ತಮಿಳುನಾಡಿಗೆ ಪ್ರತ್ಯೇಕ ರಾಜ್ಯ ಧ್ವಜವನ್ನು ಪರಿಚಯಿಸಲಾಗುವುದು ಹಾಗೂ ಶಾಲಾ ದಿನಗಳಿಂದಲೇ ಮಾತೃಭಾಷೆ ತಮಿಳನ್ನು ಕಡ್ಡಾಯಗೊಳಿಸಲಾಗುವುದು ಎಂಬ ತಮಿಳುನಾಡು ಸಚಿವ ಆಧವ್ ಅರ್ಜುನ ಅವರ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಪ್ರಸ್ತಾಪವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ಇದು ‘ಪ್ರತ್ಯೇಕತಾವಾದಿ ಮನಸ್ಥಿತಿ’ಯನ್ನು ಪ್ರಚೋದಿಸುತ್ತದೆ ಎಂದು ವಾಗ್ದಾಳಿ ನಡೆಸಿದೆ.
“ದೇಶದ ಹಲವು ರಾಜ್ಯಗಳು ತಮ್ಮದೇ ಆದ ಪ್ರತ್ಯೇಕ ಧ್ವಜವನ್ನು ಹೊಂದಿವೆ. ಆದರೆ ತಮಿಳುನಾಡಿಗೆ ತನ್ನದೇ ಆದ ಧ್ವಜವಿಲ್ಲ. ಹೀಗಾಗಿ ಶೀಘ್ರದಲ್ಲೇ ರಾಜ್ಯಕ್ಕೆ ಪ್ರತ್ಯೇಕ ಧ್ವಜವನ್ನು ಪರಿಚಯಿಸಲಾಗುವುದು,” ಎಂದು ಸಚಿವ ಆಧವ್ ಅರ್ಜುನ ತಿಳಿಸಿದ್ದಾರೆ.
ರಾಜ್ಯದಲ್ಲಿ ದ್ವಿಭಾಷಾ ನೀತಿಯ ಅಗತ್ಯವನ್ನು ಪ್ರತಿಪಾದಿಸಿದ ಅವರು, “ಇಂಗ್ಲಿಷ್ ಕೇವಲ ವ್ಯಾಪಾರ-ವಹಿವಾಟಿನ ಭಾಷೆಯಾಗಿದೆ. ಚೀನಾ, ಜಪಾನ್ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿ ಜನರು ತಮ್ಮದೇ ಮಾತೃಭಾಷೆಯಲ್ಲಿ ಮಾತನಾಡುತ್ತಾರೆ. ಅದೇ ರೀತಿ, ನಮ್ಮಲ್ಲಿ ತಮಿಳು ಕೇವಲ ಒಂದು ಆಯ್ಕೆಯ ಭಾಷೆಯಾಗಬಾರದು, ಬದಲಾಗಿ ಅದು ಕಡ್ಡಾಯವಾಗಬೇಕು. ಶಾಲಾ ಹಂತದಿಂದಲೇ ಮಾತೃಭಾಷೆ ತಮಿಳಿಗೆ ಮೊದಲ ಆದ್ಯತೆ ನೀಡಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
ಸಚಿವರ ಈ ಹೇಳಿಕೆಗೆ ಬಿಜೆಪಿ ನಾಯಕ ವಿನೋಜ್ ಪಿ. ಸೆಲ್ವಂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ದೇಶವನ್ನು ಒಡೆಯುವ ವಿಭಜಕ ನಡೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿರುವ ಅವರು, “ಈ ರೀತಿಯ ಹೇಳಿಕೆಗಳು ಜನರಲ್ಲಿ ಪ್ರತ್ಯೇಕತಾವಾದಿ ಮನಸ್ಥಿತಿಯನ್ನು ಬೆಳೆಸುವ ಅಪಾಯವನ್ನು ಹೊಂದಿವೆ. ತಮಿಳು ಮತ್ತು ಭಾರತೀಯ ಎಂಬ ಗುರುತುಗಳನ್ನು ಪರಸ್ಪರ ಪೈಪೋಟಿಯೆಂಬಂತೆ ಬಿಂಬಿಸಿ ಜನರನ್ನು ದಿಕ್ಕುತಪ್ಪಿಸಲಾಗುತ್ತಿದೆ. ನಾವೆಲ್ಲರೂ ಎರಡೂ ಅಸ್ಮಿತೆಗಳ ಬಗ್ಗೆ ಹೆಮ್ಮೆಪಡಬೇಕಾದ ಸಂದರ್ಭದಲ್ಲಿ ಇಂತಹ ಕೃತಕ ವಿಭಜನೆ ಏಕೆ?” ಎಂದು ಪ್ರಶ್ನಿಸಿದ್ದಾರೆ.
”ನಮ್ಮ ಭಾಷೆ ನಿಮ್ಮ ಧ್ವಜಕ್ಕಾಗಿ ಕಾಯುತ್ತಿಲ್ಲ. ನಮ್ಮ ಶ್ರೀಮಂತ ನಾಗರಿಕತೆಗೆ ನಿಮ್ಮ ಪ್ರಮಾಣಪತ್ರದ ಅಗತ್ಯವೂ ಇಲ್ಲ. ಭಾರತದ ತ್ರಿವರ್ಣ ಧ್ವಜದ ಅಡಿಯಲ್ಲಿ ನಮ್ಮ ತಮಿಳು ಅಸ್ಮಿತೆ ಎಂದಿಗೂ ಕಡಿಮೆಯಾಗುವುದಿಲ್ಲ,” ಎಂದು ಅವರು ತಿರುಗೇಟು ನೀಡಿದ್ದಾರೆ.
ಮಾತು ಮುಂದುವರಿಸಿದ ಬಿಜೆಪಿ ನಾಯಕರು, “ನಿಮಗೆ ತಮಿಳಿನ ಬಗ್ಗೆ ನಿಜವಾದ ಕಾಳಜಿ ಇದ್ದರೆ ಅದರಲ್ಲಿ ಸ್ಥಿರತೆ ಇರಲಿ. ದೇವಾಲಯಗಳಲ್ಲಿ ತಮಿಳು ಕಡ್ಡಾಯ ಎನ್ನುತ್ತೀರಿ, ಇದೇ ನಿಯಮವನ್ನು ಮಸೀದಿ ಮತ್ತು ಚರ್ಚ್‌ಗಳಿಗೂ ಅನ್ವಯಿಸುತ್ತೀರಾ? ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೆ ಉದ್ಯೋಗ, ಯುವಕರಿಗೆ ಭವಿಷ್ಯ ಹಾಗೂ ತಮಿಳು ಸಂಶೋಧನೆಗೆ ನಿಮ್ಮ ಯೋಜನೆಗಳೇನು ಎಂಬುದನ್ನು ಮೊದಲು ಜನರಿಗೆ ತಿಳಿಸಿ. ಕೇವಲ ಒಂದು ಧ್ವಜವನ್ನು ವಿನ್ಯಾಸಗೊಳಿಸುವುದು ಬಹಳ ಸುಲಭ, ಆದರೆ ಯುವಜನತೆಗೆ ಭವಿಷ್ಯವನ್ನು ರೂಪಿಸಿಕೊಡುವುದು ಕಷ್ಟದ ಕೆಲಸ,” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತೀಯ ಸಂವಿಧಾನವು ಯಾವುದೇ ರಾಜ್ಯವು ತನ್ನದೇ ಆದ ಸಾಂಸ್ಕೃತಿಕ ಧ್ವಜ ಹೊಂದುವುದನ್ನು ಸ್ಪಷ್ಟವಾಗಿ ನಿಷೇಧಿಸಿಲ್ಲ. ಆದರೂ, ರಾಷ್ಟ್ರೀಯತೆಯ ವಿಚಾರದಲ್ಲಿ ಇಂತಹ ಪ್ರಸ್ತಾಪಗಳು ಸದಾ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗುತ್ತಿವೆ. ನಟ ವಿಜಯ್ ಅವರ ಪಕ್ಷದ ಮುಖಂಡರ ಈ ಹೇಳಿಕೆಯು ಇದೀಗ ತಮಿಳುನಾಡಿನಲ್ಲಿ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ.




