ಚೀನಾ ಭಾರತದ ಅತ್ಯಂತ ನಿರ್ಣಾಯಕ ಕೈಗಾರಿಕೆಗಳನ್ನು ವಶಪಡಿಕೊಳ್ಳಲು ಅವಕಾಶ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಾನಿ ಮಾಡಿದೆ. ಪ್ರಧಾನಿ ಮೋದಿ ಚೀನಿಯರು ಅಭಿವೃದ್ಧಿ ಹೊಂದಲು ಹೆಚ್ಚಿನ ಅವಕಾಶವನ್ನು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಭಾರತದ ಕಾರ್ಯತಂತ್ರದ ಕೈಗಾರಿಕೆಗಳಿಗೆ ಚೀನಾ ಇನ್ನೂ ಶಕ್ತಿ ನೀಡುತ್ತದೆ ಎಂಬ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ಆರು ವರ್ಷಗಳ ಹಿಂದೆ ಗಾಲ್ವಾನ್‌ನಲ್ಲಿ 20 ಧೈರ್ಯಶಾಲಿ ಸೈನಿಕರು ಅತ್ಯುನ್ನತ ತ್ಯಾಗ ಮಾಡಿದ್ದಾರೆ. ಆದರೆ ಪ್ರಧಾನಿ ಮೋದಿ ಬೀಜಿಂಗ್‌ಗೆ ಕ್ಲೀನ್ ಚಿಟ್ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: ಭಾರತ-ಚೀನಾ-ರಷ್ಯಾ ದೋಸ್ತಿ: ಅಮೆರಿಕದ ನಿಲುವೇನು?
“ಗಾಲ್ವಾನ್ ನಂತರ, ಚೀನಾದಿಂದ ಆಮದುಗಳು 2025-26ರ ವೇಳೆಗೆ 101.81% ರಷ್ಟು ಹೆಚ್ಚಾಗಿದೆ. ಇದರಿಂದಾಗಿ ಭಾರತದ ವ್ಯಾಪಾರ ಕೊರತೆಯು $112.1 ಬಿಲಿಯನ್‌ಗೆ ತಳ್ಳಲ್ಪಟ್ಟಿದೆ. ಚೀನಾ ಭಾರತದ ಪ್ರತಿಜೀವಕ ಆಮದುಗಳಲ್ಲಿ ಶೇ.86ರಷ್ಟು ಪೂರೈಸಿದೆ. 2024-25ರಲ್ಲಿ ಭಾರತದ API, ಬೃಹತ್ ಔಷಧ ಮತ್ತು ಔಷಧ ಮಧ್ಯಂತರ ಆಮದುಗಳಲ್ಲಿ ಸುಮಾರು 74% ಅನ್ನು ಚೀನಾ ಮೂಲೆಗುಂಪು ಮಾಡಿದೆ” ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
“ಭಾರತದ 66% ಇವಿ ಘಟಕ ಆಮದುಗಳು ಇನ್ನೂ ಚೀನಾದಿಂದಲೇ ಆಗುತ್ತಿವೆ. ಭಾರತೀಯ ಇವಿಗಳಿಗೆ ಶಕ್ತಿ ನೀಡುವ ಲಿಥಿಯಂ-ಐಯಾನ್ ಬ್ಯಾಟರಿಗಳಲ್ಲಿ ಸುಮಾರು 75% ಆಮದು ಮಾಡಿಕೊಳ್ಳಲಾಗುತ್ತದೆ. ಅವುಗಳಲ್ಲಿ ಹೆಚ್ಚಿನವು ಚೀನಾದವು. 2025-26ರಲ್ಲಿ ಭಾರತವು ಚೀನಾದಿಂದ ಸುಮಾರು 93% ಶಾಶ್ವತ ಆಯಸ್ಕಾಂತಗಳನ್ನು ಆಮದು ಮಾಡಿಕೊಂಡಿದೆ” ಎಂದು ಖರ್ಗೆ ಹೇಳಿದ್ದಾರೆ.
“ಸೌರಶಕ್ತಿಯ ಕುರಿತು ಮೋದಿ ಸರ್ಕಾರ ನಡೆಸಿದ ಮಾತುಕತೆಗಳು ಎಲ್ಲವೂ ಪೊಳ್ಳು. 2025-26ರಲ್ಲಿ ಚೀನಾ ಭಾರತದ 99% ಕ್ಕಿಂತ ಹೆಚ್ಚು ಅನಿಯಂತ್ರಿತ ಸಿಲಿಕಾನ್ ವೇಫರ್ ಆಮದುಗಳನ್ನು ಪೂರೈಸಿದೆ. ಮೋದಿ ಜಿ ಆತ್ಮನಿರ್ಭರ ಭಾರತ ಅಡಿಯಲ್ಲಿ ಪ್ರತಿಪಾದಿಸುವ ವಲಯವು ಈಗ ಸಂಪೂರ್ಣವಾಗಿ ಚೀನಾದ ವಶಕ್ಕೆ ಸೇರುವಂತಿದೆ” ಎಂದು ಹೇಳಿದ್ದಾರೆ.
“ಈಗ ಮೋದಿ ಸರ್ಕಾರವು ತನ್ನ ‘ಜೂಲಾ ಸ್ನೇಹಿತನಿಗೆ’ (ಉಯ್ಯಾಲೆ ಗೆಳೆಯನಿಗೆ) ಕೆಂಪು ಹಾಸಿನ ಸ್ವಾಗತವನ್ನು ಕೋರಿದೆ. ಭಾರತದ ಸ್ವಂತ ಸರ್ಕಾರಿ ವಿದ್ಯುತ್ ಯೋಜನೆಗಳಿಗೆ ಬಿಡ್ ಮಾಡಲು ನಾಲ್ಕು ಚೀನೀ ಕಂಪನಿಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಿದೆ” ಎಂದು ಖರ್ಗೆ ಹೇಳಿದ್ದಾರೆ. (2014ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿದ್ದಾಗ, ಅಹಮದಾಬಾದ್‌ನಲ್ಲಿ ಪ್ರಧಾನಿ ಮೋದಿ ಅವರು ಜಿನ್‌ಪಿಂಗ್ ಜೊತೆ ಸಾಂಪ್ರದಾಯಿಕ ಗುಜರಾತಿ ಉಯ್ಯಾಲೆ ಮೇಲೆ ಕುಳಿತು ಮಾತುಕತೆ ನಡೆಸಿದ್ದರು. ಅದಾದ ಬಳಿಕ ವಿಪಕ್ಷಗಳು ಜೂಲಾ ಫ್ರೆಂಡ್ಸ್ ಎಂದು ವ್ಯಂಗ್ಯವಾಡುತ್ತದೆ)
“ಅರುಣಾಚಲ ಪ್ರದೇಶ ಮತ್ತು ಲಡಾಖ್‌ನಲ್ಲಿ ಚೀನಾ ಭಾರತದ ಭೂಪ್ರದೇಶವನ್ನು ಅತಿಕ್ರಮಿಸುವುದನ್ನು ಮುಂದುವರಿಸಿದೆ ಎಂದು ನಾಗರಿಕ ಸಮಾಜದ ಪ್ರತಿಪಾದನೆಗಳು ಮತ್ತು ವರದಿಗಳು ತಿಳಿಸುತ್ತವೆ. ‘ಆಪರೇಷನ್ ಸಿಂಧೂರ’ ಸಮಯದಲ್ಲಿ ಪಾಕಿಸ್ತಾನದ ಕ್ರಮಗಳಲ್ಲಿ ಚೀನಾದ ಪಾತ್ರ ಏನಿತ್ತು ಎಂಬುದನ್ನು ಸ್ವತಃ ಉಪ ಭೂಸೇನಾ ಮುಖ್ಯಸ್ಥರೇ (ಡೆಪ್ಯುಟಿ ಚೀಫ್ ಆಫ್ ಆರ್ಮಿ ಸ್ಟಾಫ್) ಒಪ್ಪಿಕೊಂಡಿದ್ದಾರೆ ಮತ್ತು ಇದು ಅಧಿಕೃತವಾಗಿ ದಾಖಲಾಗಿದೆ” ಎಂದೂ ಉಲ್ಲೇಖಿಸಿದ್ದಾರೆ.
ಹಾಗೆಯೇ, “ಗಲ್ವಾನ್ ಸಂಘರ್ಷದ ನಂತರ, ಭಾರತದ ಅತ್ಯಂತ ನಿರ್ಣಾಯಕ ಉದ್ಯಮಗಳನ್ನು ಬೀಜಿಂಗ್ (ಚೀನಾ) ವಶಪಡಿಸಿಕೊಳ್ಳಲು ಬಿಡುವ ಮೂಲಕ ಮೋದಿ ಸರ್ಕಾರವು ಭಾರತದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಧಕ್ಕೆ ತಂದಿದೆ. ಈಗ ಅವರು ತಮ್ಮ ಬಣ್ಣಬಣ್ಣದ ‘ಲಾಲ್ ಆಂಖ್’ (ಕೆಂಪು ಕಣ್ಣಿನ) ಲೆನ್ಸ್ ಅಡಿಯಲ್ಲಿ ಚೀನಿಯರು ಇನ್ನಷ್ಟು ಅಭಿವೃದ್ಧಿ ಹೊಂದಲು ಹೆಚ್ಚಿನ ಅವಕಾಶಗಳನ್ನು ನೀಡುತ್ತಿದ್ದಾರೆ!” ಎಂದು ದೂರಿದ್ದಾರೆ.




