ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸುಮಾರು ಮೂರು ವರ್ಷಗಳು ಕಳೆದಯುತ್ತಿವೆ. ಈ ನಡುವೆ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ತೀವ್ರ ಆಂತರಿಕ ಭಿನ್ನಮತದ ಸವಾಲು ಎದುರಿಸುತ್ತಿದ್ದಾರೆ. ಈಗ ಸರ್ಕಾರದ ವಿರುದ್ಧದ ಸ್ವಪಕ್ಷದ ಶಾಸಕರೇ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕ ವಾಕ್ಸಮರ, ಭ್ರಷ್ಟಾಚಾರದ ಆರೋಪಗಳು, ಅಭಿವೃದ್ಧಿ ಅನುದಾನ ಹಂಚಿಕೆಯಲ್ಲಿನ ತಾರತಮ್ಯ, ಸಚಿವರ ನಡುವಿನ ಪೈಪೋಟಿ ಹಾಗೂ ಹೈಕಮಾಂಡ್‌ಗೆ ತಲುಪಿರುವ ದೂರುಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿವೆ. ಈ ಆಂತರಿಕ ಕಲಹವನ್ನು ಶಮನಗೊಳಿಸಲು ಪಕ್ಷವು ಹೊಸ ರಾಜ್ಯ ಉಸ್ತುವಾರಿಯನ್ನು ನೇಮಿಸಿದೆ.
ಸರ್ಕಾರದ ವಿರುದ್ಧ ಮೊದಲ ಬಾರಿಗೆ ಬಹಿರಂಗವಾಗಿ ವಾಗ್ದಾಳಿ ನಡೆಸಿದ ಮುನುಗೋಡು ಶಾಸಕ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ, “ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿಲ್ಲದ ಶಾಸಕರ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
“ಮುಖ್ಯಮಂತ್ರಿಗಳ ಸ್ವಕ್ಷೇತ್ರ ಕೊಡಂಗಲ್ ಮತ್ತು ಸಚಿವರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಮಾತ್ರ ಆದ್ಯತೆಯ ಮೇಲೆ ಅಭಿವೃದ್ಧಿ ಅನುದಾನ ಬಿಡುಗಡೆಯಾಗುತ್ತಿದ್ದು, ಉಳಿದ ಶಾಸಕರು ಮೂಲಭೂತ ಅಭಿವೃದ್ಧಿ ಕಾರ್ಯಗಳಿಗೂ ಅನುದಾನ ಪಡೆಯಲು ಪರದಾಡುವಂತಾಗಿದೆ” ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ ಮತ್ತೊಂದು ರಾಜಕೀಯ ‘ಕುರುಕ್ಷೇತ್ರ’ ನಡೆಯಲಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಪ್ರತಿಯಾಗಿ ತಿರುಗೇಟು ನೀಡಿದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಯಾರ ಹೆಸರನ್ನೂ ಉಲ್ಲೇಖಿಸದೆ ಸ್ವಪಕ್ಷದ ಕೆಲವು ನಾಯಕರಿಗೆ ‘ಹುಚ್ಚು ನಾಯಿ ಕಚ್ಚಿದೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯಿಂದ ಕೆರಳಿದ ರಾಜ್ ಗೋಪಾಲ್ ರೆಡ್ಡಿ, ಉನ್ನತ ಸಾಂವಿಧಾನಿಕ ಮತ್ತು ರಾಜಕೀಯ ಹುದ್ದೆಯಲ್ಲಿರುವವರು ಮಾತನಾಡುವ ಘನತೆಯನ್ನು ಪ್ರಶ್ನಿಸಿದ್ದಲ್ಲದೆ, ಸರ್ಕಾರದ ಭ್ರಷ್ಟಾಚಾರ ರಹಿತ ಆಡಳಿತದ ಹೇಳಿಕೆಗಳ ಸತ್ಯಾಸತ್ಯತೆಯನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಜಡ್ಚೆರ್ಲಾ ಶಾಸಕ ಜೆ. ಅನಿರುದ್ಧ್ ರೆಡ್ಡಿ ಅವರು ಸರ್ಕಾರಕ್ಕೆ ಮುಜುಗರ ತರುವಂತಹ ಮತ್ತೊಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದರು. ಸಣ್ಣಪುಟ್ಟ ಅಭಿವೃದ್ಧಿ ಕಾಮಗಾರಿಗಳಿಗೂ ಸರ್ಕಾರಿ ಅಧಿಕಾರಿಗಳು ಗುತ್ತಿಗೆದಾರರಿಂದ ಶೇ.10 ರಿಂದ 20ರಷ್ಟು ಕಮಿಷನ್ ಕೇಳುತ್ತಿದ್ದಾರೆ. ಅಕ್ರಮ ಹಣ ನೀಡದ ಹೊರತು ಬಿಲ್‌ಗಳನ್ನು ಪಾವತಿಸದೆ ತಡೆಹಿಡಿಯಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು. ಸುಮಾರು 40 ಕೋಟಿ ರೂಪಾಯಿಗಳಷ್ಟು ಅಭಿವೃದ್ಧಿ ಕಾಮಗಾರಿಗಳ ಬಾಕಿ ಬಿಲ್‌ಗಳನ್ನು ಬಿಡುಗಡೆ ಮಾಡದಿದ್ದರೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದ್ದರು.
ಇನ್ನು, ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಸಮಾವೇಶದ ಸಂದರ್ಭದಲ್ಲಿ ಹಿರಿಯ ಸಚಿವ ದಾಮೋದರ ರಾಜನರಸಿಂಹ ಮತ್ತು ಜುಕ್ಕಲ್ ಶಾಸಕ ಟಿ. ಲಕ್ಷ್ಮೀಕಾಂತ ರಾವ್ ನಡುವೆ ಸಾರ್ವಜನಿಕವಾಗಿಯೇ ತೀವ್ರ ವಾಗ್ವಾದ ನಡೆದಿದ್ದು, ಸಾಂಸ್ಥಿಕ ನೇಮಕಾತಿಗಳು ಮತ್ತು ಕ್ಷೇತ್ರದ ಪ್ರಾಬಲ್ಯದ ವಿಚಾರದಲ್ಲಿನ ಒಳಜಗಳ ಬಹಿರಂಗಗೊಂಡಿತ್ತು.
ಮತ್ತೊಂದೆಡೆ, ಶಾಸಕರಾದ ವಿಜಯ ರಮಣ ರಾವ್ ಮತ್ತು ಮಕ್ಕನ್ ಸಿಂಗ್ ರಾಜ್ ಠಾಕೂರ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಸಚಿವ ಡಿ. ಶ್ರೀಧರ್ ಬಾಬು ಮತ್ತು ಪೆದ್ದಪಲ್ಲಿ ಸಂಸದ ಜಿ. ವಂಶಿ ಕೃಷ್ಣ ನಡುವೆಯೂ ಭಿನ್ನಾಭಿಪ್ರಾಯಗಳು ತಲೆದೋರಿವೆ.
ಈ ಎಲ್ಲ ಆಂತರಿಕ ಕಿತ್ತಾಟಗಳ ನಡುವೆ, ಮುಂಬರುವ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (GHMC) ಚುನಾವಣೆಯು 2028ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಸರ್ಕಾರಕ್ಕೆ ಅತ್ಯಂತ ಮಹತ್ವದ ರಾಜಕೀಯ ಅಗ್ನಿಪರೀಕ್ಷೆಯಾಗಲಿದೆ. 2020ರ ಪಾಲಿಕೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾಂಗ್ರೆಸ್, 2023ರ ವಿಧಾನಸಭಾ ಚುನಾವಣೆಯಲ್ಲೂ ಹಳೆಯ ಜಿಎಚ್‌ಎಂಸಿ ವ್ಯಾಪ್ತಿಯ 24 ಕ್ಷೇತ್ರಗಳಲ್ಲಿ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ವಿಫಲವಾಗಿತ್ತು.


