ವಿಫಲವಾದ ಗರ್ಭಧಾರಣೆಯ ಬಳಿಕ ಗರ್ಭಕೋಶವನ್ನು ಶುಚಿಗೊಳಿಸುವ ಶಸ್ತ್ರಚಿಕಿತ್ಸೆಯನ್ನು (ಡಿ ಆ್ಯಂಡ್ ಸಿ) ಸಮರ್ಪಕವಾಗಿ ನಡೆಸದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ಮಹಿಳೆಯೊಬ್ಬರು ವಾರಗಟ್ಟಲೆ ತೀವ್ರ ರಕ್ತಸ್ರಾವದಿಂದ ನರಳಿ, ಮೂರು ಬಾರಿ ಶಸ್ತ್ರಚಿಕಿತ್ಸೆ ಹಾಗೂ ರಕ್ತಪೂರಣಕ್ಕೆ ಒಳಗಾದ ಪ್ರಕರಣದಲ್ಲಿ ವೈದ್ಯೆ ಮತ್ತು ಕ್ಲಿನಿಕ್‌ನಿಂದ ವೈದ್ಯಕೀಯ ನಿರ್ಲಕ್ಷ್ಯ ನಡೆದಿದೆ ಎಂದು ಬೆಂಗಳೂರಿನ ಮೊದಲನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ. ಅಲ್ಲದೆ, ಸಂತ್ರಸ್ತ ಮಹಿಳೆಗೆ ₹2 ಲಕ್ಷ ಪರಿಹಾರ ಹಾಗೂ ₹2,000 ವ್ಯಾಜ್ಯದ ವೆಚ್ಚ ಪಾವತಿಸುವಂತೆ ಆದೇಶಿಸಿದೆ.
2024ರ ಅಕ್ಟೋಬರ್ 8ರಂದು ಕಾಳೇನ ಅಗ್ರಹಾರದ ನಿವಾಸಿ ಅಮೃತಾ (ಹೆಸರು ಬದಲಾಯಿಸಲಾಗಿದೆ) ಅವರು ಗರ್ಭಧಾರಣೆ ಪರೀಕ್ಷೆಗಾಗಿ ಜೆ.ಪಿ. ನಗರ 8ನೇ ಹಂತದಲ್ಲಿರುವ ‘ಶ್ರೀ ಕೃಷ್ಣ ಕ್ಲಿನಿಕ್’ಗೆ ಭೇಟಿ ನೀಡಿದ್ದರು. ವೈದ್ಯೆ ಡಾ. ಶೈಲಜಾ ಎನ್. ಅವರ ಸಲಹೆಯಂತೆ ಸ್ಕ್ಯಾನಿಂಗ್ ಮಾಡಿಸಿದಾಗ, ಎಂಟು ವಾರಗಳ ಅವಳಿ ಗರ್ಭದಲ್ಲಿ ಹೃದಯ ಬಡಿತ ಇಲ್ಲದಿರುವುದು ಪತ್ತೆಯಾಗಿ ಗರ್ಭಧಾರಣೆ ವಿಫಲವಾಗಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಗರ್ಭಕೋಶ ಶುಚಿಗೊಳಿಸುವ (ಡಿ ಆ್ಯಂಡ್ ಸಿ) ಚಿಕಿತ್ಸೆಗೆ ಸಲಹೆ ನೀಡಿದ ವೈದ್ಯೆ, ತಾವು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಬಿಲ್ಲೇಕಹಳ್ಳಿಯ ‘ರೇನ್‌ಬೋ ಮಕ್ಕಳ ಆಸ್ಪತ್ರೆ’ಗೆ ಶಿಫಾರಸು ಮಾಡಿದ್ದರು. ಮರುದಿನ ಆಸ್ಪತ್ರೆಗೆ ದಾಖಲಾದ ಅಮೃತಾ ಅವರಿಗೆ ಸಾಮಾನ್ಯ ಅರಿವಳಿಕೆ ನೀಡಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಭ್ರೂಣದ ಅಂಶಗಳನ್ನು ಸಂಪೂರ್ಣವಾಗಿ ಹೊರತೆಗೆಯಲಾಗಿದ್ದು, ಚೇತರಿಕೆ ಸಹಜವಾಗಿದೆ ಎಂದು ದಾಖಲೆಗಳಲ್ಲಿ ನಮೂದಿಸಿದ್ದ ಆಸ್ಪತ್ರೆ, ₹37,982 ಹಾಗೂ ₹5,000 ಶುಲ್ಕ ಪಡೆದು ಅದೇ ದಿನ ಮನೆಗೆ ಕಳುಹಿಸಿತ್ತು.
ಆದರೆ, ಮನೆಗೆ ಮರಳಿದ ಬಳಿಕ ಅಮೃತಾ ಅವರಿಗೆ ರಕ್ತಸ್ರಾವ ಮತ್ತಷ್ಟು ಉಲ್ಬಣಗೊಂಡು ತೀವ್ರ ನೋವು ಕಾಣಿಸಿಕೊಂಡಿತ್ತು. ಅಕ್ಟೋಬರ್ 14ರಂದು ಮತ್ತೆ ಕ್ಲಿನಿಕ್‌ಗೆ ಹೋದಾಗ ಅವರ ಹಿಮೋಗ್ಲೋಬಿನ್ ಮಟ್ಟ ತೀವ್ರವಾಗಿ ಕುಸಿದಿತ್ತು. ಆದರೂ ವೈದ್ಯರು ಕೇವಲ ಔಷಧಗಳನ್ನು ಮಾತ್ರ ನೀಡಿದ್ದರು ಎಂದು ದೂರಲಾಗಿದೆ. ಬಳಿಕ ಅಕ್ಟೋಬರ್ 19ರಂದು ಗರ್ಭಕೋಶದಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ತಿಳಿಸಿದ ವೈದ್ಯೆ, ತಮ್ಮ ಕ್ಲಿನಿಕ್‌ನಲ್ಲಿಯೇ ಎರಡನೇ ಬಾರಿಗೆ ‘ಡಿ ಆ್ಯಂಡ್ ಸಿ’ ಪ್ರಕ್ರಿಯೆ ನಡೆಸಿದ್ದರು. ಯಾವುದೇ ಅರಿವಳಿಕೆ ಅಥವಾ ಜೀವರಕ್ಷಕ ವ್ಯವಸ್ಥೆಯಿಲ್ಲದೆ ಈ ಪ್ರಕ್ರಿಯೆ ನಡೆಸಿದ್ದರಿಂದ ಮಾರಣಾಂತಿಕ ನೋವು ಅನುಭವಿಸಬೇಕಾಯಿತು ಮತ್ತು ಇದು ವೈದ್ಯಕೀಯ ಶಿಷ್ಟಾಚಾರಗಳ ಉಲ್ಲಂಘನೆಯಾಗಿದೆ ಎಂದು ಅಮೃತಾ ಆರೋಪಿಸಿದ್ದರು.
ರಕ್ತಸ್ರಾವ ಮತ್ತು ನೋವು ನಿಲ್ಲದ ಕಾರಣ ಅಮೃತಾ ಅವರು ತಮಿಳುನಾಡಿನ ಮಧುರೈನಲ್ಲಿರುವ ತಮ್ಮ ತಾಯಿಯ ಮನೆಗೆ ತೆರಳಿದ್ದರು. ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗರ್ಭಕೋಶದಲ್ಲಿ ಭ್ರೂಣದ ಅಂಶಗಳು ಇನ್ನೂ ಉಳಿದಿರುವುದು ಪತ್ತೆಯಾಯಿತು. ಹೀಗಾಗಿ ಅಲ್ಲಿ ಮೂರನೇ ಬಾರಿಗೆ ‘ಡಿ ಆ್ಯಂಡ್ ಸಿ’ ಚಿಕಿತ್ಸೆ ನಡೆಸಲಾಯಿತು. ತೀವ್ರ ರಕ್ತನಷ್ಟದಿಂದ ಬಳಲಿದ್ದ ಅವರಿಗೆ ರಕ್ತಪೂರಣವನ್ನೂ ಮಾಡಲಾಯಿತು. ದೀಪಾವಳಿ ಹಬ್ಬದ ದಿನ ಮತ್ತೆ ಹಿಮೋಗ್ಲೋಬಿನ್ ಮಟ್ಟ ತೀವ್ರವಾಗಿ ಕುಸಿದಿದ್ದರಿಂದ ಮಧುರೈನ ‘ಅರಿಸ್ಟೊ ಸ್ಪೆಷಾಲಿಟಿ ಆಸ್ಪತ್ರೆ’ಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಅರಿವಳಿಕೆ ನೀಡಿ ‘ಮ್ಯಾನುವಲ್ ವ್ಯಾಕ್ಯೂಮ್ ಆಸ್ಪಿರೇಶನ್’ ಚಿಕಿತ್ಸೆ ನಡೆಸಿದರು. ಗರ್ಭಕೋಶದಲ್ಲಿ ಉಳಿದಿದ್ದ ಭ್ರೂಣದ ಅಂಶಗಳು ಹಾಗೂ ತೀವ್ರ ರಕ್ತಸ್ರಾವ (ಅಕ್ಯೂಟ್ ಮೆನೊರಾಜಿಯಾ) ಇರುವುದನ್ನು ವೈದ್ಯರು ದೃಢಪಡಿಸಿದ್ದರು. ₹39,420 ಬಿಲ್ ಪಾವತಿಸಿದ ಬಳಿಕ ನವೆಂಬರ್ 1ರಂದು ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ವೈದ್ಯರು ತಮ್ಮನ್ನು ‘ಪ್ರಯೋಗಾಲಯದ ಇಲಿಯಂತೆ’ ನಡೆಸಿಕೊಂಡಿದ್ದು, ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಅಮೃತಾ ಆರೋಪಿಸಿದ್ದರು. 2025ರ ಜನವರಿಯಲ್ಲಿ ಕಳುಹಿಸಿದ್ದ ಲೀಗಲ್ ನೋಟಿಸ್‌ಗೆ ಸಮರ್ಪಕ ಉತ್ತರ ಬಾರದ ಕಾರಣ, ತಮಗಾದ ಮಾನಸಿಕ ಆಘಾತವನ್ನು ಉಲ್ಲೇಖಿಸಿ 2025ರ ಮಾರ್ಚ್ 21ರಂದು ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ವಿಚಾರಣೆ ವೇಳೆ ರೇನ್‌ಬೋ ಆಸ್ಪತ್ರೆಯು ಶಸ್ತ್ರಚಿಕಿತ್ಸೆಯ ಅಪಾಯಗಳ ಬಗ್ಗೆ ಮೊದಲೇ ಮಾಹಿತಿ ನೀಡಿ ಸಮ್ಮತಿ ಪಡೆಯಲಾಗಿತ್ತು ಹಾಗೂ ಮಹಿಳೆ ಚೇತರಿಸಿಕೊಂಡ ಬಳಿಕವೇ ಬಿಡುಗಡೆ ಮಾಡಲಾಗಿತ್ತು ಎಂದು ವಾದಿಸಿತ್ತು. ಆದರೆ, ಸಾಕಷ್ಟು ಕಾಲಾವಕಾಶ ನೀಡಿದರೂ ಶ್ರೀ ಕೃಷ್ಣ ಕ್ಲಿನಿಕ್ ಮತ್ತು ಡಾ. ಶೈಲಜಾ ಅವರು ತಮ್ಮ ವಾದ ಮಂಡಿಸಲು ವಿಫಲರಾದರು.
ಅಮೃತಾ ಅವರು ಸಲ್ಲಿಸಿದ ಸಾಕ್ಷ್ಯಾಧಾರಗಳನ್ನು ಅಲ್ಲಗಳೆಯಲು ವೈದ್ಯೆ ಮತ್ತು ಕ್ಲಿನಿಕ್ ವಿಫಲವಾಗಿವೆ ಎಂದು ಆಯೋಗದ ಅಧ್ಯಕ್ಷ ಸೈಯದ್ ಅನ್ಸರ್ ಕಲೀಂ ಹಾಗೂ ಸದಸ್ಯರಾದ ಜ್ಯೋತಿ ಎನ್. ಮತ್ತು ರೇಣುಕಾದೇವಿ ದೇಶಪಾಂಡೆ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿತು. ಮೊದಲ ಶಸ್ತ್ರಚಿಕಿತ್ಸೆಯನ್ನು ಸರಿಯಾಗಿ ನಡೆಸದ ಕಾರಣದಿಂದಲೇ ಮಹಿಳೆ ಮೂರು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಅಲ್ಲದೆ, ಸುಸಜ್ಜಿತ ಆಸ್ಪತ್ರೆಗೆ ಶಿಫಾರಸು ಮಾಡುವ ಬದಲು ಕ್ಲಿನಿಕ್‌ನಲ್ಲಿಯೇ ಎರಡನೇ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ವೈದ್ಯೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಇದು ಸ್ಪಷ್ಟ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಸೇವಾ ನ್ಯೂನತೆಯಾಗಿದೆ ಎಂದು ತೀರ್ಮಾನಿಸಿದ ಆಯೋಗ, ಕ್ಲಿನಿಕ್ ಮತ್ತು ಡಾ. ಶೈಲಜಾ ಅವರಿಗೆ ದಂಡ ವಿಧಿಸಿದೆ. ರೇನ್‌ಬೋ ಆಸ್ಪತ್ರೆಯ ವಿರುದ್ಧದ ದೂರನ್ನು ಆಯೋಗ ವಜಾಗೊಳಿಸಿದೆ.



