ಪ್ರತಿ ಬಾರಿಯ ದಾಳಿಗಳ ಬಳಿಕ ಸರ್ಕಾರ 'ಸೇಡು ತೀರಿಸಿಕೊಳ್ಳುತ್ತೇವೆ' ಎಂದು ಅಬ್ಬರಿಸುತ್ತದೆ. ಆದರೆ ದಾಳಿ ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಯಾಕೆ ಕಟ್ಟುನಿಟ್ಟಾಗಿ ಜಾರಿಗೊಳಿಸುವುದಿಲ್ಲ? ದೇಶದ ಭದ್ರತೆಯ ವಿಷಯವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ರಾಜಕೀಯ ಪಕ್ಷಗಳು ಲೋಪಗಳ ಬಗ್ಗೆ ಯಾಕೆ ಮೌನ ತಾಳುತ್ತವೆ? ಎನ್ನುವ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವಲ್ಲವೇ?
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿಯ ಬೈಸರನ್ ಎಂಬ ಸುಂದರ ಪ್ರವಾಸಿ ತಾಣ ರಕ್ತದಿಂದ ತೊಯ್ದು ಕೆಂಪಾಗಿ ನಾಳೆ(ಏ.22)ಗೆ ಸರಿಯಾಗಿ ಒಂದು ವರ್ಷ. ಪ್ರಕೃತಿ ಸೌಂದರ್ಯ ಸವಿಯಲು ಹೋಗಿದ್ದ 26 ಮಂದಿ ಅಮಾಯಕ ಪ್ರವಾಸಿಗರು ಅಂದು ಪಾಕಿಸ್ತಾನ ಪ್ರೇರಿತ ಉಗ್ರರ ಗುಂಡಿಗೆ ಬಲಿಯಾದಾಗ ಇಡೀ ದೇಶ ಅಕ್ಷರಶಃ ನಡುಗಿತ್ತು. ಅಂದು ದೇಶದಲ್ಲಿ ಕುದಿಯುತ್ತಿದ್ದ ಆಕ್ರೋಶಕ್ಕೆ ತಣ್ಣೀರು ಚುಮುಕಿಸಲು ಕೇಂದ್ರ ಸರ್ಕಾರ ‘ಆಪರೇಷನ್ ಸಿಂಧೂರ’ ಎಂಬ ಬೃಹತ್ ಸೇನಾ ಕಾರ್ಯಾಚರಣೆಯನ್ನು ಘೋಷಿಸಿ, ಉಗ್ರರ ಅಡಗುತಾಣಗಳನ್ನು ಪುಡಿಗಟ್ಟುವ ವೀರಾವೇಶ ತೋರಿಸಿತ್ತು. ಆದರೆ, ವರ್ಷ ಕಳೆದರೂ ಆ ಅಬ್ಬರದ ಹಿಂದೆ ಕಾಣುತ್ತಿರುವುದು ಬಣ್ಣಗೆಟ್ಟ ಭರವಸೆಗಳು ಮತ್ತು ಸರ್ಕಾರದ ನೈತಿಕ ಪಲಾಯನವಾದವಷ್ಟೇ.
ಕಾನ್ಪುರದ ಐಶನ್ಯಾ ಅವರ ಕಥೆ ಕೇಳಿದರೆ ಖಂಡಿತ ವ್ಯವಸ್ಥೆಯ ಮೇಲೆ ಅಸಹ್ಯ ಹುಟ್ಟುತ್ತದೆ. ಮದುವೆಯಾಗಿ ಎರಡು ತಿಂಗಳು ಕಳೆಯುವಷ್ಟರಲ್ಲಿ ಪತಿಯೊಂದಿಗೆ ಹೊಸ ಬದುಕಿನ ಕನಸು ಹೊತ್ತು ಕಾಶ್ಮೀರಕ್ಕೆ ಹೋದ ಆಕೆಗೆ ಸಿಕ್ಕಿದ್ದು ಪತಿಯ ಹೆಣ. ಕಣ್ಣಮುಂದೆಯೇ ಪತಿ ಶುಭಂ ದ್ವಿವೇದಿಯನ್ನು ಉಗ್ರರು ಗುಂಡಿಕ್ಕಿ ಕೊಂದಾಗ, ‘ನನ್ನನ್ನೂ ಕೊಂದುಬಿಡಿ’ ಎಂದು ಐಶನ್ಯಾ ಗೋಗರೆದಿದ್ದರು. ಇಂದು ಐಶನ್ಯಾ ತನ್ನ ಅತ್ತೆ-ಮಾವನ ಜೊತೆ ವಾಸವಿದ್ದು, ಹಣದ ಸಹಾಯಕ್ಕಾಗಿ ಕೈಚಾಚುತ್ತಿಲ್ಲ; ಬದಲಾಗಿ ತನ್ನ ಪತಿಗೆ ‘ಹುತಾತ್ಮ’ ಸ್ಥಾನಮಾನ ಮತ್ತು ತಮಗೆ ಸರ್ಕಾರಿ ಕೆಲಸ ನೀಡಲು ಕೇಳುತ್ತಿದ್ದಾರೆ.

ಜೈಪುರದ ನೀರಜ್ ಉಧ್ವಾನಿ ಅವರ ಮನೆಯಲ್ಲಿ ಇಂದಿಗೂ ನೀರವ ಮೌನ. ಮಗನನ್ನು ಕಳೆದುಕೊಂಡ 70 ವರ್ಷದ ವೃದ್ಧ ತಾಯಿ, ಅಂದು ಆದ ಆಘಾತದಿಂದ ಹೊರಬರಲಾಗದೆ, ಯಾರೊಂದಿಗೂ ಮಾತನಾಡದೆ ಮನೆಯ ಮೂಲೆಯಲ್ಲಿ ಕುಳಿತಿರುತ್ತಾರೆ. ಅತ್ತ ಗುಜರಾತ್‌ನ ಭಾವನಗರದ ಪರ್ಮಾರ್ ಕುಟುಂಬದ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಯತೇಶ್ ಪರ್ಮಾರ್ ಮತ್ತು ಅವರ 16 ವರ್ಷದ ಮಗ ಸುಮಿತ್ ಇಬ್ಬರನ್ನೂ ಈ ದಾಳಿ ನುಂಗಿ ಹಾಕಿತ್ತು. ಆ ಕುಟುಂಬ ಗುಂಪಿನಲ್ಲಿ ಓಡಾಡಲೂ ಭಯಪಡುತ್ತಿದೆ. ಕಣಿವೆಯಲ್ಲಿ ಶಾಂತಿ ಮರಳಿದೆ ಎಂದು ಡಂಗೂರ ಸಾರುವ ಸರ್ಕಾರಕ್ಕೆ, ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಕ್ಕೆ ಆದ ಗಾಯಕ್ಕೆ ಮದ್ದು ಅರೆಯಲು ಸಾಧ್ಯವೇ?
ಬೆಂಗಳೂರಿನ ಭರತ್ ಭೂಷಣ್ ಅವರ ಪತ್ನಿ ಸುಜಾತಾ ಮತ್ತು ಮಗ ಬದುಕಲಿಕ್ಕೇ ಹೆಣಗಾಡುತ್ತಿದ್ದಾರೆ. “ನಾವು ಅಳುವುದಿಲ್ಲ, ಏಕೆಂದರೆ ಅತ್ತುಬಿಟ್ಟರೆ ನಾವು ಸಂಪೂರ್ಣವಾಗಿ ಕುಸಿದುಹೋಗುತ್ತೇವೆ ಎಂಬ ಭಯವಿದೆ. ನಗುವಿನ ಮುಖವಾಡ ತೊಟ್ಟು ಸಹಜವಾಗಿರುವಂತೆ ನಾಟಕವಾಡುತ್ತಿದ್ದೇವೆ” ಎಂದು ಭರತ್ ಅವರ ಸಹೋದರ ಪ್ರೀತಮ್ ಹೇಳುವಾಗ ಎದೆ ಝಲ್ ಎನ್ನುತ್ತದೆ. ಇತ್ತ ಇಂದೋರ್‌ನ ಜೆನಿಫರ್ ಅವರ ಸ್ಥಿತಿ ಮತ್ತಷ್ಟು ಶೋಚನೀಯ. ಪತಿ ಸುಶೀಲ್ ಅವರನ್ನು ಕಾಪಾಡಲು ಹೋಗಿ ವಿಫಲರಾದ ಅವರು, ಆ ಆಘಾತದಿಂದ ಈಗ ಮೆದುಳಿನ ಸ್ಮರಣಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಸದಾ ಭಯದಲ್ಲಿ ಬದುಕುತ್ತಿರುವ ಅವರಿಗೆ ಆಸರೆಯಾಗಲು ಮಗ ಆಸ್ಟನ್ ತನ್ನ ವಿದೇಶಿ ವ್ಯಾಸಂಗದ ಕನಸನ್ನೇ ಬಲಿಕೊಟ್ಟು ಕುಟುಂಬದ ಜವಾಬ್ದಾರಿ ಹೊತ್ತಿದ್ದಾನೆ.
ಸಂಗೀತ ಗಣಬೋಟೆ, ಪ್ರಿಯದರ್ಶಿನಿ ಆಚಾರ್ಯ ಬದುಕು ಇಂದಿಗೂ ಅತಂತ್ರ. “ಹೋರಾಟ ಸರ್ಕಾರದ ಜೊತೆಗಿದ್ದರೆ ಅವರನ್ನೇ ಎದುರಿಸಿ, ಅಮಾಯಕರನ್ನೇಕೆ ಕೊಲ್ಲುತ್ತೀರಿ?” ಎಂದು ಕೇಳುವ ಸಂಗೀತ ಅವರ ಪ್ರಶ್ನೆಗೆ ಕೇವಲ ಉಗ್ರರಲ್ಲ, ವ್ಯವಸ್ಥೆಯೂ ಉತ್ತರಿಸಬೇಕಿದೆ. ಪ್ರಿಯದರ್ಶಿನಿ ಆಚಾರ್ಯ ಅವರು ಸರ್ಕಾರಿ ಉದ್ಯೋಗಕ್ಕಾಗಿ ಇಂದಿಗೂ ಕಚೇರಿಗಳಿಗೆ ಅಲೆಯುತ್ತಿದ್ದಾರೆ. “ಬದುಕಲು ಒಂದು ಸುಸ್ಥಿರ ಮಾರ್ಗ ತೋರಿಸುವುದಾಗಿ ಅಂದು ಸರ್ಕಾರ ವಾಗ್ದಾನ ಮಾಡಿತ್ತು. ಆದರೆ ಈಗ ಮಕ್ಕಳ ಶಿಕ್ಷಣದ ಖರ್ಚನ್ನೂ ಭರಿಸುವವರಿಲ್ಲ, ಉದ್ಯೋಗವೂ ಇಲ್ಲ” ಎನ್ನುತ್ತಾರವರು. ಆಪರೇಷನ್ ಸಿಂಧೂರದ ಹೆಸರಿನಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡುವ ಸರ್ಕಾರಕ್ಕೆ, ಈ ಕುಟುಂಬಗಳಿಗೆ ನೀಡಿದ ವಾಗ್ದಾನಗಳನ್ನು ಪೂರೈಸಲು ಮನಸ್ಸಿಲ್ಲವೇ?
‘ಆಪರೇಷನ್ ಸಿಂಧೂರ’ದ ಹೆಸರಿನಲ್ಲಿ ಗಡಿಯಲ್ಲಿ ಉಗ್ರರನ್ನು ಸದೆಬಡಿದಿದ್ದನ್ನು ರಾಜಕೀಯವಾಗಿ ಬಳಸಿಕೊಂಡ ಸರ್ಕಾರಕ್ಕೆ, ಅಮಾಯಕ ಪ್ರವಾಸಿಗರ ಭದ್ರತೆಯಲ್ಲಿ ಆದ ಲೋಪದ ಹೊಣೆ ಹೊರುವ ಧೈರ್ಯವೇ ಇಲ್ಲ. ಬೈಸರನ್‌ನಂತಹ ಅತಿ ಮುಖ್ಯ ಸೂಕ್ಷ್ಮ ಪ್ರವಾಸಿ ತಾಣದಲ್ಲಿ 26 ಮಂದಿಯನ್ನು ಬಲಿಪಡೆಯುವಷ್ಟು ಉಗ್ರರು ಸಬಲರಾಗಲು ನಮ್ಮ ಗುಪ್ತಚರ ಇಲಾಖೆಯ ಘೋರ ವೈಫಲ್ಯ ಕಾರಣವಲ್ಲದೆ ಮತ್ತೇನಲ್ಲ. ಯೋಧರು ಸತ್ತಾಗ, ದೇಶಪ್ರೇಮದ ಮಾತನಾಡುವಾಗ ಸಿಗುವ ಮೈಲೇಜ್, ಸಾಮಾನ್ಯ ನಾಗರಿಕರು ಹತ್ಯೆಯಾದಾಗ ಏಕೆ ಸಿಗುತ್ತಿಲ್ಲ ಎನ್ನುವುದು ದೇಶವಾಸಿಗಳ ಅತೀ ಮುಖ್ಯ ಪ್ರಶ್ನೆ.
ಭಾರತದ ಇತಿಹಾಸಕ್ಕೆ ಎಂದೂ ಮಾಯದ ಗಾಯ ಮಾಡಿದ 2019 ಫೆಬ್ರವರಿ 14ರ ಪುಲ್ವಾಮಾ ದಾಳಿ ವೇಳೆಯಲ್ಲೂ ಎದ್ದ ಎಷ್ಟೋ ಪ್ರಶ್ನೆಗಳಿಗೆ ಸರ್ಕಾರ ಉತ್ತರವಿತ್ತಿಲ್ಲ. ಸಿಆರ್‌ಪಿಎಫ್‌ನ 40ಕ್ಕೂ ಹೆಚ್ಚು ಯೋಧರು ಬಲಿಯಾದ ಆ ಭೀಕರ ಸ್ಫೋಟ ನಡೆದು ವರ್ಷಗಳು ಕಳೆದಿವೆ. ನಂತರದ ‘ಬಾಲಾಕೋಟ್ ಏರ್‌ಸ್ಟ್ರೈಕ್’ ಸರ್ಕಾರದ ಶೌರ್ಯದ ಸಂಕೇತವಾಗಿ ಬಿಂಬಿತವಾಯಿತು. ಆದರೆ, ದಾಳಿಯ ನಂತರದ ದಿನಗಳಲ್ಲಿ ನಾಗರಿಕರು, ರಕ್ಷಣಾ ತಜ್ಞರು ಎತ್ತಿದ ಕೆಲವು ಗಂಭೀರ ಪ್ರಶ್ನೆಗಳಿಗೆ ತಾರ್ಕಿಕ ಉತ್ತರ ಸಿಕ್ಕಿಲ್ಲ. ಉತ್ತರಿಸುವ ಗೋಜಿಗೂ ಯಾರೂ ಹೋದಂತಿಲ್ಲ.

ಅತೀ ಸೂಕ್ಷ್ಮ ಮತ್ತು ಸದಾ ಸೇನಾ ಕಣ್ಗಾವಲಿನಲ್ಲಿರುವ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಗೆ 300 ಕೆಜಿಗೂ ಅಧಿಕ ಆರ್‌ಡಿಎಕ್ಸ್ ಸ್ಫೋಟಕಗಳನ್ನು ಹೊತ್ತ ವಾಹನ ಹೇಗೆ ನುಸುಳಿತು? ಈ ಪ್ರಮಾಣದ ಸ್ಫೋಟಕಗಳು ಗಡಿ ದಾಟಿ ಬಂದವೇ ಅಥವಾ ಸ್ಥಳೀಯವಾಗಿ ಶೇಖರಣೆಯಾಗಿದ್ದವೇ? ಇಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳ ಚಲನವಲನದ ಬಗ್ಗೆ ನಮ್ಮ ಗುಪ್ತಚರ ಇಲಾಖೆಗೆ ಸುಳಿವೇ ಸಿಗಲಿಲ್ಲವೇ? ಇದು ಭದ್ರತಾ ವ್ಯವಸ್ಥೆಯ ಬೃಹತ್ ವೈಫಲ್ಯವಲ್ಲವೇ? ದಾಳಿಗೂ ಮುನ್ನ, ಯೋಧರನ್ನು ರಸ್ತೆಯ ಬದಲಿಗೆ ವಿಮಾನದ ಮೂಲಕ ಕರೆದೊಯ್ಯಲು ಅನುಮತಿ ಕೇಳಲಾಗಿತ್ತು ಎಂಬ ವರದಿಗಳು ಹೊರಬಂದಿದ್ದವು. ಆದರೆ, ಗೃಹ ಸಚಿವಾಲಯ ಈ ಪ್ರಸ್ತಾವನೆಯನ್ನು ತಾಂತ್ರಿಕ ಕಾರಣ ನೀಡಿ ತಿರಸ್ಕರಿಸಿತ್ತು ಎನ್ನಲಾಗಿದೆ. ಒಂದು ವೇಳೆ ಯೋಧರನ್ನು ವಿಮಾನದಲ್ಲಿ ಕರೆದೊಯ್ದಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತಲ್ಲವೇ? ಯೋಧರ ಜೀವಕ್ಕಿಂತ ಸರ್ಕಾರಕ್ಕೆ ಅಂದು ಮುಖ್ಯವಾಗಿದ್ದು ಯಾವುದು?
ದಾಳಿಗೆ ಕೆಲವು ದಿನಗಳ ಮುನ್ನವೇ ಕಾಶ್ಮೀರದಲ್ಲಿ ಐಇಡಿ (IED) ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಫೆಬ್ರವರಿ 8ರಂದು ಕಳುಹಿಸಲಾದ ಈ ಎಚ್ಚರಿಕೆಯ ವರದಿಯನ್ನು ಭದ್ರತಾ ಪಡೆಗಳು ಮತ್ತು ಸರ್ಕಾರ ಯಾಕೆ ಗಂಭೀರವಾಗಿ ಪರಿಗಣಿಸಲಿಲ್ಲ? ಎಚ್ಚರಿಕೆ ಇದ್ದಾಗಲೂ 78 ವಾಹನಗಳ ಬೃಹತ್ ಬೆಂಗಾವಲು ಪಡೆಯನ್ನು ಯಾವುದೇ ವಿಶೇಷ ರಕ್ಷಣೆ ಇಲ್ಲದೆ ಕಳುಹಿಸಿದ್ದು ಉದಾಸೀನತೆಯೇ? ಅಥವಾ ಉದ್ದೇಶಿತವೇ? ಎಂದು ಜನ ಖಾರವಾಗಿ ಪ್ರಶ್ನಿಸಿದ್ದರು.
ಯಾವುದೇ ಒಂದು ದಾಳಿ ನಡೆದಾಗ ಅದಕ್ಕೆ ಕಾರಣವಾದ ಭದ್ರತಾ ಲೋಪಗಳ ಬಗ್ಗೆ ಆಂತರಿಕ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದು ಪದ್ಧತಿ. ಆದರೆ ಪುಲ್ವಾಮಾ ವಿಷಯದಲ್ಲಿ ಸರ್ಕಾರ ಕೇವಲ ‘ಪಾಕಿಸ್ತಾನದ ಪಿತೂರಿ’ ಎಂಬುದನ್ನು ಹೇಳಿ ಒಳಗಿನ ಲೋಪಗಳನ್ನು ಮುಚ್ಚಿ ಹಾಕಿತೇ ವಿನಃ ಮತ್ತೇನೂ ಮಾಡಲಿಲ್ಲ. ಈ ಬಗ್ಗೆ ಸಮಗ್ರ ತನಿಖಾ ವರದಿಯನ್ನು ದೇಶದ ಜನರ ಮುಂದೆ ಇಡಲು ಸರ್ಕಾರ ಹಿಂಜರಿಯುತ್ತಿರುವುದೇಕೆ?
ದುರಂತ ನಡೆದ ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಾಯಿತು. ಹುತಾತ್ಮ ಯೋಧರ ಫೋಟೋಗಳನ್ನು ಚುನಾವಣಾ ವೇದಿಕೆಗಳಲ್ಲಿ ಬಳಸಿ ಮತ ಕೇಳಿದ ಸರ್ಕಾರ, ಅದೇ ಯೋಧರ ಸಾವಿಗೆ ಕಾರಣವಾದ ಭದ್ರತಾ ವೈಫಲ್ಯದ ಬಗ್ಗೆ ಕೇಳಿದ ಪ್ರಶ್ನೆಗಳನ್ನು ‘ದೇಶದ್ರೋಹ’ ಎಂದು ಹಣೆಪಟ್ಟಿ ಕಟ್ಟಿ ಹತ್ತಿಕ್ಕುವ ಪ್ರಯತ್ನ ಮಾಡಿತು.

ಅತೀ ಹೆಚ್ಚು ಸುರಕ್ಷಿತವಾಗಿರಬೇಕಾದ ವಾಯುನೆಲೆಯೊಳಗೆ ಉಗ್ರರು ನುಸುಳಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಘಟನೆ, 2016ರ ಜನವರಿಯಲ್ಲಿ ನಡೆದ ಪಠಾಣ್‌ಕೋಟ್ ವಾಯುನೆಲೆ ದಾಳಿ. ದಾಳಿಯ ಮುನ್ಸೂಚನೆ 24 ಗಂಟೆ ಮೊದಲೇ ಲಭ್ಯವಿದ್ದರೂ ಉಗ್ರರು ತಡೆಗೋಡೆ ಹತ್ತಿ ಒಳಗೆ ಪ್ರವೇಶಿಸಿದ್ದು ಹೇಗೆ? ಉಗ್ರರು ವಾಯುನೆಲೆಯ ಒಳಗಿನ ಕ್ಯಾಂಟೀನ್‌ನಲ್ಲಿ ಗಂಟೆಗಟ್ಟಲೆ ಅವಿತು ಕುಳಿತಿದ್ದರೂ ಭದ್ರತಾ ಪಡೆಗಳು ಅವರನ್ನು ಪತ್ತೆಹಚ್ಚಲು ವಿಫಲವಾಗಿದ್ದೇಗೆ? 2016ರ ಸೆಪ್ಟೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 19 ಯೋಧರು ಹುತಾತ್ಮರಾಗಿದ್ದರು. ಯೋಧರು ಮಲಗಿದ್ದ ಟೆಂಟ್‌ಗಳಿಗೆ ಬೆಂಕಿ ಹಚ್ಚುವವರೆಗೂ ಉಗ್ರರ ಚಲನವಲನ ಯಾರ ಗಮನಕ್ಕೆ ಬರಲಿಲ್ಲವೇ? ಗಡಿ ನಿಯಂತ್ರಣ ರೇಖೆಯ (LoC) ಹತ್ತಿರವೇ ಇರುವ ಇಷ್ಟು ದೊಡ್ಡ ಸೇನಾ ನೆಲೆಯಲ್ಲಿ ಪೆರಿಮೀಟರ್ ಸೆಕ್ಯೂರಿಟಿ (ತಡೆಗೋಡೆಯ ಭದ್ರತೆ) ಲೋಪವಾಗಿದ್ದು ಹೇಗೆ?
ಇದನ್ನೂ ಓದಿ: ʼಹೋಲೋಕಾಸ್ಟ್ʼ ನರಮೇಧ | 60 ಲಕ್ಷ ಯಹೂದಿಗಳ ಬಲಿಯಿಂದಾದ ಬದಲಾವಣೆಗಳೇನು?
2017ರ ಜುಲೈನಲ್ಲಿ ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿ 8 ಮಂದಿಯನ್ನು ಕೊಂದಿದ್ದರು. ರಾತ್ರಿ 7 ಗಂಟೆಯ ನಂತರ ಯಾತ್ರಿಕರ ವಾಹನ ಸಂಚಾರಕ್ಕೆ ಅವಕಾಶವಿರಲಿಲ್ಲ. ಹಾಗಿದ್ದರೂ ಆ ಬಸ್ ಸಂಚರಿಸಲು ಪೊಲೀಸರು ಬಿಟ್ಟಿದ್ದೇಕೆ? ಬಸ್ಸಿಗಿದ್ದ ಭದ್ರತಾ ಬೆಂಗಾವಲು ಪಡೆ (Escort) ಆ ಸಮಯದಲ್ಲಿ ಎಲ್ಲೋಗಿತ್ತು ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?

ಪ್ರತಿ ಬಾರಿಯ ಅನಾಹುತಗಳ ಬಳಿಕ ಸರ್ಕಾರ ‘ಸೇಡು ತೀರಿಸಿಕೊಳ್ಳುತ್ತೇವೆ’ ಎಂದು ಅಬ್ಬರಿಸುತ್ತದೆ. ಆದರೆ ದಾಳಿ ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಯಾಕೆ ಕಟ್ಟುನಿಟ್ಟಾಗಿ ಜಾರಿಗೊಳಿಸುವುದಿಲ್ಲ? ಇಷ್ಟೊಂದು ದೊಡ್ಡ ಭದ್ರತಾ ಲೋಪಗಳಿಗೆ ಕಾರಣರಾದ ಉನ್ನತ ಮಟ್ಟದ ಅಧಿಕಾರಿಗಳ ಮೇಲೆ ಯಾಕೆ ಕ್ರಮ ಕೈಗೊಳ್ಳುವುದಿಲ್ಲ? ಕೇವಲ ಕೆಳಹಂತದ ಸಿಬ್ಬಂದಿಯನ್ನು ಬಲಿಪಶು ಮಾಡಲಾಗುತ್ತಿದೆಯೇ? ದೇಶದ ಭದ್ರತೆಯ ವಿಷಯವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ರಾಜಕೀಯ ಪಕ್ಷಗಳು, ಅಧಿಕಾರಕ್ಕೆ ಬಂದ ಮೇಲೆ ಅದೇ ಭದ್ರತೆಯ ಲೋಪಗಳ ಬಗ್ಗೆ ಯಾಕೆ ಮೌನ ತಾಳುತ್ತವೆ? ಎನ್ನುವ ಪ್ರಶ್ನೆಗಳಿಗೆ ವ್ಯವಸ್ಥೆ ಹಾಗೂ ಪಟ್ಟಭದ್ರರು ಖಂಡಿತ ಉತ್ತರಿಸಲೇಬೇಕು.





