ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಆರಂಭವಾದ ಹೋರಾಟ ಇದೀಗ ಕರ್ನಾಟಕ ರಾಜ್ಯ ಬಂದ್‌ಗೆ ಕರೆ ನೀಡುವ ಹಂತಕ್ಕೆ ತಲುಪಿದೆ. ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕಾದ ಸರ್ಕಾರದ ಮುಖ್ಯಮಂತ್ರಿಗಳೇ ಖಜಾನೆಯಲ್ಲಿ ಹಣವಿಲ್ಲ ಎಂದು ಹೇಳಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಜೇಬಿನಲ್ಲಿ ದುಡ್ಡು ಇದ್ದರೆ ತಾನೇ ಕೊಡಲು ಸಾಧ್ಯ? ಸರ್ಕಾರದ ಖಜಾನೆಯಲ್ಲಿ ಹಣ ಇದ್ದರೆ ಕೊಡಬಹುದು. ನೀವು ಕೇಳಿದ ತಕ್ಷಣ ಎಲ್ಲಿಂದ ಹಣ ತರಬೇಕು? ಎಂಬರ್ಥದಲ್ಲಿ ಮಾತನಾಡಿರುವುದು ರೈತರನ್ನು ಕೆರಳಿಸಿದೆ. ರೈತರ ಸಂಕಷ್ಟವನ್ನು ಆಲಿಸಿ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರವೇ ಹಣವಿಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸಿದರೆ ರೈತರು ಯಾರ ಮುಂದೆ ತಮ್ಮ ಅಳಲು ತೋಡಿಕೊಳ್ಳಬೇಕು ಎಂಬ ಪ್ರಶ್ನೆ ಎದುರಾಗಿದೆ.
ಸೆಪ್ಪೆಂಬರ್ 29ರಂದು ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾದ ಕಬ್ಬು ಬೆಳೆಗಾರರ ಹೋರಾಟ ಹತ್ತರಗಿ ಟೋಲ್ ನಾಕಾ ಬಂದ್, ಅಲ್ಲಿಂದ ಧಾರವಾಡ ಜಿಲ್ಲೆಯ ತೇಗೂರು ಹಾಗೂ ಯರಿಕೊಪ್ಪದವರೆಗೆ ಪಾದಯಾತ್ರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗಿನ ಸಭೆ, ರೈತರ ನಿಯೋಗದ ದೆಹಲಿ ಭೇಟಿ ಹೀಗೆ ಹಲವು ಹಂತಗಳನ್ನು ದಾಟಿದೆ. ನಂತರ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ರೈತರು ಮತ್ತು ಕಾರ್ಖಾನೆ ಮಾಲೀಕರ ಸಭೆ ನಡೆದರೂ ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಹೀಗಾಗಿ ಗುರ್ಲಾಪೂರ ಕ್ರಾಸ್‌ನಲ್ಲಿ ಮುಂದುವರಿದಿರುವ ಹೋರಾಟ ರಾಜ್ಯ ಬಂದ್‌ಗೆ ಕರೆ ನೀಡುವ ಹಂತಕ್ಕೆ ಬಂದು ನಿಂತಿದೆ.


ಕರ್ನಾಟಕ ಬೃಹತ್ ಸಕ್ಕರೆ ಉದ್ಯಮದ ರಾಜ್ಯ
ಕರ್ನಾಟಕ ದೇಶದ ಪ್ರಮುಖ ಕಬ್ಬು ಮತ್ತು ಸಕ್ಕರೆ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿದೆ. 2024-25ನೇ ಸಾಲಿನಲ್ಲಿ ರಾಜ್ಯದಲ್ಲಿ ಸುಮಾರು 5.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದ್ದು, ಒಟ್ಟು 480.60 ಲಕ್ಷ ಟನ್ ಕಬ್ಬು ಉತ್ಪಾದನೆಯಾಗಿದೆ. ಇನ್ನು 2025-26ನೇ ಸಕ್ಕರೆ ಹಂಗಾಮಿನಲ್ಲಿ ಫೆಬ್ರವರಿ 28ರ ವೇಳೆಗೆ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು 44.50 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ. ಏಪ್ರಿಲ್ ಅಂತ್ಯದ ವೇಳೆಗೆ ಈ ಪ್ರಮಾಣ ಸುಮಾರು 48 ಲಕ್ಷ ಟನ್‌ಗೆ ತಲುಪಿದೆ.
ಇನ್ನು ಸಕ್ಕರೆ ಕಾರ್ಖಾನೆಗಳ ವಿಚಾರಕ್ಕೆ ಬಂದರೆ, 2025-26ನೇ ಹಂಗಾಮಿನಲ್ಲಿ ರಾಜ್ಯದ 81 ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದವು. ಫೆಬ್ರವರಿ 28ರ ವೇಳೆಗೆ 56 ಕಾರ್ಖಾನೆಗಳು ನುರಿಸುವ ಕಾರ್ಯ ಸ್ಥಗಿತಗೊಳಿಸಿದ್ದರೆ, 25 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದವು.
ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಕಬ್ಬು ಉತ್ಪಾದನೆ ಮತ್ತು ಸಕ್ಕರೆ ಉತ್ಪಾದನೆ ನಡೆಯುವ ರಾಜ್ಯದಲ್ಲಿ ಕಬ್ಬು ಬೆಳೆದ ರೈತರು ಮಾತ್ರ ತಮ್ಮ ಬೆಳೆಗೆ ಸೂಕ್ತ ಬೆಲೆ ಪಡೆಯಲು ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಕ್ಕರೆ ಉದ್ಯಮದ ಆರ್ಥಿಕ ಚಟುವಟಿಕೆಗಳ ನಡುವೆ ಕಬ್ಬು ಬೆಳೆಗಾರರ ಉತ್ಪಾದನಾ ವೆಚ್ಚ, ನೀರಾವರಿ, ಕಾರ್ಮಿಕರ ಕೂಲಿ ಹಾಗೂ ಸಾಗಣೆ ವೆಚ್ಚಗಳನ್ನೂ ಪರಿಗಣಿಸಿ ನ್ಯಾಯಯುತ ಬೆಲೆ ನಿಗದಿಪಡಿಸಬೇಕೆಂಬುದು ರೈತರ ಆಗ್ರಹವಾಗಿದೆ.
ಒಣಗುತ್ತಿದೆ ಕಬ್ಬು, ಸಂಕಷ್ಟದಲ್ಲಿ ರೈತರು
ಒಂದೆಡೆ ರೈತರು ಕಬ್ಬಿನ ಬೆಲೆಗಾಗಿ ಹೋರಾಟ ಮಾಡುತ್ತಿದ್ದರೆ, ಮತ್ತೊಂದೆಡೆ ಸರಿಯಾಗಿ ಮಳೆಯಾಗದ ಕಾರಣ ಹೊಲದಲ್ಲಿರುವ ಕಬ್ಬು ಒಣಗುತ್ತಿದೆ. ಕೆಲವೆಡೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿಗೆ ಕಬ್ಬಿನ ಬೆಳೆ ಆಹುತಿಯಾಗುತ್ತಿರುವ ಘಟನೆಗಳೂ ವರದಿಯಾಗುತ್ತಿವೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಒಂದರಲ್ಲಿಯೇ ನೂರಾರು ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿದ್ದರೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ಖಚಿತ. ಕಬ್ಬು ಒಣಗಿದರೆ ಇಳುವರಿ ಕಡಿಮೆಯಾಗುತ್ತದೆ. ಇಳುವರಿ ಕಡಿಮೆಯಾದರೆ ಈಗಾಗಲೇ ಸಂಕಷ್ಟದಲ್ಲಿರುವ ರೈತರ ಆದಾಯ ಮತ್ತಷ್ಟು ಕುಸಿಯಲಿದೆ.
ಕಬ್ಬಿಗೆ ಪ್ರತಿ ಟನ್‌ಗೆ ₹5,500 ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಹೆಚ್ಚಿಸಿದರೆ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತದೆ ಎಂಬುದು ರೈತರ ಅಭಿಪ್ರಾಯ. ಆದರೆ ಕೇಂದ್ರ ಸರ್ಕಾರ ಈ ಸಮಸ್ಯೆ ಪರಿಹರಿಸಲು ಸಮಿತಿ ರಚಿಸುವುದಾಗಿ ತಿಳಿಸಿದ್ದು, ರೈತರು ನಿರೀಕ್ಷಿಸಿದಷ್ಟು ವೇಗದಲ್ಲಿ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಈ ಕುರಿತು ಈ ದಿನ.ಕಾಮ್ ಜತೆ ಮಾತನಾಡಿದ ರೈತ ಸಂಘಟನೆಯ ಮುಖಂಡ ಮಲ್ಲಿಕಾರ್ಜುನ ರಾಮದುರ್ಗ, ರೈತರು ಒಂದು ತಿಂಗಳಿಂದ ಹೋರಾಟ ಮಾಡುತ್ತಿದ್ದಾರೆ. ಸರ್ಕಾರವಾಗಲಿ, ಕಾರ್ಖಾನೆ ಮಾಲೀಕರಾಗಲಿ ಒಂದು ಇತ್ಯರ್ಥಕ್ಕೆ ಬರುತ್ತಿಲ್ಲ. ಇದರಿಂದ ರೈತರ ಕಬ್ಬು ಒಣಗುತ್ತಿದೆ. ಕಬ್ಬು ಒಣಗಿದರೆ ಸರಿಯಾಗಿ ಇಳುವರಿಯೂ ಬರುವುದಿಲ್ಲ. ಹೀಗಾದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದಷ್ಟು ಬೇಗ ಕಬ್ಬು ಬೆಳೆಗಾರರ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಬಾಗಲಕೋಟೆ ಜಿಲ್ಲೆಯ ರೈತ ಶಿವಾನಂದ ಬಳಮಟ್ಟಿ, ಸೆಪ್ಟೆಂಬರ್ 29ರಂದು ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಾವು ಹುಬ್ಬಳ್ಳಿಗೆ ತೆರಳಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮನೆಗೆ ಮುತ್ತಿಗೆ ಹಾಕಲು ಹೋದಾಗ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ನಂತರ ಅವರು ನಮ್ಮನ್ನು ದೆಹಲಿಗೆ ಕರೆಸಿಕೊಂಡರು. ಅಲ್ಲಿಗೂ ಹೋಗಿ ಬಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಇವತ್ತಿನ ದಿನ ರೈತರು ಹಗಲು ರಾತ್ರಿ ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ ನಮ್ಮ ಹೋರಾಟಕ್ಕೆ ಬೆಲೆ ಸಿಗುತ್ತಿಲ್ಲ. ಕಬ್ಬಿಗೆ ಬೆಲೆ ಹೆಚ್ಚಿಸಲು ಇವರಿಗೆ ಸಾಧ್ಯವಾಗದಿದ್ದರೆ ಇವರಿಗೆ ರಾಜ್ಯ ಮತ್ತು ದೇಶವನ್ನು ಆಳಲು ಯೋಗ್ಯತೆ ಇಲ್ಲ. ನಾವು ಬಳಸುವ ವಸ್ತುಗಳ ಬೆಲೆಯನ್ನು ಹೆಚ್ಚಿಸುತ್ತಾರೆ. ರೈತರಿಂದ ಹಾಲು ಖರೀದಿ ಮಾಡಿ ಅದನ್ನು ಮಾರಾಟ ಮಾಡುವ ಮೂಲಕ ಎರಡರಷ್ಟು ದುಡ್ಡು ಮಾಡುತ್ತಾರೆ, ಲಾಭ ಪಡೆಯುತ್ತಾರೆ. ಕಬ್ಬಿನಿಂದಲೂ ಸರ್ಕಾರಕ್ಕೆ ಬಹಳಷ್ಟು ಲಾಭವಿದೆ. ಆದರೆ ರೈತರನ್ನು ಮಾತ್ರ ಕಡೆಗಣಿಸುತ್ತಿದ್ದಾರೆ. ನಾವು ಕಳೆದ 40 ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದೇವೆ. ವರ್ಷಕ್ಕೆ ಸುಮಾರು 1,000ರಿಂದ 1,200 ಟನ್ ಕಬ್ಬು ಬೆಳೆಯುತ್ತೇವೆ. ಆದರೆ ಕಬ್ಬು ಬೆಳೆಗಾರರ ಕಷ್ಟ ರಾಜಕಾರಣಿಗಳಿಗೆ ಗೊತ್ತಾಗುತ್ತಿಲ್ಲ. ಕೃಷಿ ಕೂಲಿ ಕಾರ್ಮಿಕರ ಕೂಲಿ, ಗೊಬ್ಬರ, ಪೆಟ್ರೋಲ್, ಡೀಸೆಲ್ ಸೇರಿದಂತೆ ಕೃಷಿಗೆ ಬೇಕಾದ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ನಾವು ಇಷ್ಟು ದಿನ ಹೋರಾಟ ಮಾಡುತ್ತಿದ್ದರೂ ಯಾವೊಬ್ಬ ಜನಪ್ರತಿನಿಧಿಯೂ ನಮ್ಮ ಹತ್ತಿರ ಬಂದು ಸಮಸ್ಯೆ ಕೇಳಿಲ್ಲ. ಓಟು ಕೇಳಲು ಮಾತ್ರ ಬರುತ್ತಾರೆ. ಸರ್ಕಾರ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಕೇಂದ್ರ ರಾಜ್ಯ ಸರ್ಕಾರಗಳ ನಡುವೆ ಸಿಲುಕಿದ ರೈತರು
ಹಿಂದಿನ ವರ್ಷವೂ ರೈತರು ಇದೇ ರೀತಿ ಗುರ್ಲಾಪೂರ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ ರೈತರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಹೋರಾಟ ಅಂತ್ಯಗೊಳಿಸಿದ್ದರು. ಆದರೆ ಈ ಬಾರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂಬ ವಿಚಾರವನ್ನು ಮುಂದಿಟ್ಟಿರುವುದು ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿವೆ.
ಇನ್ನೊಂದೆಡೆ ರಾಜ್ಯದ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೂಡ ಈ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕಿದೆ ಎಂಬುದು ರೈತರ ನಿರೀಕ್ಷೆಯಾಗಿದೆ. ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಸಕ್ಕರೆಯ ಎಂಎಸ್‌ಪಿ ಹೆಚ್ಚಳ ಹಾಗೂ ಎಥೆನಾಲ್ ಖರೀದಿ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳುವಂತೆ ಒತ್ತಡ ತರಬೇಕಿದೆ. ಆದರೆ ಈ ವಿಚಾರದಲ್ಲಿ ಕೇಂದ್ರದ ಮಟ್ಟದಲ್ಲಿ ನಿರೀಕ್ಷಿತ ಸ್ಪಂದನೆ ದೊರೆಯುತ್ತಿಲ್ಲ ಎಂಬ ಅಸಮಾಧಾನವೂ ರೈತರಲ್ಲಿದೆ.
ಇದನ್ನೂ ಓದಿ: ಕಬ್ಬಿಗೆ ಬೆಂಬಲ ಬೆಲೆ: ಬೆಂಗಳೂರಿನಲ್ಲಿ ಕೇಂದ್ರ ತಜ್ಞರ ಸಮಿತಿಗೆ ಕಬ್ಬು ಬೆಳೆಗಾರರ ಅಹವಾಲು
ರಾಜ್ಯ ಸರ್ಕಾರ ಕೇಂದ್ರದತ್ತ ಬೆರಳು ತೋರಿಸಿದರೆ, ಕೇಂದ್ರ ಸರ್ಕಾರದ ಪ್ರತಿನಿಧಿಗಳು ರಾಜ್ಯ ಸರ್ಕಾರದತ್ತ ಬೆರಳು ತೋರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆ ಸಂಕಷ್ಟ ಅನುಭವಿಸುತ್ತಿರುವವರು ಮಾತ್ರ ಕಬ್ಬು ಬೆಳೆದ ರೈತರು. ಹೊಲದಲ್ಲಿ ಬೆಳೆ ಒಣಗುತ್ತಿದ್ದರೂ ರೈತರು ಹೋರಾಟದ ವೇದಿಕೆಯಲ್ಲಿ ತಮ್ಮ ಹಕ್ಕಿಗಾಗಿ ಧ್ವನಿ ಎತ್ತುತ್ತಿದ್ದಾರೆ.
ಸಕ್ಕರೆ ಉತ್ಪಾದನೆಯಲ್ಲಿ ದೇಶದ ಪ್ರಮುಖ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರು ತಮ್ಮ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಹೋರಾಟ ನಡೆಸಬೇಕಾದ ಪರಿಸ್ಥಿತಿ ಗಂಭೀರ ವಿಚಾರವಾಗಿದೆ. ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂಬ ಕಾರಣಕ್ಕೆ ರೈತರ ಬೇಡಿಕೆಗಳನ್ನು ಎಷ್ಟು ದಿನ ಮುಂದೂಡಬಹುದು? ಕಬ್ಬು ಒಣಗಿದರೆ ರೈತರ ನಷ್ಟಕ್ಕೆ ಯಾರು ಹೊಣೆ? ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಆರೋಪ ಮಾಡುವುದನ್ನು ಬಿಟ್ಟು ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಸಕ್ಕರೆ ಉದ್ಯಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ರೈತರ ಬದುಕು ಹಸನಾಗದಿದ್ದರೆ ಆ ಉದ್ಯಮದ ಬೆಳವಣಿಗೆಗೆ ಅರ್ಥವೇನು ಎನ್ನುವದು ರೈತರ ಅಭಿಪ್ರಾಯವಾಗಿದೆ.





