ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭದ್ರತೆಯನ್ನು ಹಿಂಪಡೆದಿದ್ದು ಆಕಸ್ಮಿಕವಲ್ಲ, ಬದಲಾಗಿ ಅವರ ಹತ್ಯೆಯಾಗಲೆಂದೇ ಉದ್ದೇಶಪೂರ್ವಕವಾಗಿ ನಡೆಸಿದ ಸಂಚು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ನೂತನ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಕುರಿತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ನಡೆಸಿರುವ ವಿಶೇಷ ಸಂವಾದದ ವಿಡಿಯೋವನ್ನು ‘ಎಕ್ಸ್’ (X) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಸಂವಾದದಲ್ಲಿ ಗಾಂಧಿ ಕುಟುಂಬವು ತಮ್ಮ ವೈಯಕ್ತಿಕ ನೆನಪುಗಳು, ರಾಜಕೀಯ ಏಳುಬೀಳುಗಳು ಹಾಗೂ ರಾಜೀವ್ ಗಾಂಧಿ ಅವರ ಭದ್ರತಾ ಲೋಪಗಳ ಕುರಿತು ಮನಬಿಚ್ಚಿ ಮಾತನಾಡಿದೆ.
The proposal didn’t go according to plan and neither did my seventh birthday.
The decision in 2004 gave some of us relief but others joy.
There was an intention behind withdrawing Papa’s security.
And even after 500+ pages there are some things Ma has left out of her book.… pic.twitter.com/6fhw1mMFip— Rahul Gandhi (@RahulGandhi) November 24, 2026
ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಅಪ್ಪನ (ರಾಜೀವ್ ಗಾಂಧಿ) ಭದ್ರತೆಯನ್ನು ಹಿಂಪಡೆದಿದ್ದು ಕೇವಲ ಆಕಸ್ಮಿಕ ಘಟನೆಯಲ್ಲ. ಅವರ ಹತ್ಯೆಯಾಗಲೆಂದೇ ಉದ್ದೇಶಪೂರ್ವಕವಾಗಿ ಭದ್ರತೆ ತೆಗೆಯಲಾಗಿತ್ತು ಮತ್ತು ಅದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಾಗಿತ್ತು,” ಎಂದು ಆರೋಪಿಸಿದ್ದಾರೆ.
1989ರಲ್ಲಿ ವಿ.ಪಿ. ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅಂದಿನ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದ ರಾಜೀವ್ ಗಾಂಧಿ ಅವರಿಗೆ ನೀಡಲಾಗಿದ್ದ ಎಸ್ಪಿಜಿ (SPG – Special Protection Group) ಭದ್ರತೆಯನ್ನು ಹಿಂಪಡೆಯಲಾಗಿತ್ತು. ಈ ನಿರ್ಧಾರವು ಅವರ ಹತ್ಯೆಗೆ ದಾರಿ ಮಾಡಿಕೊಟ್ಟಿತು ಎಂಬ ಕಾಂಗ್ರೆಸ್ ಪಕ್ಷದ ದೀರ್ಘಕಾಲದ ಆರೋಪವನ್ನು ರಾಹುಲ್ ಗಾಂಧಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. “ಆಗ ಏನು ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು. ಈ ಬಗ್ಗೆ ನಾನು ತಾಯಿ ಮತ್ತು ತಂದೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದೆ. ಭದ್ರತೆಯ ವಿಚಾರವಾಗಿ ನನ್ನ ತಂದೆಯೊಂದಿಗೆ ವಾಗ್ವಾದವನ್ನೂ ನಡೆಸಿದ್ದೆ,” ಎಂದು ರಾಹುಲ್ ನೆನಪಿಸಿಕೊಂಡಿದ್ದಾರೆ.
ಸಂವಾದದಲ್ಲಿ ಸೋನಿಯಾ ಗಾಂಧಿ ಅವರು 1991ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ರಾಜೀವ್ ಗಾಂಧಿ ಕೈಗೊಂಡಿದ್ದ ಬಿಹಾರ ಪ್ರವಾಸದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
“ಆ ಪ್ರವಾಸದಲ್ಲಿ ರಾಜೀವ್ ತೆರೆದ ಜೀಪಿನಲ್ಲಿ ಪ್ರಯಾಣಿಸುತ್ತಿದ್ದರು. ಆ ವೇಳೆ ಅವರ ಮೇಲೆ ಕಲ್ಲು ತೂರಾಟ ನಡೆಯಿತು, ಜನರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಅದೊಂದು ಅತ್ಯಂತ ಭಯಾನಕ ಪ್ರವಾಸವಾಗಿತ್ತು,” ಎಂದು ಸೋನಿಯಾ ವಿವರಿಸಿದ್ದಾರೆ.
“ನಿಮಗೆ ಸರಿಯಾದ ಭದ್ರತೆ ಇಲ್ಲದಿದ್ದಾಗ ಮತ್ತು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಭೇಟಿ ನೀಡಿದಾಗ, ಅಲ್ಲಿನ ಸರ್ಕಾರಗಳು ಭದ್ರತೆಯ ಬಗ್ಗೆ ಅಷ್ಟು ಗಮನ ಹರಿಸುವುದಿಲ್ಲ,” ಎಂದು ಸೋನಿಯಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಆ ಪ್ರವಾಸದಲ್ಲಿ ತಂದೆಯ ಜೊತೆಯಲ್ಲಿದ್ದ ರಾಹುಲ್, ಕಲ್ಲು ತೂರಾಟವನ್ನು ಕಣ್ಣಾರೆ ಕಂಡಿದ್ದರು. ಮನೆಗೆ ಮರಳಿದ ತಕ್ಷಣ, “ಅಮ್ಮಾ, ನಾವು ಅಪ್ಪನ ಭದ್ರತೆಯ ಬಗ್ಗೆ ಈಗಲೇ ಏನಾದರೂ ಮಾಡದಿದ್ದರೆ, ನಾನು ಅತಿ ಶೀಘ್ರದಲ್ಲೇ ಅವರ ಅಂತ್ಯಕ್ರಿಯೆಗೆ ಮರಳಬೇಕಾಗುತ್ತದೆ ಎಂಬುದು ನನಗೆ ತಿಳಿದಿದೆ,” ಎಂದು ರಾಹುಲ್ ಆತಂಕ ವ್ಯಕ್ತಪಡಿಸಿದ್ದನ್ನು ಸೋನಿಯಾ ನೆನಪಿಸಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, “ಬಿಹಾರ ಪ್ರವಾಸವು ನನ್ನ ತಾಳ್ಮೆಯ ಕಟ್ಟೆಯೊಡೆದ ಕೊನೆಯ ಘಟನೆಯಾಗಿತ್ತು, ಆದರೆ ನಾನು ಮೊದಲಿನಿಂದಲೂ ಈ ಬಗ್ಗೆ ಎಚ್ಚರಿಸುತ್ತಲೇ ಇದ್ದೆ,” ಎಂದಿದ್ದಾರೆ.
1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯಾದ ಬಳಿಕ ಕುಟುಂಬದಲ್ಲಿದ್ದ ಆತಂಕದ ವಾತಾವರಣವನ್ನು ಪ್ರಿಯಾಂಕಾ ಗಾಂಧಿ ವಾದ್ರಾ ಸ್ಮರಿಸಿದ್ದಾರೆ. “ಅಜ್ಜಿಯ (ಇಂದಿರಾ ಗಾಂಧಿ) ಹತ್ಯೆಯ ನಂತರ, ಅಪ್ಪನ ಭದ್ರತೆಯ ವಿಚಾರದಲ್ಲಿ ನೀನು ತುಂಬಾ ಆತಂಕಕ್ಕೊಳಗಾಗಿದ್ದೆ ,” ಎಂದು ಪ್ರಿಯಾಂಕಾ ತಮ್ಮ ಸಹೋದರ ರಾಹುಲ್ಗೆ ಹೇಳಿದ್ದಾರೆ. “ನೀನು ಮನೆಯ ಸುತ್ತಲೂ ಓಡಾಡುತ್ತಾ ಮುಳ್ಳುತಂತಿ ಬೇಲಿಗಳನ್ನು ಪರಿಶೀಲಿಸುತ್ತಿದ್ದೆ. ಯಾವುದಾದರೂ ಭದ್ರತಾ ಸಿಬ್ಬಂದಿ ನಿದ್ದೆ ಮಾಡುತ್ತಿದ್ದರೆ ತಕ್ಷಣ ಗಮನಿಸಿ ಹೇಳುತ್ತಿದ್ದೆ. ನಿನ್ನ ಆತಂಕ ತರ್ಕಬದ್ಧವಾಗಿತ್ತು, ಆದರೆ ನನ್ನ ಭಯ ಸಂಪೂರ್ಣವಾಗಿ ಭಾವನಾತ್ಮಕವಾಗಿತ್ತು. ಅಪ್ಪ ಮನೆಗೆ ಮರಳಿ ಅವರ ಹೆಜ್ಜೆ ಸಪ್ಪಳ ಕೇಳಿಸುವವರೆಗೂ ನನಗೆ ನಿದ್ದೆಯೇ ಬರುತ್ತಿರಲಿಲ್ಲ,” ಎಂದು ಪ್ರಿಯಾಂಕಾ ಭಾವುಕರಾಗಿ ನುಡಿದಿದ್ದಾರೆ.
1968ರಲ್ಲಿ ಇಟಲಿಯಿಂದ ಭಾರತಕ್ಕೆ ಬಂದಾಗಿನ ಆರಂಭಿಕ ದಿನಗಳ ಅನುಭವಗಳನ್ನು ಸೋನಿಯಾ ಗಾಂಧಿ ತಮ್ಮ ಆತ್ಮಕಥೆಯಲ್ಲಿ ದಾಖಲಿಸಿದ್ದಾರೆ. ಭಾರತಕ್ಕೆ ಬಂದ ಹೊಸದರಲ್ಲಿ ಇಲ್ಲಿನ ಬಡತನವನ್ನು ಕಂಡು ತಮಗೆ ಅತಿ ಹೆಚ್ಚು ಆಘಾತವಾಗಿತ್ತು ಎಂದು ಅವರು ಸಂವಾದದಲ್ಲಿ ಹೇಳಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, “500ಕ್ಕೂ ಹೆಚ್ಚು ಪುಟಗಳ ಈ ಪುಸ್ತಕದಲ್ಲಿಯೂ ಅಮ್ಮ ಕೆಲವು ವಿಚಾರಗಳನ್ನು ಬಿಟ್ಟಿದ್ದಾರೆ. 2004ರ ನಿರ್ಧಾರವು (ಯುಪಿಎ ಅಧಿಕಾರಕ್ಕೆ ಬಂದಾಗ ಪ್ರಧಾನಿ ಹುದ್ದೆ ನಿರಾಕರಿಸಿದ್ದು) ನಮ್ಮಲ್ಲಿ ಕೆಲವರಿಗೆ ನಿರಾಳತೆ ತಂದಿದ್ದರೆ, ಇನ್ನು ಕೆಲವರಿಗೆ ಸಂತಸ ತಂದಿತ್ತು. ಅಮ್ಮನ ಈ ಪಯಣವು ಅಪಾರ ಪ್ರೀತಿ ಮತ್ತು ಭೀಕರ ದುರಂತಗಳಿಂದ ಕೂಡಿದ್ದು, ಅವೆಲ್ಲವನ್ನೂ ಅವರು ಘನತೆ ಮತ್ತು ಧೈರ್ಯದಿಂದ ಎದುರಿಸಿದ್ದಾರೆ,” ಎಂದು ಶ್ಲಾಘಿಸಿದ್ದಾರೆ.



