ಮುಂಬರುವ ನವೆಂಬರ್ 30ರ ವಿಶೇಷ ಸಂಸತ್ ಅಧಿವೇಶನಕ್ಕೂ ಮುನ್ನ, ಉದ್ದೇಶಿತ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಮಸೂದೆಯನ್ನು ವಿರೋಧಿಸುವಂತೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಶನಿವಾರ ಎಲ್ಲ ರಾಜಕೀಯ ಪಕ್ಷಗಳು ಮತ್ತು ಸಂಸದರಿಗೆ ಕರೆ ನೀಡಿದೆ. ಈ ಮಸೂದೆಯ ಅಂಗೀಕಾರಕ್ಕೆ ಸಹಕರಿಸುವವರು ಜನಾದೇಶಕ್ಕೆ “ಘೋರ ದ್ರೋಹ” ಬಗೆದಂತಾಗುತ್ತದೆ ಎಂದು ಸಿಜೆಪಿ ತೀವ್ರ ಎಚ್ಚರಿಕೆ ನೀಡಿದೆ.
ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಪಕ್ಷಪಾತದಿಂದ ಮರುರಚಿಸುವುದು (ಜೆರೀ ಮ್ಯಾಂಡರಿಂಗ್) ಆಡಳಿತಾರೂಢ ಬಿಜೆಪಿಗೆ ಅನ್ಯಾಯದ ಚುನಾವಣಾ ಲಾಭವನ್ನು ತಂದುಕೊಡಬಹುದು ಎಂದು ಸಿಜೆಪಿ ಆರೋಪಿಸಿದೆ. ಈ ಪ್ರಕ್ರಿಯೆಯು ದೇಶದ ಚುನಾವಣಾ ನಕ್ಷೆಯನ್ನು ತಿರುಚುವ ಪ್ರಯತ್ನವಾಗಿದ್ದು, ಇದರ ಪರಿಣಾಮವಾಗಿ ದೇಶದ ಯುವಜನತೆ ಮುಂದಿನ ಹಲವು ತಲೆಮಾರುಗಳವರೆಗೆ ಬೆಲೆ ತೆರಬೇಕಾಗುತ್ತದೆ ಎಂದು ಸಿಜೆಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಜೆರೀ ಮ್ಯಾಂಡರಿಂಗ್ ಎಂದರೇನು? ಈ ಕುತಂತ್ರ ಹುಟ್ಟಿದ್ದು ಹೇಗೆ?
ಮಹಿಳಾ ಮೀಸಲಾತಿ ಜಾರಿಯ ನೆಪದಲ್ಲಿ ಕೇಂದ್ರ ಸರ್ಕಾರವು ಕ್ಷೇತ್ರ ಮರುವಿಂಗಡಣೆಯನ್ನು ತರಲು ಪ್ರಯತ್ನಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಸಿಜೆಪಿ ಪುನರುಚ್ಚರಿಸಿದೆ. ಮಹಿಳಾ ಮೀಸಲಾತಿ ಮಸೂದೆ ಈಗಾಗಲೇ ಸಂಸತ್ತಿನಲ್ಲಿ ಅಂಗೀಕಾರವಾಗಿದ್ದರೂ ಇನ್ನೂ ಜಾರಿಯಾಗಿಲ್ಲ; ಅದನ್ನು ಕೇವಲ ಒಂದು ಮುಸುಕಾಗಿ ಬಳಸಿಕೊಂಡು ಕ್ಷೇತ್ರಗಳ ಗಡಿಗಳನ್ನು ಬದಲಾಯಿಸುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಸಿಜೆಪಿ ಟೀಕಿಸಿದೆ.
ಸಂಸದರು ತಾವು ಕುಳಿತಿರುವ ಸಂಸ್ಥೆಯ ಘನತೆಯನ್ನು ಕುಗ್ಗಿಸುವಂತಹ ವಿಭಜಕ ಮತ್ತು ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಸಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತತ್ವಹೀನ ರಾಜಕಾರಣವನ್ನು ಬದಿಗಿಟ್ಟು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆದರ್ಶಗಳನ್ನು ಎತ್ತಿಹಿಡಿಯಲು ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ನಿಂತು ಸಂಸತ್ತಿನಲ್ಲಿ ಈ ಮಸೂದೆಯನ್ನು ವಿರೋಧಿಸಬೇಕು ಎಂದು ಸಿಜೆಪಿ ಒತ್ತಾಯಿಸಿದೆ.
ಜೆರೀ ಮ್ಯಾಂಡರಿಂಗ್ (Gerrymandering) ಎಂದರೇನು?
ಚುನಾವಣೆಯಲ್ಲಿ ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಅಥವಾ ಗುಂಪಿಗೆ ಅನ್ಯಾಯದ ಲಾಭವಾಗುವಂತೆ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ಉದ್ದೇಶಪೂರ್ವಕವಾಗಿ ಮತ್ತು ಪಕ್ಷಪಾತದಿಂದ ಮರುರಚಿಸುವ (ಬದಲಾಯಿಸುವ) ರಾಜಕೀಯ ತಂತ್ರಕ್ಕೆ ‘ಜೆರೀ ಮ್ಯಾಂಡರಿಂಗ್’ ಎಂದು ಕರೆಯಲಾಗುತ್ತದೆ. ಇದರಲ್ಲಿ ತಮ್ಮ ಪಕ್ಷದ ಬೆಂಬಲಿಗರ ಮತಗಳು ವ್ಯರ್ಥವಾಗದಂತೆ ಒಂದೇ ಕ್ಷೇತ್ರಕ್ಕೆ ಸೇರಿಸುವುದು ಅಥವಾ ವಿರೋಧ ಪಕ್ಷದ ಮತಗಳನ್ನು ಹಲವು ಕ್ಷೇತ್ರಗಳಲ್ಲಿ ಹಂಚಿಹೋಗುವಂತೆ ಗಡಿಗಳನ್ನು ಅಸಹಜವಾಗಿ ಎಳೆಯುವ ಮೂಲಕ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲಾಗುತ್ತದೆ.
‘ಜೆರೀ ಮ್ಯಾಂಡರಿಂಗ್’ ಎಂಬ ಪದವು 1812ರಲ್ಲಿ ಅಮೆರಿಕದ ಮ್ಯಾಸಚೂಸೆಟ್ಸ್ ರಾಜ್ಯದಲ್ಲಿ ಹುಟ್ಟಿಕೊಂಡಿತು. ಇದು ಅಂದಿನ ರಾಜ್ಯಪಾಲ ಎಲ್ಬ್ರಿಡ್ಜ್ ಜೆರೀ ಅವರ ಹೆಸರು ಮತ್ತು ಸಲಾಮಾಂಡರ್ ಎಂಬ ಸರೀಸೃಪದ ಹೆಸರಿನ ಸಂಯೋಜನೆಯಾಗಿದೆ. 1812ರಲ್ಲಿ ಮ್ಯಾಸಚೂಸೆಟ್ಸ್‌ನ ರಾಜ್ಯಪಾಲರಾಗಿದ್ದ ಎಲ್ಬ್ರಿಡ್ಜ್ ಜೆರೀ ಅವರು ತಮ್ಮ ಡೆಮಾಕ್ರಟಿಕ್-ರಿಪಬ್ಲಿಕನ್ ಪಕ್ಷಕ್ಕೆ ರಾಜ್ಯ ಸೆನೆಟ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡುವ ಉದ್ದೇಶದಿಂದ, ಎಸೆಕ್ಸ್ ಕೌಂಟಿಯ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ಅತ್ಯಂತ ಅಸಹಜವಾಗಿ ಮತ್ತು ವಿಚಿತ್ರವಾಗಿ ಮರುರಚಿಸುವ ಮಸೂದೆಗೆ ಸಹಿ ಹಾಕಿದರು.
ಆ ರೀತಿ ಮರುರಚಿಸಲಾದ ಒಂದು ಚುನಾವಣಾ ಕ್ಷೇತ್ರದ ನಕ್ಷೆಯು ನೋಡಲು ‘ಸಲಾಮಾಂಡರ್’ (ಹಲ್ಲಿಯಂತಹ ಒಂದು ಪ್ರಾಣಿ) ಆಕಾರದಂತೆ ಕಾಣುತ್ತಿತ್ತು. ಮಾರ್ಚ್ 26, 1812 ರಂದು ‘ಬೋಸ್ಟನ್ ಗೆಜೆಟ್’ ಪತ್ರಿಕೆಯು ಆ ವಿಚಿತ್ರ ಕ್ಷೇತ್ರದ ನಕ್ಷೆಗೆ ರೆಕ್ಕೆ, ಉಗುರು ಮತ್ತು ತಲೆಯನ್ನು ಸೇರಿಸಿ ವ್ಯಂಗ್ಯಚಿತ್ರವೊಂದನ್ನು ಪ್ರಕಟಿಸಿತು. ಆ ಚಿತ್ರಕ್ಕೆ ಸಂಪಾದಕರು “ಇದು ಸಲಾಮಾಂಡರ್ ಅಲ್ಲ, ಇದೊಂದು ಜೆರೀಮ್ಯಾಂಡರ್” ಎಂದು ಶೀರ್ಷಿಕೆ ನೀಡಿದರು. ಅಂದಿನಿಂದ, ಯಾವುದೇ ರಾಜಕೀಯ ಪಕ್ಷವು ತನ್ನ ಸ್ವಾರ್ಥ ಅಥವಾ ಚುನಾವಣಾ ಲಾಭಕ್ಕಾಗಿ ಕ್ಷೇತ್ರಗಳ ಗಡಿಗಳನ್ನು ಅಸಹಜವಾಗಿ ಬದಲಾಯಿಸುವ ಪ್ರಕ್ರಿಯೆಯನ್ನು ಪ್ರಪಂಚದಾದ್ಯಂತ ‘ಜೆರೀ ಮ್ಯಾಂಡರಿಂಗ್’ ಎಂದು ಕರೆಯಲಾಗುತ್ತದೆ.



