ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಿಕಾಗೋಷ್ಠಿಗಳನ್ನು ಏಕೆ ನಡೆಸುವುದಿಲ್ಲ ಎಂದು ನ್ಯೂಜಿಲೆಂಡ್‌ನ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿ ರುದ್ರೇಂದ್ರ ಟಂಡನ್ ಅವರು ಪ್ರತಿಕ್ರಿಯಿಸಿದ್ದು, ಪ್ರಧಾನಿಯವರ ಸಂವಹನ ಶೈಲಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಕೊನೆಯ ಚರಣವಾಗಿ ನ್ಯೂಜಿಲೆಂಡ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಜೊತೆಗಿನ ಸಂವಾದದ ವೇಳೆ ಪತ್ರಕರ್ತರು ಈ ಪ್ರಶ್ನೆ ಎತ್ತಿದ್ದರು.
“ಮೋದಿ ಅವರು ಪತ್ರಿಕಾಗೋಷ್ಠಿಯನ್ನು ಏಕೆ ಮಾಡಿಲ್ಲ?” ಎಂಬ ನೇರ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ ರುದ್ರೇಂದ್ರ ಟಂಡನ್, “ನಾನೊಬ್ಬ ಸರ್ಕಾರಿ ಅಧಿಕಾರಿಯಾಗಿ ಪ್ರಧಾನಿಯವರ ರಾಜಕೀಯ ವಿಧಾನವನ್ನು ಪ್ರಶ್ನಿಸುವುದು ಸರಿಯಲ್ಲ. ಅವರು ಅತ್ಯಂತ ಯಶಸ್ವಿ ರಾಜಕಾರಣಿ. ಮೋದಿಯವರು ಅಪ್ಪಟ ಭಾರತೀಯ ರಾಜಕಾರಣಿ. ಸಾಮಾನ್ಯವಾಗಿ ಭಾರತೀಯ ರಾಜಕಾರಣಿಗಳು ಮಧ್ಯವರ್ತಿಗಳ ಮೂಲಕ ಮಾತನಾಡುವುದಕ್ಕಿಂತ ತಮ್ಮ ಮತದಾರರೊಂದಿಗೆ ನೇರ ಸಂಪರ್ಕ ಹೊಂದಲು ಹೆಚ್ಚು ಒಲವು ತೋರುತ್ತಾರೆ. ಅವರಿಗೆ ಬೇರೆಯವರ ಮೂಲಕ ಅಥವಾ ಮಧ್ಯವರ್ತಿಗಳ ಮೂಲಕ ಸಂವಹನ ನಡೆಸುವುದು ಇಷ್ಟವಾಗುವುದಿಲ್ಲ” ಎಂದು ವಿವರಿಸಿದರು.
“ಮೋದಿಯವರು ತಮ್ಮ ಮತದಾರರೊಂದಿಗೆ ನೇರ ಸಂಪರ್ಕ ಸಾಧಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿಯೇ ಅವರು ಸತತ ಮೂರನೇ ಅವಧಿಗೆ ಆಯ್ಕೆಯಾಗಿದ್ದು, ನಮ್ಮ ದೇಶದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿಗಳಲ್ಲಿ ಒಬ್ಬರಾಗಿದ್ದಾರೆ” ಎಂದು ಟಂಡನ್ ಎದುರಾದ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದರು.
ನಾರ್ವೆ ಭೇಟಿಯಲ್ಲೂ ಎದುರಾಗಿದ್ದ ಪ್ರಶ್ನೆ
ಇದೇ ರೀತಿಯ ಪ್ರಶ್ನೆಯೊಂದು ಪ್ರಧಾನಿಯವರ ನಾರ್ವೆ ಭೇಟಿಯ ಸಂದರ್ಭದಲ್ಲಿಯೂ ಎದುರಾಗಿತ್ತು. ಮೇ ತಿಂಗಳಲ್ಲಿ ಓಸ್ಲೋದಲ್ಲಿ ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ (Jonas Gahr Støre) ಅವರೊಂದಿಗಿನ ಜಂಟಿ ಮಾಧ್ಯಮಗೋಷ್ಠಿ ಮುಗಿಸಿ ತೆರಳುವ ವೇಳೆ, ಹೆಲ್ಲೆ ಲಿಂಗ್ (Helle Lyng) ಎಂಬ ಪತ್ರಕರ್ತೆ ಪ್ರಧಾನಿ ಮೋದಿಯವರು ಪತ್ರಕರ್ತರ ಪ್ರಶ್ನೆಗಳಿಗೆ ಏಕೆ ಉತ್ತರಿಸುವುದಿಲ್ಲ ಎಂದು ಕೂಗಿ ಕೇಳಿದ್ದರು. ಆ ಸಂದರ್ಭದಲ್ಲಿ ಪ್ರಧಾನಿಯವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ವಿಚಾರವು ತದನಂತರ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
‘ದುರ್ಬಲ ನಾಯಕತ್ವ’ನೆಂಬ ವ್ಯಾಪಕ ಟೀಕೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸದಿರುವ ಪ್ರಧಾನಿಯವರ ನಡೆಯು ತೀವ್ರ ಟೀಕೆಗೆ ಗುರಿಯಾಗಿದೆ. ಒಂದು ದೇಶದ ಪ್ರಧಾನಮಂತ್ರಿಯಾಗಿ ಮಾಧ್ಯಮಗಳ ನೇರ ಪ್ರಶ್ನೆಗಳಿಗೆ ಉತ್ತರಿಸಲು ಹಿಂದೇಟು ಹಾಕುವುದು ಮತ್ತು ಕೇವಲ ಏಕಮುಖ ಸಂವಹನಕ್ಕೆ ಸೀಮಿತವಾಗುವುದು ‘ದುರ್ಬಲ ನಾಯಕನ ಲಕ್ಷಣ’ ಎಂದು ವಿಶ್ಲೇಷಕರು ಹಾಗೂ ವಿರೋಧ ಪಕ್ಷಗಳು ಕಟುವಾಗಿ ಟೀಕಿಸುತ್ತಿವೆ. ದೇಶದ ಆಗುಹೋಗುಗಳು, ಸರ್ಕಾರದ ನೀತಿ-ನಿರ್ಧಾರಗಳ ಬಗ್ಗೆ ಪತ್ರಕರ್ತರು ಕೇಳುವ ಕಠಿಣ ಪ್ರಶ್ನೆಗಳನ್ನು ಎದುರಿಸದಿರುವುದು ಪಾರದರ್ಶಕತೆಯ ಕೊರತೆಯನ್ನು ಎತ್ತಿತೋರಿಸುತ್ತದೆ. ಕೇವಲ ಭಾಷಣಗಳು ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳ ಮೂಲಕ ಜನರೊಂದಿಗೆ ಮಾತನಾಡುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಲ್ಲ ಎಂಬ ನಕಾರಾತ್ಮಕ ಅಭಿಪ್ರಾಯಗಳು ಮತ್ತು ಅಸಮಾಧಾನ ಎಲ್ಲೆಡೆ ವ್ಯಕ್ತವಾಗುತ್ತಿದೆ.
ಹಿಂದಿನ ಪ್ರಧಾನಿಗಳ ಕಾರ್ಯವೈಖರಿಯನ್ನು ಗಮನಿಸಿದರೆ, ಪತ್ರಿಕಾಗೋಷ್ಠಿಗಳು ಸರ್ಕಾರದ ದೈನಂದಿನ ಆಡಳಿತದ ಪ್ರಮುಖ ಭಾಗವಾಗಿದ್ದವು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ತಮ್ಮ ಅಧಿಕಾರಾವಧಿಯಲ್ಲಿ ನೂರಾರು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದರು. ಅವರು ದೇಶ-ವಿದೇಶಗಳ ಪತ್ರಕರ್ತರೊಂದಿಗೆ ಮುಕ್ತವಾಗಿ ಸಂವಾದ ನಡೆಸುತ್ತಿದ್ದರು. ಅದೇ ರೀತಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಕೂಡ ತಮ್ಮ ಸುದೀರ್ಘ ಅಧಿಕಾರಾವಧಿಯಲ್ಲಿ ನೂರಕ್ಕೂ ಹೆಚ್ಚು ಬಾರಿ ಮಾಧ್ಯಮಗಳನ್ನು ಮುಖಾಮುಖಿಯಾಗಿ ಭೇಟಿಯಾಗಿ, ಕಠಿಣ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುತ್ತಿದ್ದರು. ಈ ಹಿಂದಿನ ಪ್ರಧಾನಿಗಳ ಮುಕ್ತ ಸಂವಹನ ಶೈಲಿಯನ್ನು ಇಂದಿನ ಪರಿಸ್ಥಿತಿಗೆ ಹೋಲಿಸಿ, ಪ್ರಧಾನಿ ಮೋದಿಯವರು ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿರುವುದನ್ನು ದೇಶದಾದ್ಯಂತ ತೀವ್ರವಾಗಿ ಪ್ರಶ್ನಿಸಲಾಗುತ್ತಿದೆ.




