ದೀಪಾವಳಿ ಹಬ್ಬದ ಸಂಭ್ರಮದ ಬೆನ್ನಲ್ಲೇ ದೇಶದ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟವು ಅಪಾಯಕಾರಿ ಮೀರಿ ದಾಖಲಾಗಿದ್ದು, ದಟ್ಟವಾದ ಹೊಗೆಯಿಂದಾಗಿ ಜನರು ಉಸಿರಾಡಲೂ ಪರದಾಡುವಂತಹ ‘ಉಸಿರುಕಟ್ಟಿಸುವ’ ಪರಿಸ್ಥಿತಿ ನಿರ್ಮಾಣವಾಗಿದೆ. ಹಬ್ಬದ ರಾತ್ರಿ ಸಿಡಿಸಿದ ಪಟಾಕಿಗಳ ಪರಿಣಾಮವಾಗಿ ಸೋಮವಾರ ಬೆಳಗಿನ ಜಾವದಲ್ಲಿ ಗಾಳಿಯ ಗುಣಮಟ್ಟವು ತೀವ್ರವಾಗಿ ಕುಸಿದಿದ್ದು, ಕಳೆದ ವರ್ಷದ ದೀಪಾವಳಿಗೆ ಹೋಲಿಸಿದರೆ ಈ ಬಾರಿ ಮಾಲಿನ್ಯದ ಪ್ರಮಾಣ ಬರೋಬ್ಬರಿ ಶೇಕಡಾ 69 ರಷ್ಟು ಹೆಚ್ಚಳವಾಗಿದೆ.
ರಿಯಲ್ ಟೈಮ್ ಮಾಹಿತಿ ನೀಡುವ ‘AQI.in’ ಅಂಕಿ-ಅಂಶಗಳ ಪ್ರಕಾರ (ಇದು ಅಧಿಕೃತ CPCB ಗಿಂತ ಭಿನ್ನವಾಗಿದೆ), ನವೆಂಬರ್ 9 ರಂದು ಬೆಳಗ್ಗೆ 8:01 ಕ್ಕೆ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) 663 ರಷ್ಟಿತ್ತು. ಆದರೆ, ಭಾನುವಾರ ಮಧ್ಯರಾತ್ರಿ 1:31 ರ ಸುಮಾರಿಗೆ ಈ ಸೂಚ್ಯಂಕವು ಗರಿಷ್ಠ 1,331 ರಷ್ಟನ್ನು ಮುಟ್ಟಿತ್ತು. ಕಳೆದ ವರ್ಷ ಅಂದರೆ, ಅಕ್ಟೋಬರ್ 21, 2025 ರಂದು ದೀಪಾವಳಿ ಮರುದಿನ ದಾಖಲಾಗಿದ್ದ 393 AQI ಗೆ ಹೋಲಿಸಿದರೆ, ಕೇವಲ ಒಂದೇ ವರ್ಷದಲ್ಲಿ ಈ ಹಬ್ಬದ ನಂತರದ ಮಾಲಿನ್ಯದ ಮಟ್ಟವು ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದನ್ನು ದೆಹಲಿ-ಎನ್ಸಿಆರ್ ವರದಿಗಳು ಎತ್ತಿತೋರಿಸಿವೆ.
ಭಾನುವಾರ ರಾತ್ರಿಯಿಂದಲೇ ರಾಜಧಾನಿಯ ಗಾಳಿಯ ಗುಣಮಟ್ಟ ಹದಗೆಡುತ್ತಾ ಸಾಗಿತ್ತು. ರಾತ್ರಿ 9:31 ರ ಸುಮಾರಿಗೆ 681 ರಷ್ಟಿದ್ದ ಎಕ್ಯೂಐ, ಕೇವಲ ಒಂದೂವರೆ ಗಂಟೆ ಅಂತರದಲ್ಲಿ ಅಂದರೆ ರಾತ್ರಿ 11 ಗಂಟೆಯ ಹೊತ್ತಿಗೆ 1,153 ಕ್ಕೆ ಏರಿಕೆಯಾಗಿತ್ತು. ತಡರಾತ್ರಿ 1:31 ಕ್ಕೆ ಗರಿಷ್ಠ ಮಟ್ಟ (1,331) ತಲುಪಿ, ಮುಂಜಾನೆಯ ಹೊತ್ತಿಗೆ ಕೊಂಚ ಇಳಿಕೆ ಕಂಡುಬಂದರೂ 663 ರಷ್ಟೇ ಇದ್ದದ್ದು ಪರಿಸ್ಥಿತಿಯ ಗಂಭೀರತೆಯನ್ನು ಸ್ಪಷ್ಟಪಡಿಸಿದೆ. ದೀಪಾವಳಿಗೂ ಮುನ್ನ ನವೆಂಬರ್ 8 ರಂದು ಅಧಿಕೃತವಾಗಿ 376 AQI ನೊಂದಿಗೆ ವಾತಾವರಣವು ‘ಅತಿ ಕಳಪೆ’ (very poor) ಸ್ಥಿತಿಯಲ್ಲಿದ್ದಾಗಲೇ, ನವೆಂಬರ್ 9 ಕ್ಕೆ ವಾತಾವರಣವು ತೀರಾ ಗಂಭೀರ ಸ್ವರೂಪ (severe) ಪಡೆದುಕೊಳ್ಳಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು.
ದೆಹಲಿಯಲ್ಲಿ ದೀಪಾವಳಿಗೂ ಮುನ್ನವೇ ವಾಯು ಗುಣಮಟ್ಟ ತೀರಾ ಹದಗೆಟ್ಟಿತ್ತು. ಅಕ್ಟೋಬರ್ ಅಂತ್ಯದಲ್ಲಿ ಮಳೆಯಿಂದಾಗಿ ಸುಧಾರಿಸಿದ್ದ ವಾತಾವರಣ, ಬಳಿಕ ಒಣ ಹವೆ, ವಾಹನ, ಕೈಗಾರಿಕೆಗಳ ಹೊಗೆ, ಕಟ್ಟಡ ನಿರ್ಮಾಣದ ಧೂಳು ಮತ್ತು ರಸ್ತೆ ತ್ಯಾಜ್ಯ ಸುಡುವಿಕೆಯಿಂದ ಮತ್ತೆ ಕಲುಷಿತಗೊಂಡಿತ್ತು. ಅಕ್ಟೋಬರ್ 30 ರಂದು 124 ರಷ್ಟಿದ್ದ ಎಕ್ಯೂಐ, ನವೆಂಬರ್ 2 ರ ವೇಳೆಗೆ 393 ಹಾಗೂ ನವೆಂಬರ್ 3 ರ ಬೆಳಿಗ್ಗೆ 11:31 ರ ಹೊತ್ತಿಗೆ 464 ಕ್ಕೆ ತಲುಪಿತ್ತು. ಹೀಗಾಗಿ ಮತ್ತಷ್ಟು ಹೊಗೆಯನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿ ದೆಹಲಿಯ ವಾತಾವರಣ ಇರಲಿಲ್ಲ.
ದೀಪಾವಳಿಯ ಪಟಾಕಿಗಳಿಂದ ಹೊರಹೊಮ್ಮಿದ ಹೊಗೆ ಮತ್ತು ಸೂಕ್ಷ್ಮ ಕಣಗಳ ಜೊತೆಗೆ, ನೆರೆಯ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ಸುಡುತ್ತಿರುವುದು ಈ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ದೀಪಾವಳಿಯಂದೇ ಪಂಜಾಬ್ನಲ್ಲಿ ಬರೋಬ್ಬರಿ 1,152 ಕೃಷಿ ತ್ಯಾಜ್ಯ ದಹನ ಪ್ರಕರಣಗಳು ವರದಿಯಾಗಿದ್ದು, ಈ ಋತುವಿನಲ್ಲೇ ಅತಿ ಹೆಚ್ಚು ಏರಿಕೆಯಾಗಿದೆ. ಜೊತೆಗೆ ಗಾಳಿಯ ವೇಗ ಕಡಿಮೆಯಿರುವುದು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಕಲುಷಿತ ಕಣಗಳು ಚದುರದೆ ರಾಜಧಾನಿಯಲ್ಲೇ ಉಳಿದುಕೊಳ್ಳುವಂತಾಗಿದೆ.
ವಾಯುಮಾಲಿನ್ಯ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ವಾಯು ಗುಣಮಟ್ಟ ನಿರ್ವಹಣಾ ಆಯೋಗವು (CAQM) ನವೆಂಬರ್ 6 ರಿಂದಲೇ ದೆಹಲಿ-ಎನ್ಸಿಆರ್ನಾದ್ಯಂತ ‘ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್’ (GRAP) ಹಂತ III ರ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ವಾಯುಮಾಲಿನ್ಯದ ಮಟ್ಟವು ಆಕಾಶದೆತ್ತರಕ್ಕೆ ಏರಿರುವ ಕಾರಣ ದೆಹಲಿ ನಿವಾಸಿಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಕಲುಷಿತ ಗಾಳಿಯಲ್ಲೇ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ.




