ಪೊಲೀಸ್ ಠಾಣೆಯ ಒಳಗೇ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ತಮ್ಮ ಕುಟುಂಬ ಸದಸ್ಯರೊಂದಿಗೆ ‘ಗಣಪತಿ ಹೋಮ’ ನಡೆಸಿರುವ ಘಟನೆ ತಮಿಳುನಾಡಿನ ವಿಳ್ಳುಪುರಂ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆ ಮತ್ತು ವಿವಾದಕ್ಕೆ ಗುರಿಯಾಗಿದೆ.
ವಿಳ್ಳುಪುರಂ ಜಿಲ್ಲೆಯ ಸತ್ಯಮಂಗಲಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸರಣಿ ಅಹಿತಕರ ಘಟನೆಯನ್ನು ತಡೆಯಬೇಕೆಂದು ಠಾಣೆಯ ಇನ್ಸ್‌ಪೆಕ್ಟರ್ ಸುರೇಶ್ ಬಾಬು ದೇವರ ಮೊರೆಹೋಗಿದ್ದಾರೆ. ಠಾಣೆಯಲ್ಲಿ ಧಾರ್ಮಿಕ ಪೂಜೆ ಮತ್ತು ಹೋಮ ನೆರವೇರಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, “ಇನ್ಸ್‌ಪೆಕ್ಟರ್ ಗಣಪತಿ ಹೋಮ ನಡೆಸಿರುವುದು ನಿಜ. ಪೊಲೀಸ್ ಠಾಣೆಯ ಒಳಗೆ ಯಾವುದೇ ರೀತಿಯ ಧಾರ್ಮಿಕ ಆಚರಣೆಗಳನ್ನು ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಬಗ್ಗೆ ಈಗಾಗಲೇ ಇಲಾಖಾ ತನಿಖೆಗೆ ಆದೇಶಿಸಲಾಗಿದ್ದು, ವರದಿಯ ಆಧಾರದ ಮೇಲೆ ಇನ್ಸ್‌ಪೆಕ್ಟರ್ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಇದೇ ಠಾಣೆಯ ಸಬ್-ಇನ್ಸ್‌ಪೆಕ್ಟರ್ ಒಬ್ಬರು ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಅಲ್ಲದೆ, ಕಳೆದ ಒಂದು ತಿಂಗಳಲ್ಲಿ ಠಾಣಾ ವ್ಯಾಪ್ತಿಯಲ್ಲಿ ಇನ್ನೂ ಕೆಲವು ಅನಿರೀಕ್ಷಿತ ಘಟನೆಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಯಾರೋ ನೀಡಿದ ಸಲಹೆಯ ಮೇರೆಗೆ ಇನ್ಸ್‌ಪೆಕ್ಟರ್ ಸುರೇಶ್ ಬಾಬು ಅವರು ಠಾಣೆಯಲ್ಲಿ ಗಣಪತಿ ಹೋಮ ಮಾಡಿಸಲು ಮುಂದಾಗಿದ್ದರು ಎನ್ನಲಾಗಿದೆ.
ಇದೇ ಪೊಲೀಸ್ ಠಾಣಾ ವ್ಯಾಪ್ತಿಯ ನಡುಪಟ್ಟು ಗ್ರಾಮದಲ್ಲಿ ಇತ್ತೀಚೆಗೆ, 2ನೇ ತರಗತಿ ಬಾಲಕಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿದ್ದಳು. ಈ ಕುರಿತು ಸತ್ಯಮಂಗಲಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸ್ಥಳೀಯ ಪೊಲೀಸರು 10 ದಿನಗಳಿಗೂ ಹೆಚ್ಚು ಕಾಲ ಶೋಧ ಕಾರ್ಯಾಚರಣೆ ನಡೆಸಿದರೂ ಬಾಲಕಿಯ ಸುಳಿವು ಪತ್ತೆಯಾಗದ ಕಾರಣ, ಪ್ರಕರಣವನ್ನು ಸಿಬಿ-ಸಿಐಡಿ ತನಿಖೆಗೆ ಹಸ್ತಾಂತರಿಸಲಾಗಿತ್ತು. ಕಳೆದ 60 ದಿನಗಳಿಂದ ಸಿಬಿ-ಸಿಐಡಿ ಅಧಿಕಾರಿಗಳು ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಈ ನಡುವೆಯೇ, ಠಾಣೆಯಲ್ಲಿ ಹೋಮ ನಡೆಲಾಗಿದ್ದು, ಬಾಲಕಿ ನಾಪತ್ತೆ ಪ್ರಕರಣವನ್ನು ಭೇದಿಸಲು ಸಾಧ್ಯವಾಗದ ಕಾರಣಕ್ಕೇ ಪೊಲೀಸರು ಈ ಪೂಜೆ ಮಾಡಿಸಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭಿಸಿದ್ದಾರೆ. ಆದರೆ, ಹೋಮಕ್ಕೂ ಮತ್ತು ಬಾಲಕಿ ನಾಪತ್ತೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.
ಇನ್ನು, ಈ ಧಾರ್ಮಿಕ ಆಚರಣೆಯ ವಿಡಿಯೋ ರಾಜಕೀಯ ವಲಯದಲ್ಲೂ ತೀವ್ರ ವಿರೋಧಕ್ಕೆ ಗುರಿಯಾಗಿದೆ. ನಾಗರಿಕರಲ್ಲಿ ವೈಜ್ಞಾನಿಕ ಮನೋಭಾವ, ಮಾನವೀಯತೆ ಹಾಗೂ ಸುಧಾರಣಾ ಮನೋಭಾವವನ್ನು ಬೆಳೆಸುವ ಮೂಲಭೂತ ಕರ್ತವ್ಯಗಳ ಕುರಿತಾದ ಸಂವಿಧಾನದ 51ಎ ವಿಧಿಯನ್ನು ಉಲ್ಲೇಖಿಸಿ ಪೋಸ್ಟ್ ಮಾಡಿರುವ ಡಿಎಂಕೆ ಯುವ ಘಟಕ ಮತ್ತು ಡಿಎಂಕೆ ನಾಯಕ ಸೆಂಥಿಲ್‌ಕುಮಾರ್, “ಜ್ಯೋತಿಷಿಗಳ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುವ ವ್ಯವಸ್ಥೆಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ” ಎಂದು ಪ್ರಶ್ನಿಸಿದ್ದಾರೆ.


