ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮುಖ್ಯಸ್ಥ ಹಾಗೂ ಅಂದಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಸೋಲಿಸಿ ‘ಜೈಂಟ್ ಕಿಲ್ಲರ್’ ಎನಿಸಿಕೊಂಡಿದ್ದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಶಾಸಕ ವಿ.ಎಸ್. ಬಾಬು ಅವರ ನಿಧನದ ಬೆನ್ನಲ್ಲೇ, ಸ್ಟಾಲಿನ್ ಅವರು ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಲು ಪ್ರಯತ್ನಿಸಲಿದ್ದಾರೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ.
ಬಾಬು ಅವರ ನಿಧನದಿಂದ ಕೊಳತ್ತೂರು ವಿಧಾನಸಭಾ ಕ್ಷೇತ್ರ ತೆರವಾಗಿದ್ದು, ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಉಪಚುನಾವಣೆ ನಡೆಯಲಿದೆ. 2011ರಿಂದಲೂ ಸ್ಟಾಲಿನ್ ಪ್ರತಿನಿಧಿಸುತ್ತಿದ್ದ ಭದ್ರಕೋಟೆ ಕೊಳತ್ತೂರಿನಲ್ಲಿ ಅವರು ಪರಾಭವಗೊಂಡಿದ್ದು, ವಿಧಾನಸಭಾ ಚುನಾವಣೆಯ ಅತ್ಯಂತ ದೊಡ್ಡ ಅಚ್ಚರಿಯ ಫಲಿತಾಂಶವಾಗಿತ್ತು. ಚಿತ್ರನಟ ವಿಜಯ್ ಸ್ಥಾಪಿಸಿದ ಹೊಸ ಪಕ್ಷ ಟಿವಿಕೆ ಎದುರು ಅಧಿಕಾರ ಕಳೆದುಕೊಂಡಿದ್ದ ಡಿಎಂಕೆಗೆ, ಸ್ಟಾಲಿನ್ ಅವರ ಈ ಸೋಲು ಭಾರಿ ಮುಖಭಂಗ ಉಂಟುಮಾಡಿತ್ತು.
ಕಳೆದ ಚುನಾವಣೆಯಲ್ಲಿ ವಿ.ಎಸ್. ಬಾಬು 82,997 ಮತಗಳನ್ನು ಪಡೆದಿದ್ದರೆ, ಸ್ಟಾಲಿನ್ 74,202 ಮತಗಳನ್ನು ಗಳಿಸಿ 8,795 ಮತಗಳ ಅಂತರದಿಂದ ಸೋಲು ಕಂಡಿದ್ದರು. ಇದೀಗ ಉಪಚುನಾವಣೆಯಲ್ಲಿ ಸ್ಟಾಲಿನ್ ಮತ್ತೆ ಕೊಳತ್ತೂರಿನಿಂದ ಸ್ಪರ್ಧಿಸಬೇಕು ಎಂಬ ಕೂಗು ಡಿಎಂಕೆ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ ಸಂಸದ ಸಿ. ರವೀಂದ್ರನ್, ‘ಅದು ನಮ್ಮ ನಾಯಕರ ಕ್ಷೇತ್ರ. ಸ್ಪರ್ಧಿಸುವ ಕುರಿತು ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಡಿಎಂಕೆ ಕಾರ್ಯಕರ್ತರಾಗಿ ಅವರು ಕಣಕ್ಕಿಳಿಯುವುದನ್ನು ನೋಡಲು ನಾವು ಇಷ್ಟಪಡುತ್ತೇವೆ; ಆದರೆ ಅಂತಿಮ ನಿರ್ಧಾರ ಅವರಿಗೇ ಬಿಟ್ಟಿದ್ದು’ ಎಂದು ಹೇಳಿದ್ದಾರೆ.
ಡಿಎಂಕೆ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ವಿ.ಎಸ್. ಬಾಬು, ಪಕ್ಷದ ಚೆನ್ನೈ (ಉತ್ತರ) ಜಿಲ್ಲಾ ಕಾರ್ಯದರ್ಶಿಯಾಗಿ ಬೆಳೆದಿದ್ದರು. 2006ರಲ್ಲಿ ಪುರಸವಾಕ್ಕಂ ಕ್ಷೇತ್ರದಿಂದ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿ 2011ರವರೆಗೆ ಶಾಸಕರಾಗಿದ್ದರು. ಬಳಿಕ ಎಐಎಡಿಎಂಕೆ ಸೇರಿದ್ದ ಅವರು, ವಿಧಾನಸಭಾ ಚುನಾವಣೆಗೂ ಮುನ್ನ ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗಿ ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು.
ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಕಳೆದುಕೊಂಡ ರಾಜಕೀಯ ವರ್ಚಸ್ಸನ್ನು ಮರಳಿ ಪಡೆಯಲು ಡಿಎಂಕೆಗೆ ಈ ಉಪಚುನಾವಣೆ ಒಂದು ಉತ್ತಮ ಅವಕಾಶವಾಗಿದೆ. ಆದರೆ, ಕೊಳತ್ತೂರಿನಲ್ಲಿ ಮತ್ತೊಮ್ಮೆ ಸ್ಪರ್ಧಿಸುವುದು ಸ್ಟಾಲಿನ್ ಅವರಿಗೆ ದೊಡ್ಡ ಸವಾಲೂ ಹೌದು; ಒಂದು ವೇಳೆ ಮತ್ತೆ ಸೋಲು ಎದುರಾದರೆ ಅದು ಅವರಿಗೆ ಮತ್ತಷ್ಟು ಮುಜುಗರ ತಂದೊಡ್ಡಲಿದೆ. ಇನ್ನೊಂದೆಡೆ, ಚುನಾವಣೆಯಲ್ಲಿ ಸಾಧಿಸಿದ ಅತ್ಯಂತ ಪ್ರತಿಷ್ಠಿತ ಗೆಲುವನ್ನು ಉಳಿಸಿಕೊಳ್ಳುವ ಸವಾಲು ಟಿವಿಕೆ ಮುಂದಿದೆ. ಡಿಎಂಕೆ ಭದ್ರಕೋಟೆಯನ್ನು ಭೇದಿಸಲು ನೆರವಾಗಿದ್ದ ಜನಬೆಂಬಲವನ್ನು ವಿಜಯ್ ಅವರ ಪಕ್ಷವು ಮುಂದುವರಿಸಿಕೊಂಡು ಹೋಗಬಲ್ಲದೇ ಎಂಬುದಕ್ಕೆ ಈ ಉಪಚುನಾವಣೆ ಮೊದಲ ಪರೀಕ್ಷೆಯಾಗಲಿದೆ.



