ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಪಟ್ಟಣದ ಊಟಿ ಸರ್ಕಲ್ ಸಮೀಪ ಇತ್ತೀಚೆಗೆ ಆರಂಭಗೊಂಡಿರುವ ಮದ್ಯದಂಗಡಿ ತೆರವುಗೊಳಿಸಿ, ಅದರ ಪರವಾನಗಿ ರದ್ದುಗೊಳಿಸುವಂತೆ ಆಗ್ರಹಿಸಿ ಕರುನಾಡು ಸೇನಾ ಪಡೆ, ಜಯ ಕರ್ನಾಟಕ ಸಂಘಟನೆ ಹಾಗೂ ರೈತ ರಕ್ಷಣಾ ಹೋರಾಟ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಹಳೇ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ತಡೆದು ಅಬಕಾರಿ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಸಂದೀಪ್‌ಕುಮಾರ್, ಮದ್ಯದಂಗಡಿಗೆ ಯಾವ ವರ್ಗದ ಪರವಾನಗಿ ನೀಡಲಾಗಿದೆ, ಚಿಲ್ಲರೆ ಮಾರಾಟದ ಹೆಸರಿನಲ್ಲಿ ಬಾರ್ ಮಾದರಿಯಲ್ಲಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಲಾಗಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಪರವಾನಗಿ ರದ್ದುಗೊಳಿಸಬೇಕು. ಅಧಿಕಾರಿಗಳು ಸ್ಪಂದಿಸದಿದ್ದರೆ ಜಿಲ್ಲಾಡಳಿತ, ಲೋಕಾಯುಕ್ತ ಹಾಗೂ ಹೈಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಸಿದರು.
ಸಂಘಟನೆಯ ಮುಖಂಡ ಸುರೇಶ್ ಮಾತನಾಡಿ, ಮದ್ಯದಂಗಡಿಯ ಸಮೀಪದಲ್ಲೇ ಅವರ್ ಲೇಡಿ ಆಫ್ ಲೂರ್ದು ಚರ್ಚ್, ಸೇಂಟ್ ಜಾನ್ಸ್ ಇಂಗ್ಲಿಷ್ ಶಾಲೆ ಹಾಗೂ ನರ್ಸರಿ ಶಾಲೆಗಳಿವೆ. ಪ್ರತಿದಿನ ನೂರಾರು ಮಕ್ಕಳು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಮದ್ಯದಂಗಡಿ ಆರಂಭಿಸಿರುವುದು ಮಕ್ಕಳ ಸುರಕ್ಷತೆ ಹಾಗೂ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆ ಉಂಟುಮಾಡುವ ಆತಂಕವಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರವಾನಗಿಯ ಕಾನೂನುಬದ್ಧತೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಮಂಗಳಮ್ಮ ಮಾತನಾಡಿ, ಮದ್ಯವ್ಯಸನದಿಂದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಮದ್ಯದಂಗಡಿಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ಬರಗಾಲ | ಕಾಡಿನಿಂದ ನಾಡಿನತ್ತ ವನ್ಯಜೀವಿಗಳು: ಮನುಷ್ಯರ ಜೀವಕ್ಕೆ ಕುತ್ತು, ರೈತರ ಬದುಕಿಗೆ ಹೊಡೆತ
ಜಾರಕೀಹೊಳಿ ಬ್ರಿಗೇಡ್ ಸಂಸ್ಥಾಪಕ ಗೋವಿನಾಯಕ ಮಾತನಾಡಿ, ದೇಶದಲ್ಲಿ ಒಂದೇ ಕಾನೂನು ಇದ್ದರೂ ಗುಂಡ್ಲುಪೇಟೆಯಲ್ಲಿ ಮಾತ್ರ ಪ್ರತ್ಯೇಕ ಕಾನೂನು ಜಾರಿಯಲ್ಲಿದೆಯೇ ಎಂಬ ಅನುಮಾನ ಮೂಡುತ್ತಿದೆ. ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿದು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ ಸಂಕಟ: ನೀರಿಲ್ಲದ ಕಾಡು-ಆಹಾರವಿಲ್ಲದ ವನ್ಯಜೀವಿ!
ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ತಹಸೀಲ್ದಾರ್ ತನ್ಮಯ್, ಮನವಿಯನ್ನು ಅಬಕಾರಿ ಇಲಾಖೆ, ಅಬಕಾರಿ ಉಪ ಆಯುಕ್ತರು, ಸರ್ಕಾರದ ಕಾರ್ಯದರ್ಶಿಗಳು ಹಾಗೂ ಅಬಕಾರಿ ಸಚಿವರಿಗೆ ರವಾನಿಸಿ ಸೂಕ್ತ ಕ್ರಮಕ್ಕೆ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಈ ವಿಶೇಷ ವರದಿ ಓದಿದ್ದೀರಾ? ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ ಸಂಕಟ: ನೀರಿಲ್ಲದ ಕಾಡು-ಆಹಾರವಿಲ್ಲದ ವನ್ಯಜೀವಿ!
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ದೇವಿಕಾ ವರದರಾಜು, ದೊರೈರಾಜು, ಪ್ರಭುಸ್ವಾಮಿ, ಮಹೇಂದ್ರ, ನಾಗೇಂದ್ರ ಮರಿಯಪ್ಪ, ತಾಲೂಕು ಅಧ್ಯಕ್ಷ ಮಧುಕರ್, ತೊಳಸಮ್ಮ, ಗೌರಿ, ಅನು, ವಸಂತ, ಪದ್ಮ, ಜಯಲಕ್ಷ್ಮಿ, ಸುಧಾ, ಸಾವಿತ್ರಿ, ತಮ್ಮಯ್ಯ, ರತ್ನ, ಶಿವರಾಜಮ್ಮ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.



