ನೈರುತ್ಯ ಮುಂಗಾರಿನ ತೀವ್ರ ಅಭಾವದಿಂದಾಗಿ ದೇಶದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿದ್ದು, ಇದು ಕೃಷಿ ಉತ್ಪಾದನೆ ಹಾಗೂ ಜಲವಿದ್ಯುತ್ ಉತ್ಪಾದನೆಗೆ ಭಾರಿ ಹೊಡೆತ ನೀಡಲಿದೆ. ಕಳೆದ ವರ್ಷ ಶೇ 90ಕ್ಕಿಂತ ಹೆಚ್ಚು ತುಂಬಿದ್ದ ಜಲಾಶಯಗಳು ಈ ಬಾರಿ ಮೂರನೇ ಎರಡರಷ್ಟು ಕೂಡ ಭರ್ತಿಯಾಗಿಲ್ಲ ಎಂಬುದು ಕೃಷಿ ಮತ್ತು ಇಂಧನ ವಲಯದ ಭವಿಷ್ಯದ ಸಂಕಷ್ಟಗಳನ್ನು ಮುನ್ಸೂಚಿಸುತ್ತಿದೆ. ದಶಕಗಳಲ್ಲೇ ಅತ್ಯಂತ ಶುಷ್ಕ ಮುಂಗಾರು ಋತುಗಳಲ್ಲಿ ಇದೂ ಒಂದಾಗಿದೆ.
ದೇಶಾದ್ಯಂತ ನೀರಾವರಿ ಕಾಲುವೆಗಳು, ಜಲವಿದ್ಯುತ್ ಘಟಕಗಳು ಮತ್ತು ನಗರಗಳಿಗೆ ಕುಡಿಯುವ ನೀರು ಪೂರೈಸುವ ಒಟ್ಟು 178 ಜಲಾಶಯಗಳಲ್ಲಿನ ನೀರಿನ ಮಟ್ಟವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 27 ರಷ್ಟು ಕುಸಿದಿದ್ದು, ಕೇವಲ 121.9 ಬಿಲಿಯನ್ ಕ್ಯೂಬಿಕ್ ಮೀಟರ್(12,190 ಕೋಟಿ ಘನ ಮೀಟರ್) (bcm) ನೀರು ಮಾತ್ರ ಸಂಗ್ರಹವಾಗಿದೆ. ಈ ಒಣಹವೆಯು ಈಗಾಗಲೇ ಗ್ರಾಮೀಣ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಾರಂಭಿಸಿದ್ದು, 6 ರಾಜ್ಯಗಳು ಬರಗಾಲವನ್ನು ಘೋಷಿಸಿವೆ ಹಾಗೂ ಆಹಾರ ಹಣದುಬ್ಬರ ಹೆಚ್ಚಾಗುವ ಅಪಾಯವಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಚ್ಚರಿಕೆ ನೀಡಿದೆ.
ಕೇಂದ್ರ ಜಲ ಆಯೋಗದ (CWC) ದತ್ತಾಂಶಗಳ ಪ್ರಕಾರ, ದಕ್ಷಿಣ ಭಾರತದ ಜಲಾಶಯಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಕಳೆದ ವರ್ಷ ಶೇ 89.97 ರಷ್ಟಿದ್ದ ದಕ್ಷಿಣದ ಜಲಾಶಯಗಳ ನೀರಿನ ಮಟ್ಟ ಈ ವರ್ಷ ಕೇವಲ ಶೇ 42.6 ಕ್ಕೆ ಕುಸಿದಿದೆ. ಉಳಿದಂತೆ ಉತ್ತರ ಭಾರತದಲ್ಲಿ ಶೇ 56.62% (ಕಳೆದ ವರ್ಷ 86.32%), ಪಶ್ಚಿಮದಲ್ಲಿ ಶೇ 76.17 (96.10%), ಪೂರ್ವದಲ್ಲಿ ಶೇ 75.74 (81.66%) ಹಾಗೂ ಮಧ್ಯ ಭಾರತದಲ್ಲಿ ಕೇವಲ ಶೇ 84.23 (92.01) ರಷ್ಟು ನೀರಿದೆ. ಆದರೆ, ದಕ್ಷಿಣ ಪರ್ಯಾಯ ದ್ವೀಪದಲ್ಲಿ ಈಶಾನ್ಯ ಮುಂಗಾರು ಇನ್ನೂ ಸಕ್ರಿಯವಾಗಿರುವುದು ಕೊಂಚ ಭರವಸೆ ಮೂಡಿಸಿದೆ.
ಜಲಾಶಯಗಳಲ್ಲಿನ ನೀರಿನ ಕೊರತೆಯಿಂದಾಗಿ ಹಿಂಗಾರು ಬಿತ್ತನೆ ತೀವ್ರವಾಗಿ ಕುಸಿದಿದೆ. ನವೆಂಬರ್ 6 ರ ವೇಳೆಗೆ ಕೇವಲ 1. 17 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಇದು ಕಳೆದ ವರ್ಷದ 1.4 ಕೋಟಿ ಹೆಕ್ಟೇರ್‌ಗಿಂತ 20.5 ಲಕ್ಷ ಹೆಕ್ಟೇರ್ ಕಡಿಮೆಯಾಗಿದೆ. 2021 ರಿಂದ 2025 ರ ಅವಧಿಯಲ್ಲಿ ಹಿಂಗಾರು ಬಿತ್ತನೆಯ ಸರಾಸರಿ 7.1 ಕೋಟಿ ಹೆಕ್ಟೇರ್ ಆಗಿತ್ತು. ಕೃಷಿ ಸಚಿವಾಲಯದ ದತ್ತಾಂಶಗಳ ಪ್ರಕಾರ, ಗೋಧಿ ಬಿತ್ತನೆ 12 ರಷ್ಟು (2 ಲಕ್ಷ ಹೆಕ್ಟೇರ್), ಭತ್ತ ಶೇ 3.10 ರಷ್ಟು (673,000 ಹೆಕ್ಟೇರ್) ಹಾಗೂ ದ್ವಿದಳ ಧಾನ್ಯಗಳ ಬಿತ್ತನೆ ಶೇ 14.4 ರಷ್ಟು (30 ಲಕ್ಷ ಹೆಕ್ಟೇರ್) ಕುಸಿತ ಕಂಡಿದೆ.
ಕೃಷಿ ನೀತಿ ತಜ್ಞ ಹಾಗೂ ಉತ್ತರ ಪ್ರದೇಶ ಯೋಜನಾ ಆಯೋಗದ ಮಾಜಿ ಸದಸ್ಯ ಸುಧೀರ್ ಪನ್ವಾರ್ ಅವರ ಪ್ರಕಾರ, ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ರೈತರು ನೀರಾವರಿಗಾಗಿ ಜಲಾಶಯಗಳನ್ನೇ ನಂಬಿರುವುದರಿಂದ, ಬೆಳೆಗಳ ನಿರ್ಣಾಯಕ ಹಂತದಲ್ಲಿ ನೀರು ಸಿಗದಿದ್ದರೆ ಗೋಧಿ, ಭತ್ತ, ದ್ವಿದಳ ಧಾನ್ಯ ಮತ್ತು ಎಣ್ಣೆಕಾಳುಗಳ ಉತ್ಪಾದನೆಗೆ ಭಾರಿ ಹೊಡೆತ ಬೀಳಲಿದೆ. ಆದರೆ, ವಾಯುವ್ಯ ಭಾರತದಲ್ಲಿ ಅತ್ಯುತ್ತಮ ನೀರಾವರಿ ಸೌಲಭ್ಯವಿರುವುದರಿಂದ ಹಾಗೂ ಪ್ರಮುಖ ಬೆಳೆಯಾದ ಗೋಧಿಗೆ ಕಡಿಮೆ ನೀರು ಬೇಕಾಗುವುದರಿಂದ ಅಲ್ಲಿ ಇದರ ಪ್ರಭಾವ ತೀರಾ ಕಡಿಮೆ ಇರಲಿದೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಮಾಜಿ ನಿರ್ದೇಶಕ ಎ.ಕೆ. ಸಿಂಗ್ ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ (IMD) ಪ್ರಕಾರ, 2026 ರ ನೈರುತ್ಯ ಮುಂಗಾರು 50 ವರ್ಷಗಳ ಸರಾಸರಿಯ ಕೇವಲ ಶೇ 87 ರಷ್ಟಿದ್ದು, ಇದು 2001 ರ ನಂತರದ 4 ನೇ ಅತಿ ಕಡಿಮೆ ಹಾಗೂ 1901 ರ ನಂತರದ 13 ನೇ ಅತಿ ಕಡಿಮೆ ಮಳೆಯಾಗಿದೆ. ಅಕ್ಟೋಬರ್‌ನಲ್ಲಿ ಶೇ 31.4 ಮಳೆ ಕೊರತೆಯಾಗಿದೆ. ವಿಶ್ವ ಹವಾಮಾನ ಸಂಸ್ಥೆ (WMO) ಕೂಡ ಸೆಪ್ಟೆಂಬರ್‌ನಲ್ಲಿ ಎಚ್ಚರಿಕೆ ನೀಡಿದ್ದು, 2026 ರ ಎಲ್ ನಿನೋ ಪ್ರಭಾವವು ಅಭೂತಪೂರ್ವವಾಗಿರಲಿದ್ದು, ಪೆಸಿಫಿಕ್ ಸಾಗರದ ತಾಪಮಾನವು 3.8°C ನಷ್ಟು ಹೆಚ್ಚಾಗಬಹುದು ಮತ್ತು ಇದರ ದುಷ್ಪರಿಣಾಮ 2027 ರವರೆಗೂ ಕಾಡಲಿದೆ ಎಂದಿದೆ. ಅಕ್ಟೋಬರ್ ಅಂತ್ಯದಲ್ಲಿ ಮಹಾರಾಷ್ಟ್ರ ಸರ್ಕಾರವು ತನ್ನ 358 ತಾಲೂಕುಗಳ ಪೈಕಿ 305 ತಾಲೂಕುಗಳಿಗೆ ಬರ ಪರಿಹಾರವನ್ನು ವಿಸ್ತರಿಸಿದ್ದು, 7,500 ಕೋಟಿ ರೂ. ಪ್ಯಾಕೇಜ್ (ಅರ್ಹ ರೈತರಿಗೆ 5,000 ರೂ. ನೆರವು) ಅನುಮೋದಿಸಿದೆ.
ದೇಶದ ವಿದ್ಯುತ್ ವಲಯದಲ್ಲಿ ಕಲ್ಲಿದ್ದಲಿನದ್ದೇ ಮೇಲುಗೈಯಾಗಿದ್ದರೂ, ಸೌರ ಮತ್ತು ಪವನ ವಿದ್ಯುತ್ ಲಭ್ಯವಿಲ್ಲದಿದ್ದಾಗ (ಸೂರ್ಯನಿಲ್ಲದಾಗ ಮತ್ತು ಗಾಳಿ ಬೀಸದಿದ್ದಾಗ) ತ್ವರಿತವಾಗಿ ಟರ್ಬೈನ್‌ಗಳನ್ನು ಆನ್ ಅಥವಾ ಆಫ್ ಮಾಡುವ ಮೂಲಕ ಜಲವಿದ್ಯುತ್ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ನದಿಗಳ ಹರಿವು ಕಡಿಮೆಯಾಗಿರುವ ಕಾರಣ ಜಲವಿದ್ಯುತ್ ಉತ್ಪಾದನೆ ಸಾಮಾನ್ಯ ಮಟ್ಟಕ್ಕಿಂತ ತೀವ್ರವಾಗಿ ಕುಸಿಯಲಿದೆ ಎಂದು ಎನ್‌ಎಚ್‌ಪಿಸಿ (NHPC Ltd) ಮಾಜಿ ಅಧ್ಯಕ್ಷ ಮತ್ತು ಎಂಡಿ ರಾಜ್ ಕುಮಾರ್ ಚೌಧರಿ ತಿಳಿಸಿದ್ದಾರೆ.
ಭಾರತವು 20 ಜಲಾಶಯ ಆಧಾರಿತ ಜಲವಿದ್ಯುತ್ ಯೋಜನೆಗಳನ್ನು ಹೊಂದಿದ್ದು, CWC ಇವುಗಳ ಮೇಲೆ ನಿಗಾ ಇರಿಸಿದೆ. 1.3GW ಸಾಮರ್ಥ್ಯದ ಹಿಮಾಚಲ ಪ್ರದೇಶದ ಗೋಬಿಂದ್ ಸಾಗರ್ ಅಣೆಕಟ್ಟಿನಲ್ಲಿ ಕೇವಲ ಶೇ 56.87 (ಕಳೆದ ವರ್ಷ 85.09%, 10 ವರ್ಷಗಳ ಸರಾಸರಿ 73.52%) ನೀರಿದೆ. ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟಿನಲ್ಲಿ (1.9GW) ಶೇ. 87.67 (ಕಳೆದ ವರ್ಷ 100%) ಹಾಗೂ ಉತ್ತರಾಖಂಡದ ತೆಹ್ರಿ ಅಣೆಕಟ್ಟಿನಲ್ಲಿ ಶೇ 92.91 (ಕಳೆದ ವರ್ಷ 95.28%) ನೀರಿದೆ. ಚಳಿಗಾಲದಲ್ಲಿ ತಾಪಮಾನ ಕಾಪಾಡಿಕೊಳ್ಳಲು ವಿದ್ಯುತ್ ಬೇಡಿಕೆ ಹೆಚ್ಚಾಗಲಿದ್ದು, ಉತ್ತರ ಭಾರತದಲ್ಲಿ ದಟ್ಟವಾದ ಹೊಗೆ ಮತ್ತು ಮಾಲಿನ್ಯದಿಂದಾಗಿ ಸೌರ ವಿದ್ಯುತ್ ಉತ್ಪಾದನೆಗೂ ಅಡ್ಡಿಯಾಗಿ ಒಟ್ಟಾರೆ ವಿದ್ಯುತ್ ಪೂರೈಕೆಗೆ ಭಾರಿ ಹೊಡೆತ ಬೀಳಲಿದೆ ಎಂದು ಚೌಧರಿ ಆತಂಕ ವ್ಯಕ್ತಪಡಿಸಿದ್ದಾರೆ.





