ಅಯೋಧ್ಯೆ ರಾಮ ಮಂದಿರದ ಆಡಳಿತ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇದೀಗ ‘ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ'(CEO) ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಟ್ರಸ್ಟ್ ತನ್ನ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- ವಿದ್ಯಾರ್ಹತೆ ಮತ್ತು ಅನುಭವ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ಆಡಳಿತ ಅಥವಾ ಹಣಕಾಸು ವಿಭಾಗದಲ್ಲಿ ಕನಿಷ್ಠ 20 ವರ್ಷಗಳ ಅನುಭವ ಹೊಂದಿರಬೇಕು.
- ಧಾರ್ಮಿಕ ಹಿನ್ನೆಲೆ: ಅಭ್ಯರ್ಥಿಯು ಸಕ್ರಿಯವಾಗಿ ಆಚರಣೆಯಲ್ಲಿರುವ ಹಿಂದೂ ಆಗಿರಬೇಕು. ವೈಷ್ಣವ ಸಂಪ್ರದಾಯದ ರಾಮ ಭಕ್ತರಿಗೆ ಆದ್ಯತೆ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
- ವೈಯಕ್ತಿಕ ಗುಣಲಕ್ಷಣಗಳು: ಅಭ್ಯರ್ಥಿಯು ದೃಢವಾದ ನಾಯಕತ್ವ ಗುಣ, ಪ್ರಾಮಾಣಿಕತೆ ಮತ್ತು ಉತ್ತಮ ನಿರ್ವಹಣಾ ಕೌಶಲ್ಯವನ್ನು ಹೊಂದಿರಬೇಕು.
ಆಯ್ಕೆಯಾದ ಅಭ್ಯರ್ಥಿಯು ಅಯೋಧ್ಯೆಯಲ್ಲೇ ನೆಲೆಸಬೇಕಾಗುತ್ತದೆ. ಆರಂಭದಲ್ಲಿ ಈ ನೇಮಕಾತಿಯು 3 ವರ್ಷಗಳ ಅವಧಿಗೆ ಇರುತ್ತದೆ. ದೇವಾಲಯದ ದಿನನಿತ್ಯದ ಆಡಳಿತ, ಸಿಬ್ಬಂದಿಗಳ ಮೇಲ್ವಿಚಾರಣೆ, ಟ್ರಸ್ಟ್ನ ನಿರ್ಧಾರಗಳ ಅನುಷ್ಠಾನ ಹಾಗೂ ಧಾರ್ಮಿಕ ಮತ್ತು ನಾಗರಿಕ ಚಟುವಟಿಕೆಗಳ ನಡುವೆ ಸಮನ್ವಯ ಸಾಧಿಸುವ ಜವಾಬ್ದಾರಿಯನ್ನು CEO ಹೊರಬೇಕಾಗುತ್ತದೆ.
ಟ್ರಸ್ಟ್ ರಚಿಸಿರುವ ಹುಡುಕಾಟ ಸಮಿತಿಯು (Search Committee) ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಲಿದೆ. ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು, ಅಂತಿಮ ಶಿಫಾರಸು ಮಾಡಲಾಗುವುದು. ಅರ್ಜಿ ಸಲ್ಲಿಸಲು ಜುಲೈ 18 ಅಂತಿಮ ದಿನಾಂಕವಾಗಿದ್ದು, ಆ ನಂತರ ಒಂದು ತಿಂಗಳೊಳಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಟ್ರಸ್ಟ್ ಯೋಜಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ರಾಮಮಂದಿರ ಲೂಟಿ: ಆರೋಪಿಗಳ ಪರ ವಾದಿಸದಿರಲು ಅಯೋಧ್ಯೆಯ ವಕೀಲರ ನಿರ್ಧಾರ
ರಾಮಮಂದಿರದಲ್ಲಿ ನಡೆದ ದೇಣಿಗೆ ಹಗರಣ ಪ್ರಕರಣದ ನಂತರ CEO ಹುದ್ದೆಯ ನೇಮಕಾತಿಯು ಸಾರ್ವಜನಿಕವಾಗಿ ಹೆಚ್ಚಿನ ಗಮನ ಸೆಳೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್ (VHP), ನೇಮಕಾತಿಯು ಸಂಪೂರ್ಣವಾಗಿ ಟ್ರಸ್ಟ್ನ ಸ್ವತಂತ್ರ ನಿರ್ಧಾರವಾಗಿರಬೇಕು ಮತ್ತು ಸರ್ಕಾರಿ ಹಸ್ತಕ್ಷೇಪ ಇರಬಾರದು ಎಂದು ಪ್ರತಿಪಾದಿಸಿದೆ. ಅಲ್ಲದೆ, ನಿವೃತ್ತ ಅಧಿಕಾರಿಯನ್ನೇ ನೇಮಿಸಬೇಕೆಂಬ ಸಲಹೆಯನ್ನು ವಿರೋಧಿಸಿರುವ ವಿಎಚ್ಪಿ, ಅಭ್ಯರ್ಥಿಗಳ ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಟ್ರಸ್ಟ್ ಮಾತ್ರ ನಿರ್ಧರಿಸಬೇಕು ಎಂದು ಸ್ಪಷ್ಟಪಡಿಸಿದೆ.




