ಪಶ್ಚಿಮ ಬಂಗಾಳದ ಜಾಗತಿಕ ಪ್ರಸಿದ್ಧ ಮ್ಯಾಂಗ್ರೋವ್ ಅರಣ್ಯ ಪ್ರದೇಶ ಸುಂದರ್‌ಬನ್‌ನಲ್ಲಿ ಭೀಕರ ಹವಾಮಾನ ಬದಲಾವಣೆ ಕಂಡುಬರುತ್ತಿದೆ. ದಿನದಿಂದ ದಿನಕ್ಕೆ ಅಲ್ಲಿನ ಜನರ ಜೀವನೋಪಾಯ ಕ್ಷೀಣಿಸುತ್ತಿದೆ. ಗ್ರಾಮೀಣ ಕುಟುಂಬಗಳ ಬದುಕು ಕಂಗೆಟ್ಟಿದೆ. ಇದರ ನೇರ ಪರಿಣಾಮವು ಅಲ್ಲಿನ ಶಿಕ್ಷಣ ವ್ಯವಸ್ಥೆಯ ಮೇಲೂ ಬೀರುತ್ತಿದ್ದು, ಅಪ್ರಾಪ್ತ ಬಾಲಕರು ಬೃಹತ್ ಪ್ರಮಾಣದಲ್ಲಿ ಶಾಲೆಯನ್ನು ಅರ್ಧಕ್ಕೇ ತೊರೆದು, ಕಠಿಣ ದುಡಿಮೆಗೆ ಇಳಿಯುತ್ತಿದ್ದಾರೆ. ಅವರೆಲ್ಲರೂ ತಮ್ಮ ಉಜ್ವಲ ಭವಿಷ್ಯದ ಕನಸು ಹೊತ್ತು ಬೆಂಗಳೂರಿಗೆ ಬರುತ್ತಿದ್ದಾರೆ.
ಬಂಗಾಳದ ಗ್ರಾಮೀಣ ಭಾರತದ ಸಾಮಾನ್ಯ ಶಾಲೆಗಳಿಗೆ ಹೋಲಿಸಿದರೆ ಸುಂದರ್‌ಬನ್‌ನ ಬಿಜೋಯ್‌ನಗರ ಅಥವಾ ದಯಾಪುರದಂತಹ ಹೈಸ್ಕೂಲುಗಳ 12ನೇ ತರಗತಿ ಕೊಠಡಿಗಳಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. 12ನೇ ತರಗತಿ ಓದುತ್ತಿರುವ ಕೆಲವೇ ಬಾಲಕರು ಕೂಡ ಕೇವಲ ಹಾಜರಾತಿ ಉಳಿಸಿಕೊಳ್ಳಲು ಶಾಲೆಗೆ ಬರುತ್ತಿದ್ದಾರೆಯೇ ಹೊರತು, ಅವರಿಗೆ ಶಿಕ್ಷಣ ಪೂರ್ಣಗೊಳಿಸುವ ಆಸಕ್ತಿಯಿಲ್ಲ. ಅವರೆಲ್ಲರೂ ಶಾಲೆ ಮುಗಿದ ತಕ್ಷಣವೇ ಬೆಂಗಳೂರು, ಚೆನ್ನೈನಂತಹ ದೂರದ ನಗರಗಳಿಗೆ ತೆರಳಿ ಗ್ಯಾರೇಜ್, ಮೊಬೈಲ್ ರಿಪೇರಿ ಅಥವಾ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವ ಯೋಜನೆ ಸಿದ್ಧಪಡಿಸಿಕೊಂಡಿದ್ದಾರೆ.
ಈ ಭಿನ್ನತೆಗೆ ಸರ್ಕಾರಿ ನೀತಿಗಳು ಮತ್ತು ಕುಟುಂಬದ ಆರ್ಥಿಕ ಅಗತ್ಯಗಳೂ ಕಾರಣವಾಗಿವೆ. ಪಶ್ಚಿಮ ಬಂಗಾಳ ಸರ್ಕಾರವು ಬಾಲಕಿಯರ ಬಾಲ್ಯವಿವಾಹ ತಡೆಯಲು ಮತ್ತು ಶಿಕ್ಷಣವನ್ನು ಉತ್ತೇಜಿಸಲು ಜಾರಿಗೆ ತಂದಿರುವ ‘ಕನ್ಯಾಶ್ರೀ’ ಯೋಜನೆಯು ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತಿದೆ. ಇದು ಹೆಣ್ಣುಮಕ್ಕಳು ಶಾಲೆಯಲ್ಲೇ ಮುಂದುವರಿಯಲು ಸಹಾಯ ಮಾಡುತ್ತಿದೆ. ಆದರೆ, ಗಂಡು ಮಕ್ಕಳಿಗೆ ಇಂತಹ ಯಾವುದೇ ಆರ್ಥಿಕ ಆಸರೆ ಇಲ್ಲದಿರುವುದು ಮತ್ತು ಕುಟುಂಬವನ್ನು ಸಲಹುವ ಕಠಿಣ ಹೊಣೆಗಾರಿಕೆ ಅವರ ಹೆಗಲೇರುವುದರಿಂದ, ಅವರು ಬಡತನದಿಂದಾಗಿ ಶಾಲೆಯಿಂದ ಹೊರನಡೆಯುತ್ತಿದ್ದಾರೆ. ಸುಂದರ್‌ಬನ್‌ನ ವಿಜಯನಗರ ಹೈಸ್ಕೂಲ್‌ನಲ್ಲಿ ಈ ವರ್ಷ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 12ನೇ ತರಗತಿಯ 107 ವಿದ್ಯಾರ್ಥಿಗಳಲ್ಲಿ ಕೇವಲ 78 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು, ಶಾಲೆಯಿಂದ ದೂರವುಳಿದವರಲ್ಲಿ ಬಹುತೇಕರು ಗಂಡು ಮಕ್ಕಳಾಗಿದ್ದಾರೆ.
ಸುಂದರ್‌ಬನ್ ವಲಯದ ಸುಮಾರು 200 ಪ್ರೌಢಶಾಲೆಗಳಲ್ಲೂ ಇದೇ ರೀತಿಯ ಸನ್ನಿವೇಶವಿದೆ. 2009ರಲ್ಲಿ ‘ಐಲಾ’ ಸೈಕ್ಲೋನ್ ಅಪ್ಪಳಿಸಿದ ನಂತರ ಈ ದ್ವೀಪ ಸಮೂಹಗಳ ಚಿತ್ರಣವೇ ಬದಲಾಗಿದೆ. ತದನಂತರ ಬಂದ ಬುಲ್ಬುಲ್, ಅಂಪಾನ್, ಯಾಸಾ, ರೇಮಲ್ ಹಾಗೂ ದಾನಾದಂತಹ ಸರಣಿ ಚಂಡಮಾರುತಗಳು ಕೃಷಿ ಭೂಮಿ ಮತ್ತು ಸಿಹಿನೀರಿನ ಕೊಳಗಳಿಗೆ ಸಮುದ್ರದ ಉಪ್ಪು ನೀರನ್ನು ನುಗ್ಗಿಸಿವೆ. ಇದರಿಂದಾಗಿ ಸಾಂಪ್ರದಾಯಿಕ ಕೃಷಿ ಮತ್ತು ಮೀನುಗಾರಿಕೆ ಸಂಪೂರ್ಣ ನಶಿಸಿಹೋಗಿದೆ.
ಇದಕ್ಕೆ ಗಾಯದ ಮೇಲೆ ಎಣ್ಣೆ ಸುರಿದಂತೆ, ಈ ಹಿಂದೆ ಗ್ರಾಮೀಣ ಬಡಜನರಿಗೆ ಆಸರೆಯಾಗಿದ್ದ ಮನರೇಗಾ ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ಸತತ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿರುವುದು ಕುಟುಂಬಗಳನ್ನು ಮತ್ತಷ್ಟು ಆರ್ಥಿಕ ಅಭದ್ರತೆಯ ಅಂಚಿಗೆ ತಳ್ಳಿದೆ.
ಇದರಿಂದಾಗಿ 9 ಮತ್ತು 10ನೇ ತರಗತಿಯ ಹಂತದಲ್ಲೇ ಬಾಲಕರು ಶಾಲೆ ತೊರೆದು, ಪ್ರವಾಸೋದ್ಯಮ ವಲಯದಲ್ಲಿ ರೆಸಾರ್ಟ್ ವೇಟರ್‌ಗಳಾಗಿ, ಪ್ರವಾಸಿ ದೋಣಿಗಳ ಸಹಾಯಕರಾಗಿ ದಿನಕ್ಕೆ 500 ರೂ.ಗಳಿಸುವ ಕೆಲಸಕ್ಕೆ ಸೇರುತ್ತಿದ್ದಾರೆ. ಒಮ್ಮೆ ತಿಂಗಳಿಗೆ 15,000 ರೂ.ಗಳಷ್ಟು ಆದಾಯ ಬರಲು ತೊಡಗಿದರೆ, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಆ ಹಣವೇ ದೊಡ್ಡ ಆಸರೆಯಾಗಿ ಕಾಣುತ್ತದೆ. ಪರಿಣಾಮವಾಗಿ ಅವರು ಮತ್ತೆ ಶಾಲೆಯ ಮುಖ ನೋಡುವುದಿಲ್ಲ. ಶಿಕ್ಷಕರು ವಾಟ್ಸ್‌ಆ್ಯಪ್ ಮೂಲಕ ದಾಖಲೆಗಳನ್ನು ಕಳುಹಿಸಿ, ಮನೆಗಳಿಗೆ ಭೇಟಿ ನೀಡಿ ಪೋಷಕರ ಮನವೊಲಿಸಲು ಯತ್ನಿಸಿದರೂ ಮಕ್ಕಳು ಶಾಲೆಗೆ ಮರಳುತ್ತಿಲ್ಲ.
ಈ ಲೇಖನ ಓದಿದ್ದೀರಾ?: ಸುಪ್ರೀಂ ಆದೇಶವಿದ್ದರೂ ರಂಗೋಲಿ ಕೆಳಗೆ ತೂರುವ ಪೊಲೀಸರು: ಬಂಧಿತರ ಮೂಲಭೂತ ಹಕ್ಕುಗಳ ಮೇಲೇಕೆ ತೂಗುಕತ್ತಿ?
ಇನ್ನೊಂದೆಡೆ, ಇಲ್ಲಿನ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ದುಸ್ಥಿತಿಯೂ ಮಕ್ಕಳನ್ನು ಕಟ್ಟಿಹಾಕಲು ವಿಫಲವಾಗಿದೆ. 200ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಪೈಕಿ ಕೇವಲ 11 ಶಾಲೆಗಳಲ್ಲಿ ಮಾತ್ರ ಖಾಯಂ ಮುಖ್ಯಶಿಕ್ಷಕರಿದ್ದಾರೆ. ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಶಾಲೆಗಳನ್ನು ನಿರಾಶ್ರಿತರ ಶಿಬಿರಗಳಾಗಿ ಪರಿವರ್ತಿಸುವುದರಿಂದ ಶಿಕ್ಷಣದ ನಿರಂತರತೆಯೂ ಮುರಿಯುತ್ತದೆ. ಪ್ರವಾಹ ಮತ್ತು ಸೈಕ್ಲೋನ್ ಭೀತಿಗಿಂತಲೂ, ಅದರ ನಂತರ ಎದುರಾಗುವ ಸರಿಪಡಿಸಲಾಗದ ಆರ್ಥಿಕ ನಷ್ಟವೇ ಮಕ್ಕಳನ್ನು ಶಾಲೆಯಿಂದ ಶಾಶ್ವತವಾಗಿ ದೂರವಾಗುವಂತೆ ಮಾಡುತ್ತಿದೆ. ಪಶ್ಚಿಮ ಬಂಗಾಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (WBCPCR) ವರದಿಯ ಪ್ರಕಾರ, ಹವಾಮಾನ ವೈಪರೀತ್ಯದಿಂದಾಗಿ ಗೋಸಬಾ ಮತ್ತು ಪಥರಪ್ರತಿಮಾ ಬ್ಲಾಕ್‌ಗಳಲ್ಲಿ ಶಾಲಾ ಹಾಜರಾತಿಯಲ್ಲಿ 70%ರಷ್ಟು ಅಸ್ಥಿರತೆ ಉಂಟಾಗಿದ್ದು, 27%ರಷ್ಟು ಮಕ್ಕಳು ಶಾಲೆಯನ್ನು ಶಾಶ್ವತವಾಗಿ ತೊರೆದಿದ್ದಾರೆ.
ಉನ್ನತ ಶಿಕ್ಷಣ ಪಡೆದರೂ ಸೂಕ್ತ ಸರ್ಕಾರಿ ಉದ್ಯೋಗಗಳು ಸಿಗುವುದಿಲ್ಲ ಎಂಬ ನಿರಾಶಾವಾದವೂ ಈ ಬಾಲಕರು ಮತ್ತು ಅವರ ಕುಟುಂಬಗಳಲ್ಲಿದೆ. ಹೀಗಾಗಿ ಪೆನ್ನಿನ ಬದಲು ಪೇಮೆಂಟ್ ಆಯ್ಕೆ ಮಾಡಿಕೊಳ್ಳುತ್ತಿರುವ ಸುಂದರ್‌ಬನ್‌ನ ಗಂಡು ಮಕ್ಕಳಿಗೆ, ಅಕ್ಷರ ಕಲಿಕೆಗಿಂತಲೂ ಕುಟುಂಬದ ದೈನಂದಿನ ಬದುಕಿನ ಉಳಿವೇ ಪ್ರಥಮ ಮತ್ತು ಏಕೈಕ ಆದ್ಯತೆಯಾಗಿದೆ.



