ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಬೆಂಬಲ ಪಡೆಯಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತಿ ಸಂಸದರಿಗೆ ₹150 ಕೋಟಿವರೆಗೆ ಆಮಿಷವೊಡ್ಡುತ್ತಿದೆ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಗಂಭೀರ ಆರೋಪ ಮಾಡಿದ್ದಾರೆ. ಮಸೂದೆಯನ್ನು ಬೆಂಬಲಿಸುವಂತೆ ಸಂಸದರ ಮನವೊಲಿಸುವ ಹೊಣೆಯನ್ನು ಮಹಾರಾಷ್ಟ್ರದ ಕೆಲವು ಪ್ರಮುಖ ರಾಜಕೀಯ ನಾಯಕರಿಗೆ ವಹಿಸಲಾಗಿದೆ ಎಂದೂ ಅವರು ದೂರಿದ್ದಾರೆ.
ಛತ್ರಪತಿ ಸಂಭಾಜಿನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಎರಡೇ ದಿನಗಳಲ್ಲಿ ಈ ಆಫರ್ ಮೊತ್ತ ₹100 ಕೋಟಿಯಿಂದ ₹150 ಕೋಟಿಗೆ ಏರಿದೆ ಎಂದು ಹೇಳಿಕೊಂಡಿದ್ದಾರೆ. ‘ಸಂಸದರನ್ನು ದೊಡ್ಡ ಮಟ್ಟದಲ್ಲಿ ಸಂಪರ್ಕಿಸಲಾಗುತ್ತಿದೆ. ಮಹಾರಾಷ್ಟ್ರದ ಸಂಸದರು ಮಸೂದೆಗೆ ಬೆಂಬಲ ನೀಡಿದರೆ ಈ ₹150 ಕೋಟಿ ಲೆಕ್ಕವನ್ನು ನೆನಪಿಟ್ಟುಕೊಳ್ಳಿ’ ಎಂದಿದ್ದಾರೆ. ಆದರೆ, ಸಂಪರ್ಕಿಸಲಾಗಿದೆ ಎನ್ನಲಾದ ನಾಯಕರು ಅಥವಾ ಸಂಸದರ ಹೆಸರುಗಳನ್ನಾಗಲಿ, ತಮ್ಮ ಆರೋಪಕ್ಕೆ ಪೂರಕವಾದ ಯಾವುದೇ ಸಾಕ್ಷ್ಯಾಧಾರಗಳನ್ನಾಗಲಿ ರಾವುತ್ ಬಹಿರಂಗಪಡಿಸಿಲ್ಲ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪದೇಪದೆ ಮುಂಬೈ ಭೇಟಿಯನ್ನೂ ಪ್ರಶ್ನಿಸಿರುವ ರಾವುತ್, ಮಸೂದೆಗೆ ಬೆಂಬಲ ಖರೀದಿಸಲು ಹಣವು ಮುಂಬೈ ಮೂಲಕವೇ ರವಾನೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸಂಸತ್ ಅಧಿವೇಶನ ಕರೆಯದೆ ಬಿಜೆಪಿ ಮಸೂದೆಗೆ ಬೆಂಬಲ ಕ್ರೋಡೀಕರಿಸುವಲ್ಲಿ ನಿರತವಾಗಿದೆ ಎಂದ ಅವರು, ಶಾ ಅವರ ಭೇಟಿಗಳ ವೇಳೆ ಯಾವ ವ್ಯವಹಾರಗಳು ನಡೆಯುತ್ತಿವೆ ಎಂದು ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದ ಹಿಂದಿನ ಪಕ್ಷಾಂತರಗಳನ್ನು ಉಲ್ಲೇಖಿಸಿ, ‘ಐದು ವರ್ಷಗಳ ಹಿಂದೆ ಶಾಸಕರೊಬ್ಬರನ್ನು ₹50 ಕೋಟಿಗೆ ಮತ್ತು ಸಂಸದರೊಬ್ಬರನ್ನು ₹75 ಕೋಟಿಗೆ ಖರೀದಿಸಲಾಗಿತ್ತು. ಈಗಿನ ₹150 ಕೋಟಿ ಗೌರವಯುತ ಮೊತ್ತ, ಒಳ್ಳೆಯ ಬೆಲೆ’ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನು ‘ರಾಜಕೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ’ಕ್ಕೆ ಹೋಲಿಸಿರುವ ರಾವುತ್, ತಮ್ಮ ಪಕ್ಷ ತೊರೆದ ಆರು ಮಂದಿ ಸಂಸದರಿಗೆ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಒಳಗೊಂಡ ಒಪ್ಪಂದದಡಿ ತಲಾ ₹80 ಕೋಟಿ ನೀಡಲಾಗಿತ್ತು ಎಂದೂ ಆರೋಪಿಸಿದ್ದಾರೆ.
ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಜಾರಿ ಹಾಗೂ ಕ್ಷೇತ್ರ ಪುನರ್‌ವಿಂಗಡಣೆಗೆ ಸಂಬಂಧಿಸಿದ ಮಸೂದೆಗೆ ಬೆಂಬಲ ಪಡೆಯಲು ಕೇಂದ್ರ ಸರ್ಕಾರ ಮತ್ತೆ ಪ್ರಯತ್ನ ನಡೆಸುತ್ತಿರುವ ನಡುವೆಯೇ ರಾವುತ್ ಈ ಹೇಳಿಕೆ ನೀಡಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ಮಂಡಿಸಲಾಗಿದ್ದ ಸಂವಿಧಾನ ತಿದ್ದುಪಡಿ ಮಸೂದೆಯು ಏಪ್ರಿಲ್ 17ರಂದು ಲೋಕಸಭೆಯಲ್ಲಿ ಅಗತ್ಯ ವಿಶೇಷ ಬಹುಮತ ಪಡೆಯುವಲ್ಲಿ ವಿಫಲವಾಗಿತ್ತು. ಪರಿಣಾಮವಾಗಿ ಸಂಬಂಧಿತ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ಮತ್ತು ಇನ್ನೊಂದು ಅವಲಂಬಿತ ಮಸೂದೆ ಮುಂದುವರಿಯಲಿಲ್ಲ. ಇದೀಗ ಸರ್ಕಾರ ಹೊಸ ಶಾಸನದ ಪ್ರಯತ್ನದಲ್ಲಿದ್ದು, ಪ್ರಸ್ತಾವಿತ ವಿಶೇಷ ಸಂಸತ್ ಅಧಿವೇಶನದ ದಿನಾಂಕ ಇನ್ನೂ ಪ್ರಕಟವಾಗಿಲ್ಲ.
ಈ ವಿಚಾರವು ವಿರೋಧ ಪಕ್ಷಗಳ ಒಳಗಿನ ಭಿನ್ನಾಭಿಪ್ರಾಯಗಳನ್ನೂ ಹೊರಹಾಕಿದೆ. ಪ್ರತಿ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ 50ರಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ತಾತ್ವಿಕವಾಗಿ ಬೆಂಬಲಿಸಲು ತಮ್ಮ ಪಕ್ಷ ಸಿದ್ಧವಿದೆ ಎಂದು ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ನವೆಂಬರ್ 14ರಂದು ಸುಳಿವು ನೀಡಿದ್ದರು. ಮತ್ತೊಂದೆಡೆ, ಹೊಸ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಯ ಕುರಿತು ಸರ್ಕಾರದೊಂದಿಗೆ ಚರ್ಚಿಸಲು ಸಿದ್ಧವಿರುವುದಾಗಿ ಶುಕ್ರವಾರ ತಿಳಿಸಿರುವ ಕಾಂಗ್ರೆಸ್, ಈ ಪ್ರಕ್ರಿಯೆಯನ್ನು 2027ರ ಜನಗಣತಿಯಿಂದ ಪ್ರತ್ಯೇಕಿಸಬೇಕು ಎಂದು ಷರತ್ತು ವಿಧಿಸಿದೆ.



