ʼಹೋಲೋಕಾಸ್ಟ್ʼ ನರಮೇಧ | 60 ಲಕ್ಷ ಯಹೂದಿಗಳ ಬಲಿಯಿಂದಾದ ಬದಲಾವಣೆಗಳೇನು?

Date:

ಅಂದು ನಾಜಿಗಳು ಸುರಿದ ದ್ವೇಷದ ಹಾಲಾಹಲ ಕುಡಿದು ಲಕ್ಷಾಂತರ ಜೀವಗಳು ಅಸುನೀಗಿದ್ದವು. ಇಂದು ಅದೇ ದ್ವೇಷ ಯುದ್ಧದ ರೂಪದಲ್ಲಿ ಮರುಕಳಿಸಿರುವುದು ಮಾನವೀಯತೆಯನ್ನು ಮೂಟೆಕಟ್ಟಿ ಮೂಲೆಗೆಸೆದಿದೆ. ಯುದ್ಧದಿಂದ ಯಾರೂ ಗೆಲ್ಲಲಾರರು, ನೆಮ್ಮದಿಯಿಂದಿರಲಾರರು. ಈ ಸಾರ್ವಕಾಲಿಕ ಸತ್ಯವನ್ನು ಯುದ್ಧೋನ್ಮಾದದಲ್ಲಿರುವ ದೇಶಗಳು ಅರಿತುಕೊಳ್ಳಲೇಬೇಕಾದ ಕಾಲ ಸನ್ನಿಹಿತವಾಗಿದೆ!

- Advertisement -

ಮಾನವ ಇತಿಹಾಸದ ಅತ್ಯಂತ ಕ್ರೂರ ಘಟನೆ ಎಂದೇ ಕರೆಯಲ್ಪಡುವ ‘ಹೋಲೋಕಾಸ್ಟ್’ ಅಥವಾ ‘ಯಹೂದಿಗಳ ನರಮೇಧ’ದ ಕುರಿತು ನೆನಪಿದೆಯೇ? ಇತಿಹಾಸ ಓದಿದ ಯಾರೊಬ್ಬರೂ ರಕ್ತಸಿಕ್ತವಾಗಿ ದಾಖಲಾಗಿರುವ ಆ ‘ನಾಜಿ ನರಮೇಧ’ದ ಕರಾಳ ಅಧ್ಯಾಯವನ್ನು ಮರೆಯಲು ಸಾಧ್ಯವೇ ಇಲ್ಲ. ಎರಡನೇ ಮಹಾಯುದ್ಧದ ಸಮಯದಲ್ಲಿ ಸುಮಾರು 60 ಲಕ್ಷ ಯಹೂದಿಗಳನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಯಿತು. ಈ ಮಹಾದುರಂತದ ಕರಾಳ ನೆನಪುಗಳನ್ನು ಮೆಲುಕು ಹಾಕಲು ಮತ್ತು ಹತರಾದವರಿಗೆ ಗೌರವ ಸಲ್ಲಿಸಲು ನಡೆಯುವ ಮೆರವಣಿಗೆಯೇ ‘ಮಾರ್ಚ್ ಆಫ್ ದಿ ಲಿವಿಂಗ್‘ (March of the Living).

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಪೋಲೆಂಡ್‌ನ ಆಶ್ವಿಟ್ಜ್-ಬಿರ್ಕೆನೌ ಯಾತನಾ ಶಿಬಿರಗಳ ಆವರಣದಲ್ಲಿ ನಡೆದ ಈ ಬೃಹತ್ ಪಾದಯಾತ್ರೆಯಲ್ಲಿ ಸಾವಿರಾರು ಜನರೊಂದಿಗೆ ಆ ಭೀಕರ ನರಮೇಧದಿಂದ ಬದುಕುಳಿದ ಸಂತ್ರಸ್ತರೂ ಹೆಜ್ಜೆ ಹಾಕಿದರು. ಈ ಮಹಾ ನಡಿಗೆಯ ಹಿಂದಿರುವ ಇತಿಹಾಸದ ಸತ್ಯಗಳನ್ನು ಕೆದಕುವುದು ಯುದ್ಧೋನ್ಮಾದದಲ್ಲಿ ತೇಲುತ್ತಿರುವ ಇಂದಿನ ಜಗತ್ತಿಗೆ ಅತ್ಯಂತ ಅವಶ್ಯಕವಾಗಿದೆ.

ನಾಜಿ ಜರ್ಮನಿ ಮತ್ತು ಯಹೂದಿಗಳ ಮೇಲಿನ ದ್ವೇಷ

ನಾಜಿ ಜರ್ಮನಿಯು ಯಹೂದಿಗಳ ಮೇಲೆ ತಳೆದ ದ್ವೇಷ ಸುಖಾ ಸುಮ್ಮನೆ ಉಂಟಾದದ್ದಲ್ಲ. ಅದು ದಶಕಗಳ ಕಾಲದ ಹಿಟ್ಲರ್‌ನ ವಿಕೃತ ಸಿದ್ಧಾಂತದ ಫಲ. ಇದಕ್ಕೆ ಕಾರಣಗಳು ಹಲವು…

image 2026 04 16T140333.374

ಐತಿಹಾಸಿಕ ‘ಆಂಟಿಸೆಮಿಟಿಸಂ’ (ಯಹೂದಿ ವಿರೋಧ): ಮಧ್ಯಕಾಲೀನ ಯುಗದಲ್ಲಿ ಕ್ರೈಸ್ತ ಧರ್ಮಗುರುಗಳು ಏಸು ಕ್ರಿಸ್ತನ ಮರಣಕ್ಕೆ ಯಹೂದಿಗಳೇ ಕಾರಣ ಎಂದು ಹಸಿ ಹಸಿ ಸುಳ್ಳು ಬೋಧಿಸುತ್ತಿದ್ದರು. ಈ ಧಾರ್ಮಿಕ ದ್ವೇಷವು ಜನರ ಮನಸ್ಸಿನಲ್ಲಿ ಯಹೂದಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿತ್ತು. ನಾಜಿಗಳು ಇದೇ ಹಳೆಯ ದ್ವೇಷವನ್ನು ಆಧುನಿಕ ರಾಜಕೀಯಕ್ಕೆ ಬಳಸಿಕೊಂಡರು.

ಜನಾಂಗೀಯ ಶ್ರೇಷ್ಠತೆಯ ಭ್ರಮೆ (Aryan Supremacy): ‘ಸೋಷಿಯಲ್ ಡಾರ್ವಿನಿಸಂ’ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ್ದ ಹಿಟ್ಲರ್ ಮತ್ತು ನಾಜಿಗಳ ಪ್ರಕಾರ ಜಗತ್ತಿನಲ್ಲಿ ಆರ್ಯನ್ ಜನಾಂಗವೇ ಶ್ರೇಷ್ಠ ಮತ್ತು ಬಲಿಷ್ಠ. ಅವರು ಯಹೂದಿಗಳನ್ನು ಕೇವಲ ಬೇರೆ ಧರ್ಮದವರು ಎಂದು ನೋಡುತ್ತಿರಲಿಲ್ಲ, ಆರ್ಯನ್ ಜನಾಂಗದ ರಕ್ತವನ್ನು ಮಲಿನ ಮಾಡುವ ಪರಾವಲಂಬಿ ಜೀವಿಗಳು (Parasites) ಎಂದು ಚಿತ್ರಿಸುತ್ತಿದ್ದರು. ಯಹೂದಿಗಳ ನಿರ್ನಾಮವಾದರೆ ಮಾತ್ರ ಜರ್ಮನಿ ಶಕ್ತಿಯುತವಾಗಲು, ಪರಿಶುದ್ಧವಾಗಿರಲು ಸಾಧ್ಯ ಎಂಬ ಭ್ರಮೆಯನ್ನು ಸೃಷ್ಟಿಸಿದರು.

ಮೊದಲ ಮಹಾಯುದ್ಧದ ಸೋಲು: ಮೊದಲ ಮಹಾಯುದ್ಧದಲ್ಲಿ ಜರ್ಮನಿ ಅನುಭವಿಸಿದ ಸೋಲು ಮತ್ತು ನಂತರ ಹೇರಲಾದ ಅವಮಾನಕರ ‘ವರ್ಸೈಲ್ಸ್ ಒಪ್ಪಂದ’ದಿಂದ ಜರ್ಮನ್ನರು ಕುಗ್ಗಿಹೋಗಿದ್ದರು. ಆ ಸಮಯದಲ್ಲಿ ಹಿಟ್ಲರ್, “ಜರ್ಮನಿ ಸೈನಿಕರು ಯುದ್ಧಭೂಮಿಯಲ್ಲಿ ಸೋಲಲಿಲ್ಲ, ಬದಲಾಗಿ ದೇಶದೊಳಗಿದ್ದ ಯಹೂದಿಗಳು ಮತ್ತು ಕಮ್ಯುನಿಸ್ಟರು ನಂಬಿಕೆದ್ರೋಹ ಮಾಡಿ ಬೆನ್ನಿಗೆ ಚೂರಿ ಹಾಕಿದರು” ಎಂಬ ಸುಳ್ಳನ್ನು ನಾಜಿಗಳಲ್ಲಿ ನಂಬಿಸಿದನು. ಸೋಲಿನ ಹತಾಶೆಯಲ್ಲಿದ್ದ ಜನರಿಗೆ ದೂಷಿಸಲು ಒಬ್ಬ ಶತ್ರು ಬೇಕಿತ್ತು, ಆ ಸ್ಥಾನಕ್ಕೆ ಯಹೂದಿಗಳನ್ನು ತಳ್ಳಲಾಯಿತು.

ಆರ್ಥಿಕ ಬಿಕ್ಕಟ್ಟು: 1920ರ ದಶಕದಲ್ಲಿ ಜರ್ಮನಿ ಭೀಕರ ಆರ್ಥಿಕ ಕುಸಿತ ಎದುರಿಸುತ್ತಿತ್ತು. ಆಗ ಬ್ಯಾಂಕಿಂಗ್, ಪತ್ರಿಕೋದ್ಯಮ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಯಹೂದಿಗಳು ಪ್ರಬಲರಾಗಿದ್ದರು. ಇದನ್ನೇ ಬಳಸಿಕೊಂಡ ನಾಜಿಗಳು, “ಸಾಮಾನ್ಯ ಜರ್ಮನ್ನರು ಹಸಿವಿನಿಂದ ಸಾಯುತ್ತಿದ್ದರೆ, ಯಹೂದಿಗಳು ಹಣ ಲೂಟಿ ಮಾಡುತ್ತಿದ್ದಾರೆ” ಎಂಬ ವಿಷ ಹರಡಿದರು. ಶ್ರೀಮಂತ ಯಹೂದಿಗಳ ಮೇಲಿದ್ದ ಅಸೂಯೆಯನ್ನು ದ್ವೇಷವನ್ನಾಗಿ ಪರಿವರ್ತಿಸಿದರು.

ಪ್ರಚಾರ: ಹಿಟ್ಲರ್‌ನ ಬಲಗೈ ಭಂಟ ಜೋಸೆಫ್ ಗೋಬೆಲ್ಸ್, ಯಹೂದಿಗಳನ್ನು ಕ್ರೂರಿಗಳಂತೆ ತೋರಿಸುವ ಚಲನಚಿತ್ರಗಳು, ಪತ್ರಿಕೆಗಳು ಮತ್ತು ಶಾಲಾ ಪಠ್ಯಪುಸ್ತಕಗಳನ್ನು ರೂಪಿಸಿದನು. ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ಯಹೂದಿಗಳು ಎಂದರೆ ಶತ್ರುಗಳು ಎಂದು ಬೋಧಿಸಲಾಯಿತು. ಒಂದು ಸುಳ್ಳನ್ನು ಪದೇ ಪದೇ ಹೇಳುವ ಮೂಲಕ ಅದು ಸತ್ಯವೆಂದು ನಂಬುವಂತೆ ಮಾಡಲಾಯಿತು. ಈ ಎಲ್ಲಾ ಕಾರಣಗಳು ಒಟ್ಟುಗೂಡಿ ಯಹೂದಿಗಳ ಮಾರಣಹೋಮಕ್ಕೆ ಮುನ್ನುಡಿ ಬರೆದವು.

image 2026 04 16T140644.845

ಹೇಗೆ ನಡೆಯಿತು ಆ ಭೀಕರ ನರಮೇಧ?

‘ಹೋಲೋಕಾಸ್ಟ್’ ಎಂಬುದು ಅತ್ಯಂತ ವ್ಯವಸ್ಥಿತವಾಗಿ ರೂಪಿಸಲಾದ ಒಂದು ಸಾಮೂಹಿಕ ಹತ್ಯೆಯಾಗಿತ್ತು. ನಾಜಿಗಳು ಇದಕ್ಕೆ ‘ಅಂತಿಮ ಪರಿಹಾರ’ (The Final Solution) ಎಂದು ಹೆಸರಿಟ್ಟಿದ್ದರು. ಆರಂಭದಲ್ಲಿ ಯಹೂದಿಗಳ ಹಕ್ಕುಗಳನ್ನು ಕಿತ್ತುಕೊಂಡು, ಅವರನ್ನು ಸಮಾಜದಿಂದ ಬೇರ್ಪಡಿಸಿ ‘ಗೆಟ್ಟೋ’ ಎಂಬ ಇಕ್ಕಟ್ಟಾದ ಪ್ರದೇಶಗಳಲ್ಲಿ ಇರಿಸಲಾಯಿತು. ನಂತರ, ಅವರನ್ನು ರೈಲುಗಳಲ್ಲಿ ತುಂಬಿ ಪೋಲೆಂಡ್ ಮತ್ತು ಇತರ ಆಕ್ರಮಿತ ಪ್ರದೇಶಗಳಲ್ಲಿದ್ದ ಸಾವಿನ ಶಿಬಿರಗಳಿಗೆ (Death Camps) ಕುರಿ ಮರಿಗಳಂತೆ ಸಾಗಿಸಲಾಯಿತು.

ಆಶ್ವಿಟ್ಜ್-ಬಿರ್ಕೆನೌನಂತಹ ಸಾವಿನ ಶಿಬಿರಗಳಲ್ಲಿ ‘ಗ್ಯಾಸ್ ಚೇಂಬರ್’ಗಳನ್ನು ನಿರ್ಮಿಸಲಾಗಿತ್ತು. ರೈಲುಗಳಲ್ಲಿ ಕರೆತಂದ ಯಹೂದಿ ಜನರನ್ನು ಸ್ನಾನ ಮಾಡಿಸುವ ನೆಪದಲ್ಲಿ ದೊಡ್ಡ ಹಾಲ್‌ಗಳಿಗೆ ತುಂಬಲಾಗುತ್ತಿತ್ತು. ನಂತರ ಬಾಗಿಲು ಮುಚ್ಚಿ ಮೇಲಿನಿಂದ ‘ಝೈಕ್ಲೋನ್ ಬಿ’ (Zyklon B) ಎಂಬ ವಿಷಕಾರಿ ಅನಿಲವನ್ನು ಹರಿಸಲಾಗುತ್ತಿತ್ತು. ಕೆಲವೇ ನಿಮಿಷಗಳಲ್ಲಿ ನೂರಾರು ಜನರು ಉಸಿರುಗಟ್ಟಿ ಸಾವನ್ನಪ್ಪುತ್ತಿದ್ದರು. ನಂತರ ಶವಗಳನ್ನು ದೊಡ್ಡ ಚಿತಾಗಾರಗಳಲ್ಲಿ ಸುಡಲಾಗುತ್ತಿತ್ತು.

ಗ್ಯಾಸ್ ಚೇಂಬರ್‌ಗಳ ವ್ಯವಸ್ಥೆ ಮಾಡುವ ಮೊದಲು, ನಾಜಿಗಳ ‘ಡೆತ್ ಸ್ಕ್ವಾಡ್’ (Einsatzgruppen) ಎಂಬ ಸೈನಿಕ ಗುಂಪುಗಳು ಗ್ರಾಮಗಳಿಗೆ ನುಗ್ಗಿ ಯಹೂದಿಗಳನ್ನು ಸೆರೆಹಿಡಿಯುತ್ತಿದ್ದರು. ಅವರನ್ನು ಊರ ಹೊರಗಿನ ನಿರ್ಜನ ಪ್ರದೇಶಗಳಿಗೆ ಅಥವಾ ಕಾಡುಗಳಿಗೆ ಕರೆದೊಯ್ದು, ಅವರ ಕೈಯಲ್ಲೇ ದೊಡ್ಡ ಹೊಂಡಗಳನ್ನು ಅಗೆಸಿ, ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಲ್ಲಲಾಗುತ್ತಿತ್ತು. ಬಳಿಕ ಅದೇ ಹೊಂಡಗಳಲ್ಲಿ ಶವಗಳನ್ನು ಹಾಕಿ ಮುಚ್ಚಲಾಗುತ್ತಿತ್ತು. ಉಕ್ರೇನ್‌ನ ‘ಬಾಬಿ ಯಾರ್’ ಎಂಬಲ್ಲಿ ಕೇವಲ ಎರಡು ದಿನಗಳಲ್ಲಿ 33,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆಯಲಾಗಿತ್ತು.

image 2026 04 16T140745.197

ಯಹೂದಿಗಳನ್ನು ‘ಗೆಟ್ಟೋ’ ಎಂಬ ಇಕ್ಕಟ್ಟಾದ ಪ್ರದೇಶಗಳಲ್ಲಿ ಅಥವಾ ಕೆಲಸದ ಶಿಬಿರಗಳಲ್ಲಿ ಕೂಡಿಹಾಕಲಾಗುತ್ತಿತ್ತು. ಅಲ್ಲಿ ಅವರಿಗೆ ಕಿಂಚಿತ್ತೂ ಆಹಾರ ನೀಡದೆ, ಮೈಕೊರೆಯುವ ಚಳಿಯಲ್ಲಿ ಹಗಲಿರುಳು ಕಠಿಣ ದೈಹಿಕ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ಆಹಾರವಿಲ್ಲದೆ, ರೋಗರುಜಿನಗಳಿಂದ, ದೈಹಿಕ ಶಕ್ತಿ ಕ್ಷೀಣಿಸಿ ಲಕ್ಷಾಂತರ ಜನ ತಾವಾಗಿಯೇ ಸಾವನ್ನಪ್ಪುವಂತೆ ಮಾಡಲಾಯಿತು. ಅಲ್ಲದೆ, ಮಕ್ಕಳ ಮೇಲೆ ಮತ್ತು ಅನಾರೋಗ್ಯ ಪೀಡಿತರ ಮೇಲೆ ಮಾರಣಾಂತಿಕ ವೈದ್ಯಕೀಯ ಪ್ರಯೋಗಗಳನ್ನು ಮಾಡಿ ಕೊಲ್ಲಲಾಗುತ್ತಿತ್ತು. ಹೀಗೆ ಸಾಲು ಸಾಲಾಗಿ ಕೊಂದು ಹಾಕಿದ್ದು ಬರೋಬ್ಬರಿ 60 ಲಕ್ಷ ಅಮಾಯಕ ಯಹೂದಿ ಜೀವಗಳನ್ನು. ಈ ಸಂಖ್ಯೆ ಅಂದಿನ ಯುರೋಪಿನ ಒಟ್ಟು ಯಹೂದಿ ಜನಸಂಖ್ಯೆಯ ಮೂರನೇ ಎರಡರಷ್ಟಿತ್ತು ಎಂಬುದು ಇನ್ನೊಂದು ಆಘಾತಕಾರಿ.

ಎರಡನೇ ಮಹಾಯುದ್ಧದ ಕೊನೆಯ ದಿನಗಳಲ್ಲಿ (1944-45), ಸೋವಿಯತ್ ಒಕ್ಕೂಟದ ಪಡೆಗಳು ಪೋಲೆಂಡ್‌ನಲ್ಲಿದ್ದ ನಾಜಿ ಶಿಬಿರಗಳ ವಶಪಡಿಸಿಕೊಳ್ಳಲು ಮುಗಿ ಬಿದ್ದಿದ್ದವು. ಆ ಸಮಯದಲ್ಲಿ ನಾಜಿಗಳು ತಮ್ಮ ಕ್ರೌರ್ಯದ ಸಾಕ್ಷ್ಯಗಳನ್ನು ನಾಶಪಡಿಸಲು ಮುಂದಾಗಿ, ಶಿಬಿರಗಳಲ್ಲಿ ಅರೆಜೀವವಾಗಿದ್ದ ಸಾವಿರಾರು ಯಹೂದಿ ಕೈದಿಗಳನ್ನು ಮೈಕೊರೆಯುವ ಚಳಿಯಲ್ಲಿ ಕಿಲೋಮೀಟರ್‌ಗಟ್ಟಲೆ ದೂರ ನಡೆಸಿಕೊಂಡು ಹೋದರು. ಆಹಾರ, ನೀರು, ಸರಿಯಾದ ಬಟ್ಟೆ ಕೂಡ ಇಲ್ಲದೆ ನಡೆಸಿದ ಈ ಪಯಣದಲ್ಲಿ ಸಾವಿರಾರು ಮಂದಿ ಹಸಿವು ಮತ್ತು ಆಯಾಸದಿಂದ ದಾರಿಯಲ್ಲೇ ಪ್ರಾಣ ಬಿಟ್ಟರು. ಇತಿಹಾಸ ಇದನ್ನು ‘ಡೆತ್ ಮಾರ್ಚ್’ ಎಂದು ಕರೆಯಿತು.

1988ರಲ್ಲಿ ಈ ಕರಾಳ ಇತಿಹಾಸವನ್ನು ನೆನಪಿಸಿಕೊಳ್ಳಲು ಮತ್ತು ‘ಡೆತ್ ಮಾರ್ಚ್’ನಲ್ಲಿ ಮಡಿದವರಿಗೆ ಗೌರವ ಸಲ್ಲಿಸಲು ‘ಮಾರ್ಚ್ ಆಫ್ ದಿ ಲಿವಿಂಗ್’ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಸಾವಿನ ಹಾದಿಯಾಗಿದ್ದ ಅದೇ ರಸ್ತೆಯಲ್ಲಿ, ಈಗ ಪ್ರಪಂಚದಾದ್ಯಂತ ಯುವಜನರು ಮತ್ತು ಹೋಲೋಕಾಸ್ಟ್‌ನಿಂದ ಬದುಕುಳಿದ ಸಂತ್ರಸ್ತರು ಹೆಜ್ಜೆ ಹಾಕುತ್ತಾರೆ. ಪೋಲೆಂಡ್‌ನ ಆಶ್ವಿಟ್ಜ್‌ನಿಂದ (Auschwitz) ಬಿರ್ಕೆನೌ (Birkenau) ವರೆಗಿನ ಈ 3 ಕಿಲೋಮೀಟರ್ ನಡಿಗೆಯು, ಯಹೂದಿ ಅಥವಾ ಯಾವುದೇ ಒಂದು ಜನಾಂಗವನ್ನು ದ್ವೇಷದಿಂದ ನಾಶಪಡಿಸಲು ಯಾರಿಗೂ ಸಾಧ್ಯವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.

ಸಾವಿರಾರು ವರ್ಷಗಳಿಂದ ತಮ್ಮದೇ ಆದ ಒಂದು ದೇಶವಿಲ್ಲದೆ ಜಗತ್ತಿನಾದ್ಯಂತ ಚದುರಿಹೋಗಿದ್ದ ಯಹೂದಿಗಳಿಗೆ, ಹೋಲೋಕಾಸ್ಟ್ ಒಂದು ಭಯಾನಕ ಎಚ್ಚರಿಕೆಯಾಗಿತ್ತು. ತಮ್ಮನ್ನು ರಕ್ಷಿಸಿಕೊಳ್ಳಲು ತಮಗೊಂದು ಸ್ವತಂತ್ರ ದೇಶ ಬೇಕೇ ಬೇಕು ಎಂಬ ಅನಿವಾರ್ಯತೆಯಿತ್ತು. ಇಸ್ರೇಲ್‌ನ ಉಗಮಕ್ಕೆ ಇದೇ ಮುಖ್ಯ ಕಾರಣವಾಗಿತ್ತು. 1948ರಲ್ಲಿ ಇಸ್ರೇಲ್ ದೇಶ ಹುಟ್ಟಿಕೊಂಡಾಗ, ಅದು ಹೋಲೋಕಾಸ್ಟ್‌ನಿಂದ ಬದುಕುಳಿದವರಿಗೆ ಆಸರೆ ನೀಡಿತು. ಇಂದಿಗೂ ಇಸ್ರೇಲ್ ಸರ್ಕಾರ ಹೋಲೋಕಾಸ್ಟ್ ಇತಿಹಾಸವನ್ನು ತನ್ನ ಅಸ್ತಿತ್ವದ ಭಾಗವಾಗಿ ನೋಡುತ್ತದೆ. ‘ಮಾರ್ಚ್‌ ಆಫ್ ದಿ ಲಿವಿಂಗ್‌’ನಲ್ಲಿ ಇಸ್ರೇಲ್‌ನ ಯುವಜನತೆ ದೊಡ್ಡ ಮಟ್ಟದಲ್ಲಿ ಪಾಲ್ಗೊಳ್ಳುತ್ತದೆ.

ಇತಿಹಾಸದ ಇನ್ನೊಂದು ಮಗ್ಗುಲು ಹೇಳುವುದೇನೆಂದರೆ, ಅನೇಕ ಶತಮಾನಗಳ ಕಾಲ ಕ್ರೈಸ್ತ ಜಗತ್ತು “ಯಹೂದಿಗಳೇ ಏಸುವಿನ ಸಾವಿಗೆ ಕಾರಣ” ಎಂದು ನಂಬಿತ್ತು. ಈ ಕಾರಣಕ್ಕಾಗಿಯೇ ಯಹೂದಿಗಳು ಯುರೋಪಿನಾದ್ಯಂತ ಕಿರುಕುಳ ಅನುಭವಿಸಬೇಕಾಯಿತು. ಆದರೆ, 2ನೇ ಮಹಾಯುದ್ಧ ಮತ್ತು ಹೋಲೋಕಾಸ್ಟ್‌ನಲ್ಲಿ ನಡೆದ ಭೀಕರ ಹತ್ಯಾಕಾಂಡದ ನಂತರ, 1960ರ ದಶಕದಲ್ಲಿ ಕ್ಯಾಥೋಲಿಕ್ ಚರ್ಚ್ (Vatican II) ಅಧಿಕೃತವಾಗಿ “ಏಸುವಿನ ಸಾವಿಗೆ ಇಂದಿನ ಯಹೂದಿಗಳಾಗಲಿ ಅಥವಾ ಅಂದಿನ ಎಲ್ಲಾ ಯಹೂದಿಗಳಾಗಲಿ ಕಾರಣವಲ್ಲ” ಎಂದು ಘೋಷಿಸಿತು. ಬ್ರಿಟನ್ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳು ಯಹೂದಿಗಳಿಗೆ ನೆಲೆ ಒದಗಿಸಿಕೊಟ್ಟವು. ಜೊತೆಗೆ, ಯುರೋಪಿನ ಮಣ್ಣಿನಲ್ಲಿ ನಡೆದ ಅಷ್ಟು ದೊಡ್ಡ ನರಮೇಧಕ್ಕೆ ತಾವು ಮೂಕಸಾಕ್ಷಿಯಾಗಿದ್ದೆವಲ್ಲ ಎಂಬ ಅಪರಾಧ ಪ್ರಜ್ಞೆ ಅವರನ್ನು ಇಸ್ರೇಲ್ ರಚನೆಗೆ ಬೆಂಬಲ ನೀಡುವಂತೆ ಮಾಡಿತು.

image 2026 04 16T151607.157

ಇಂದು ಆಜನ್ಮ ಶತೃಗಳಂತೆ ಕಾಣುತ್ತಿರುವ ಇರಾನ್‌ ಮತ್ತು ಇಸ್ರೇಲ್‌ ಒಂದು ಕಾಲದಲ್ಲಿ ಸ್ನೇಹಿತರು. ಇಸ್ರೇಲ್ ಸೃಷ್ಟಿಯಾದಾಗ ಸುತ್ತಲಿನ ಎಲ್ಲಾ ಅರಬ್ ರಾಷ್ಟ್ರಗಳು ಅದರ ಮೇಲೆ ಯುದ್ಧ ಸಾರಿದ್ದವು. ಆಗ ಇರಾನ್ (ಇರಾನ್‌ ಅರಬ್‌ ರಾಷ್ಟ್ರವಲ್ಲ, ಇರಾನಿಗಳು ಪರ್ಷಿಯನ್ನರು) ಅರಬ್ ರಾಷ್ಟ್ರಗಳ ಪ್ರಭಾವವನ್ನು ಹಿಮ್ಮೆಟ್ಟಿಸಲು ಇಸ್ರೇಲ್‌ಗೆ ಸಹಾಯ ಹಸ್ತ ಚಾಚಿತ್ತು. ಇಸ್ರೇಲ್‌ಗೆ ಅಗತ್ಯವಿದ್ದ ಪೆಟ್ರೋಲಿಯಂ ಪೂರೈಕೆಯಾಗುತ್ತಿದ್ದದ್ದು ಇರಾನ್‌ನಿಂದಲೇ. ಇರಾನ್ ತನ್ನ ಭೂಪ್ರದೇಶದ ಮೂಲಕ ಯಹೂದಿ ನಿರಾಶ್ರಿತರು ಇಸ್ರೇಲ್‌ಗೆ ತೆರಳಲು ದಾರಿ ಮಾಡಿಕೊಟ್ಟಿತ್ತು. ಅಲ್ಲದೆ, ಇಸ್ರೇಲ್‌ನಿಂದ ಇರಾನ್ ಒಳಗೆ ನೇರ ವಿಮಾನಯಾನ ಸೌಲಭ್ಯವೂ ಇತ್ತು. ಪರಸ್ಪರ ಸಹೋದರರಂತಿದ್ದ ರಾಷ್ಟ್ರಗಳು 1979ರ ಇಸ್ಲಾಮಿಕ್‌ ಕ್ರಾಂತಿಯ ಬಳಿಕ ಬದ್ಧ ವೈರಿಗಳಾಗಿ ಬದಲಾದದ್ದು ಈಗ ಇತಿಹಾಸ.

ಮೊನ್ನೆ (ಏ.14 ಮಂಗಳವಾರ) ನಡೆದ March of the Livingನಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಜಗತ್ತಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಯಹೂದಿ ಯುವಕರು, ಗಣ್ಯರು ಮತ್ತು ರಾಜತಾಂತ್ರಿಕರ ನಡುವೆ ಅತ್ಯಂತ ಗಮನಸೆಳೆದದ್ದು ನರಮೇಧದಲ್ಲಿ ಬದುಕುಳಿದವರ ಉಪಸ್ಥಿತಿ. ಈಗ ವಯೋವೃದ್ಧರಾಗಿರುವ ಇವರು, ಅಂದು ತಾವು ಕಂಡ ನರಕಸದೃಶ ಯಾತನೆಯನ್ನು ಸಾಕ್ಷೀಕರಿಸಲು ದೈಹಿಕ ಅಡೆತಡೆಯ ನಡುವೆಯೂ ಅಲ್ಲಿ ನೆರೆದಿದ್ದರು. ಸೈರನ್ ಮೊಳಗುತ್ತಿದ್ದಂತೆ ಜನರ ಸಂಚಾರ ಸ್ಥಗಿತವಾಗಿ ಇಡೀ ರಾಷ್ಟ್ರ ಎರಡು ನಿಮಿಷಗಳ ಕಾಲ ಮೌನವಾಗಿ ನಿಂತು ಮೃತರನ್ನು ಸ್ಮರಿಸಿತು.

ಇದನ್ನೂ ಓದಿ: ಪರಿಶಿಷ್ಟರು, ಅಸ್ಪೃಶ್ಯರು ಹಿಂದೂಗಳಲ್ಲ; ಬಾಬಾ ಸಾಹೇಬರು ಪ್ರತಿಪಾದಿಸಿದ್ದು ಹೀಗೆ…

ವಿಪರ್ಯಾಸಕರ ಸಂಗತಿ ಎಂದರೆ, ಕರಾಳ ಹೋಲೋಕಾಸ್ಟ್‌ನಿಂದ ಇಸ್ರೇಲ್‌ ಪಾಠ ಕಲಿತಂತಿಲ್ಲ. ಲೆಬನಾನ್ (ಹೆಜ್ಬೊಲ್ಲಾ),‌ ಗಾಜಾ (ಹಮಾಸ್), ಇರಾನ್‌ಗಳ ವಿರುದ್ಧ ನಿರಂತರ ಯುದ್ಧ ಸಾರುತ್ತಿದೆ. ಇಸ್ರೇಲ್‌ ನಡೆಸುತ್ತಿರುವ ಸರಣಿ ದಾಳಿಯಿಂದ ಗಾಜಾ ಪಟ್ಟಿ ಅಕ್ಷರಶಃ ಸ್ಮಶಾನದಂತಾಗಿದೆ. ಇತಿಹಾಸದ ಕರಾಳ ನರಮೇಧದ ನೋವುಂಡ ಒಂದು ದೇಶ ಇಂದು ಮತ್ತೊಂದು ಪ್ರದೇಶವನ್ನು ನಾಶ ಮಾಡಲು ಯುದ್ಧವನ್ನೇ ಆಯ್ಕೆ ಮಾಡಿಕೊಂಡಿದೆ. ಇಸ್ರೇಲ್‌ನ ಈ ಹಠಮಾರಿ ಧೋರಣೆ ಇಡೀ ಮಧ್ಯಪ್ರಾಚ್ಯವನ್ನು ಮಹಾ ವಿನಾಶದ ಅಂಚಿಗೆ ತಳ್ಳುತ್ತಿದೆ.

ಸ್ವಯಂ ರಕ್ಷಣೆ ಎನ್ನುವುದು ಯಾವುದೇ ದೇಶದ ಹಕ್ಕಾಗಿದ್ದರೂ, ಅದೇ ನೆಪದಲ್ಲಿ ಇನ್ನೊಂದು ದೇಶದ ಅಮಾಯಕ ಜೀವಗಳನ್ನು ಬಲಿ ಪಡೆಯುವುದು ಸರಿಯಲ್ಲ. ಅಂದು ನಾಜಿಗಳು ಸುರಿದ ದ್ವೇಷದ ಹಾಲಾಹಲ ಕುಡಿದು ಲಕ್ಷಾಂತರ ಜೀವಗಳು ಅಸುನೀಗಿದವು. ಇಂದು ಅದೇ ದ್ವೇಷ ಯುದ್ಧದ ರೂಪದಲ್ಲಿ ಮರುಕಳಿಸಿರುವುದು ಮಾನವೀಯತೆಯನ್ನು ಮೂಟೆಕಟ್ಟಿ ಮೂಲೆಗೆಸೆದಿದೆ. ಇತಿಹಾಸದಿಂದ ಕಲಿಯಬೇಕಾದ್ದು ಇದೇ, ಯುದ್ಧದಿಂದ ಯಾರೂ ಗೆಲ್ಲಲಾರರು, ನೆಮ್ಮದಿಯಿಂದಿರಲಾರರು. ಈ ಸಾರ್ವಕಾಲಿಕ ಸತ್ಯವನ್ನು ಯುದ್ಧೋನ್ಮಾದದಲ್ಲಿ ತೇಲಾಡುತ್ತಿರುವ ಅಮೆರಿಕ, ಇಸ್ರೇಲ್‌ ಸೇರಿದಂತೆ ಯಾವುದೇ ದೇಶಗಳು ಅರಿತುಕೊಳ್ಳಲೇಬೇಕಾದ ಕಾಲ ಸನ್ನಿಹಿತವಾಗಿದೆ!

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...