ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮತ್ತು ಶಿಕ್ಷಣ ಸಚಿವಾಲಯದಲ್ಲಿ ಗಂಭೀರ ಸ್ವರೂಪದ ಅಕ್ಷಮ್ಯತೆ ಮತ್ತು ದುರಾಡಳಿತ ತುಂಬಿದೆ ಎಂಬುದನ್ನು ರಾಜ್ಯಸಭೆಯ ಸಂಸದೀಯ ಸ್ಥಾಯಿ ಸಮಿತಿ ವರದಿ ಸ್ಪಷ್ಟವಾಗಿ ತೋರಿಸಿದೆ. ಮೋದಿ ಸರ್ಕಾರವು ಅಹಂಕಾರಿ ಧೋರಣೆಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಸಂಸದೀಯ ಸ್ಥಾಯಿ ಸಮಿತಿಯು ಎನ್‌ಟಿಎ ಕಾರ್ಯವೈಖರಿ ಮತ್ತು ಸುಧಾರಣೆಗಳ ಕುರಿತು ಸಲ್ಲಿಸಿರುವ ವರದಿಯನ್ನು ರಾಜ್ಯಸಭಾ ಸಭಾಪತಿಗೆ ಸಲ್ಲಿಸಿದೆ. ಆ ವರದಿಯ ಕೆಲವು ಭಾಗಗಳನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. “ವರದಿಯು ಎನ್‌ಟಿಎ ಮತ್ತು ಶಿಕ್ಷಣ ಸಚಿವಾಲಯದಲ್ಲಿರುವ ತೀವ್ರ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ” ಎಂದು ಹೇಳಿದ್ದಾರೆ.
“2017ರಲ್ಲಿ ಎನ್‌ಟಿಎ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಯಾವುದೇ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಶಿಕ್ಷಣ ಸಚಿವಾಲಯವು ಸಂಸದೀಯ ಸಮಿತಿಯ ಮುಂದೆ ಹಸಿಹಸಿ ಸುಳ್ಳು ಹೇಳಿಕೆ ನೀಡಿತ್ತು ಎಂಬುದನ್ನು ಸಮಿತಿಯ ವರದಿ ಬಹಿರಂಗಪಡಿಸಿದೆ. ಎನ್‌ಟಿಎ ನಡೆಸಿದ ಪರೀಕ್ಷೆಗಳಲ್ಲಿ ಕನಿಷ್ಠ ಒಂಭತ್ತು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ನಡೆದಿವೆ” ಎಂದು ಜೈರಾಮ್ ರಮೇಶ್ ದೂರಿದ್ದಾರೆ.
“ಎನ್‌ಟಿಎ ಸಂಸ್ಥೆಯು ಸಂಸತ್ತಿನ ಕಾಯ್ದೆಯ ಮೂಲಕ ರಚನೆಯಾದ ಸಾಂವಿಧಾನಿಕ ಅಥವಾ ಶಾಸನಬದ್ಧ ಸಂಸ್ಥೆಯಲ್ಲ, ಬದಲಿಗೆ ‘ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್’ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಕೇವಲ ಒಂದು ಸೊಸೈಟಿ ಮಾತ್ರ. ಇದರಿಂದಾಗಿ ಈ ಸಂಸ್ಥೆಯ ಮೇಲೆ ಸಂಸತ್ತಿನ ನೇರ ನಿಯಂತ್ರಣ ಮತ್ತು ಜವಾಬ್ದಾರಿ ತೀರಾ ಸೀಮಿತವಾಗಿದೆ ಎಂದು ವರದಿ ತಿಳಿಸಿದೆ. ಅಲ್ಲದೆ, ಪ್ರಮುಖ ಜವಾಬ್ದಾರಿಗಳನ್ನೆಲ್ಲಾ ಖಾಸಗಿ ಗುತ್ತಿಗೆದಾರರಿಗೆ ಒಪ್ಪಿಸುವ ಮೂಲಕ ಎನ್‌ಟಿಎ ಒಂದು ‘ಖಾಲಿ ಸಂಸ್ಥೆ’ಯಂತೆ (ಖೋಖ್ಲಾ ಬಾಡಿ) ಮಾರ್ಪಟ್ಟಿದೆ ಎಂದೂ ಸಮಿತಿ ಟೀಕಿಸಿದೆ” ಎಂದು ರಮೇಶ್ ಹೇಳಿದ್ದಾರೆ.
“ಸಂಸ್ಥೆಯಲ್ಲಿ ಮಂಜೂರಾಗಿರುವ ಒಟ್ಟು 39 ಹುದ್ದೆಗಳ ಪೈಕಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವುದು ಕೇವಲ 23 ಅಧಿಕಾರಿಗಳು ಮಾತ್ರ. ಅಂದರೆ ಶೇಕಡಾ 41ರಷ್ಟು ಹುದ್ದೆಗಳು ಖಾಲಿ ಇವೆ. ಈ ಎಲ್ಲ 39 ಹುದ್ದೆಗಳನ್ನು ನಿಯೋಜನೆ (ಡೆಪ್ಯುಟೇಶನ್) ಆಧಾರದ ಮೇಲೆ ತುಂಬಲಾಗುತ್ತಿದ್ದು, ಅಧಿಕಾರಿಗಳು ಕೇವಲ 2 ರಿಂದ 3 ವರ್ಷಗಳ ಕಾಲ ಮಾತ್ರ ಸೇವೆ ಸಲ್ಲಿಸುವುದರಿಂದ ಸಂಸ್ಥೆಯಲ್ಲಿ ಯಾವುದೇ ಶಾಶ್ವತ ಪರಿಣತಿ ಅಥವಾ ಅನುಭವ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ವರದಿ ಎಚ್ಚರಿಸಿದೆ” ಎಂದು ರಮೇಶ್ ತಿಳಿಸಿದ್ದಾರೆ.
“ಸಂಸ್ಥೆಯ ಈ ದೋಷಪೂರಿತ ರಚನೆಯು ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾಗಳಿಗೆ ವರದಾನವಾಗಿದೆ. ಪರೀಕ್ಷಾ ವಿಫಲತೆಯ ಇತಿಹಾಸ ಹೊಂದಿರುವ ಖಾಸಗಿ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಯಾವುದೇ ರಾಷ್ಟ್ರಮಟ್ಟದ ವ್ಯವಸ್ಥೆ ಇಲ್ಲದಿರುವುದು ದೊಡ್ಡ ಲೋಪವಾಗಿದೆ” ಎಂದು ರಮೇಶ್ ಆಕ್ಷೇಪಿಸಿದ್ದಾರೆ.
“ಪರೀಕ್ಷೆಯ ಫಲಿತಾಂಶಗಳಲ್ಲಿ ಪಾರದರ್ಶಕತೆ ಇಲ್ಲದಿರುವುದು ಮತ್ತು ಕಡ್ಡಾಯ ಮಾಹಿತಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸದಿರುವುದು ಅಕ್ರಮಗಳಿಗೆ ದಾರಿ ಮಾಡಿಕೊಟ್ಟಿದೆ” ಎಂದು ವರದಿಯನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.
“ಪರೀಕ್ಷಾ ಅಕ್ರಮಗಳು ಮತ್ತು ನೀಟ್ (NEET-UG) ವಿವಾದಗಳ ಮಧ್ಯೆಯೂ ಎನ್‌ಟಿಎ ಮಹಾನಿರ್ದೇಶಕರ ಹುದ್ದೆಯನ್ನು ದೀರ್ಘಕಾಲದವರೆಗೆ ಇತರೆ ಹಿರಿಯ ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರವಾಗಿ ನೀಡಲಾಗಿತ್ತೇ ವಿನಃ ಮೋದಿ ಸರ್ಕಾರವು ಯಾವುದೇ ಪೂರ್ಣಾವಧಿ ಸಮರ್ಥ ಅಧಿಕಾರಿಯನ್ನು ನೇಮಿಸುವ ಗೋಜಿಗೆ ಹೋಗಲಿಲ್ಲ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಹಿತ ಕಾಯುವ ಬದಲು ಎನ್‌ಟಿಎ ಕೇವಲ ಲಾಭ ತರುವ ವ್ಯಾಪಾರಿ ಸಂಸ್ಥೆಯಾಗಿ ಬದಲಾಗಿದ್ದು, ಬಡ ವಿದ್ಯಾರ್ಥಿಗಳ ಪರವಾಗಿ ಬಳಸಬೇಕಿದ್ದ ಕೋಟ್ಯಂತರ ರೂ. ಹಣವನ್ನು ಸ್ಥಿರ ನಿಧಿಗಳಲ್ಲಿ ಹೂಡಿಕೆ ಮಾಡಿ ಬಡ್ಡಿ ಗಳಿಸುವುದರಲ್ಲಿ ನಿರತವಾಗಿದೆ” ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
“ಮೋದಿ ಸರ್ಕಾರದ ಅಹಂಕಾರದ ಧೋರಣೆಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡಲಾಗಿದೆ. ಇರುವ ಅಲ್ಪಾವಧಿಯಲ್ಲಾದರೂ ಸರ್ಕಾರವು ತನ್ನ ಅಹಂಕಾರವನ್ನು ಬಿಟ್ಟು ಈ ಸಂಸದೀಯ ಸಮಿತಿಯ ವರದಿಯನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಕಾಂಗ್ರೆಸ್ ಆಗ್ರಹಿಸಿದೆ.



