ಬಂಡವಾಳಶಾಹಿಯ ನಾಲ್ಕು ಕಟ್ಟುಕಥೆಗಳು ಮತ್ತು ನಮ್ಮ ಬದುಕಿನ ಬೆಲೆ

Date:

ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಒಮ್ಮೆ ಗಮನಿಸಿ ನೋಡಿ. ಒಂದು ಕಡೆ, 2025ರ ಒಂದೇ ವರ್ಷದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ 500 ವ್ಯಕ್ತಿಗಳ ಸಂಪತ್ತು ಸುಮಾರು 2.2 ಟ್ರಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಇನ್ನೊಂದು ಕಡೆ, ಇದೇ ಭೂಮಿಯ ಮೇಲೆ ಇನ್ನೂರು ಕೋಟಿಗೂ ಹೆಚ್ಚು ಜನರು ಹೊಟ್ಟೆತುಂಬಾ ಊಟವಿಲ್ಲದೆ, ಹಸಿವಿನಿಂದ ನರಳುತ್ತಿದ್ದಾರೆ. ಮತ್ತೊಂದು ಕಡೆ, ದೇಶಗಳು ಯುದ್ಧ ಮತ್ತು ಶಸ್ತ್ರಾಸ್ತ್ರಗಳಿಗಾಗಿ ಬರೋಬ್ಬರಿ 2.7 ಟ್ರಿಲಿಯನ್ ಡಾಲರ್‌ಗಳಷ್ಟು ಹಣವನ್ನು ಸುರಿಯುತ್ತಿವೆ.

- Advertisement -

ಇಂತಹ ವಿಚಿತ್ರ ವೈರುಧ್ಯಗಳನ್ನು ಕಂಡಾಗ ನಮಗೆಲ್ಲರಿಗೂ ಸಹಜವಾಗಿಯೇ ಒಂದು ಪ್ರಶ್ನೆ ಕಾಡುತ್ತದೆ: “ನಮ್ಮ ಆರ್ಥಿಕ ವ್ಯವಸ್ಥೆ ಯಾಕೆ ಹೀಗಿದೆ? ಮನುಷ್ಯನ ಹಸಿವು ನೀಗಿಸುವುದಕ್ಕಿಂತ, ಬಾಂಬ್‌ಗಳನ್ನು ತಯಾರಿಸುವುದು ಮತ್ತು ಕೆಲವೇ ಕೆಲವರ ತಿಜೋರಿ ತುಂಬಿಸುವುದು ಯಾಕೆ ಮುಖ್ಯವಾಗುತ್ತಿದೆ?”

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನಕ್ಕೆ 77 – ಈಡೇರದ ಕನಸು…..

ಸಂವಿಧಾನ ದಿನ ಒಂದು ಬಗೆಯ ಲಯವಿದೆ. ಅಂದು ಮುಂಜಾನೆಯಿಂದ ಇರುಳಿನವರೆಗೂ ಸಂವಿಧಾನದ್ದೇ ಸದ್ದು. ಅದರ ಮಹತ್ವ, ಅಗತ್ಯ, ಅನಿವಾರ್ಯತೆ, ಅನುಕೂಲತೆ ಬಗ್ಗೆ ಸ್ಮರಿಸಿಕೊಂಡು ಸಂಭ್ರಮಿಸುತ್ತೇವೆ. ಪ್ರಧಾನಿಯಿಂದ ಗ್ರಾಮ ಪಂಚಾಯಿತಿ ಸದಸ್ಯರವರೆಗೂ ಪ್ರಶ್ನಿಸಲು ಇರುವ "ಅಧಿಕಾರಭಾಗ್ಯ"...

ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಜನಾಂದೋಲನವಾಗಲಿ; ಪ್ರಜಾಪ್ರಭುತ್ವದ ರಕ್ಷಣೆಗೆ ಜನರ...

ನವೆಂಬರ್ 26ರ ಸಂವಿಧಾನ ದಿನಾಚರಣೆಯಿಂದ ನವೆಂಬರ್ 26, 2027ರವರೆಗೆ ಐಕ್ಯ ಹೋರಾಟ ಸಮಿತಿಯ ಒಂದು ವರ್ಷದ ಅಭಿಯಾನ; ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಹೊಸ ಸಂಕಲ್ಪ ನಮಗೆ ಸ್ವಾತಂತ್ರ್ಯ ಬಂದು ಏಳು ದಶಕಗಳಿಗೂ...

ರೈತರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದ ಡಾ. ವರ್ಗೀಸ್...

ಕುರಿಯನ್ ಅವರು ಕೇವಲ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿದ ವ್ಯಕ್ತಿಯಲ್ಲ. ರೈತರಿಗೆ ಆರ್ಥಿಕ ಸ್ವಾವಲಂಬನೆ, ಮಹಿಳೆಯರಿಗೆ ಉದ್ಯೋಗಾವಕಾಶ, ಗ್ರಾಮೀಣ ಜನರಿಗೆ ಬದುಕಿನ ಭದ್ರತೆ ಹಾಗೂ ದೇಶಕ್ಕೆ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ದೊರಕಿಸಿಕೊಟ್ಟ ದೂರದೃಷ್ಟಿಯ ನಾಯಕರು. ಭಾರತದ...

ಈ ಪ್ರಶ್ನೆಗೆ ಉತ್ತರ ಹುಡುಕಲು ಅರ್ಥಶಾಸ್ತ್ರಜ್ಞೆ ಕ್ಲಾರಾ ಮ್ಯಾಟೈ (Clara Mattei) ಅವರು ಇತಿಹಾಸದ ಪುಟಗಳನ್ನು ಕೆದಕುತ್ತಾರೆ. ಬಂಡವಾಳಶಾಹಿ ವ್ಯವಸ್ಥೆಯು ತನ್ನನ್ನು ತಾನು ರಕ್ಷಿಸಿಕೊಳ್ಳಲು ನಮ್ಮ ತಲೆಯಲ್ಲಿ ನಾಲ್ಕು ದೊಡ್ಡ ಮಿಥ್ಯೆಗಳನ್ನು ತುಂಬಿದೆ. ಅವುಗಳನ್ನು ಅವರು ಎಳೆಎಳೆಯಾಗಿ ಬಿಚ್ಚಿಡುತ್ತಾರೆ.

ಮಿಥ್ಯೆ 1: ಬಂಡವಾಳಶಾಹಿ ಎಂಬುದು ಮನುಷ್ಯನ ಹುಟ್ಟಿನಿಂದಲೂ ಬಂದಿರುವ ಸಹಜ ವ್ಯವಸ್ಥೆ

“ವ್ಯಾಪಾರ ಮಾಡುವುದು, ಲಾಭ ಗಳಿಸುವುದು ಮನುಷ್ಯನ ರಕ್ತದಲ್ಲೇ ಇದೆ. ಆದಿಮಾನವನ ಕಾಲದಿಂದಲೂ ವಸ್ತುಗಳ ವಿನಿಮಯ ನಡೆದುಕೊಂಡು ಬಂದಿದೆ. ಇಂದು ವಾಲ್ ಸ್ಟ್ರೀಟ್ ಮತ್ತು ಷೇರು ಮಾರುಕಟ್ಟೆಯ ರೂಪ ಪಡೆದುಕೊಂಡಿದೆ. ಇದು ಅತ್ಯಂತ ಸಹಜವಾದ ಬೆಳವಣಿಗೆ” ಎಂದು ಸಾಮಾನ್ಯವಾಗಿ ನಮಗೆ ಹೇಳಲಾಗುತ್ತದೆ.

ಆದರೆ, ಇತಿಹಾಸ ಹೇಳುವ ಕಥೆಯೇ ಬೇರೆ. ಖ್ಯಾತ ಇತಿಹಾಸಕಾರ್ತಿ ಎಲೆನ್ ಮೀಕ್ಸಿನ್ಸ್ ವುಡ್ ಅವರ ಸಂಶೋಧನೆಗಳ ಪ್ರಕಾರ, ಬಂಡವಾಳಶಾಹಿ ಎನ್ನುವುದು ಹಾಗೆ ನಿರಂತರವಾಗಿ ಬೆಳೆದುಬಂದ ನೈಸರ್ಗಿಕ ವ್ಯವಸ್ಥೆಯಲ್ಲ. ಅದು ಒಂದು ಐತಿಹಾಸಿಕ ಕಾಲಘಟ್ಟದಲ್ಲಿ ನಡೆದ ಅತ್ಯಂತ ಹಿಂಸಾತ್ಮಕವಾದ ಬದಲಾವಣೆಯಿಂದ ಹುಟ್ಟಿಕೊಂಡ ವ್ಯವಸ್ಥೆ.

ಹಿಂದಿನ ಕಾಲದಲ್ಲಿ ಸಾಮಾನ್ಯ ಜನ ತಮಗೆ ಬೇಕಾದ ಆಹಾರವನ್ನು ತಾವೇ ಬೆಳೆದುಕೊಳ್ಳುತ್ತಿದ್ದರು. ಕಾಡು, ನದಿ, ಹುಲ್ಲುಗಾವಲುಗಳಂತಹ ಸಾಮೂಹಿಕ ಸಂಪನ್ಮೂಲಗಳು (Commons) ಎಲ್ಲರಿಗೂ ಮುಕ್ತವಾಗಿದ್ದವು. ಆಗ ಮಾರುಕಟ್ಟೆಗಳಿದ್ದರೂ, ಜನರು ತಮ್ಮ ಬದುಕಿಗಾಗಿ ಮಾರುಕಟ್ಟೆಯನ್ನು ಅವಲಂಬಿಸಿರಲಿಲ್ಲ. ತಮ್ಮಲ್ಲಿ ಹೆಚ್ಚಾದ ವಸ್ತುಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದರು. ಆದರೆ, ಸಾಮೂಹಿಕ ಒಡೆತನದಲ್ಲಿದ್ದ ಭೂಮಿ ಮತ್ತು ಸಂಪನ್ಮೂಲಗಳನ್ನು ಬಲವಂತವಾಗಿ ಕಿತ್ತುಕೊಂಡು ‘ಖಾಸಗಿ ಆಸ್ತಿ’ಯನ್ನಾಗಿ ಮಾಡಿಕೊಂಡ ದಿನದಿಂದ ಸಾಮಾನ್ಯ ಜನರ ಬದುಕು ಬದಲಾಯಿತು.

ಭೂಮಿಯಿಲ್ಲದ ಜನರು ಈಗ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು, ತಲೆಮೇಲೆ ಸೂರು ಕಟ್ಟಿಕೊಳ್ಳಲು ಪ್ರತಿಯೊಂದನ್ನೂ ಹಣ ಕೊಟ್ಟು ಮಾರುಕಟ್ಟೆಯಲ್ಲೇ ಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಇದನ್ನೇ ‘ಮಾರುಕಟ್ಟೆ ಅವಲಂಬನೆ’ ಎನ್ನುತ್ತಾರೆ. ಹಣ ಬೇಕೆಂದರೆ ಜನರು ತಮ್ಮ ಶ್ರಮವನ್ನು ಬೇರೆಯವರಿಗೆ ಮಾರಲೇಬೇಕಾಯಿತು. ಹೀಗೆ ಬಂಡವಾಳಶಾಹಿ ವ್ಯವಸ್ಥೆಗೆ ಎರಡು ಮುಖ್ಯ ಆಧಾರಸ್ತಂಭಗಳು ಸೃಷ್ಟಿಯಾದವು.

ಮೊದಲನೆಯದು, ಕೂಲಿ ಕಾರ್ಮಿಕ ಪದ್ಧತಿ—ಇಲ್ಲಿ ಕಾರ್ಮಿಕನು ದಿನವಿಡೀ ದುಡಿದು ಸೃಷ್ಟಿಸುವ ಸಂಪತ್ತಿನಲ್ಲಿ ಆತನಿಗೆ ಸಿಗುವುದು ಅತ್ಯಲ್ಪ ವೇತನ ಮಾತ್ರ, ಉಳಿದ ಲಾಭವೆಲ್ಲಾ ಮಾಲೀಕನ ಪಾಲಾಗುತ್ತದೆ.

ಎರಡನೆಯದು, ಹೂಡಿಕೆಯ ಮೇಲಿನ ಖಾಸಗಿ ನಿಯಂತ್ರಣ—ಸಮಾಜಕ್ಕೆ ಯಾವ ವಸ್ತು ಬೇಕು ಎಂಬುದನ್ನು ಜನರ ಅಗತ್ಯಕ್ಕಿಂತ ಹೆಚ್ಚಾಗಿ, ಯಾವುದರಲ್ಲಿ ಹೆಚ್ಚು ಲಾಭವಿದೆ ಎಂಬುದನ್ನು ನೋಡಿ ಕೆಲವೇ ಕೆಲವು ದೊಡ್ಡ ಹೂಡಿಕೆದಾರರು ನಿರ್ಧರಿಸುತ್ತಾರೆ.

ಅಂದರೆ, ಬಂಡವಾಳಶಾಹಿ ವ್ಯವಸ್ಥೆ ದೇವರ ಸೃಷ್ಟಿಯಲ್ಲ. ಬದಲಿಗೆ ಅದು ಜನರ ಸ್ವಾವಲಂಬನೆಯನ್ನು ಕಿತ್ತುಕೊಂಡು ಸೃಷ್ಟಿಸಿದ ಒಂದು ಕೃತಕ ವ್ಯವಸ್ಥೆ.

ಮಿಥ್ಯೆ 2: ಮಾರುಕಟ್ಟೆ ಮತ್ತು ಸರ್ಕಾರ ಬೇರೆ ಬೇರೆ

ದಿನನಿತ್ಯ ರಾಜಕೀಯ ಚರ್ಚೆಗಳಲ್ಲಿ ಒಂದು ಮಾತನ್ನು ಕೇಳುತ್ತಿರುತ್ತೇವೆ: “ಸರ್ಕಾರ ಮಾರುಕಟ್ಟೆಯ ವಿಷಯದಲ್ಲಿ ಮೂಗು ತೂರಿಸಬಾರದು, ಮಾರುಕಟ್ಟೆ ತನ್ನಷ್ಟಕ್ಕೆ ತಾನೇ ನಡೆಯುತ್ತದೆ”. ಹೀಗೆ ಹೇಳುವ ಮೂಲಕ ಮಾರುಕಟ್ಟೆ ಮತ್ತು ಸರ್ಕಾರ ಎರಡು ಪ್ರತ್ಯೇಕ ಶಕ್ತಿಗಳಂತೆ ಬಿಂಬಿಸಲಾಗುತ್ತದೆ.

ಆದರೆ, ಅರ್ಥಶಾಸ್ತ್ರಜ್ಞ ಕಾರ್ಲ್ ಪೋಲಾನಿ ಅವರು ತೋರಿಸಿಕೊಟ್ಟಂತೆ, ಸರ್ಕಾರದ ಸಹಾಯವಿಲ್ಲದೆ ಮಾರುಕಟ್ಟೆ ಒಂದು ದಿನವೂ ಬದುಕಲಾರದು. ಹಿಂದೆ ಸಾಮೂಹಿಕ ಭೂಮಿಯನ್ನು ಶ್ರೀಮಂತರ ಖಾಸಗಿ ಆಸ್ತಿಯನ್ನಾಗಿ ಮಾಡಲು ಸಂಸತ್ತಿನಲ್ಲಿ ಕಾನೂನುಗಳನ್ನು ರಚಿಸಿದ್ದು ಕೂಡ ಇದೇ ಸರ್ಕಾರ. ಆ ಭೂಮಿಯಿಂದ ಬಡವರನ್ನು ಹೊರಹಾಕಲು ಮತ್ತು ಖಾಸಗಿ ಆಸ್ತಿಯನ್ನು ರಕ್ಷಿಸಲು ಪೊಲೀಸ್ ಮತ್ತು ಸೈನ್ಯವನ್ನು ಬಳಸಿದ್ದೂ ಇದೇ ಸರ್ಕಾರ. ಇಂದಿಗೂ ದೊಡ್ಡ ಕಂಪನಿಗಳು ನಷ್ಟಕ್ಕೆ ಸಿಲುಕಿದಾಗ ಜನರ ತೆರಿಗೆ ಹಣದಿಂದ ಅವುಗಳನ್ನು ರಕ್ಷಿಸುತ್ತಿರುವುದು ಇದೇ ಸರ್ಕಾರ. ಆದ್ದರಿಂದ ಮಾರುಕಟ್ಟೆ ಮತ್ತು ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳು. ಬಂಡವಾಳಶಾಹಿಯನ್ನು ಕಾಪಾಡಲು ಸರ್ಕಾರ ನಿರಂತರವಾಗಿ ಕಾವಲು ಕಾಯುತ್ತಿರುತ್ತದೆ.

ಮಿಥ್ಯೆ 3: ಮಿತವ್ಯಯ ನೀತಿಗಳು (Austerity) ಕೇವಲ ಒಂದು ಅನಿವಾರ್ಯ ಆಯ್ಕೆ

ಸರ್ಕಾರಗಳು ಆಗಾಗ್ಗೆ “ನಮ್ಮ ಬಳಿ ಹಣವಿಲ್ಲ, ಖರ್ಚು ಕಡಿಮೆ ಮಾಡಬೇಕು” ಎಂದು ಹೇಳುತ್ತಾ ಸರ್ಕಾರಿ ಶಾಲೆಗಳಿಗೆ, ಆಸ್ಪತ್ರೆಗಳಿಗೆ, ಬಡವರ ಕಲ್ಯಾಣ ಯೋಜನೆಗಳಿಗೆ ನೀಡುವ ಅನುದಾನವನ್ನು ಕಡಿತಗೊಳಿಸುತ್ತವೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರುತ್ತವೆ. ಇದನ್ನು ಅರ್ಥಶಾಸ್ತ್ರದಲ್ಲಿ ‘ಮಿತವ್ಯಯ ನೀತಿ’ (Austerity) ಎನ್ನುತ್ತಾರೆ. ಕೆಲವರು ಇದನ್ನು ಸರ್ಕಾರಗಳ ತಪ್ಪು ನಿರ್ಧಾರ ಎಂದು ಭಾವಿಸುತ್ತಾರೆ.

ಆದರೆ, ಇದು ತಪ್ಪು ನಿರ್ಧಾರವಲ್ಲ, ಬದಲಾಗಿ ಬಂಡವಾಳಶಾಹಿಯ ರಕ್ತದಲ್ಲೇ ಬೆರೆತಿರುವ ತಂತ್ರ! ಇದನ್ನು ಅರ್ಥಮಾಡಿಕೊಳ್ಳಲು ನಾವು ಮೊದಲ ಮಹಾಯುದ್ಧದ ನಂತರದ ಇತಿಹಾಸವನ್ನು ಗಮನಿಸಬೇಕು.

ಮೊದಲ ಮಹಾಯುದ್ಧದ ಸಮಯದಲ್ಲಿ, ಯುದ್ಧಕ್ಕೆ ಶಸ್ತ್ರಾಸ್ತ್ರ ಮತ್ತು ಸಾಮಗ್ರಿಗಳ ಅವಶ್ಯಕತೆ ತುಂಬಾ ಇತ್ತು. ಹಾಗಾಗಿ ಬ್ರಿಟನ್ ಮತ್ತು ಇಟಲಿಯಂತಹ ದೇಶಗಳ ಸರ್ಕಾರಗಳು ಖಾಸಗಿ ಕಂಪನಿಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡವು. ಯಾಕೆಂದರೆ, ಖಾಸಗಿ ಕಂಪನಿಗಳಿಗೆ ದೇಶದ ಹಿತಕ್ಕಿಂತ ಲಾಭವೇ ಮುಖ್ಯವಾಗಿತ್ತು. ಅವು ಲಾಭಕ್ಕಾಗಿ ಶತ್ರು ದೇಶಗಳಿಗೂ ಹಡಗುಗಳನ್ನು ಮಾರಲು ಸಿದ್ಧವಿದ್ದವು! ಯುದ್ಧದ ಸಮಯದಲ್ಲಿ ಕಾರ್ಮಿಕರ ಕೊರತೆಯೂ ಉಂಟಾಯಿತು. ಆಗ ಕಾರ್ಮಿಕರಿಗೆ ತಮ್ಮ ಶಕ್ತಿಯ ಅರಿವಾಯಿತು. “ಬಂಡವಾಳಶಾಹಿ ಇಲ್ಲದೆಯೂ ದೇಶವನ್ನು ನಡೆಸಬಹುದು. ಬಂಡವಾಳಶಾಹಿಗಳಿಲ್ಲದೆಯೇ ನಾವೇ ಕಾರ್ಖಾನೆಗಳನ್ನು ನಡೆಸಬಲ್ಲೆವು” ಎಂಬ ಆತ್ಮವಿಶ್ವಾಸ ಅವರಲ್ಲಿ ಮೂಡಿತು.

1918 ರಿಂದ 1920ರ ಅವಧಿಯಲ್ಲಿ ಇಟಲಿಯಲ್ಲಿ ಚಿಂತಕ ಆಂಟೋನಿಯೊ ಗ್ರಾಮ್ಸ್ಕಿ ಅವರ ನೇತೃತ್ವದಲ್ಲಿ ಕಾರ್ಮಿಕರು ಕಾರ್ಖಾನೆಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು, ತಾವೇ ಆಡಳಿತ ನಡೆಸಲು ಮುಂದಾದರು. ಬಂಡವಾಳಶಾಹಿ ವ್ಯವಸ್ಥೆ ಇನ್ನೇನು ಕುಸಿದೇ ಹೋಗುತ್ತದೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕಾಲವನ್ನು ‘ರೆಡ್ ಇಯರ್ಸ್’ ಎಂದು ಕರೆಯಲಾಗುತ್ತಿತ್ತು.

ಆಗ ಬಂಡವಾಳಶಾಹಿಯನ್ನು ಉಳಿಸಲು ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸೊಲಿನಿ ಮತ್ತು ಆತನ ಆಸ್ಥಾನದಲ್ಲಿದ್ದ ನವ-ಶಾಸ್ತ್ರೀಯ ಅರ್ಥಶಾಸ್ತ್ರಜ್ಞರು ಒಂದು ಹೊಸ ತಂತ್ರವನ್ನು ಹೆಣೆದರು. ಮೊದಲಿಗೆ, ಅರ್ಥಶಾಸ್ತ್ರವನ್ನು ಗಣಿತದ ಸೂತ್ರಗಳ ಮೂಲಕ “ಶುದ್ಧ ವಿಜ್ಞಾನ” ಎಂದು ಬಿಂಬಿಸಿ, “ಸಂಪತ್ತನ್ನು ಸೃಷ್ಟಿಸುವುದು ದುಡಿಯುವ ಕಾರ್ಮಿಕರಲ್ಲ, ಬದಲಾಗಿ ಹಣ ಹೂಡುವ ಬಂಡವಾಳಶಾಹಿಗಳು” ಎಂಬ ಸಿದ್ಧಾಂತವನ್ನು ಹರಡಿದರು. ನಂತರ, ಕಾರ್ಮಿಕರ ಸೊಕ್ಕನ್ನು ಮುರಿಯಲು ‘ಮಿತವ್ಯಯದ ತ್ರಿಮೂರ್ತಿ’ (Austerity Trinity) ಅಸ್ತ್ರಗಳನ್ನು ಪ್ರಯೋಗಿಸಿದರು:

  • ಹಣಕಾಸು ನೀತಿ (Fiscal Policy): ಜನಸಾಮಾನ್ಯರಿಗೆ ಸಿಗುವ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸುವುದು. ಶ್ರೀಮಂತರ ಮೇಲಿನ ತೆರಿಗೆಯನ್ನು ರದ್ದುಗೊಳಿಸಿ, ಬಡವರು ಕೊಳ್ಳುವ ದಿನನಿತ್ಯದ ವಸ್ತುಗಳ ಮೇಲೆ (ಉದಾಹರಣೆಗೆ ಬ್ರೆಡ್, ತಂಬಾಕು) ತೆರಿಗೆ ಹಾಕುವುದು. ಜನರ ಬಳಿ ಹಣವಿಲ್ಲದಂತಾದಾಗ, ಅವರು ಹೊಟ್ಟೆಪಾಡಿಗಾಗಿ ಯಾವುದೇ ಕಡಿಮೆ ಸಂಬಳಕ್ಕೂ ದುಡಿಯಲು ಸಿದ್ಧರಾಗುತ್ತಾರೆ.
  • ವಿತ್ತೀಯ ನೀತಿ (Monetary Policy): ಬ್ಯಾಂಕ್ ಬಡ್ಡಿದರಗಳನ್ನು ವಿಪರೀತವಾಗಿ ಹೆಚ್ಚಿಸುವುದು. ಬಡ್ಡಿದರ ಹೆಚ್ಚಾದಾಗ ಹೂಡಿಕೆ ಕಡಿಮೆಯಾಗಿ, ಕಾರ್ಖಾನೆಗಳು ಮುಚ್ಚಿ ನಿರುದ್ಯೋಗ ಸೃಷ್ಟಿಯಾಗುತ್ತದೆ. ಕೆಲಸ ಕಳೆದುಕೊಳ್ಳುವ ಭಯ ಶುರುವಾದ ತಕ್ಷಣ ಕಾರ್ಮಿಕರು ಮುಷ್ಕರ ಮಾಡುವುದನ್ನು ನಿಲ್ಲಿಸುತ್ತಾರೆ.
  • ಕೈಗಾರಿಕಾ ನೀತಿ (Industrial Policy): ಸರ್ಕಾರಿ ಕಂಪನಿಗಳನ್ನು ಖಾಸಗಿಯವರಿಗೆ ಮಾರುವುದು, ಕಾರ್ಮಿಕ ಸಂಘಟನೆಗಳನ್ನು ನಿಷೇಧಿಸುವುದು ಮತ್ತು ಮುಷ್ಕರ ಮಾಡುವುದನ್ನು ಅಪರಾಧವನ್ನಾಗಿ ಮಾಡುವುದು.

ಮುಸೊಲಿನಿ ಈ ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಾಗ, ಪ್ರಜಾಪ್ರಭುತ್ವದ ಹರಿಕಾರನೆಂದು ಕರೆಸಿಕೊಳ್ಳುತ್ತಿದ್ದ ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಗವರ್ನರ್ ಮಾಂಟಾಗು ನಾರ್ಮನ್ ಕೂಡ ಮುಸೊಲಿನಿಯನ್ನು ಹಾಡಿಹೊಗಳಿದ್ದ! “ಮುಸೊಲಿನಿ ಸ್ವಾತಂತ್ರ್ಯವನ್ನು ಹತ್ತಿಕ್ಕಿರಬಹುದು, ಆದರೆ ಆರ್ಥಿಕ ಶಿಸ್ತನ್ನು ಮರಳಿ ತಂದಿದ್ದಾನೆ” ಎಂದು ಆತ ಪತ್ರ ಬರೆದಿದ್ದ. ಅಂದರೆ, ಬಂಡವಾಳಶಾಹಿಯನ್ನು ಉಳಿಸಲು ಉದಾರವಾದಿಗಳು ಮತ್ತು ಸರ್ವಾಧಿಕಾರಿಗಳು ಯಾವಾಗಲೂ ಕೈಜೋಡಿಸುತ್ತಾರೆ.

ಮಿಥ್ಯೆ 4: ನಿರುದ್ಯೋಗ ಎಂಬುದು ಆರ್ಥಿಕತೆಯ ಒಂದು ಆಕಸ್ಮಿಕ ದೋಷ

ಸರ್ಕಾರಗಳು ಯಾವಾಗಲೂ “ನಾವು ನಿರುದ್ಯೋಗವನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತೇವೆ” ಎಂದು ಭರವಸೆ ನೀಡುತ್ತವೆ. ಆದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಿರುದ್ಯೋಗ ಎಂದಿಗೂ ಸಂಪೂರ್ಣವಾಗಿ ಮಾಯವಾಗುವುದಿಲ್ಲ. ಯಾಕೆ ಗೊತ್ತೇ?

1943ರಲ್ಲಿ ಅರ್ಥಶಾಸ್ತ್ರಜ್ಞ ಮೈಕಲ್ ಕಲೆಕಿ (Michał Kalecki) ಅವರು ಇದರ ಹಿಂದಿನ ರಹಸ್ಯವನ್ನು ಬಯಲು ಮಾಡಿದರು. ಬಂಡವಾಳಶಾಹಿ ವ್ಯವಸ್ಥೆಗೆ ನಿರುದ್ಯೋಗ ಎಂಬುದು ಒಂದು ದೋಷವಲ್ಲ, ಅದು ಆ ವ್ಯವಸ್ಥೆ ನಡೆಯಲು ಬೇಕಾದ ಅತ್ಯಂತ ಮುಖ್ಯವಾದ ‘ಶಿಸ್ತು ಪಾಲನೆಯ ಅಸ್ತ್ರ’.

ಈ ಲೇಖನ ಓದಿದ್ದೀರಾ?: ಸಂವಿಧಾನದ ಆಶಯಗಳ ಅನುಷ್ಠಾನಕ್ಕೆ ಜನಾಂದೋಲನವಾಗಲಿ; ಪ್ರಜಾಪ್ರಭುತ್ವದ ರಕ್ಷಣೆಗೆ ಜನರ ಐಕ್ಯತೆ ಬಲವಾಗಲಿ

ಒಂದು ವೇಳೆ ದೇಶದಲ್ಲಿ ಎಲ್ಲರಿಗೂ ಕೆಲಸ ಸಿಕ್ಕಿಬಿಟ್ಟರೆ (‘ಪೂರ್ಣ ಉದ್ಯೋಗ’ ನಿರ್ಮಾಣವಾದರೆ) ಏನಾಗುತ್ತದೆ ಎಂದು ಊಹಿಸಿ. ಆಗ ಕಾರ್ಮಿಕರಿಗೆ “ನನ್ನನ್ನು ಕೆಲಸದಿಂದ ತೆಗೆದುಹಾಕಿದರೆ ಹೇಗೆ?” ಎಂಬ ಭಯವೇ ಇರುವುದಿಲ್ಲ. ಒಂದು ಕೆಲಸ ಹೋದರೆ ಇನ್ನೊಂದು ಕೆಲಸ ಸಿಗುತ್ತದೆ ಎಂಬ ಧೈರ್ಯವಿರುತ್ತದೆ. ಆಗ ಅವರು ಹೆಚ್ಚಿನ ಸಂಬಳ ಕೇಳುತ್ತಾರೆ, ಕೆಲಸದ ಅವಧಿಯನ್ನು ಕಡಿಮೆ ಮಾಡಲು ಒತ್ತಾಯಿಸುತ್ತಾರೆ, ಮಾಲೀಕರ ದಬ್ಬಾಳಿಕೆಯನ್ನು ಪ್ರಶ್ನಿಸುತ್ತಾರೆ. ಇದು ಬಂಡವಾಳಶಾಹಿಗಳ ಲಾಭಕ್ಕೆ ದೊಡ್ಡ ಪೆಟ್ಟು ನೀಡುತ್ತದೆ.

ಆದ್ದರಿಂದ, ಹೊರಗಡೆ ಕೆಲಸವಿಲ್ಲದೆ ಉದ್ಯೋಗಕ್ಕಾಗಿ ಕಾಯುತ್ತಿರುವ ನಿರುದ್ಯೋಗಿಗಳ ಒಂದು ದೊಡ್ಡ ಗುಂಪು ಯಾವಾಗಲೂ ಇರಬೇಕು. ಆಗ ಮಾತ್ರ ಒಳಗೆ ಕೆಲಸ ಮಾಡುತ್ತಿರುವ ಕಾರ್ಮಿಕರು ಭಯದಿಂದ, ತಲೆತಗ್ಗಿಸಿ, ಮಾಲೀಕರು ಕೊಟ್ಟಷ್ಟು ಸಂಬಳಕ್ಕೆ ದುಡಿಯುತ್ತಾರೆ. ಕಲೆಕಿ ಅವರು ಹೇಳಿದಂತೆ, ಬಂಡವಾಳಶಾಹಿಯ ಅಡಿಯಲ್ಲಿ ಪೂರ್ಣ ಉದ್ಯೋಗ ಸಾಧ್ಯವಾಗುವುದು ಕೇವಲ ನಾಜಿ ಜರ್ಮನಿಯಂತಹ ಕ್ರೂರ ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ—ಅಲ್ಲಿ ಕಾರ್ಮಿಕರಿಗೆ ಮುಷ್ಕರ ಮಾಡುವ ಹಕ್ಕೇ ಇರುವುದಿಲ್ಲ!

ಮುಂದಿನ ದಾರಿ ಏನು?

ಕ್ಲಾರಾ ಮ್ಯಾಟೈ ಅವರ ಈ ವಿಶ್ಲೇಷಣೆ ನಮಗೆ ಒಂದು ಕಹಿ ಸತ್ಯವನ್ನು ಹೇಳುವುದರ ಜೊತೆಗೆ, ಒಂದು ದೊಡ್ಡ ಭರವಸೆಯನ್ನೂ ನೀಡುತ್ತದೆ. ಬಂಡವಾಳಶಾಹಿ ವ್ಯವಸ್ಥೆಯು ತನ್ನ ಉಳಿವಿಗಾಗಿ ಸರ್ಕಾರದ ರಕ್ಷಣೆ, ನಿರುದ್ಯೋಗದ ಭಯ ಮತ್ತು ಮಿತವ್ಯಯ ನೀತಿಗಳ ಮೇಲೆ ಇಷ್ಟೊಂದು ಅವಲಂಬಿತವಾಗಿದೆ ಎಂದರೆ, ಅದು ನಾವಂದುಕೊಂಡಷ್ಟು ಬಲಿಷ್ಠವೂ ಅಲ್ಲ, ಶಾಶ್ವತವೂ ಅಲ್ಲ ಎಂದರ್ಥ.

ಅದು ಮನುಷ್ಯರೇ ಕಟ್ಟಿದ ವ್ಯವಸ್ಥೆ. ನಾವು ಆರ್ಥಿಕತೆಯನ್ನು ನೋಡುವ ಕನ್ನಡಕವನ್ನು ಬದಲಾಯಿಸಿಕೊಂಡರೆ, ಕೇವಲ ಕೆಲವರ ಲಾಭ ಮತ್ತು ಯುದ್ಧಗಳ ಮೇಲೆ ನಿಂತಿರುವ ಈ ವ್ಯವಸ್ಥೆಯ ಬದಲಿಗೆ, ಪ್ರತಿಯೊಬ್ಬ ಮನುಷ್ಯನ ಘನತೆ, ಹಸಿವು ಮತ್ತು ಏಳಿಗೆಯನ್ನು ಕೇಂದ್ರವಾಗಿಟ್ಟುಕೊಂಡ ಹೊಸ ಆರ್ಥಿಕ ಪ್ರಪಂಚವನ್ನು ಖಂಡಿತವಾಗಿಯೂ ಕಟ್ಟಬಹುದು.

ಮೂಲ- ಕ್ಲಾರಾ ಮ್ಯಾಟ್ಯೆ
ಕನ್ನಡಕ್ಕೆ- ಟಿ. ಎಸ್. ವೇಣುಗೋಪಾಲ್

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಆಶಾ’ಗಳು ಇದ್ದರೂ ನಡೆಯುತ್ತೆ, ಇಲ್ಲದಿದ್ದರೂ ನಡೆಯುತ್ತೆ: ಆರೋಗ್ಯ ಸಚಿವ ಯು.ಟಿ ಖಾದರ್

ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು...

ಸಂವಿಧಾನಕ್ಕೆ 77 – ಈಡೇರದ ಕನಸು…..

ಸಂವಿಧಾನ ದಿನ ಒಂದು ಬಗೆಯ ಲಯವಿದೆ. ಅಂದು ಮುಂಜಾನೆಯಿಂದ ಇರುಳಿನವರೆಗೂ ಸಂವಿಧಾನದ್ದೇ...

ಹವಾಮಾನ ವರದಿ: ರಾಜ್ಯದ 15 ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ

ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಏಕಕಾಲದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಮತ್ತು...

ಬೆಳಗಾವಿ |ಪ್ರತ್ಯೇಕ ರಾಜ್ಯಕ್ಕೆ ವಿರೋಧ, ಜಿಲ್ಲೆ ವಿಭಜನೆಗೆ ಸಹಮತ: ಸತೀಶ ಜಾರಕಿಹೊಳಿ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ...