ಪೆಟ್ರೋಲ್‌ನಲ್ಲಿ ಅಧಿಕ ಪ್ರಮಾಣದ ಎಥನಾಲ್ ಬೆರೆಸುವುದರಿಂದ ವಾಹನಗಳ ಎಂಜಿನ್ ಕಾರ್ಯಕ್ಷಮತೆ ಕುಸಿಯುತ್ತಿದೆ ಎಂಬ ಸಾರ್ವಜನಿಕ ದೂರುಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಾದ್ಯಂತ 67 ಸ್ಥಳಗಳಲ್ಲಿ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಭಾನುವಾರ ಬೆಂಗಳೂರಿನ ಸದಾಶಿವನಗರದಲ್ಲಿದ್ದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, E20 ಪೆಟ್ರೋಲ್‌ನಲ್ಲಿ ನಿಯಮಾವಳಿ ಮೀರಿ ಶೇಕಡಾ 31.5 ರಷ್ಟು ಎಥನಾಲ್ ಮಿಶ್ರಣ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕುರಿತು ಸಂಬಂಧಪಟ್ಟ ಸಚಿವರಿಗೆ ಅಗತ್ಯ ಸೂಚನೆ ನೀಡಲಾಗಿದ್ದು, ಕೇಂದ್ರ ಸರ್ಕಾರಕ್ಕೂ ಅಧಿಕೃತ ಮಾಹಿತಿ ರವಾನಿಸಲಾಗಿದೆ ಎಂದರು.
“ಕೇವಲ ಪೆಟ್ರೋಲ್ ಬಂಕ್‌ಗಳಲ್ಲಿ ಮಾತ್ರವಲ್ಲದೆ, ಎಥನಾಲ್ ಸಾಗಣೆ ಮತ್ತು ಮಿಶ್ರಣ ಮಾಡುವ ಹಂತಗಳಲ್ಲೂ ತಪಾಸಣೆ ನಡೆಸಲಾಗಿದೆ. ಎಲ್ಲೆಲ್ಲಿ ಮತ್ತು ಹೇಗೆ ಮಿಶ್ರಣ ನಡೆಯುತ್ತಿದೆ ಎಂಬ ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ. ಸೋಮವಾರ ಸಂಬಂಧಪಟ್ಟ ಸಚಿವರು ಅಧಿಕೃತ ಪತ್ರಿಕಾಗೋಷ್ಠಿ ನಡೆಸಿ ತಪಾಸಣಾ ವರದಿ ಹಾಗೂ ಮುಂದಿನ ಕ್ರಮಗಳ ಕುರಿತು ವಿವರ ನೀಡಲಿದ್ದಾರೆ” ಎಂದು ಸಿಎಂ ಸ್ಪಷ್ಟಪಡಿಸಿದರು.
ವಾಹನಗಳ ಮೈಲೇಜ್ ಕಡಿಮೆಯಾಗುವುದು, ಚಾಲನೆ ವೇಳೆಯಲ್ಲೇ ಎಂಜಿನ್ ದಿಢೀರ್ ಬಂದ್ ಆಗುವುದು ಸೇರಿದಂತೆ ಸಾವಿರಾರು ವಾಹನ ಸವಾರರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರ ಕಾಳಜಿ ವಹಿಸಿದೆ. “ಇಂಧನ ಗುಣಮಟ್ಟ ಹಾಗೂ ಸಾರ್ವಜನಿಕ ಸುರಕ್ಷತೆ ನಮಗೆ ಅತ್ಯಂತ ಪ್ರಮುಖ. ಕಡಿಮೆ ವೆಚ್ಚಕ್ಕೆ ಸಿಗುತ್ತದೆ ಎಂಬ ಕಾರಣಕ್ಕೆ ಎಥನಾಲ್ ಪ್ರಮಾಣ ಹೆಚ್ಚಿಸಿ ಲಾಭ ಮಾಡಿಕೊಳ್ಳುವುದು ಸರಿಯಲ್ಲ. ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮೌನವನ್ನು ಪ್ರಶ್ನಿಸಿದರು. “ಜನಸಾಮಾನ್ಯರಿಗೆ ನೇರವಾಗಿ ಬಾಧಿಸುವ ಇಂತಹ ಗಂಭೀರ ಸಮಸ್ಯೆಯ ಬಗ್ಗೆ ಪ್ರತಿಪಕ್ಷ ನಾಯಕ ಆರ್ . ಅಶೋಕ್ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಏಕಾಗಿ ಮೌನಕ್ಕೆ ಶರಣಾಗಿದ್ದಾರೆ? ಸಾರ್ವಜನಿಕ ಹಿತಾಸಕ್ತಿಯ ವಿಷಯಗಳಲ್ಲಿ ಪ್ರತಿಯೊಬ್ಬರೂ ಧ್ವನಿ ಎತ್ತಬೇಕಿದೆ” ಎಂದು ಅವರು ಆಗ್ರಹಿಸಿದರು.
ಪೆಟ್ರೋಲ್‌ನಲ್ಲಿ ನಿಯಮಿತ ಪ್ರಮಾಣಕ್ಕಿಂತ (ಸಾಮಾನ್ಯವಾಗಿ E10 ಅಥವಾ E20 ಅಂದರೆ 10% ರಿಂದ 20%) ಹೆಚ್ಚು ಎಥನಾಲ್ ಬೆರೆಸಿದಾಗ, ವಿಶೇಷವಾಗಿ 30% ಕ್ಕಿಂತ ಅಧಿಕ (E30+) ತಲುಪಿದಾಗ, ಸಾಮಾನ್ಯ ವಾಹನಗಳ ಎಂಜಿನ್‌ಗಳ ಮೇಲೆ ಹಲವು ತಾಂತ್ರಿಕ ದುಷ್ಪರಿಣಾಮಗಳು ಉಂಟಾಗುತ್ತವೆ.
ಎಥನಾಲ್ ಒಂದು ಪ್ರಬಲ ಕರಗಿಸುವ ವಸ್ತುವಾಗಿದೆ. ಇದು ಇಂಧನ ಪೈಪ್‌ಗಳು , ಗ್ಯಾಸ್ಕೆಟ್‌ಗಳು, ಓ-ರಿಂಗ್‌ಗಳು ಮತ್ತು ಇಂಧನ ಪಂಪ್‌ನಲ್ಲಿರುವ ರಬ್ಬರ್/ಪ್ಲಾಸ್ಟಿಕ್ ಭಾಗಗಳನ್ನು ಹಾನಿಗೊಳಿಸಿ ಕರಗಿಸುತ್ತದೆ. ಎಥನಾಲ್ ನೀರನ್ನು ಆಕರ್ಷಿಸುವ ಗುಣ ಹೊಂದಿದೆ. ಇದು ವಾತಾವರಣದಲ್ಲಿನ ತೇವಾಂಶವನ್ನು ಹೀರಿಕೊಂಡು ಲೋಹದ ಇಂಧನ ಟ್ಯಾಂಕ್‌ಗಳು, ಕಾರ್ಬ್ಯುರೇಟರ್ ಹಾಗೂ ಫ್ಯುಯೆಲ್ ಇಂಜೆಕ್ಟರ್‌ಗಳಲ್ಲಿ ತುಕ್ಕು ಹಿಡಿಯುವಂತೆ ಮಾಡುತ್ತದೆ. ಪೆಟ್ರೋಲ್‌ನಲ್ಲಿ ನೀರು ಬೆರೆಯುವುದಿಲ್ಲ, ಆದರೆ ೆಥನಾಲ್ ನೀರನ್ನು ಬೇಗನೆ ಹೀರಿಕೊಳ್ಳುತ್ತದೆ. ಇಂಧನದಲ್ಲಿ ಎಥನಾಲ್ ಪ್ರಮಾಣ ಹೆಚ್ಚಾದಾಗ, ನೀರು ಮತ್ತು ಎಥನಾಲ್ ಒಂದಾಗಿ ಪೆಟ್ರೋಲ್‌ನಿಂದ ಪ್ರತ್ಯೇಕಗೊಂಡು ಟ್ಯಾಂಕ್‌ನ ತಳಭಾಗದಲ್ಲಿ ಸಂಗ್ರಹವಾಗುತ್ತದೆ. ಇದರಿಂದ ವಾಹನ ಚಾಲನೆಯಲ್ಲಿರುವಾಗಲೇ ಎಂಜಿನ್ ದಿಢೀರ್ ಬಂದ್ ಆಗುವುದು ಅಥವಾ ಸ್ಟಾರ್ಟ್ ಆಗದಿರುವ ಸಮಸ್ಯೆಗಳು ಶುರುವಾಗುತ್ತವೆ.




