ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯಲ್ಲಿ ಸಿಜೆಪಿ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಹಿಂದೂ ರಕ್ಷಾ ದಳದ ನಾಲ್ವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರೇ ತಾವು ಬಲಪಂಥೀಯ ಸಂಘಟನೆ ಹಿಂದೂ ರಕ್ಷಾ ದಳದವರು ಎಂದು ಹೇಳಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 10ರಂದು ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಕೆಲವು ಯುವಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರನ್ನು ತಳ್ಳಿ, ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಂತೆ ರಾಜಕೀಯ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಪ್ರತಿಭಟನಾಕಾರರ ಮೇಲೆ ನಡೆದ ಹಲ್ಲೆಯ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ಬಂಧನ
ಬಂಧಿತರನ್ನು ರಾಮನ್ ಸೈನಿ (50), ವಿವೇಕಾನಂದ ಅಲಿಯಾಸ್ ವಿವೇಕ್ (32), ಕಪಿಲ್ ಕುಮಾರ್ (27) ಮತ್ತು ರವೀಂದರ್ ಸಿಂಗ್ ಅಲಿಯಾಸ್ ಗೋವಿಂದ್ ಹಿಂದೂ (35) ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸ್ವಯಂಪ್ರೇರಿತ (Suo Motu) ಕ್ರಮ ಕೈಗೊಂಡಿದ್ದಾರೆ. ಆರೋಪಿಗಳು ದೆಹಲಿ-ಎನ್‌ಸಿಆರ್ ತೊರೆದು ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ಗೌಪ್ಯ ಮಾಹಿತಿ ಲಭಿಸಿದ ತಕ್ಷಣ, ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನಡೆದ ಅಧ್ವಾನಗಳ ಹೊಣೆ ಹೊತ್ತು ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆಯೂ ಸಂಘಪರಿವಾರದ ಕಾರ್ಯಕರ್ತರು ದೆಹಲಿ ಪೊಲೀಸರೊಂದಿಗೆ ವಿದ್ಯಾರ್ಥಿಗಳಿಗೆ ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಹಲವು ಮಂದಿಗೆ ಗಂಭೀರ ಗಾಯವಾಗಿತ್ತು. ವಿದ್ಯಾರ್ಥಿನಿಯೊಬ್ಬಳ ತಂದೆಯ ತಲೆ ಒಡೆದುಹೋಗಿತ್ತು.
ಈಗಾಗಲೇ ಸ್ವತಂತ್ರ ಭಾರಧ್ವಾಜ್ ಎಂಬ ಸಂಘಪರಿವಾರದ ಕಾರ್ಯಕರ್ತ ತಾನೇ ಹಲ್ಲೆ ನಡೆಸಿದ್ದಾಗಿ, ಇದು ಹಾಫ್ ಮರ್ಡರ್ ಕೇಸ್ ಎಂಬುದಾಗಿ ಪಾಡ್‌ಕಾಸ್ಟ್ ಒಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದ. ಆತನ ಬಂಧನಕ್ಕೆ ತೀವ್ರ ಒತ್ತಡ ವ್ಯಕ್ತವಾದ ಬಳಿಕ ಬಂಧನ ಮಾಡಲಾಗಿತ್ತು. ಇತ್ತೀಚಿಗೆ ಸಿಜೆಪಿ ಪ್ರತಿಭಟನೆಗೂ ಮುನ್ನ ಆತನಿಗೆ ಜಾಮೀನು ನೀಡಲಾಗಿದೆ. ಈ ಹಿಂದಿನ ಸಿಜೆಪಿ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಯನ್ನು ಮತ್ತೆ ಪ್ರತಿಭಟನೆ ವೇಳೆಯೇ ಬಿಡುಗಡೆ ಮಾಡಿರುವುದರ ಹಿಂದೆ ಹುನ್ನಾರವಿದೆ ಎಂಬ ಆರೋಪಗಳು ಕೇಳಿಬಂದಿದ್ದವು.




