ಇಪ್ಪತ್ತು ವರ್ಷಗಳಿಂದ ಕಸಿದುಕೊಳ್ಳಲಾಗಿದ್ದ ವಿದ್ಯಾರ್ಥಿ ಸಂಘದ ಚುನಾವಣೆಯ ಹಕ್ಕನ್ನು ಮರಳಿ ಪಡೆಯಲು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ನಡೆಸಿದ 18 ದಿನಗಳ ಹೋರಾಟ ಕೊನೆಗೂ ಫಲ ನೀಡಿದೆ. ವಿದ್ಯಾರ್ಥಿಗಳ ಈ ಜಯ ಕೇವಲ ಜಾಮಿಯಾದ ಗೆಲುವಲ್ಲ; ದೇಶದ ವಿಶ್ವವಿದ್ಯಾಲಯಗಳಲ್ಲಿ ಕುಗ್ಗುತ್ತಿರುವ ಪ್ರಜಾಸತ್ತಾತ್ಮಕ ಅವಕಾಶಗಳನ್ನು ಮರಳಿ ಪಡೆಯುವ ಹೋರಾಟಕ್ಕೂ ಸಂದಿರುವ ಜಯ.
ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಡೀ ದೇಶಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ. ಪ್ರಜಾಪ್ರಭುತ್ವದ ಹಕ್ಕುಗಳು ಯಾರದ್ದೋ ಕೊಡುಗೆಗಳಲ್ಲ, ಅವುಗಳನ್ನು ಉಳಿಸಿಕೊಳ್ಳಲು ಸಂಘಟಿತವಾಗಿ ಹೋರಾಡಬೇಕು ಎಂಬುದನ್ನು 18 ದಿನಗಳ ನಿರಂತರ ಹೋರಾಟದ ಮೂಲಕ ವಿದ್ಯಾರ್ಥಿಗಳ ಸಾಬೀತು ಮಾಡಿದ್ದಾರೆ.
ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಸುಮಾರು ಎರಡು ದಶಕಗಳಿಂದ ಸ್ಥಗಿತಗೊಂಡಿದ್ದ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಮರುಆರಂಭಿಸಲು ಲಿಖಿತ ಆದೇಶ ಹೊರಡಿಸಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧದ ಶಿಸ್ತುಕ್ರಮ, ಅಮಾನತು ಹಾಗೂ ಕ್ಯಾಂಪಸ್ ಪ್ರವೇಶ ನಿಷೇಧಗಳನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಕಟಿಸಿದೆ.
ಇದು ನಿಸ್ಸಂದೇಹವಾಗಿ ವಿದ್ಯಾರ್ಥಿಗಳ ಸಂಘಟಿತ ಹೋರಾಟಕ್ಕೆ ಸಂದಿರುವ ಮಹತ್ವದ ಯಶಸ್ಸು. ಆದರೆ, ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ತಮ್ಮದೇ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶಕ್ಕಾಗಿ 18 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಬೇಕಾದ ಪರಿಸ್ಥಿತಿ ಮತ್ತು ವಿಶ್ವವಿದ್ಯಾಲಯಗಳು ತಮ್ಮದೇ ವಿದ್ಯಾರ್ಥಿಗಳಿಗೆ ಪ್ರಜಾಸತ್ತಾತ್ಮಕ ಪ್ರತಿನಿಧಿತ್ವ ನೀಡಲು ನಿರಾಕರಿಸುತ್ತಿರುವುದರ ಬಗ್ಗೆ ನಾವು ಚಿಂತನೆ ನಡೆಸಬೇಕಿದೆ.
ಇದನ್ನು ಓದಿದ್ದೀರಾ?: ಲೈಂಗಿಕ ಹಗರಣದ ಆರೋಪಿಗಳಿಗೆ ಸ್ಥಾನಮಾನ; ನಗೆಪಾಟಲಿಗೀಡಾದ ಮೋದಿಯ ʼಬೇಟಿ ಬಚಾವೋʼ ಘೋಷಣೆ
ಲಿಂಗ್ಡೋ ಸಮಿತಿಯ ಶಿಫಾರಸುಗಳ ಮೂಲ ಉದ್ದೇಶ ವಿದ್ಯಾರ್ಥಿ ಚುನಾವಣೆಗಳಲ್ಲಿ ಪಾರದರ್ಶಕತೆ, ನ್ಯಾಯಸಮ್ಮತ ಸ್ಪರ್ಧೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವುದಾಗಿತ್ತು. ಆದರೆ, ಆ ಶಿಫಾರಸುಗಳ ಹೆಸರಿನಲ್ಲಿ ವಿದ್ಯಾರ್ಥಿಗಳ ಚುನಾವಣಾ ಹಕ್ಕನ್ನು ಅನಿರ್ದಿಷ್ಟಾವಧಿಗೆ ನಿರಾಕರಿಸಲಾಗಿತ್ತು. ಜಾಮಿಯಾ ವಿಶ್ವವಿದ್ಯಾಲಯದಲ್ಲೂ ವಿದ್ಯಾರ್ಥಿ ಸಂಘದ ಚುನಾವಣೆಗಳು 2006ರಿಂದ ಸ್ಥಗಿತಗೊಂಡಿದ್ದವು. ಅಲ್ಲಿಂದ ಇಲ್ಲಿಯವರೆಗೆ ಅನೇಕ ತಲೆಮಾರುಗಳ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಬಂದು, ಶಿಕ್ಷಣ ಮುಗಿಸಿ ಹೊರಹೋಗಿದ್ದಾರೆ. ಆದರೆ, ತಮ್ಮ ಸಮಸ್ಯೆಗಳನ್ನು ಆಡಳಿತ ಮಂಡಳಿಯ ಮುಂದೆ ಅಧಿಕೃತವಾಗಿ ಪ್ರತಿನಿಧಿಸುವ ಚುನಾಯಿತ ವಿದ್ಯಾರ್ಥಿ ಸಂಘ ಅವರಿಗೆ ಇರಲಿಲ್ಲ.
ವಿದ್ಯಾರ್ಥಿಗಳ ಹಕ್ಕುಗಳನ್ನು ಕೇಳುವ, ವಸತಿ ನಿಲಯಗಳ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸುವ, ಗ್ರಂಥಾಲಯದ ಸೌಲಭ್ಯಗಳನ್ನು ಸುಧಾರಿಸುವ, ಶುಲ್ಕ ಹೆಚ್ಚಳವನ್ನು ಪ್ರಶ್ನಿಸುವ ಹಾಗೂ ವಿದ್ಯಾರ್ಥಿಗಳ ಮೇಲಿನ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಪ್ರಜಾಸತ್ತಾತ್ಮಕ ವ್ಯವಸ್ಥೆಯೇ ಅಲ್ಲಿ ಸ್ಥಗಿತಗೊಂಡಿತ್ತು.
ರಾಜಕೀಯದ ಹೆಸರಿನಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವುದಕ್ಕೂ ವಿದ್ಯಾರ್ಥಿಗಳನ್ನು ರಾಜಕೀಯ ಪ್ರಕ್ರಿಯೆಯಿಂದಲೇ ದೂರವಿಡುವುದಕ್ಕೂ ಅಗಾಧ ವ್ಯತ್ಯಾಸವಿದೆ ಎಂಬುದನ್ನು ಅರಿತ ಜಾಮಿಯಾ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡರು. ವಿದ್ಯಾರ್ಥಿ ಸಂಘದ ಚುನಾವಣೆಗಾಗಿ ಅಕ್ಟೋಬರ್ 12ರಂದು ವಿದ್ಯಾರ್ಥಿಗಳು ಧ್ವನಿ ಎತ್ತಿದರು. ಹೋರಾಟಕ್ಕೆ ಇಳಿದರು. ಉಪವಾಸ ಸತ್ಯಾಗ್ರಹ ನಡೆಸಿದರು. ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದರು. ಅಸ್ಪಷ್ಟ ಭರವಸೆಗಳನ್ನು ತಿರಸ್ಕರಿಸಿದರು. ಅಕ್ಟೋಬರ್ 26ರಂದು ಆಡಳಿತ ಮಂಡಳಿ ಚುನಾವಣೆ ನಡೆಸುವುದಾಗಿ ಹೇಳಿದರೂ ದಿನಾಂಕ ನಿಗದಿಪಡಿಸಲಿಲ್ಲ. ವಿದ್ಯಾರ್ಥಿಗಳು ಆ ಭರವಸೆಯನ್ನು ಒಪ್ಪಿಕೊಳ್ಳಲಿಲ್ಲ. ಚುನಾವಣೆಯ ವೇಳಾಪಟ್ಟಿ ನಿಗದಿಯಾಗುವವರೆಗೂ ಹೋರಾಟ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದರು.
ಅಂತಿಮವಾಗಿ ಅಕ್ಟೋಬರ್ 29ರಂದು ಆಡಳಿತ ಮಂಡಳಿ ಮಣಿಯಿತು. 2027ರ ಮೇ 15ರೊಳಗೆ ವಿದ್ಯಾರ್ಥಿ ಸಂಘದ ಸಂವಿಧಾನವನ್ನು ಅನುಮೋದಿಸಿ ಜಾರಿಗೊಳಿಸಲು ಮತ್ತು ಜುಲೈ 16ರ ಸುಮಾರಿಗೆ ಆರಂಭವಾಗುವ ಮುಂದಿನ ಶೈಕ್ಷಣಿಕ ಅವಧಿಯ ಆರು ವಾರಗಳೊಳಗೆ ಚುನಾವಣೆ ನಡೆಸುವುದಾಗಿ ಲಿಖಿತ ಆದೇಶ ಹೊರಡಿಸಿದೆ.
ಅಂದಹಾಗೆ, ವಿದ್ಯಾರ್ಥಿಗಳ ಹೋರಾಟವನ್ನು ಮಾತುಕತೆಯ ಮೂಲಕ ಮೊದಲೇ ಬಗೆಹರಿಸಬಹುದಿತ್ತು. ಆದರೆ, ಆರಂಭದಲ್ಲಿ ಆಡಳಿತ ಮಂಡಳಿ ದಾರ್ಷ್ಟ್ಯ ಮೆರೆಯಿತು. ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮಗಳು, ಅಮಾನತು ಹಾಗೂ ಕ್ಯಾಂಪಸ್ ಪ್ರವೇಶದ ನಿರ್ಬಂಧಗಳನ್ನು ಹೇರಿತು. ಭದ್ರತೆಯ ಕಾರಣ ನೀಡಿ ಗ್ರಂಥಾಲಯಗಳನ್ನು ಮುಚ್ಚಿತು. ತರಗತಿಗಳನ್ನು ಆನ್ಲೈನ್ಗೆ ವರ್ಗಾಯಿಸಿತು. ಕ್ಯಾಂಪಸ್ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತು. ಇದೆಲ್ಲವೂ ಅಕ್ಷರಶಃ ಪ್ರಜಾಸತ್ತಾತ್ಮಕ ಶೈಕ್ಷಣಿಕ ಸಂಸ್ಕೃತಿಗೆ ವಿರುದ್ಧವಾದ ನಡೆ.
ದುರದೃಷ್ಟಕರವೆಂದರೆ, ವಿಶ್ವವಿದ್ಯಾಲಯಗಳು ತಮ್ಮ ಕರ್ತವ್ಯ-ಬಾಧ್ಯತೆಗಳನ್ನೇ ಮರೆತಿವೆ. ವಿದ್ಯಾರ್ಥಿಗಳಲ್ಲಿ ಸ್ವತಂತ್ರವಾಗಿ ಆಲೋಚಿಸುವ, ವಿಮರ್ಶಿಸುವ, ಪ್ರಶ್ನಿಸುವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಅರಿಯುವ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಮರೆತಿವೆ. ಕೇವಲ ಪದವಿ ಪ್ರಮಾಣಪತ್ರಗಳನ್ನು ವಿತರಿಸುವ ಸಂಸ್ಥೆಗಳಾಗಿ ಬದಲಾಗುತ್ತಿವೆ. ಪ್ರಶ್ನೆ ಕೇಳುವ ವಿದ್ಯಾರ್ಥಿಗಳನ್ನೇ ಅನುಮಾನದಿಂದ ನೋಡುತ್ತಿವೆ.
ಆದರೆ, ಜಾಮಿಯಾ ವಿಶ್ವವಿದ್ಯಾಲಯವು ತನ್ನ ಐತಿಹಾಸಿಕ ಇತಿಹಾಸವನ್ನು ಮರೆತು, ಇತರ ವಿಶ್ವವಿದ್ಯಾಲಯಗಳಂತೆಯೇ ವರ್ತಿಸುತ್ತಿರುವುದು ಆಘಾತಕಾರಿ. ಯಾಕೆಂದರೆ, ಇದು ಬ್ರಿಟಿಷರ ಆಡಳಿತಕ್ಕೆ ಮಣಿಯದೆ ಸ್ವತಂತ್ರ ಶಿಕ್ಷಣ ಸಂಸ್ಥೆಯನ್ನು ಕಟ್ಟಲು ಮುಂದಾದವರ ಪರಂಪರೆಯನ್ನು ಹೊಂದಿದೆ. 1920ರಲ್ಲಿ ಬ್ರಿಟಿಷ್ ವಸಾಹತುಶಾಹಿಯ ವಿರುದ್ಧದ ಅಸಹಕಾರ ಚಳವಳಿಯ ಸಂದರ್ಭದಲ್ಲಿ ರೂಪುಗೊಂಡ ಈ ವಿಶ್ವವಿದ್ಯಾಲಯವು ಸ್ವಾತಂತ್ರ್ಯ, ರಾಷ್ಟ್ರೀಯತೆ, ಧಾರ್ಮಿಕ ಸೌಹಾರ್ದತೆ ಹಾಗೂ ಶಿಕ್ಷಣದ ಸ್ವಾಯತ್ತತೆಯ ಆಶಯಗಳನ್ನು ತನ್ನ ಅಡಿಪಾಯವಾಗಿಸಿಕೊಂಡಿತ್ತು.
ಇಂತಹ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರಜಾಸತ್ತಾತ್ಮಕ ಹಕ್ಕಿಗಾಗಿ ಹೋರಾಡಬೇಕಾಗಿ ಬಂದಿರುವುದು ಐತಿಹಾಸಿಕ ವೈರುಧ್ಯ. ಆದರೆ, ಜಾಮಿಯಾದ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯ ಹೋರಾಟದ ಪರಂಪರೆಯನ್ನು ಮತ್ತೆ ಜೀವಂತಗೊಳಿಸಿದ್ದಾರೆ.
2019ರ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಜಾಮಿಯಾ ವಿದ್ಯಾರ್ಥಿಗಳು ಪೊಲೀಸ್ ದಮನವನ್ನು ಎದುರಿಸಿದ್ದರು. ಆ ಘಟನೆ ಭಾರತದ ವಿದ್ಯಾರ್ಥಿ ಚಳವಳಿಗಳ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆಯಿತು. ಈಗ, ವಿದ್ಯಾರ್ಥಿ ಸಂಘದ ಚುನಾವಣೆಗಾಗಿ ನಡೆದಿರುವ ಹೋರಾಟವು, ಜಾಮಿಯಾದ ವಿದ್ಯಾರ್ಥಿಗಳ ಪ್ರಶ್ನಿಸುವ ಮನೋಭಾವ ಮತ್ತು ಸಂಘಟನಾ ಶಕ್ತಿ ಮತ್ತಷ್ಟು ಜೀವಂತಗೊಳಿಸಿದೆ.
ಈ ಹೋರಾಟದಲ್ಲಿ ವಿದ್ಯಾರ್ಥಿನಿಯರ ನಾಯಕತ್ವದ ಮಹತ್ವವನ್ನು ಅಲ್ಲಗಳೆಯಲಾಗದು. ನೌಶೀನ್ ಫಾರೂಕ್, ಹನೀನಾ ಬಿಂತ್ ಉಮರ್ ಹಾಗೂ ರಿದಾ ನೌಶಾದ್ ಖಾನ್ ಅವರಂತಹ ವಿದ್ಯಾರ್ಥಿನಿಯರು ಹೋರಾಟದ ಸಂಘಟನೆ, ಜನಸಂಪರ್ಕ, ಪ್ರತಿಭಟನೆಯ ನಿರ್ವಹಣೆ ಹಾಗೂ ಉಪವಾಸ ಸತ್ಯಾಗ್ರಹದಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ.
ಈ ಮೂವರೂ ವಿದ್ಯಾರ್ಥಿನಿಯರು ಕೇವಲ ಪ್ರತಿಭಟನೆಯಲ್ಲಿ ಭಾಗವಹಿಸಿದವರಲ್ಲ. ಹೋರಾಟವನ್ನು ರೂಪಿಸಿದವರು, ಮುನ್ನಡೆಸಿದವರು ಹಾಗೂ ನಿರಂತರವಾಗಿ ಜೀವಂತವಾಗಿಟ್ಟವರು. ”ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಮ್ಮ ಸಮಸ್ಯೆಗಳನ್ನು ನಿರ್ಭಯವಾಗಿ ಪ್ರತಿಪಾದಿಸಲು ವಿದ್ಯಾರ್ಥಿ ಸಂಘ ಅಗತ್ಯ. ಅಂತೆಯೇ, ಅನ್ಯಾಯ ಕಂಡಾಗ ಪ್ರಶ್ನಿಸುವುದು ವಿದ್ಯಾರ್ಥಿಗಳ ಜವಾಬ್ದಾರಿ” ಎಂಬುದನ್ನು ವಿಶ್ವವಿದ್ಯಾಲಯಗಳಿಗೆ ಸಾರಿ ಹೇಳಿದವರು.
ಜಾಮಿಯಾ ವಿದ್ಯಾರ್ಥಿಗಳು ಗೆದ್ದಿರುವುದು ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುವ ಭರವಸೆಯನ್ನ ಮಾತ್ರವಲ್ಲ, ಪ್ರಶ್ನಿಸುವ ಹಕ್ಕನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂಬ ವಿಶ್ವಾಸವನ್ನೂ ಗಳಿಸಿದ್ದಾರೆ. ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸುವುದಲ್ಲ, ಆಲಿಸುವುದೇ ವಿಶ್ವವಿದ್ಯಾಲಯದ ಕರ್ತವ್ಯ ಎಂಬ ಸ್ಪಷ್ಟ ಸಂದೇಶವನ್ನೂ ನೀಡಿದ್ದಾರೆ.
ಇದನ್ನು ಓದಿದ್ದೀರಾ?: ಮೋದಿಯ 56 ಇಂಚಿನ ಅಳ್ಳೆದೆ ಮತ್ತು ಚೀನಾದ ಅತಿಕ್ರಮಣ
ಸದ್ಯ, ಜಾಮಿಯಾ ಆಡಳಿತ ಮಂಡಳಿಯು ಚುನಾವಣೆ ನಡೆಸಲು ಲಿಖಿತ ಭರವಸೆ ನೀಡಿದೆ. ಚುನಾವಣೆಗಳು ಇನ್ನೂ ನಡೆದಿಲ್ಲ. ವಿದ್ಯಾರ್ಥಿ ಸಂಘದ ಸಂವಿಧಾನವೂ ಅಂತಿಮಗೊಂಡಿಲ್ಲ. ಆದ್ದರಿಂದ, ಆಡಳಿತ ಮಂಡಳಿ ತನ್ನ ಭರವಸೆಯನ್ನು ನಿಗದಿತ ಅವಧಿಯಲ್ಲಿ ಈಡೇರಿಸಬೇಕು. ವಿದ್ಯಾರ್ಥಿಗಳ ಪ್ರಾತಿನಿಧ್ಯದೊಂದಿಗೆ ಪಾರದರ್ಶಕವಾಗಿ ಚುನಾವಣಾ ನಿಯಮಗಳನ್ನು ರೂಪಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಮತ ಚಲಾಯಿಸುವ ಅವಕಾಶಗಳು ಎಲ್ಲ ಅರ್ಹ ವಿದ್ಯಾರ್ಥಿಗಳಿಗೂ ಸಮಾನವಾಗಿ ದೊರೆಯಬೇಕು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧದ ಎಲ್ಲ ಶಿಸ್ತುಕ್ರಮಗಳನ್ನು ಕಟ್ಟುನಿಟ್ಟಾಗಿ ಹಿಂತೆಗೆದುಕೊಳ್ಳಬೇಕು.
ಇದೇ ಸಂದರ್ಭದಲ್ಲಿ, ಕರ್ನಾಟಕದಲ್ಲಿಯೂ ವಿದ್ಯಾರ್ಥಿ ಸಂಘದ ಚುನಾವಣೆಗಳಿಗೆ ಅವಕಾಶ ಕಲ್ಪಿಸುವ ನಿರ್ಧಾರ ಹೊರಬಂದಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಒಡಿಶಾದಲ್ಲಿಯೂ ವಿದ್ಯಾರ್ಥಿ ಚುನಾವಣೆಗಳ ಮರುಸ್ಥಾಪನೆಯ ಕುರಿತ ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಜಾಮಿಯಾದ ವಿದ್ಯಾರ್ಥಿಗಳ ಯಶಸ್ಸು ದೇಶವ್ಯಾಪಿ ವಿದ್ಯಾರ್ಥಿಗಳಿಗೆ ಹೊಸ ಬಲ ನೀಡಿದೆ.



