ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ, ತಮ್ಮನ್ನು ಸಿಆರ್‌ಪಿಎಫ್ ಸಿಬ್ಬಂದಿ ಬಸ್‌ನೊಳಗೆ ಕೆಳಗೆ ತಳ್ಳಿ ಹಲ್ಲೆ ನಡೆಸಿದ್ದಾರೆ ಮತ್ತು ಗಂಟಲು ಹಿಸುಕಿ ಉಸಿರುಗಟ್ಟಿಸಲು ಯತ್ನಿಸಿದ್ದಾರೆ ಎಂದು ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್ ಗಂಭೀರ ಆರೋಪ ಮಾಡಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ (RML) ಆಸ್ಪತ್ರೆಗೆ ದಾಖಲಿಸಲಾಗಿದೆ.
ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ವಶಕ್ಕೆ ಪಡೆಯಲಾದ ಜನಪ್ರತಿನಿಧಿಗಳು, ವಿದ್ಯಾರ್ಥಿ ನಾಯಕರ ಸ್ಥಿತಿಗತಿ ಪರಿಶೀಲಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ. “ನಾನು ಸಂಸದ (MP) ಎಂದು ಅವರಿಗೆ ತಿಳಿಸಿದರೂ ಸಿಆರ್‌ಪಿಎಫ್ ಸಿಬ್ಬಂದಿ ದಾಳಿ ಮುಂದುವರಿಸಿದರು. ಸೀಟಿನ ಮೇಲಿಂದ ಕೆಳಗೆ ತಳ್ಳಿ, ಉಸಿರುಗಟ್ಟಿಸಲು ಯತ್ನಿಸಿದರು. ದೇಶದಲ್ಲಿ ಒಬ್ಬ ಸಂಸದನ ಪರಿಸ್ಥಿತಿಯೇ ಹೀಗಾದರೆ ಸಾಮಾನ್ಯರ ಗತಿಯೇನು” ಎಂದು ಬ್ರಿಟ್ಟಾಸ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಆದೇಶ ಉಲ್ಲಂಘನೆ: ಕಾನೂನುಬಾಹಿರ ವಶಕ್ಕೆ ತಡೆ ಇದ್ದರೂ 100ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ!
ಮತ್ತೊಂದೆಡೆ, ಸಿಪಿಐಎಂ ಪಕ್ಷವು ದೆಹಲಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ದೆಹಲಿ ಪೊಲೀಸರು ಸಂಸದ ಜಾನ್ ಬ್ರಿಟ್ಟಾಸ್ ಅವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ, ಗಾಯಗೊಂಡ ಸ್ಥಿತಿಯಲ್ಲಿ ಅವರನ್ನು ರಸ್ತೆಬದಿಯಲ್ಲೇ ಬಿಟ್ಟು ಹೋಗಿದ್ದಾರೆ” ಎಂದು ಆರೋಪಿಸಿದೆ.
ಘಟನೆಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬ್ರಿಟ್ಟಾಸ್ ಅವರು ಬಸ್ ಒಂದರ ಬಳಿ ಏಳಲಾಗದೆ ಕಷ್ಟಪಡುತ್ತಿರುವುದು ಮತ್ತು ನಂತರ ಆಟೋರಿಕ್ಷಾ ಹತ್ತುವುದಕ್ಕೆ ಪೊಲೀಸ್ ಸಿಬ್ಬಂದಿಯೊಬ್ಬರು ನೆರವಾಗುತ್ತಿರುವುದು ಕಂಡುಬಂದಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರನ್ನು ಪಕ್ಷದ ಇತರ ಹಿರಿಯ ನಾಯಕರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.




