ಅಪರಾಧಿಗಳು ಸಹಾನುಭೂತಿ ಪಡೆಯಲು ಅವರ ಜಾತಿಯನ್ನು ಪರಿಗಣಿಸುವ ಅಥವಾ ಉಲ್ಲೇಖಿಸುವ ಅಗತ್ಯವಿಲ್ಲ. ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಜಸ್ಥಾನದಲ್ಲಿ ಆರು ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಆ ಶಿಕ್ಷೆಯನ್ನು 12 ವರ್ಷಗಳ ಜೈಲು ಶಿಕ್ಷೆಗೆ ಇಳಿಸಿ ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿತ್ತು. ತೀರ್ಪಿನಲ್ಲಿ ಆತನ ಜಾತಿಯನ್ನು ಕೋರ್ಟ್ ಉಲ್ಲೇಖಿಸಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜಸ್ಥಾನ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್ ಅವರಿದ್ದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿದೆ.
ವಿಚಾರಣೆ ವೇಳೆ ದಾವೆಯನ್ನು ಗಮನಿಸಿದ ಪೀಠ, “ದಾವೆಯಲ್ಲಿ ಆರೋಪಿಯ ಜಾತಿಯನ್ನು ನಮೂದಿಸಲೇಬಾರದು” ಎಂದು ಹೇಳಿದೆ.
“ವಿಚಾರಣಾ ನ್ಯಾಯಾಲಯ ಮತ್ತು ರಾಜಸ್ಥಾನ ಹೈಕೋರ್ಟ್ ತಮ್ಮ ಆದೇಶದಲ್ಲಿ ಅಪರಾಧಿಯ ಜಾತಿಯನ್ನು ಏಕೆ ಉಲ್ಲೇಖಿಸಿವೆ ಎಂಬುದೇ ಅರ್ಥವಾಗುತ್ತಿಲ್ಲ. ವಾದಿ ಅಥವಾ ಪ್ರತಿವಾದಿಯ ಜಾತಿ ಇಲ್ಲವೇ ಧರ್ಮವನ್ನು ತೀರ್ಪಿನಲ್ಲಿ ನಮೂದಿಸಬಾರದು” ಎಂದು ಹೇಳಿದೆ.
ಅಲ್ಲದೆ, ಅಪರಾಧಿಗೆ ಶಿಕ್ಷೆಯನ್ನ 14 ವರ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ.