ಸುಮಾರು 23 ವರ್ಷಗಳ ಹಿಂದಿನ ಎನ್‌ಸಿಪಿ ನಾಯಕ ರಾಮಾವತಾರ್ ಜಗ್ಗಿ ಹತ್ಯೆ ಪ್ರಕರಣದಲ್ಲಿ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿಗೆ ಛತ್ತೀಸ್‌ಗಢ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಹಿಂದೆ ಖುಲಾಸೆಗೊಂಡಿದ್ದ ಪ್ರಕರಣದಲ್ಲಿ ಈಗ ಜೀವಾವಧಿ ಶಿಕ್ಷೆಗೆ ಒಳಗಾಗಿರುವುದು ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಜನತಾ ಕಾಂಗ್ರೆಸ್ ಛತ್ತೀಸ್‌ಗಢ (ಜೆ) ಅಧ್ಯಕ್ಷ ಜೋಗಿ ಅವರನ್ನು ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು 2007ರಲ್ಲಿ ಖುಲಾಸೆಗೊಳಿಸಿತ್ತು. ಆದರೆ ಜೋಗಿ ಅವರಿಗೆ ಕ್ಲೀನ್ ಚಿಟ್ ನೀಡಿರುವುದು ಕಾನೂನುಬದ್ಧವಾಗಿ ಸರಿಯಾಗಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ವರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಹೇಳಿದೆ.
ಇದನ್ನು ಓದಿದ್ದೀರಾ? 2018ರ ಕಚನಾಥಂ ಜಾತಿ ಹತ್ಯೆ ಪ್ರಕರಣ: 26 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಇತರ 28 ಆರೋಪಿಗಳನ್ನು ಈಗಾಗಲೇ ಅದೇ ಸಾಕ್ಷ್ಯದ ಆಧಾರದಲ್ಲಿ ಶಿಕ್ಷೆಗೆ ಒಳಪಡಿಸಲಾಗಿದೆ. ಹಾಗಿದ್ದಾಗ ಈ ಹತ್ಯೆಯ ಮುಖ್ಯ ಸಂಚುಕೋರನನ್ನು ಖುಲಾಸೆಗೊಳಿಸುವುದು ನ್ಯಾಯಸಮ್ಮತವಲ್ಲ ಎಂದು ಕೋರ್ಟ್ ಹೇಳಿದೆ. ಹಾಗೆಯೇ ಅಮಿತ್ ಜೋಗಿಗೆ ಕೊಲೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಿದೆ.
ಏನಿದು ರಾಮಾವತಾರ್ ಜಗ್ಗಿ ಹತ್ಯೆ ಪ್ರಕರಣ?
2003ರ ಜೂನ್ 4ರಂದು ಹಿರಿಯ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಮತ್ತು ವಿದ್ಯಾಚರಣ್ ಶುಕ್ಲಾ ಅವರ ಆಪ್ತ ಸಹಾಯಕ ರಾಮಾವತಾರ್ ಜಗ್ಗಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಹತ್ಯೆಯು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು 31 ಆರೋಪಿಗಳನ್ನು ಹೆಸರಿಸಿದ್ದರು.
ಅಮಿತ್ ಜೋಗಿ ಈ ಪ್ರಕರಣದ ಪ್ರಮುಖ ಆರೋಪಿ. ಆದರೆ 2007ರಲ್ಲಿ ರಾಯಪುರ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಹೇಳಿ ಜೋಗಿಯನ್ನು ಖುಲಾಸೆಗೊಳಿಸಿತ್ತು. ಆದರೆ ಉಳಿದ 28 ಮಂದಿ ದೋಷಿಗಳು ಎಂದು ಘೋಷಿಸಿತು. ಉಳಿದವರಿಗೆ ಶಿಕ್ಷೆ ವಿಧಿಸಿ ಅಮಿತ್ ಜೋಗಿಗೆ ಮಾತ್ರ ಶಿಕ್ಷೆ ವಿಧಿಸದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ರಾಜಕೀಯ ಒತ್ತಡ ಇದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿತ್ತು.
ಇದನ್ನು ಓದಿದ್ದೀರಾ? ಉನ್ನಾಂವ್ ಅತ್ಯಾಚಾರ ಪ್ರಕರಣ: ಬಿಜೆಪಿ ನಾಯಕ ಕುಲದೀಪ್ ಜೀವಾವಧಿ ಶಿಕ್ಷೆ ಅಮಾನತು ಆದೇಶಕ್ಕೆ ಸುಪ್ರೀಂ ತಡೆ
ಈ ಬೆನ್ನಲ್ಲೇ ಎನ್‌ಸಿಪಿ ನಾಯಕ ರಾಮಾವತಾರ್ ಜಗ್ಗಿ ಮಗ ಸತೀಶ್ ಜಗ್ಗಿ ಕಾನೂನು ಹೋರಾಟವನ್ನು ಮುಂದುವರಿಸುವ ನಿರ್ಧಾರ ಮಾಡಿದರು. ಸುಪ್ರೀಂ ಕೋರ್ಟ್ ಕದ ತಟ್ಟಿದರು. ಇದರಿಂದಾಗಿ ಹೈಕೋರ್ಟ್ ಮತ್ತೆ ಈ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡಿತು.
ಹೈಕೋರ್ಟ್ ಅಮಿತ್ ಜೋಗಿ ಜತೆಗೆ, ಯಾಹ್ಯಾ ಧೇಬರ್, ಅಭಯ್ ಗೋಯಲ್, ಫಿರೋಜ್ ಸಿದ್ದಿಕಿ, ವಿಕೆ ಪಾಂಡೆ ಮತ್ತು ಚಿಮನ್ ಸಿಂಗ್ ಸೇರಿದಂತೆ ಆರೋಪಿಗಳಿಗೆ ಶಿಕ್ಷೆಯನ್ನು ಪುನರುಚ್ಚರಿಸಿತು. ಕಳೆದ ವಾರ ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದೆ. ಈ ನಡುವೆ ಅಮಿತ್ ಜೋಗಿ ಅವರ ಕಾನೂನು ತಂಡವು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜೆ ಅರ್ಜಿ (Special Leave Petition- SLP) ಸಲ್ಲಿಸಿದೆ.




