯ ಜವಾಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ದಿಲ್ಜಿತ್ ಸಂಗೀತ ಕಚೇರಿಯ ವೇದಿಕೆಯಲ್ಲೇ ನಡೆದ ಘಟನೆ ಬೆನ್ನಲ್ಲೇ ಈ ಕ್ಷಮೆಯಾಚನೆ ಬಂದಿದೆ.
ಶುಕ್ರವಾರ ನಡೆದ ಕನ್ಸರ್ಟ್‌ನಲ್ಲಿ ತಮ್ಮ ಹಿಟ್ ಹಾಡುಗಳ ಮಧ್ಯೆ ಮಾತನಾಡಿದ ಗಾಯಕ ದಿಲ್ಜಿತ್, ಯಾರ ಹೆಸರನ್ನೂ ಉಲ್ಲೇಖಿಸದೆ ತಿರುಗೇಟು ನೀಡಿದ ದಿಲ್ಜಿತ್, “ನಾನು ಮೌನವಾಗಿದ್ದೇನೆ, ಮೌನವಾಗಿಯೇ ಇರಲು ಬಿಡಿ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಆದರೆ ಪಂಜಾಬಿಗಳಿಗೆ ಹೇಗೆ ಹೋರಾಡಬೇಕೆಂದು ಯಾರೂ ಕಲಿಸಿಕೊಡಬೇಡಿ “ ಎಂದು ವೇದಿಕೆಯಲ್ಲೇ ಹೇಳಿದ್ದರು.
https://www.instagram.com/reel/DfIFtm4MCdV/?utm_source=ig_web_button_share_sheet
ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವ ಆಧಾರಿತ ‘ಸತ್ಲುಜ್’ ಸಿನಿಮಾ ಜಿ5ನಲ್ಲಿ ಬಿಡುಗಡೆಯಾಗಿ ಎರಡು ದಿನಗಳಲ್ಲೇ ಬ್ಯಾನ್ ಆದ ಬಗ್ಗೆ ಪ್ರಸ್ತಾಪಿಸಿ, “ನಾವು ಈ ಚಿತ್ರಕ್ಕಾಗಿ ವರ್ಷಗಟ್ಟಲೆ ಸುದೀರ್ಘ ಹೋರಾಟ ನಡೆಸಿದ್ದೇವೆ. ವೇದಿಕೆಯಲ್ಲಿ ಅಂತಹ ಚಿತ್ರವನ್ನು ಗೇಲಿ ಮಾಡಬೇಡಿ” ಎಂದು ಆಕ್ರೋಶ ಹೊರಹಾಕಿದರು. ಕನ್ಸರ್ಟ್‌ನ ಕೊನೆಯಲ್ಲಿ “ಮೈ ಹೂಂ ಪಂಜಾಬ್” ಹಾಗೂ “ಐ ಆಮ್ ಆನ್ ಆರ್ಟಿಸ್ಟ್” ಎಂಬ ಲೇಸರ್ ಪ್ರದರ್ಶನ ಗಮನಸೆಳೆಯಿತು.
ದಿಲ್ಜಿತ್ ಅವರ ಪರೋಕ್ಷ ವಾಗ್ದಾಳಿ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘ ಪೋಸ್ಟ್ ಹಂಚಿಕೊಂಡ ದೀಪ್ಕೆ, ಮೇ ತಿಂಗಳಲ್ಲಿ ಚಿಕಾಗೋದಲ್ಲಿ ನಡೆದ ದಿಲ್ಜಿತ್ ಕನ್ಸರ್ಟ್‌ನಲ್ಲಿ ಭಾಗವಹಿಸಿದ್ದ ನೆನಪನ್ನು ಹಂಚಿಕೊಂಡು ತಾವು ಅವರ ದೊಡ್ಡ ಅಭಿಮಾನಿ ಎಂಬುದನ್ನು ತಿಳಿಸಿದ್ದಾರೆ.
https://www.instagram.com/p/DfIc-Itk6G9/?utm_source=ig_web_button_share_sheet
“ಪಾಜಿ, ಜೂನ್ ಪ್ರತಿಭಟನೆಯಲ್ಲಿ ನಿಮ್ಮ ಹೇಳಿಕೆ ನಮಗೆ ಸ್ವಲ್ಪ ಬೇಸರ ತಂದಿತ್ತು. ವ್ಯಕ್ತಿಗತವಾಗಿ ನಿಮ್ಮ ವಿರುದ್ಧ ನಮಗೇನೂ ಇರಲಿಲ್ಲ, ಆದರೆ ಸದಾ ಧ್ವನಿ ಎತ್ತುವ ನಿಮ್ಮಿಂದ ಹೆಚ್ಚಿನ ನಿರೀಕ್ಷೆಯಿತ್ತು. ಭಾರತವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ನಿಮ್ಮ ಸಾಹಸ ಹಾಗೂ ವ್ಯಕ್ತಿತ್ವದ ಮೇಲೆ ನಮಗೆ ಅಪಾರ ಗೌರವವಿದೆ” ಎಂದು ದೀಪ್ಕೆ ಬರೆದುಕೊಂಡಿದ್ದಾರೆ.
“ಒಂದು ಭಿನ್ನಾಭಿಪ್ರಾಯ ಅಥವಾ ಗೊಂದಲದಿಂದ ನಿಮ್ಮ ಮೇಲಿರುವ ಗೌರವ ಮತ್ತು ಅಭಿಮಾನ ಕಡಿಮೆಯಾಗುವುದಿಲ್ಲ. ಚಿಕ್ಕ ತಮ್ಮ ಎಂದು ತಿಳಿದು ಕ್ಷಮಿಸಿ, ಹಳೆಯದನ್ನೆಲ್ಲಾ ಇಲ್ಲೇ ಬಿಟ್ಟುಬಿಡಿ (Chhota bhai samjh ke mitti pao)” ಎಂದು ಬರೆದು, ತಮ್ಮ ಪೋಸ್ಟ್ ಅನ್ನು ದಿಲ್ಜಿತ್ ಅವರ ಜನಪ್ರಿಯ ಹಾಡಿನ ಸಾಲುಗಳೊಂದಿಗೆ ಮುಕ್ತಾಯಗೊಳಿಸಿದ್ದಾರೆ.





