ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸುವುದಕ್ಕೆ ಆಗ್ರಹಿಸಿ ಪ್ರತಿಪಕ್ಷದ ಸದಸ್ಯರು ಸಲ್ಲಿಕೆ ಮಾಡಿದ್ದ ನೋಟಿಸುಗಳನ್ನು ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಲೋಕಸಭೆಯ ಸಭಾಪತಿ ಓಮ್ ಬಿರ್ಲಾ ಅವರು ತಿರಸ್ಕಾರ ಮಾಡಿದ್ದಾರೆ. ಆದರೇ, ಇಬ್ಬರೂ ತಮ್ಮ ಈ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡದೇ ಇರುವುದು ಈಗ ರಾಷ್ಟ್ರೀಯ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಮಾರ್ಚ್ 12ರಂದು ಈ ನೋಟಿಸ್‌ಗಳನ್ನು ಪ್ರತಿಪಕ್ಷದ ಸದಸ್ಯರು ಸಲ್ಲಿಕೆ ಮಾಡಿದ್ದರು. ರಾಜ್ಯಸಭೆಯ 63 ಸದಸ್ಯರು ಹಾಗೂ ಲೋಕಸಭೆಯ 130 ಸದಸ್ಯರು ಈ ನೋಟಿಸ್‌ಗೆ ಸಹಿ ಮಾಡಿದ್ದರು.
ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಡವಳಿಕೆ ಪಕ್ಷಪಾತ ಹಾಗೂ ತಾರತಮ್ಯದಿಂದ ಕೂಡಿದ್ದು, ಸಾಂವಿಧಾನಿಕ ಸಂಸ್ಥೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ತೃಣಮೂಲಕ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷ ಗಂಭೀರ ಆರೋಪ ಹೊರಿಸಿತ್ತು.
ಹಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ವಂಚನೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ತನಿಖೆಗೆ ಮುಖ್ಯ ಚುನಾವಣಾ ಆಯುಕ್ತರು ಅಡ್ಡಿಪಡಿಸಿದ್ದಾರೆ ಎಂದು ಕೂಡ ಅದು ಉಲ್ಲೇಖಿಸಿತ್ತು.




