ಬಸವಕಲ್ಯಾಣದಲ್ಲಿ ನ.28, 29ರಂದು ನಡೆಯುತ್ತಿರುವ 47ನೇ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ-2026ರ ಅಂಗವಾಗಿ ಆಯೋಜಿಸಿರುವ ‘ಜನಪದದಲ್ಲಿ ಬಸವದರ್ಶನ’ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದಿವ್ಯಸಾನ್ನಿಧ್ಯ ವಹಿಸಿದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, “ಅಂತರಂಗದ ಎಲ್ಲ ಕಲ್ಮಶಗಳನ್ನು ತೊಳೆದುಹಾಕುವ ಶಕ್ತಿ ಪ್ರವಚನಕ್ಕಿದೆ. ಪ್ರವಚನ ಹಾಗೂ ಅನುಭಾವ ಸತ್ಸಂಗದ ಕಾರ್ಯಕ್ರಮಗಳು ಮನುಷ್ಯನ ಚಾರಿತ್ರ್ಯ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತವೆ. ನಿಜವಾದ ಅರ್ಥದಲ್ಲಿ ಇವು ಸದ್ಗುಣಗಳನ್ನು ಬೆಳೆಸುವ ನಡೆದಾಡುವ ವಿಶ್ವವಿದ್ಯಾಲಯಗಳಾಗಿವೆ” ಎಂದು ಹೇಳಿದರು.
“ಜನಪದಕಾರರು ಬಸವಣ್ಣನವರ ಜಗದಗಲವಾದ ವ್ಯಕ್ತಿತ್ವವನ್ನು ತಮ್ಮ ಸಾಹಿತ್ಯದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ. ಜನಪದ ಸಾಹಿತ್ಯದ ಮೂಲಕ ಬಸವಣ್ಣನವರ ದರ್ಶನ ಮಾಡಿಸಲು ಪೂಜ್ಯ ಚನ್ನಬಸವಾನಂದ ಸ್ವಾಮಿಗಳು ಆಗಮಿಸಿದ್ದಾರೆ. ಅವರ ಪ್ರವಚನವನ್ನು ಆಲಿಸಲು ಭಕ್ತರು ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು” ಎಂದು ಮನವಿ ಮಾಡಿದರು.
ಪ್ರವಚನಕಾರ ಚನ್ನಬಸವಾನಂದ ಸ್ವಾಮಿ ಮಾತನಾಡಿ, “ಬಸವಕಲ್ಯಾಣ ಅವಿಮುಕ್ತ ಕ್ಷೇತ್ರವಾಗಿದೆ. ಶರಣರು ಸಂಚರಿಸಿದ ಈ ನಾಡು ಪಾವನವಾಗಿದೆ. ಈ ನೆಲ ಜಗತ್ತಿಗೆ ಸಮಾನತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೀಡಿದೆ. ಕಾಯಕ ಜೀವಿಗಳು ಯಾವುದೇ ಆಮಿಷಗಳಿಗೆ ಒಳಗಾಗದೆ ನಿಸ್ವಾರ್ಥ ಬದುಕು ನಡೆಸಿದ ಪುಣ್ಯಭೂಮಿ ಇದಾಗಿದೆ. ಬಸವಣ್ಣನವರ ಸಮಗ್ರ ಕ್ರಾಂತಿಯ ಚಿತ್ರಣವನ್ನು ಜನಪದಕಾರರು ತಮ್ಮ ಸಾಹಿತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ಅದನ್ನು ನಾವು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ನಿವೃತ್ತ ನ್ಯಾಯಾಧೀಶ ಶರಣ ಸುಭಾಷಚಂದ್ರ ನಾಗರಾಳೆ ಕಾರ್ಯಕ್ರಮ ಉದ್ಘಾಟಿಸಿದರು. ಹುಲಸೂರಿನ ಶಿವಾನಂದ ಮಹಾಸ್ವಾಮಿ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು.
ಇದನ್ನೂ ಓದಿ : ಬೀದರ್ | ಕುಡಿಯುವ ನೀರಿಗಾಗಿ ಔರಾದ್ ಬಂದ್ ಯಶಸ್ವಿ
ಶಶಿಕಾಂತ ದುರ್ಗೆ, ಮಲ್ಲಿಕಾರ್ಜುನ ಕುರಕುಂಟೆ, ಚನ್ನಪ್ಪ ಪರತಾಪೂರೆ, ರಾಹುಲ್ ಇಜಾರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಂಕರ ಕರಣೆ ಸ್ವಾಗತಿಸಿದರು. ಪ್ರೊ. ಮೀನಾಕ್ಷಿ ಬಿರಾದಾರ ನಿರೂಪಿಸಿದರು. ರಾಜಕುಮಾರ ಹೂಗಾರ ವಚನ ಪ್ರಾರ್ಥನೆ ಸಲ್ಲಿಸಿದರು. ರಾಜಶೇಖರ ಬಿರಾದಾರ ಶರಣು ಸಮರ್ಪಣೆ ಮಾಡಿದರು.




